ಸಿಕ್ಸ್ ಮೂಲಕ ಆಕ್ಷನ್-ಕಟ್ ಹೇಳ್ತಾರೆ ಮ್ಯೂಸಿಕ್ ಡೈರೆಕ್ಟರ್
ಅಮೃತಾಂಜನ್ ಬೆಡಗಿ ನಾಯಕಿ
ಕನ್ನಡದಲ್ಲಿ ಈಗಾಗಲೇ ಒಂದಷ್ಟು ತಾಂತ್ರಿಕ ವರ್ಗದವರು ನಿರ್ದೇಶನಕ್ಕೆ ಇಳಿದಿರೋದು ಗೊತ್ತೇ ಇದೆ. ಛಾಯಾಗ್ರಾಹಕರು ನಿರ್ದೇಶಕರಾಗಿದ್ದಾರೆ. ಸಂಗೀತ ನಿರ್ದೇಶಕರೂ ಆಕ್ಷನ್ -ಕಟ್ ಹೇಳಿದ್ದಾರೆ. ಆ ಸಾಲಿಗೆ ಈಗ ಅಭಿಮನ್ ರಾಯ್ ಕೂಡ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಹೌದು, ಕನ್ನಡದಲ್ಲಿ ಇಲ್ಲಿಯವರೆಗೂ ಅದೆಷ್ಟೋ ಹಿಟ್ ಹಾಡುಗಳನ್ನು ಕೊಟ್ಟು ತಮ್ಮದೇ ಆದ ಅಭಿಮಾನಿ ವರ್ಗವನ್ನು ಕಟ್ಟಿಕೊಂಡಿರುವ ಅಭಿಮನ್ ರಾಯ್, ತಮ್ಮಸಂಗೀತ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿಯನ್ನೂ ಪಡೆದವರು. ಸದಾ ಉತ್ಸಾಹದಲ್ಲೇ ಕೆಲಸ ಮಾಡುವ ಮತ್ತು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಮ್ಯೂಸಿಕ್ ಹೀರೋ ಆಗಿದ್ದ ಅಭಿಮನ್ ರಾಯ್, ಇದೀಗ ಮೊದಲ ನಿರ್ದೇಶನದ ಚಿತ್ರಕ್ಕೆ ರೆಡಿಯಾಗಿದ್ದಾರೆ. ಅಷ್ಟೇ ಅಲ್ಲ, ಸದ್ದಿಲ್ಲದೆಯೇ ಅವರು ತಮ್ಮ ಹೊಸ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದ್ದಾರೆ. ಅಂದಹಾಗೆ, ಅಭಿಮನ್ರಾಯ್ ಅವರು ತಮ್ಮ ಚೊಚ್ಚಲ ಚಿತ್ರಕ್ಕೆ ಇಟ್ಟಿರುವ ಹೆಸರು “ಸಿಕ್ಸ್”.
ಲವ್ ಜೊತೆ ಕಾಮಿಡಿ ಥ್ರಿಲ್ಲರ್
ಇದು ಶ್ರೇಯ ಸಿಲ್ವರ್ ಸ್ಕ್ರೀನ್ ಬ್ಯಾನರ್ನಲ್ಲಿ ತಯಾರಾಗಿರುವ ಸಿನಿಮಾ. ನಳಿನಿ ಗೌಡ ಹಾಗೂ ರವಿಕುಮಾರ್, ಸೋಮಶೇಖರ್ ರಾಜವಂಶಿ ನಿರ್ಮಾಣ ಮಾಡಿದ್ದಾರೆ. ಇಷ್ಟಕ್ಕೂ ಸಂಗೀತ ನಿರ್ದೇಶಕ ಅಭಿಮನ್ರಾಯ್ ಅವರೇಕೆ ನಿರ್ದೇಶನಕ್ಕಿಳಿದರು? ಈ ಬಗ್ಗೆ “ಸಿನಿ ಲಹರಿ” ಜೊತೆ ಮಾತನಾಡುವ ಅಭಿಮನ್ ರಾಯ್, “ಮೊದಲಿನಿಂದಲೂ ನನಗೆ ಸಿನಿಮಾ ನಿರ್ದೇಶಿಸುವ ಆಸಕ್ತಿ ಇತ್ತು. ಈಗ ಇರುವ ತಾಂತ್ರಿಕತೆಯಲ್ಲಿ ಯಾರು ಏನ್ ಬೇಕಾದರೂ ಮಾಡಬಹುದು. ಈ ಹಿಂದೆಯೇ ನಾನು, ಆಡಿಯೋ, ವಿಡಿಯೋ ಆಲ್ಬಂ ಮಾಡಿದ್ದೆ. ಅದೇ ಟೆಕ್ನಲಾಜಿ ಬಳಸಿಕೊಂಡು ಒಂದು ಹೆಜ್ಜೆ ಮುಂದಿಟ್ಟಿದ್ದೇನೆ. “ಸಿಕ್ಸ್” ಅನ್ನೋದು ಒಂದು ಸಂದೇಶ ಇರುವ ಕಥೆ. ಪಕ್ಕಾ ಕನ್ನಡ ನೆಲದ ಚಿತ್ರ. ಅದರಲ್ಲೂ ಈಗಿನ ಟ್ರೆಂಡ್ಗೆ ತಕ್ಕಂತಿರುವ ಕಥೆ. ಇದೊಂದು ಲವ್ಸ್ಟೋರಿ, ಕಾಮಿಡಿಯ ಜೊತೆಗೆ ಥ್ರಿಲ್ಲರ್ ಅಂಶಗಳೂ ಇಲ್ಲಿವೆ. ಹಾಗಾಗಿ ನಾನೇ ಒಂದೊಳ್ಳೆಯ ಕಥೆ ಹೆಣೆದು, ಚಿತ್ರಕಥೆ ಮಾಡಿಕೊಂಡು, ಸಂಭಾಷಣೆಯನ್ನೂ ಬರೆದು, ಈಗ ನಿರ್ದೇಶನಕ್ಕೆ ಅಣಿಯಾಗಿದ್ದೇನೆ. ನನ್ನ ಈ ಮೊದಲ “ಸಿಕ್ಸ್” ಬಗ್ಗೆ ಹೇಳುವುದಾದರೆ, ಸಣ್ಣ ತಪ್ಪಿನಿಂದ ದೊಡ್ಡ ತಪ್ಪುಗಳು ಹೇಗಾಗುತ್ತವೆ. ದೊಡ್ಡ ಸಮಸ್ಯೆಯನ್ನೂ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬ ವಿಷಯ ಇಟ್ಟುಕೊಂಡು ಕಥೆ ಹೆಣೆದಿದ್ದೇನೆ ಎಂಬುದು ಅಭಿಮನ್ ಅಭಿಪ್ರಾಯ.
ನೈಜತೆಯ ಚಿತ್ರಣ
ಸಾಮಾನ್ಯವಾಗಿ ಸಮಾಜದಲ್ಲಿ ಒಂದಲ್ಲ ಒಂದು ಸಮಸ್ಯೆಗೆ ಎಲ್ಲರೂ ಸಿಲುಕಿಕೊಳ್ಳುತ್ತಾರೆ. ಅಂತಹ ಸಣ್ಣಪುಟ್ಟ ಸಮಸ್ಯೆ ಹೇಗೆ ದೊಡ್ಡದ್ದಾಗುತ್ತೆ. ಯಾಕೆ ಹಾಗಾಗುತ್ತೆ ಎಂಬುದರ ಅಂಶ ಇಲ್ಲಿದೆ. ಇದೊಂದು ನೈಜತೆಗೆ ಹತ್ತಿರವಾಗಿರುವ ಚಿತ್ರ. ಇಲ್ಲಿ ಯಾವುದೇ ಕಲಾವಿದರಿಗೂ ಮೇಕಪ್ ಇರುವುದಿಲ್ಲ. ಎಲ್ಲವೂ ನಮ್ಮ ಅಕ್ಕಪಕ್ಕದಲ್ಲೇ ನಡೆದ ಘಟನೆ ಎಂಬಂತೆ ಭಾಸವಾಗುವಂತಹ ಚಿತ್ರಣ ಕಟ್ಟಿಕೊಡುವ ಪ್ರಯತ್ನ ಮಾಡುತ್ತೇನೆ. ಬಹುತೇಕ ಬೆಂಗಳೂರು, ಕೋಲಾರ, ಚಿತ್ರದುರ್ಗ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಇಲ್ಲಿ ಡ್ರಾಮಾ ಅನ್ನೋದು ಇರಲ್ಲ. ಈ ಹಿಂದೆ ಕನ್ನಡದಲ್ಲಿ ಬಂದಿರುದ ಕೆಲವು ನೈಜ ಘಟನೆಯ ಸಿನಿಮಾಗಳಂತೆಯೇ ಇದೂ ಮೂಡಿಬರಲಿದೆ. ಇನ್ನು, ನನ್ನ ಸರ್ಕಲ್ ಬಳಿ ನಡೆದಿರುವಂತಹ ಹಲವಾರು ವಿಷಯಗಳನ್ನು ಇಲ್ಲಿ ಹೇಳಹೊರಟಿದ್ದೇನೆ. ನಾನೊಬ್ಬ ಸಂಗೀತ ನಿರ್ದೇಶಕನಾಗಿದ್ದರೂ, ಇಲ್ಲಿ ವಿನಾಕಾರಣ ಹಾಡುಗಳನ್ನು ತೂರಿಸಲು ಹೋಗಿಲ್ಲ. ಕೇವಲ ಮೂರು ಹಾಡುಗಳಿವೆ. ಎಲ್ಲಾ ಹಾಡುಗಳೂ ಕಥೆಗೆ ಪೂರಕವಾಗಿರಲಿವೆ. ಸದ್ಯಕ್ಕೆ ಈಗ ಝೇಂಕಾರ್ ಮ್ಯೂಸಿಕ್ ಮೂಲಕ ಫಸ್ಟ್ ಲುಕ್ ಹೊರಬಂದಿದೆ. ಡಿಸೆಂಬರ್ ಹೊತ್ತಿಗೆ ಚಿತ್ರೀಕರಣ ಮುಗಿಸಿ, ನಂತರ ಟೀಸರ್, ಸಾಂಗ್, ಟ್ರೇಲರ್ ಅನ್ನು ಹಂತ ಹಂತವಾಗಿ ಬಿಡುಗಡೆ ಮಾಡಿ ಆಮೇಲೆ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಇದೆ ಎನ್ನುತ್ತಾರೆ ಅಭಿಮನ್ ರಾಯ್.
ಅಮೃತಾಂಜನ್ ಬೆಡಗಿ ಎಂಟ್ರಿ
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ “ಅಮೃತಾಂಜನ್” ಬೆಡಗಿ ಪಾಯಲ್ ಚೆಂಗಪ್ಪ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾಗುತ್ತಿದ್ದಾರೆ. “ಅಮೃತಾಂಜನ್” ಸಾಕಷ್ಟು ಸುದ್ದಿ ಮಾಡಿದ ಕಿರುಚಿತ್ರ. ಒಂದೊಳ್ಳೆಯ ಸಂದೇಶವನ್ನು ಹಾಸ್ಯಮಯವಾಗಿ ರೂಪಿಸಿದ ಕಿರುಚಿತ್ರಕ್ಕೆ ಭಾರೀ ಮೆಚ್ಚುಗೆ ಬಂದಿತ್ತು. ಅಲ್ಲಿ ನಟಿಸಿದ್ದ ಪಾಯಲ್ ಚೆಂಗಪ್ಪ ನಮ್ಮ “ಸಿಕ್ಸ್ʼ ಚಿತ್ರದ ನಾಯಕಿ. ಉಳಿದಂತೆ ಇಲ್ಲಿ ರವಿಚಂದ್ರ, ಪ್ರಣವ್ ರಾಯ್, ಪೂರ್ವ ಯೋಗಾನಂದ್ ಇತರರು ಇದ್ದಾರೆ. ಎಲ್ಲಾ ಸರಿ, “ಸಿಕ್ಸ್” ಶೀರ್ಷಿಕೆ ಇರುವುದರಿಂದ ಇಲ್ಲಿ ಆರು ಪಾತ್ರಗಳ ಸುತ್ತವೇನಾದರೂ ಸಿನಿಮಾ ಸಾಗುತ್ತಾ? ಅಥವಾ ಇಲ್ಲಿ “ಸಿಕ್ಸ್” ಕ್ವಾಲಿಟೀಸ್ ಏನಾದರೂ ಇದೆಯಾ? ಇದೆಲ್ಲದ್ದಕ್ಕೂ ಸಿನಿಮಾ ಉತ್ತರ ಕೊಡುತ್ತದೆ ಎಂಬುದು ಅಭಿಮನ್ ರಾಯ್ ಮಾತು. ಅಂದಹಾಗೆ, ಚಿತ್ರಕ್ಕೆ ಸಿದ್ಧಾರ್ಥ್ ಛಾಯಾಗ್ರಹಣವಿದೆ. ಅದೇನೆ ಇರಲಿ, ಕೇವಲ ಫಸ್ಟ್ ಲುಕ್ನಲ್ಲಿ ಕಣ್ಣುಗಳನ್ನಷ್ಟೇ ಬಿಟ್ಟು, ಕಣ್ಣಲ್ಲೇ ಕುತೂಹಲ ಕೆರಳಿಸಿದ್ದಾರೆ. ಆ ಕುತೂಹಲ ತಣಿಯಬೇಕಾದರೆ, ಅವರ ಮೊದಲ ನಿರ್ದೇಶನದ “ಸಿಕ್ಸ್” ಹೊರಬರಬೇಕು. ಮೊದಲ ಬಾಲ್ನಲ್ಲೇ ಸಿಕ್ಸರ್ ಬಾರಿಸಿದರೆ, ಅಭಿಮನ್ ರಾಯ್ ತಮ್ಮ ಮೊದಲ ಚಿತ್ರ ʼಸಿಕ್ಸ್” ಮೂಲಕ ಸಿಕ್ಸರ್ ಬಾರಿಸುವಂತಾಗಲಿ ಎಂಬುದು ʼಸಿನಿ ಲಹರಿ” ಆಶಯ.