ಇದು ಹಾಫ್‌ ಲೋಕ! ಅದ್ಧೂರಿ ಸಿನಿಮಾಗೆ ಲೋಕೇಂದ್ರ ತಯಾರಿ

ಕಲರ್‌ಫುಲ್‌ ಫೋಟೋ ಶೂಟ್ ಮೂಲಕ ಸದ್ದು

ಕನ್ನಡದಲ್ಲಿ ವಿಭಿನ್ನ ಸಿನಿಮಾ ಮೂಲಕ ಸುದ್ದಿಯಾಗಿದ್ದ ನಿರ್ದೇಶಕ ಕಮ್‌ ನಿರ್ಮಾಪಕ ಲೋಕೇಂದ್ರ ಸೂರ್ಯ ಇದೀಗ ಸದ್ದಿಲ್ಲದೆಯೇ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಹೌದು, ಈ ಹಿಂದೆ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಸಿನಿಮಾ ಮೂಲಕ ಜೋರು ಸುದ್ದಿಯಾಗಿದ್ದ ಲೋಕೇಂದ್ರ ಅವರೀಗ “ಹಾಫ್”‌ ಎಂಬ ಹೊಸ ಚಿತ್ರ ಶುರುಮಾಡಿದ್ದಾರೆ. ಅವರ ಮೊದಲ ಚಿತ್ರ. “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಸಿನಿಮಾ ಕಳೆದ 2018ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿ, ಜನಮನ್ನಣೆ ಗಳಿಸಿತ್ತು. ಅಷ್ಟೇ ಅಲ್ಲ, ಮಾಧ್ಯಮಗಳ ಹೊಗಳಿಕೆಗೂ ಕಾರಣವಾಗಿತ್ತು. ಅದಾದ ಬಳಿಕ ಲೋಕೇಂದ್ರ ಸೂರ್ಯ ಅವರು, ʼಚಡ್ಡಿ ದೋಸ್ತ್‌ʼ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈಗ ಅವರು “ಹಾಫ್”‌ ಚಿತ್ರದ ಮೂಲಕ ಹೊಸ ಸುದ್ದಿಗೆ ಕಾರಣವಾಗಲು ತಯಾರಿ ನಡೆಸಿದ್ದಾರೆ.


ಅಂದಹಾಗೆ, ಲೋಕೇಂದ್ರ ಸೂರ್ಯ ಅವರು ಈ ಹಿಂದೆಯೇ, “ಹಾಫ್”‌ ಚಿತ್ರ ಮಾಡುವ ಕುರಿತು “ಸಿನಿಲಹರಿ”ಯಲ್ಲಿ ಹೇಳಿಕೊಂಡಿದ್ದರು. ಅದಕ್ಕೀಗ ಚಾಲನೆ ದೊರೆತಿದ್ದು, ಒಂದೊಳ್ಳೆಯ ಫೋಟೋ ಶೂಟ್‌ ಕೂಡ ನಡೆಸಿದ್ದಾರೆ. ಇನ್ನು, ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ನಡಿ ಡಾ.ಆರ್. ಪವಿತ್ರ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ.

ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿದೆ. ಯುಡಿವಿ ವೆಂಕಿ ಸಂಕಲನ, ರಾಕಿ ಸೋನು ಸಂಗೀತ ನೀಡಲಿದ್ದಾರೆ. ಡಾ. ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ಅವರ ವಸ್ತ್ರಾಲಂಕಾರ ಚಿತ್ರಕ್ಕಿದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಆರ್. ಪವಿತ್ರಾ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೃಷ್ಣ ಸಹ ನಿರ್ದೇಶನ, ಶ್ರೀವತ್ಸ, ಭರತ್, ಧೃವಿನ್, ಶಂಕರ್, ನವೀನ್ ಚಲ, ಮನೋಜ್ ಆರ್, ಪುನೀತ್ ಎಲ್, ವಿಜಯ್ ಚಂದ್ರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.


ಭಾರತೀಯ ಚಿತ್ರರಂಗದಲ್ಲೇ ಒಂದು ವಿಶೇಷ ಎನಿಸುವ ಕಥೆಯನ್ನು ಈ ʻಹಾಫ್ʼ ಚಿತ್ರದ ಮೂಲಕ ಹೇಳಹೊರಟಿದ್ದಾರೆ ಲೋಕೇಂದ್ರ ಸೂರ್ಯ. ಈ ಹಿಂದೆ ನಿರ್ದೇಶಕ ಕಮ್‌ ಹೀರೋ ಲೋಕೇಂದ್ರ ಸೂರ್ಯ ಅವರು ತಮ್ಮ ಚಂದ್ರ ಮೆಲೋಡೀಸ್ ತಂಡ ಕಟ್ಟಿಕೊಂಡು ಆರ್ಕೆಸ್ಟ್ರಾ ನಡೆಸುತ್ತಿದ್ದರು. ಸಿನಿಮಾ ಪ್ರೀತಿ ಇಟ್ಟುಕೊಂಡಿರುವ ಲೋಕೇಂದ್ರ ಸೂರ್ಯ ಅವರಿಗೆ ಮೊದಲ ಚಿತ್ರವೇ ಅಂತಾರಾಷ್ಟ್ರೀಯ ಚಿತ್ತೋತ್ಸವಕ್ಕೆ ಆಯ್ಕೆ ಆಗಿದ್ದರಿಂದ ಇನ್ನೂ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಉದ್ದೇಶದಿಂದ ಅವರು, ಈಗ ʻಹಾಫ್ʼ ಸಿನಿಮಾವನ್ನು ಆರಂಭಿಸಿದ್ದಾಗಿ ಹೇಳುತ್ತಾರೆ.


ಅದೇನೆ ಇರಲಿ, ಅವರ ಈ “ಹಾಫ್” ಚಿತ್ರದ ಕಥಾವಸ್ತು ಏನು? ಈ ಚಿತ್ರದಲ್ಲಿ ವಿಶೇಷತೆ ಏನಿದೆ ಎಂಬ ಇತ್ಯಾದಿ ವಿಷಯಗಳನ್ನು ಸಿನಿಮಾದಲ್ಲೇ ನೋಡಬೇಕು ಎನ್ನುವ ಅವರು, ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಇನ್ನು, ಈ ಚಿತ್ರ ಒಂದು ದೊಡ್ಡ ಬಜೆಟ್‌ನಲ್ಲೇ ತಯಾರಾಗಲಿದೆ. ಸಿನಿಮಾಗೆ ಏನೆಲ್ಲಾ ಬೇಕೋ ಎಲ್ಲವನ್ನೂ ಪೂರ್ಣಗೊಳಿಸುವ ಮೂಲಕ ಪಕ್ಕಾ ಕಮರ್ಷಿಯಲ್ ಅಂಶಗಳೊಂದಿಗೆ ಚಿತ್ರ ಮಾಡುವುದಾಗಿ ಹೇಳುತ್ತಾರೆ ಲೋಕೇಂದ್ರ ಸೂರ್ಯ.

Related Posts

error: Content is protected !!