ಮತ್ತೆ ರಾಮಾಚಾರಿ ಸದ್ದು! ತೇಜ್‌ ಚಿತ್ರಕ್ಕೆ ಚಾಲನೆ

ಇಲ್ಲಿ ವಿಧಿಯೇ ವಿಲನ್!‌ ಜಲೀಲ, ಮಾರ್ಗರೇಟ್‌ ಇಲ್ಲೂ ಇದ್ದಾರೆ!!

ಕನ್ನಡ ಚಿತ್ರರಂಗದಲ್ಲಿ ಈ ರಾಮಾಚಾರಿ ಅನ್ನೋ ಹೆಸರಲ್ಲಿ ಒಂದು ಪವರ್‌ ಇದೆ, ಖದರ್‌ ಇದೆ. ಅಷ್ಟೇ ಕೆಪಾಸಿಟಿಯೂ ಇದೆ. ಹೌದು, ರಾಮಾಚಾರಿ ಅಂದಾಕ್ಷಣ ನೆನಪಾಗೋದೇ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಡಾ.ವಿಷ್ಣುವರ್ಧನ್‌ ಅಭಿನಯದ “ನಾಗರಹಾವು” ಚಿತ್ರ. ಈ ಚಿತ್ರದ ಯಂಗ್‌ ರೆಬೆಲ್‌ ಹೀರೋ ಆಗಿ ಕಾಣಿಸಿಕೊಂಡಿದ್ದ ವಿಷ್ಣುವರ್ಧನ್‌ ಅವರು ರಾಮಾಚಾರಿ ಹೆಸರಿನ ಪಾತ್ರ ನಿರ್ವಹಿಸಿದ್ದು ಎಲ್ಲರಿಗೂ ಗೊತ್ತು. ಇವತ್ತಿಗೂ ಚಿತ್ರದುರ್ಗ ಅಂದಾಕ್ಷಣ ನೆನಪಿಗೆ ಬರೋದೇ ರಾಮಾಚಾರಿಯ ಅ ರೆಬೆಲ್‌ ಪಾತ್ರ. ಆ ಬಳಿಕ ರವಿಚಂದ್ರನ್‌ ಅವರ “ರಾಮಾಚಾರಿ” ಕೂಡ ಮಾಸದ ಚಿತ್ರ. ಇನ್ನು, ಯಶ್‌ ಹಾಗೂ ರಾಧಿಕಾ ಪಂಡಿತ್‌ ಅಭಿನಯಿಸಿದ “ಮಿಸ್ಟರ್‌ ಅಂಡ್‌ ಮಿಸ್ಸಸ್‌ ರಾಮಾಚಾರಿ” ಚಿತ್ರದ ಬಗ್ಗೆ ಬೇರೇನೂ ಹೇಳುವಂತಿಲ್ಲ. ಇಲ್ಲೂ ರಾಮಾಚಾರಿಯೇ ಹೈಲೈಟ್. ಇಷ್ಟಕ್ಕೂ ಈಗ ಯಾಕೆ ಈ ರಾಮಾಚಾರಿಯ ವಿಷಯ ಅಂದರೆ, “ರಾಮಾಚಾರಿ೨.೦” ಎಂಬ ಹೊಸ ಚಿತ್ರ ಸೆಟ್ಟೇರಿದೆ. ಹಾಗಾಗಿ “ರಾಮಾಚಾರಿ” ಬಗ್ಗೆ ಹೇಳಲೇಬೇಕಿತ್ತು.

ತೇಜ್‌, ಶಿಲ್ಪಾಶೆಟ್ಟಿ

ಹೊಸ ಪ್ರಯತ್ನಕ್ಕೆ ಶುಭ ಹಾರೈಕೆ

ಅಂದಹಾಗೆ, ಹೊಸ ಯಂಗ್‌ ರೆಬೆಲ್‌ ರಾಮಾಚಾರಿಯಾಗಿ ತೇಜ್‌ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಅವರು ನಾಯಕರಾಗಿ ನಟಿಸುತ್ತಿರುವುದಷ್ಟೇ ಅಲ್ಲ, ನಿರ್ದೇಶಕರಾಗಿಯೂ, ನಿರ್ಮಾಪಕರಾಗಿಯೂ ಅವರ ಎಂಟ್ರಿಯಾಗುತ್ತಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಅಂದು ನಿರ್ದೇಶಕರಾದ ಶಶಾಂಕ್‌, ಮಹೇಶ್‌, ಪ್ರವೀಣ್‌ ನಾಯಕ್‌, ಫೈವ್‌ ಸ್ಟಾರ್‌ ಗಣೇಶ್‌, ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ, ಚಿತ್ರತಂಡಕ್ಕೆ ಹಾಗೂ ತೇಜ್‌ ಅವರ ಹೊಸ ಪ್ರಯತ್ನಕ್ಕೆ ಶುಭಕೋರಿದ್ದಾರೆ.

ಬುದ್ಧಿವಂತನ ಕಥೆ

ಪನಾರೋಮಿಕ್​ ಸ್ಟುಡಿಯೋದ ಸಹಯೋಗದಲ್ಲಿ ಮೇಘನಾ ಕ್ರಿಯೇಷನ್ಸ್ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರದ ಕುರಿತು ಸ್ವತಃ ನಾಯಕ ಕಮ್‌ ನಿರ್ದೇಶಕ ತೇಜ್‌ ಹೇಳುವುದಿಷ್ಟು. “ಇದೊಂದು ತುಂಬಾ ಬುದ್ಧಿವಂತ ಹುಡುಗನ ಕಥೆ. ಒಂದು ರೀತಿಯ ಬಟರ್​ಫ್ಲೈ ಪರಿಕಲ್ಪನೆಯ ಸಿನಿಮಾ. ವಿಧಿಯೇ ಈ ಚಿತ್ರದಲ್ಲಿ ವಿಲನ್​ ಆಗಿದೆ. ಆ ವಿಧಿಯನ್ನು ಹೀರೋ ಇಲ್ಲಿ ಹೇಗೆಲ್ಲಾ ನಿಭಾಯಿಸುತ್ತಾನೆ ಅನ್ನೋದೇ ಕಥೆ. ಡಿಸೆಂಬರ್‌ ಅಥವಾ ಜನವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂದು ಮಾಹಿತಿ ಕೊಡುತ್ತಾರೆ ತೇಜ್.‌

ಹೈ ವೋಲ್ಟೇಜ್‌ ಸಿನ್ಮಾ

ಈ ಚಿತ್ರದಲ್ಲಿ ನಾಯಕ ತೇಜ್‌ ಅವರಿಗೆ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ನಾಯಕಿಯಾಗಿದ್ದಾರೆ. ಅವರಿಗೆ ಈ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದು ಅದೃಷ್ಟವಂತೆ. ಆರಂಭದಲ್ಲಿ ಎಲ್ಲರಿಗೂ ಇರುವಂತೆ ಅವರಿಗೂ ಒಂದು ಕಡೆ ಭಯವಿದೆಯಂತೆ. ಬಹುತೇಕ ಗ್ರಾಮೀಣ ಭಾಗದಲ್ಲೇ ಚಿತ್ರೀಕರಣ ನಡೆಯಲಿದ್ದು, ಮಂಡ್ಯ ಮತ್ತು ಬೆಂಗಳೂರು ಸುತ್ತಮುತ್ತ ಶೂಟಿಂಗ್‌ ಪ್ಲಾನ್‌ ಇದೆ ಎಂಬುದು ಚಿತ್ರತಂಡದ ಹೇಳಿಕೆ.
ಚಿತ್ರದಲ್ಲಿ ವಿಜಯ್‌ ಚೆಂಡೂರ್‌ ಅವರಿಲ್ಲಿ ಜಲೀಲ ಪಾತ್ರ ಮಾಡುತ್ತಿದ್ದಾರಂತೆ. ಸಹಜವಾಗಿಯೇ ಅವರಿಗೂ ಆ ಹೆಸರಲ್ಲಿ ಪಾತ್ರ ಮಾಡೋಕೆ ಭಯವಿದೆಯಂತೆ. ಆ ಹೆಸರಲ್ಲೇ ಒಂದು ಹೈ ವೋಲ್ಟೇಜ್‌ ಇರುವುದರಿಂದ ನೀಟ್‌ ಆಗಿಯೇ ನಿರ್ವಹಿಸುವ ಜವಾಬ್ದಾರಿ ಇದೆಯಂತೆ.

ಚಿತ್ರದಲ್ಲಿ ಸಂದೀಪ್ ಮಲಾನಿ, ಪ್ರಭು ಸೂರ್ಯ, ಸ್ಪರ್ಶ ರೇಖಾ, ಕೃಷ್ಣಮೂರ್ತಿ ಕವತಾರ್, ಅಶ್ವಿನ್ ಹಾಸನ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ವಿನಯ ಪಾಂಡವಪುರ ಈ ಚಿತ್ರದ ಹಾಡುಗಳಿಗೆ ಗೀತೆ ಬರೆದರೆ, ಪ್ರೇಮ್​ ಕ್ಯಾಮೆರಾ ಹಿಡಿದಿದ್ದಾರೆ. ಸುಂದರ್​ ಮೂರ್ತಿ ಸಂಗೀತವಿದೆ. ರಾಜೇಶ್​ ಕೃಷ್ಣನ್, ಸಂತೋಷ್, ಐಶ್ವರ್ಯಾ ಹಾಡುಗಳಿಗೆ ಧ್ವನಿಯಾಗಲಿದ್ದಾರೆ ಎಂಬುದು ಚಿತ್ರತಂಡದ ಮಾತು.

Related Posts

error: Content is protected !!