ಪೊಗರು ರಿಲೀಸ್‌ ಡೇಟ್‌ ಫಿಕ್ಸ್‌ ! ಕ್ರಿಸ್ಮಸ್‌ ಇಲ್ಲವೇ ಸಂಕ್ರಾಂತಿಗೆ ಬಿಡುಗಡೆ

ಕೊರೊನಾ ಬಳಿಕ ಮೊದಲು ರಿಲೀಸ್‌ ಆಗಲಿದೆಯಾ ದೊಡ್ಡ ಬಜೆಟ್‌ ಸಿನಿಮಾ?

ಕನ್ನಡದಲ್ಲೀಗ ಸಿನಿಮಾ ಬಿಡುಗಡೆ ಪರ್ವ!
ಹೌದು, ಮೇಲಿನ ಮಾತನ್ನು ಸ್ವಲ್ಪ ಅಚ್ಚರಿಯಂತೆ ಕಾಣಬಹುದಾದರೂ, ಕೊರೊನಾ ಹಾವಳಿ ಬಳಿಕ ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿರುವುದಂತೂ ಹೌದು, ಈಗಾಗಲೇ ಮರುಬಿಡುಗಡೆಯಾದ ಚಿತ್ರಗಳು ಹೀಗೆ ಬಂದು ಹಾಗೆ ಹೋದವು. ಹಾಗಂತ, ಹೊಸ ಚಿತ್ರಗಳನ್ನು ಬಿಡುಗಡೆ ಮಾಡಲು ಒಂದಷ್ಟು ಮಂದಿ ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ. ನವೆಂಬರ್‌ ೨೦ರಂದು ಮಂಸೋರೆ ನಿರ್ದೇಶನದ “ಆಕ್ಟ್‌-೧೯೭೮” ಚಿತ್ರ ಬಿಡುಗಡೆಯಾಯಿತು. ಅದರ ಬೆನ್ನಲ್ಲೇ ನ.೨೭ರಂದು “ಅರಿಷಡ್ವರ್ಗ” ಚಿತ್ರವೂ ತೆರೆಗೆ ಅಪ್ಪಳಿಸುತ್ತಿದೆ. ಹಾಗೆಯೇ ಒಂದಷ್ಟು ಹೊಸಬರು ಕೂಡ ಚಿತ್ರಮಂದಿರದಲ್ಲೇ ಸಿನಿಮಾ ಬಿಡುಗಡೆ ಮಾಡಲು ಧೈರ್ಯ ತೋರಿದ್ದಾರೆ. ಇಲ್ಲಿಯವರೆಗೆ ಹೊಸಬರೇ ಚಿತ್ರಮಂದಿರಕ್ಕೆ ಬರುವ ಧೈರ್ಯ ಮಾಡಿದ್ದರು. ಈಗ “ಪೊಗರು” ಕೂಡ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ.


ಹೌದು, ಇತ್ತೀಚೆಗಷ್ಟೇ ಸಿನಮಾದ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ನಂದಕಿಶೋರ್‌, ಈಗ ತಮ್ಮ “ಪೊಗರು” ಚಿತ್ರವನ್ನು ರಿಲೀಸ್‌ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ ಯಾವಾಗ ರಿಲೀಸ್‌ ಆಗುತ್ತೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಧ್ರುವ ಸರ್ಜಾ ಎಲ್ಲೇ ಕಾಣಿಸಿಕೊಂಡರೂ, ಅಭಿಮಾನಿಗಳು “ಪೊಗರು” ಯಾವಾಗ ಚಿತ್ರಮಂದಿರಕ್ಕೆ ಬರುತ್ತೆ ಎಂದು ಪ್ರಶ್ನೆ ಕೇಳುತ್ತಿದ್ದರು. ಈಗ ಅದಕ್ಕೆ ಉತ್ತರವೂ ಸಿಕಿದೆ. ಮೂಲಗಳ ಪ್ರಕಾರ “ಪೊಗರು” ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬಕ್ಕೆ ಬರಲಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಕ್ರಿಸ್‌ಮಸ್‌ ಹಬ್ಬಕ್ಕೆ ಬರಲು ತಡವಾದರೆ, ಜನವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ ಎನ್ನಲಾಗಿದೆ. ಒಂದು ವೇಳೆ ಚಿತ್ರತಂಡದ ಯೋಜನೆಯಂತೆಯೇ “ಪೊಗರು” ತೆರೆಗೆ ಅಪ್ಪಳಿಸಿದರೆ, ಕನ್ನಡ ಚಿತ್ರರಂಗದಲ್ಲಿ ಕೊರೊನಾ ಬಳಿಕ ಬಿಡುಗಡೆಯಾಗುವ ಮೊದಲ ದೊಡ್ಡ ಬಜೆಟ್‌ ಸಿನಿಮಾ ಇದಾಗಲಿದೆ. ಈ ಚಿತ್ರದಲ್ಲಿ ಧ್ರುವ ಅವರಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅದೇನೆ ಇರಲಿ, ಈಗಾಗಲೇ ಬಿಡುಗಡೆಯಾಗಿರುವ ಸಾಂಗ್‌ ಹಾಗೂ ಟ್ರೇಲರ್‌ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದು, ಅಭಿಮಾನಿಗಳು ಈಗ ಸಿನಿಮಾ ಬಿಡುಗಡೆಯ ಎದುರು ನೋಡುತ್ತಿದ್ದಾರೆ.

Related Posts

error: Content is protected !!