ಕನ್ನಡಿಗರಿಗೆ ನಾನು ಚಿರಋಣಿ- 4 ದಶಕ ಸಿನಿಪಯಣ ನೆನೆದು ಜಗ್ಗೇಶ್‌ ಭಾವುಕ

ನನ್ನ ಹೀರೋ ಮಾಡಿದ್ದು ಅಂಬರೀಶ್‌ !

ರಾಜಕೀಯಕ್ಕೆ ತಳ್ಳಿದ್ದು ಡಿಕೆಶಿ

 

“ನನ್ನ ಬದುಕಿಗೆ ಆ ಎರಡು ಚಿತ್ರಗಳ ಪಾತ್ರಗಳು ದೊಡ್ಡ ತಿರುವು ಕೊಟ್ಟಿವೆ…”
– ಹೀಗೆ ಹೇಳಿ ಹಾಗೊಂದು ನಿಟ್ಟುಸಿರು ಬಿಟ್ಟರು ಜಗ್ಗೇಶ್.‌ ನವರಸ ನಾಯಕ ಜಗ್ಗೇಶ್‌ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಅಷ್ಟೇ ಅಲ್ಲ, ಅವರೊಬ್ಬ ಅಪ್ಪಟ ಮಾತಿನ ಮಲ್ಲ. ನಗುವಿನ ಮೋಡಿಗಾರ. ನವೆಂಬರ್‌ ೧೭, ೧೯೮೦ರಲ್ಲಿ ಕನ್ನಡ ಸಿನಿಜಗತ್ತಿಗೆ ಕಾಲಿಟ್ಟ ಜಗ್ಗೇಶ್‌ ಅವರ ಸಿನಿ ಬದುಕಿಗೆ ಈಗ ನಾಲ್ಕು ದಶಕಗಳಾಗಿವೆ. ಈ ೪೦ ವರ್ಷಗಳ ಅದ್ಭುತ ಸಿನಿ ಪಯಣ ಕುರಿತು ಜಗ್ಗೇಶ್‌ ಒಂದಷ್ಟು ಮಾತನಾಡಿದ್ದಾರೆ. ಅದು ಅವರದೇ ಮಾತುಗಳಲ್ಲಿ…

 

“ಇಷ್ಟು ವರ್ಷ ನಾನು ಸಿನಿಬದುಕಲ್ಲಿದ್ದೇನೆ ಅಂದರೆ ಅದಕ್ಕೆ ಬಹಳಷ್ಟು ಜನ ಕಾರಣರಾಗಿದ್ದಾರೆ. ಅಂದಿನ ಮತ್ತು ಇಂದಿನ ಮಾಧ್ಯಮವೂ ಜೊತೆಗಿದೆ. ನಾನು ಈ ಚಿತ್ರರಂಗದಲ್ಲಿ ಬೆಳೆಯೋಕೆ ಹಲವರು ಕಾರಣ. ಮುಖ್ಯವಾಗಿ ನಿರ್ಮಾಪಕ ವೀರಸ್ವಾಮಿ. ಅವರು ಗಾಂಧಿನಗರದ ಕಿಂಗ್.‌ ಒಮ್ಮೆ ಒಂದಷ್ಟು ಫೋಟೋ ಹಿಡಿದು ಅವರನ್ನು ಭೇಟಿ ಮಾಡಲು ಹೋದಾಗ, ನನ್ನ ಫೋಟೋ ನೋಡಿ, ರಜನಿ ಲುಕ್‌ ಇದೆಯಲ್ಲಯ್ಯಾ, ಅಂತ ಹೇಳಿ, ನನ್ನ ಹೆಸರನ್ನು ಬರೆಸಿ, ಅವರ “ರಣಧೀರ” ಸಿನಿಮಾಗೆ ಆಯ್ಕೆ ಮಾಡಿದರು. ಆಗ ನನ್ನದು ಚಿತ್ರಾನ್ನ ತಿನ್ನೋ ಪಿರಿಯಡ್.‌ ಕೈಗೆ ಕಾಸು ಕೊಕಟ್ಟು ನಿಮ್ಮ ಬಟ್ಟೆ ಆಯ್ಕೆ ಮಾಡ್ಕೊಳ್ಳಿ ಅಂದ ಪುಣ್ಯಾತ್ಮ. ಆ ದುಡ್ಡಲ್ಲಿ ಸ್ವಲ್ಪ ಉಳಿಸಿಕೊಂಡು ಹೇಗೋ ಆ ಚಿತ್ರ ಮಾಡಿದೆ. ಅಲ್ಲಿಂದ ನನ್ನ ಸಿನಿಬದುಕು ಮತ್ತೊಂದು ದಾರಿ ಕಂಡುಕೊಂಡಿತು. ಅದೃಷ್ಟ ಅನ್ನೋದು ಹೇಗೆಲ್ಲಾ ಬದಲಾಯ್ತಾ ಹೋಯ್ತು. ನನ್ನ ಬದುಕಲ್ಲಿ ಆ ಎರಡು ಚಿತ್ರಗಳ ಪಾತ್ರಗಳು ದೊಡ್ಡ ಮಟ್ಟದ ಓಪನಿಂಗ್ ಕೊಟ್ಟಿದ್ದು ಸುಳ್ಳಲ್ಲ.‌

 

ಒಂದು “ರಣರಂಗʼ ಚಿತ್ರ. ಆ ಕ್ರೆಡಿಟ್‌ ಶಿವರಾಜಕುಮಾರ್‌ಗೆ ಸಲ್ಲಬೇಕು. ಒಮ್ಮೆ ಅವಕಾಶ ಕುರಿತು ಹೊನ್ನವಳ್ಳಿ ಕೃಷ್ಣ ಅವರ ಬಳಿ ಹೇಳಿಕೊಂಡೆ, ಕೃಷ್ಣ ಶಿವಣ್ಣನ್ನೊಮ್ಮೆ ಕೇಳು ಸಹಾಯ ಮಾಡ್ತಾರೆ ಅಂದ. ಆಗ ನನ್ನ ಬಳಿ ಬೈಕ್‌ಗೆ ಪೆಟ್ರೋಲ್‌ ಹಾಕಿಸೋಕು ಕಾಸಿಲ್ಲ. ಹೇಗೋ ಜೈ ಅಂತ ಶಿವಣ್ಣ ಮನೆಗೆ ಹೋದೆ. “ನನಗೆ ಅವಕಾಶ ಸಿಗ್ತಾ ಇಲ್ಲ. ಸಹಾಯ ಮಾಡಿʼ ಅಂದೆ. ಶಿವಣ್ಣ “ರಣರಂಗ” ಚಿತ್ರದಲ್ಲಿ ಪಾತ್ರ ಫಿಕ್ಸ್‌ ಮಾಡಿಸಿದರು. ಅದೇಕೋ ಆ ಸೆಟ್‌ನಲ್ಲಿ ಎಲ್ಲರಿಗೂ ನನ್ನ ಮೇಲೆ ಸಿಟ್ಟು. ಯಾರೋ ಮಾಡಬೇಕಿದ್ದ ಪಾತ್ರ ನನಗೆ ಸಿಕ್ಕಿದೆ ಅಂತ. ಆ ಚಿತ್ರಕ್ಕೆ ಸೋಮಶೇಖರ್‌ ನಿರ್ದೇಶಕರು. ಅವರಿಗೂ ಒಂದು ರೀತಿ ಕೋಪ ಇತ್ತು. ಯಾರೋ ಬಂದಿರದ ವ್ಯಕ್ತಿಯ ಡೈಲಾಗ್‌ ನನ್ನ ಪಾಲಿಗೆ ಬಂದಿತ್ತು. ಆ ಡೈಲಾಗ್‌ ಹೇಳಿಸಿದರು. ಚೆನ್ನಾಗಿಯೇ ಡೈಲಾಗ್‌ ಹೇಳಿದೆ. ನಿರ್ದೇಶಕರು ಖುಷಿಯಾಗಿ, ಒಳ್ಳೆಯ ಡೈಲಾಗ್‌ ಕೊಟ್ಟರು. ಆ ಶಾಟ್‌ ನಂತರ ಬ್ರೇಕ್‌ನಲ್ಲಿ ಊಟ ಮಾಡ್ತಾ ಕೂತಿದ್ದೆ. ನಿರ್ದೇಶಕರು ಬಂದು ಪ್ರೀತಿಯಿಂದ ಮಾತಾಡಿಸಿದರು. ಅಲ್ಲಿಂದ ಒಂದು ರೀತಿಯ ಟರ್ನ್‌ ಆಯ್ತು.

 

ಮತ್ತೊಂದು ಹಂತಕ್ಕೆ ಕರೆದೊಯ್ದ ದ್ವಾರಕೀಶ್ ಚಿತ್ರ
ಇನ್ನೊಂದು ಸಿನ್ಮಾ “ಕೃಷ್ಣ ನೀ ಕುಣಿದಾಗ”. ದ್ವಾರಕೀಶ್‌ ಅವರು ಆ ಚಿತ್ರ ಮಾಡುವಾಗ, ಯಾರೋ ಕಲಾವಿದರು ಹೆಚ್ಚು ಹಣ ಕೇಳಿದರು ಅಂತ, ಬೇಜಾರಾಗಿ, ದಾರಿ ಹೋಗೋ ದಾಸಯ್ಯನನ್ನು ಕರೆದು ಆಕ್ಟ್‌ ಮಾಡಿಸ್ತೀನಿ. ಇವರಿಗೆ ಅಷ್ಟೊಂದು ಕಾಸು ಕೊಡಲ್ಲ ಅಂತ ಹೇಳಿದ್ದರಂತೆ. ಆಗ ನನಗೆ ಗೊತ್ತಿರೋರು ಒಬ್ಬರು, ರಜನಿಕಾಂತ್‌ ರೀತಿ ಒಬ್ಬ ಇದ್ದಾನೆ. ಚೆನ್ನಾಗಿ ನಟಿಸ್ತಾನೆ ಅಂದಿದ್ದಾರೆ. ಹೌದಾ, ಹೋಗಿ ಎತ್ತಾಕ್ಕೊಂಡ್‌ ಬನ್ನಿ ಅಂದಿದ್ದಾರೆ. ಉದಯಶಂಕರ್‌ ಎರಡನೇ ಮಗ ರವಿ ನಮ್ಮನೆ ಹುಡುಕಿಕೊಂಡು ಬಂದ. ಅವತ್ತು ಜನವರಿ ೧೪ ಹಬ್ಬವಿತ್ತು. ಬಂದ ರವಿಗೆ ಏನ್‌ ಸಮಾಚಾರ ಅಂದೇ, ದ್ವಾರಕೀಶ್‌ ಕರ್ಕೊಂಡ್‌ ಬಾ ಅಂದಿದ್ದಾರೆ ಅಂದ. ಯಪ್ಪಾ, ಸಣ್ಣ ಪಾತ್ರ ಇರಬೇಕು ಅದಕ್ಕೆ ಇಷ್ಟೊಂದ್‌ ಬಿಲ್ಡಪ್ಪಾ ಅಂದೆ. ಇಲ್ಲಾ ಕಣಯ್ಯಾ, ಕಾಸು ಕೊಟ್ಟು ಕಳುಹಿಸಿದ್ದಾರೆ ನೋಡು ಅಂದ. ಅಲ್ಲಿಂದ ಮೈಸೂರಿಗೆ ಹೋದೆ. ಸೆಟ್‌ನಲ್ಲಿ ದ್ವಾರಕೀಶ್‌ ನೋಡಿ, ಖುಷಿಯಾದರು. ರಜನಿಕಾಂತ್‌ ಹಾಕಿ ಬಿಟ್ಟಿರುವ ಅಷ್ಟೂ ಬಟ್ಟೆ ಆಲ್ಟ್ರ್‌ ಮಾಡಿ ಇವನಿಗೆ ಹಾಕ್ರಿ ಅಂದ್ರು. ಸೇಮ್‌ ಕಮಲಹಾಸನ್‌ ಟೈಪ್‌ ರೆಡಿ ಮಾಡಿಬಿಟ್ರು. ಕನ್ನಡಿ ನೋಡಿ ನನಗೇ ಒಂದು ರೀತಿ ನಂಬಲಾಗಲಿಲ್ಲ. ಅಷ್ಟರಮಟ್ಟಿಗೆ ಮೇಕಪ್‌ ಮಾಡಿದ್ದರು. ಆ ಚಿತ್ರ ಇನ್ನೊಂದು ಹಂತಕ್ಕೆ ಕರೆದೊಯ್ತು.

 

ಹೀರೋ ಆಗು ಅಂದದ್ದು ಅಂಬರೀಶ್
ಆ ಎರಡು ಸಿನಿಮಾಗಳ ಬಳಿಕ ಒಂದೊಂದೇ ಸಿನಿಮಾಗಳು ಹುಡುಕಿ ಬಂದವು. ಸಂಬಳ ಅಂದ್ರೆ ಏನು ಅಂತ ಗೊತ್ತಿಲ್ಲದವನು, ಇಷ್ಟು ಕೊಟ್ಟರೆ, ಚಿತ್ರ ಮಾಡಬಹುದು ಅಂತ ಹೇಳುವ ಮಟ್ಟಕ್ಕೆ ಬಂದೆ. ಅಂದಿನ ದಿನದಲ್ಲಿ ಈ ಪಾತ್ರ, ಈ ಚಿತ್ರ ಮಾಡಬೇಕು ಅಂತ ಬಂದವರಿಗೆ ಎರಡು ಲಕ್ಷ ಕೇಳುವ ಮಟ್ಟಕ್ಕೆ ಬಂದೆ. ಅದೊಂದು ಹೆಮ್ಮೆ. ಇನ್ನು, ಅಂಬರೀಶ್‌ ಅವರ “ರೌಡಿ ಎಂಎಲ್‌ಎ” ಚಿತ್ರದ ಕ್ಲ್ಯೆಮ್ಯಾಕ್ಸ್‌ ಫೈಟ್‌ ನಡೀತಾ ಇತ್ತು. ಜನರಂತೂ ಕಿರುಚಾಡೋರು. ಆಗ, ಅವರೇ ಲೋ, ನೋಡೋ, ಹೆಂಗ್‌ ಕಿರುಚಾಡ್ತಾರೆ ಜನ. ಹೀರೋ ಆಗೋ ನೀನು ಅಂದ್ರು. ನಂಜನಗೂಡಿನ ಈಶ್ವರನ ಮುಂದೆ ಅವರು ಆ ಮಾತು ಹೇಳಿದ ಕ್ಷಣ ಚೆನ್ನಾಗಿತ್ತು ಅನಿಸುತ್ತೆ. ಅವರ ಮಾತು ನಿಜವಾಯ್ತು. ನಾನು ಹೀರೋ ಆದೆ. “ತರ್ಲೆ ನನ್ಮಗ” ಚಿತ್ರ ಮಾಡಿದೆ. ಆದರೆ, ಆ ಚಿತ್ರವನ್ನು ಉಪ್ಪಿ ಚೆನ್ನಾಗಿ ಮಾಡಿದ್ದರೂ, ನಿಂತು ಹೋಯ್ತು. ಬೇಸರ ಆಯ್ತು. ಆಮೇಲೆ, ನಮ್ಮ ಭಾವ ಜೊತೆ ಸೇರಿ “ಭಂಡ ನನ್ನ ಗಂಡ” ಚಿತ್ರದ ಸ್ಕ್ರಿಪ್ಟ್‌ ರೆಡಿ ಮಾಡಿದೆ. ಅದರಲ್ಲಿ ಸ್ಪೆಷಲ್‌ ಪಾತ್ರವಿತ್ತು. ಅಂಬರೀಶ್‌ ಅವರನ್ನು ಕೇಳಿ, ಖಂಡಿತ ಮಾಡ್ತಾರೆ ಅನ್ನೋ ಮಾತು ಕೇಳಿಬಂತು. ಸರಿ, ನೋಡೋಣ ಅಂತ, ಅವರ ಮನೆಗೆ ಹೋದೆ. ಹೇಳಿದೆ. ದೊಡ್ಡ ಹೃದಯ ಅವರದು. ಒಪ್ಪಿದರು. ಸಿನಿಮಾನು ಕಷ್ಟಪಟ್ಟು ಮಾಡಿದೆ. ಆಮೇಲೆ ಆ ಸಿನಿಮಾ ರಿಲೀಸ್‌ ಆಗೋಕೆ ಸಾಕಷ್ಟು ಪರದಾಡಿದೆ. ಯಾರ ಬಳಿ ಹೋದರೂ, ರಿಲೀಸ್‌ ಮಾಡೋಕೆ ಮುಂದಾಗಲಿಲ್ಲ. ಕೊನೆಗೆ, ಅಂಬರೀಶ್‌ ಬಳಿ ಹೋಗಿ, ಹೀರೋ ಆಗು ಅಂತ ಹೇಳಿದ್ರಿ, ಹೀರೋ ಆದೆ. ಈಗ ಯಾರೂ ಸಿನಿಮಾ ರಿಲೀಸ್‌ ಮಾಡೋಕೆ ಮುಂದಾಗ್ತಾ ಇಲ್ಲ. ಅಂದೆ. ಹೌದಾ, ಸರಿ ನೀನೀಗ ಮನೆಗೆ ಹೋಗು ಮಾತಾಡ್ತೀನಿ ಅಂದ್ರು. ಬೆಳಗ್ಗೆ, ಒಬ್ಬ ವಿತರಕರು ಫೋನ್‌ ಮಾಡಿ,ಕರೆಸಿಕೊಂಡು ಸಿನಿಮಾ ನೋಡಿ, ಖುಷಿಪಟ್ಟು ಸಿನಿಮಾ ರಿಲೀಸ್‌ ಮಾಡಿದರು. ಅದು ಸೂಪರ್‌ ಹಿಟ್‌ ಆಯ್ತು. ಆ ಕಾಲಕ್ಕೆ ಅದು ೬೯ ಲಕ್ಷ ವ್ಯಾಪಾರ ಆಯ್ತು. ದುಡ್ಡು ಅನ್ನೋದನ್ನದ್ದು ಜೋಡಿಸಿ ನೋಡಿದ ದಿನವದು. ಅಲ್ಲಿಂದ ಬೆಳೆಯುತ್ತಾ, ಹಿಟ್‌, ಪ್ಲಾಪ್‌ ಕೊಡ್ತಾ, ಏರುತ್ತಾ, ಇಳಿಯುತ್ತಾ, ಗೆಲುವು, ಸೋಲು ಕಂಡು ಹಾಗೆಯೇ ಬೆಳೆದು ಬಂದೆ.

ರಾಜಕೀಯಕ್ಕೆ ತಳ್ಳಿದ್ದು ಡಿಕೆಶಿ
ಯಾವುದೋ ಒಂದು ಕಾರ್ಯಕ್ರಮಕ್ಕೆ ಟೈಗರ್‌ ಪ್ರಭಾಕರ್‌ ಸೇರಿದಂತೆ ಒಂದಷ್ಟು ಜನ ಬರ್ತಾರೆ, ನೀನು ಬಾ ಅಂತ ಅಂದು ಡಿ.ಕೆ.ಶಿವಕುಮಾರ್‌ ನನ್ನನ್ನು ಆಹ್ವಾನಿಸಿದರು. ನಾನು ಹೋದೆ. ನನ್ನ ಭಾಷಣ ಕೇಳಿದ ಡಿ.ಕೆ.ಶಿ. ಚೆನ್ನಾಗ್‌ ಮಾತಾಡ್ತಾನಲ್ಲ ಅಂತ, ನನ್ನನ್ನು ರಾಜಕೀಯಕ್ಕೆ ತಂದುಬಿಟ್ಟರು. ರಾಜಕೀಯ ಅನ್ನೋದು ನನ್ನ ಆಕಸ್ಮಿಕ ಎಂಟ್ರಿ. ಈಗಲೂ ನಾನು ಒಂದು ಪಕ್ಷದಲ್ಲಿ ಸದಸ್ಯನಷ್ಟೇ. ನಾನು ಇಂದಿಗೂ ಇಷ್ಟಪಡೋದು ಕಲೆಯನ್ನು ಮಾತ್ರ. ಈ 4೦ ವರ್ಷದ ಜರ್ನಿ ತೃಪ್ತಿ ನೀಡಿದೆ. ಇಷ್ಟು ವರ್ಷ ಪ್ರತಿಯೊಬ್ಬರೂ ಸಹಕಾರ ನೀಡಿದ್ದಾರೆ ಎನ್ನುತ್ತಲೇ ಭಾವುಕರಾದ ಜಗ್ಗೇಶ್‌, ಎಲ್ಲರಿಗೂ ಧನ್ಯವಾದ ಹೇಳುತ್ತಾ ಹೋದರು. ಇನ್ನು, ನನ್ನ ಈ ಬೆಳವಣಿಗೆಯ ಹಿಂದೆ ರಾಯಯ ಆಶೀರ್ವಾದವಿದೆ. ಮನುಷ್ಯನಿಗೆ ಆಸೆ ಸಹಜ. ಆದರೆ, ತಾವು ಎಷ್ಟೇ ಬೆಳೆದರೂ, ಸರಿಯಾಗಿ ಬದುಕಿದ್ದೇವಾ ಅನ್ನೋದನ್ನು ಗಮನಿಸಬೇಕು. ನನಗೆ ಇಂದಿಗೂ ಭಯವಿದೆ. ಕನಸು ಮನಸ್ಸಲ್ಲೂ ಅಹಂಕಾರ ಇಟ್ಟುಕೊಂಡಿಲ್ಲ. ಎಲ್ಲರೂ ಅಷ್ಟೇ ಎಲ್ಲರ ಮೇಲೂ ಪ್ರೀತಿ ತೋರಿಸಿ, ದ್ವೇಷ ಬೇಡ.

 

ಕನ್ನಡಕ್ಕೆ ಆದ್ಯತೆ ಕೊಡಿ
ಕನ್ನಡ ಭಾಷೆ, ನೆಲ,ಜಲ ಬಗ್ಗೆ ಯೋಚಿಸಿ. ಕನ್ನಡ ಚಿತ್ರರಂಗದಲ್ಲಿ ಮೊದಲು ಕನ್ನಡಿಗರಿಗೆ ಅವಕಾಶ ಸಿಗಬೇಕು. ಈ ಪ್ಯಾನ್‌ ಇಂಡಿಯಾ ಕಟ್ಟಿಕೊಂಡು ಏನ್‌ ಮಾಡಬೇಕು. ಅಲ್ಲಿ ಕನ್ನಡಿಗರಿಗೆ ಕೆಲಸ ಕೊಡಲ್ಲ. ನಮ್ಮ ಕಲಾವಿದರು ಇರಲ್ಲ. ಯಾರನ್ನೋ ಮೆಚ್ಚಿಸೋಕೆ ಇಲ್ಲಿ ಏನೇನೋ ನಡೆಯುತ್ತಿದೆ. ನಾವು ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟವಿದೆ. ಕನ್ನಡಿಗರಿಗೆ ಕೆಲಸ ಕೊಡಿ, ಕನ್ನಡ ಸಿನಿಮಾ ಬಗ್ಗೆ ಮಾತಾಡಿ. ನಮ್ಮ ತನ ಉಳಿಸಿಕೊಳ್ಳಿ ಎಂಬುದು ಜಗ್ಗೇಶ ಮಾತು.


ಅಣ್ಣಾವ್ರು ನಾ ಕಂಡ ಸಂತ
ನಮ್‌ ತಾತಾ ಅಣ್ಣಾವ್ರ ಸಿನಿಮಾ ತೋರಿಸುತ್ತಿದ್ದರು. ಆಗಿನಿಂದಲೂ ನಾನು ಅಣ್ಣಾವ್ರ ಅಭಿಮಾನಿ. ನನ್ನ ಸೌಭಾಗ್ಯವೋ ಏನೋ, ಅವರೊಂದಿಗೆ ಬೆರೆತು, ಅವರಿಂದ ಶಹಬಾಸ್‌ಗಿರಿ ಪಡೆದಿದ್ದೇನೆ. ಎಲ್ಲರೂ ಅವರನ್ನು ಒಬ್ಬ ನಟರನ್ನಾಗಿ ನೋಡಿದರು. ನಾನು ಅವರನ್ನು ಸಂತರಾಗಿ ಕಂಡಿದ್ದೇನೆ. ನನ್ನ ಬದುಕಿನ ಸಾಕಷ್ಟು ಡೌಟ್ಸ್‌ ಕ್ಲಾರಿಫೈ ಮಾಡಿದವರು. ಅದು ಹಂಗಲ್ಲ, ಹಿಂಗೆ ಅಂತ ತಿದ್ದಿದವರು. ಅವರಿಂದ ನಾನು ತುಂಬಾ ವಿಷಯ ಕಲಿತುಕೊಂಡಿದ್ದೇನೆ. ಕುಟುಂಬ, ಭಾಷೆ, ಸಿನಿಮಾ ಅಂದರೆ ಏನು, ತಾನಂದರೆ ಏನು, ಹೇಗಿರಬೇಕು ಎಂಬಿತ್ಯಾದಿ ವಿಷಯವನ್ನು ಅರ್ಥಪೂರ್ಣವಾಗಿ ಹೇಳಿದ್ದಾರೆ. ಅವರ ಮಾತನ್ನು ನಾನು ಈಗಲೂ ಚಾಚು ತಪ್ಪದೆ ಮಾಡಿಕೊಂಡು ಬರುತ್ತಿದ್ದೇನೆ.

Related Posts

error: Content is protected !!