ಆ ಒಂದು ಕಾಯ್ದೆ ಇಷ್ಟೆಲ್ಲಾ ಮಾಡ್ತು ನೋಡಿ! ಇನ್ನು, ಸ್ಟಾರ್ಸ್‌ ಸಲೀಸಾಗಿ ಬರಬಹುದು!!

ಜನ ಬರ್ತಾರೆ ಅಂತ ತೋರಿಸಾಗಿದೆ- ದೊಡ್ಡ ಸಿನ್ಮಾಗಳು ಬರಬೇಕಿದೆ

ಕೊರೊನಾ ಹೊಡೆತಕ್ಕೆ ಇಡೀ ಜಗತ್ತೇ ಸ್ತಬ್ಧಗೊಂಡಿದ್ದು ಗೊತ್ತೇ ಇದೆ. ಈಗಲೂ ಆ ಹೊಡೆತದಿಂದ ಚೇತರಿಸಿಕೊಳ್ಳಲು ಹೆಣಗಾಡಬೇಕಾಗಿದೆ. ಈ ಕೊರೊನಾ ಹಾವಳಿಗೆ ಮನರಂಜನೆ ಕ್ಷೇತ್ರ ಸಿನಿಮಾರಂಗವೂ ಹೊರತಲ್ಲ ಬಿಡಿ. ಚಿತ್ರರಂಗದವರ ಪಾಲಿಗಂತೂ ಕೊರೊನಾ ತಂದಿಟ್ಟ ಅವಾಂತರ ಅಷ್ಟಿಷ್ಟಲ್ಲ. ಮೊದಲೇ ಬಣ್ಣದ ಲೋಕ ಹಾವು-ಏಣಿ ಆಟದಂತೆ. ಇಲ್ಲಿ ಗೆಲುವು-ಸೋಲು ಸಹಜ. ಹಾಗಂತ ಮರಳಿ ಪ್ರಯತ್ನ ಮಾಡುವವರ ಸಂಖ್ಯೆಗೇನೂ ಕಮ್ಮಿ ಇಲ್ಲ. ನೂರಾರು ಆಸೆ-ಅಕಾಂಕ್ಷೆಗಳನ್ನು ಹೊತ್ತುಕೊಂಡಿದ್ದ ಅದೆಷ್ಟೋ ಸಿನಿಮಾ ಕನಸುಗಾರರು ಕೊರೊನಾ ಸಮಸ್ಯೆಗೆ ಸಿಲುಕಿ ದಿಕ್ಕೇ ತೋಚದಂತೆ ಆಗಿ ಕುಳಿತಿದ್ದು ನಿಜ. ಇನ್ನೇನು ಲಾಕ್‌ಡೌನ್‌ ಸಡಿಲಗೊಂಡ ಬಳಿಕವೂ ಚಿತ್ರರಂಗದ ಚಲನೆ ಕೂಡ ಆಮೆ ನಡಿಗೆಯಂತೇ ಇತ್ತು. ಅದೇನೇ ಆದರೂ ಪರವಾಗಿಲ್ಲ. ಮನರಂಜಿಸೋಕೆ ನಾವ್‌ ರೆಡಿ ಅಂತ ಒಂದಷ್ಟು ಮಂದಿ ಧೈರ್ಯವಾಗಿ ಮುನ್ನುಗ್ಗೇ ಬಿಟ್ಟರು.

ಆಕ್ಟ್‌ಗೆ ಬಿದ್ದ ಹೌಸ್‌ಫುಲ್‌ ಬೋರ್ಡ್

ಜನರ ಕರೆಸಿಕೊಂಡ ಕಂಟೆಂಟ್

ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಹೆಜ್ಜೆ ಇಟ್ಟವರ ಮೊಗದಲ್ಲಿ ಒಂದು ಅಶಾಭಾವ. ಈ ಹೊತ್ತಲ್ಲೇ ಚಿತ್ರಮಂದಿರಗಳೂ ಬಾಗಿಲು ತೆರೆದುಬಿಟ್ಟವು. ಹಾಗಂತ, ಸಿನಿಮಾಗಳು ತೆರೆಗೆ ಬಂದವಾ? ಬಂದರೂ, ಜನರು ಧೈರ್ಯ ಮಾಡಲಿಲ್ಲ. ಯಾಕೆಂದರೆ, ಚಿತ್ರಮಂದಿರಕ್ಕೆ ಬಂದ ಸಿನಿಮಾಗಳೆಲ್ಲವೂ ಮರುಬಿಡುಗಡೆ ಕಂಡಿದ್ದು. ಹಾಗಾಗಿ, ಪದೇ ಪದೇ ನೋಡಿದ ಸಿನಿಮಾಗಳನ್ನೇ ನೋಡೋಕೂ ಪ್ರೇಕ್ಷಕನಿಗೆ ಬೇಸರವಿರಬೇಕೇನೋ? ಲಾಕ್‌ಡೌನ್‌ ಸಮಯದಲ್ಲಿ ಇದ್ದಬದ್ದ ಸಿನಿಮಾಗಳೆಲ್ಲವನ್ನೂ ಪ್ರೇಕ್ಷಕ ನೋಡಿಯಾಗಿತ್ತು. ಪುನಃ ಚಿತ್ರಮಂದಿರಗಳಿಗೆ ಮತ್ತದೇ ಚಿತ್ರಗಳು ಬಂದಿದ್ದರಿಂದ ಪ್ರೇಕ್ಷಕ ಒಲ್ಲದ ಮನಸ್ಸಲ್ಲೇ ಚಿತ್ರಮಂದಿರದತ್ತ ಮುಖಮಾಡಿದನಾದರೂ, ಹೇಳಿಕೊಳ್ಳುವಷ್ಟು ಸಂಖ್ಯೆ ಕಾಣಲಿಲ್ಲ. ಯಾರಾದರೂ ಹೊಸ ಸಿನಿಮಾ ರಿಲೀಸ್‌ ಮಾಡಬಹುದಾ ಎಂಬ ಲೆಕ್ಕಾಚಾರದಲ್ಲೇ ಇದ್ದ ಪ್ರೇಕ್ಷಕನಿಗೊಂದು ಭರವಸೆ ಮೂಡಿಸಿದ್ದು, “ಆಕ್ಟ್‌ -೧೯೭೮” ಈ ಚಿತ್ರ ಯಾವಾಗ ಚಿತ್ರಮಂದಿರಕ್ಕೆ ಬರುವ ದಿನಾಂಕ ಘೋಷಣೆ ಮಾಡಿತೋ, ಅಂದಿನಿಂದಲೇ ಗಾಂಧಿನಗರದ ಕೆಲವು ಮಂದಿ ಕೂಡ ಕಾದು ನೋಡುವ ತಂತ್ರ ಮಾಡಿದರು.

ಒಳ್ಳೇ ಸಿನ್ಮಾನ ಪ್ರೇಕ್ಷಕ ಕೈ ಬಿಡಲ್ಲ

ಇನ್ನೂ ಕೆಲವರು ಚಿತ್ರಮಂದಿರದಲ್ಲಿ ಈ ಚಿತ್ರ ಬಂದ ಮೇಲೆ ನಾವ್‌ ಬರೋಣ ಅಂದುಕೊಂಡು ಸುಮ್ಮನಾದರು. ಅಂತೂ ಇಂತೂ “ಆಕ್ಟ್‌-೧೯೭೮” ಚಿತ್ರ ಚಿತ್ರಮಂದಿರಕ್ಕೆ ಬಲಗಾಲಿಟ್ಟೇ ಬಂತು. ಮೊದಲ ಪ್ರದರ್ಶನ ನೋಡಿ ಹೊರಬಂದ ಪ್ರೇಕ್ಷಕ ಫುಲ್‌ ಫಿದಾ ಆಗಿಬಿಟ್ಟ. ಮೆಲ್ಲನೆ ಮಾತಿಗೆ ಮಾತು ಹರಿಬಿಟ್ಟಿದ್ದೇ ತಡ, ಒಂದೇ ದಿನದಲ್ಲಿ “ಆಕ್ಟ್‌-೧೯೭೮” ಚಿತ್ರ ಮನೆಮಾತಾಯಿತು. ಜನರು ಚಿತ್ರಮಂದಿರ ಕಡೆ ಹುಡುಕಿ ಬಂದರು. ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ಚಿತ್ರದೊಳಗಿನ ಕಂಟೆಂಟ್.‌
ಹೌದು, ನಿರ್ದೇಶಕ ಮಂಸೋರೆ ಅವರು ಕಟ್ಟಿಕೊಟ್ಟ ಚಿತ್ರಣ ಆ ರೀತಿ ಇತ್ತು. ಕಥೆ, ಚಿತ್ರಕಥೆ ಎಲ್ಲವೂ ಮನಸ್ಸಿಗೆ ಹತ್ತಿರವಾಗಿದ್ದರಿಂದ ಜನರು ಸಿನಿಮಾ ಥಿಯೇಟರ್‌ ಕಡೆ ಮುಖ ಮಾಡಿದರು. ದೊಡ್ಡ ಮಟ್ಟದಲ್ಲೇ ಈ ಚಿತ್ರವನ್ನು ಬರಮಾಡಿಕೊಂಡ ಪ್ರೇಕ್ಷಕ, ರಾಜ್ಯಾದ್ಯಂತ ಹಬ್ಬದಂತೆ ಆಚರಣೆಯಾಗಿದ್ದು ಸುಳ್ಳಲ್ಲ. ಒಂದು ಸಿನಿಮಾ ಸಾಬೀತಿಗೆ ಮತ್ತದೇ ಕಂಟೆಂಟ್‌ ಚಿತ್ರ ಬರಬೇಕಾಯಿತು ಅನ್ನೋದು ಅಕ್ಷರಶಃ ಸುಳ್ಳಲ್ಲ. ಒಂದು ಸಿನಮಾ ಚಿತ್ರಮಂದಿರಕ್ಕೆ ಬಂದು ಸದ್ದು ಮಾಡಿದ್ದಲ್ಲದೆ, ಒಳ್ಳೆಯ ಸಿನಿಮಾ ಬಂದರೆ, ಕನ್ನಡ ಪ್ರೇಕ್ಷಕ ಎಂದಿಗೂ ಕೈ ಬಿಡಲ್ಲ ಅನ್ನೋದನ್ನು ಪುನಃ ಸಾಬೀತುಪಡಿಸಿತು. ಇಡೀ ಚಿತ್ರರಂಗಕ್ಕೆ ಚಲನಶೀಲತೆಗೆ ಈ ಚಿತ್ರ ಸಾಕ್ಷಿಯಾಗಿದ್ದಂತೂ ನಿಜ.

ಆಕ್ಟ್‌ ಕೊಟ್ಟ ಧೈರ್ಯ
ಲಾಕ್‌ಡೌನ್‌ ಬಳಿಕ ಚಿತ್ರಮಂದಿರ ಬಾಗಿಲು ತೆರೆದರೂ, ಯಾರಾದರೂ ಮೊದಲು ಬರಲಿ ಅಂತ ಕಾದು ಕುಳಿತಿದ್ದ ಅದೆಷ್ಟೋ ಸಿನಿಮಾಗಳು ಈಗ ಬಿಡುಗಡೆಗೆ ತನ್ನ ಉತ್ಸಾಹ ತೋರಿಸುತ್ತಿವೆ. ಹಾಗೆ ನೋಡಿದರೆ, ಕನ್ನಡ ಚಿತ್ರರಂಗಕ್ಕೆಈ ರೀತಿಯ ಅದ್ಭುತ ಚಾಲನೆಗೆ ಮುಂದಾಗಬೇಕಿದ್ದು, ಸ್ಟಾರ್ಸ್‌ ಸಿನಿಮಾಗಳು. ಆದರೆ, ಅದೇಕೋ ಏನೋ, ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದ್ದರೂ, ಸ್ಟಾರ್ಸ್‌ ಸಿನಿಮಾಗಳು ಮಾತ್ರ ಬಿಡುಗಡೆಗೆ ಮನಸ್ಸು ಮಾಡಲೇ ಇಲ್ಲ. ಸ್ಟಾರ್ಸ್‌ ಚಿತ್ರಗಳಿಗೆ ಅಭಿಮಾನಿಗಳ ದಂಡು ದೊಡ್ಡದೇ ಇರುತ್ತೆ. ಸ್ಟಾರ್ಸ್‌ ಚಿತ್ರಗಳು ಬಿಡುಗಡೆಯಾದರೆ, ಚಿತ್ರರಂಗ ತನ್ನ ಕಾರ್ಯಚಟುವಟಿಕೆಯಲ್ಲಿ ನಿರತವಾಗುತ್ತೆ. ದೊಡ್ಡ ಸ್ಟಾರ್‌ ನಟರ ಚಿತ್ರಗಳು ಬಂದ ಬಳಿಕ, ಅದೆಷ್ಟೋ ಹೊಸಬರ ಚಿತ್ರಗಳೂ ಕೂಡ ಮೆಲ್ಲನೆ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತವೆ. ಇದರಿಂದ ಚಿತ್ರೋದ್ಯಮ ಕೂಡ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತೆ. ಆದರೆ, ಸ್ಟಾರ್ಸ್‌ ಸಿನಿಮಾಗಳಿಗೂ ಮೊದಲು, ಧೈರ್ಯ ಮಾಡಿ ಚಿತ್ರಮಂದಿರಕ್ಕೆ ಬಂದ “ಆಕ್ಟ್-‌೧೯೭೮” ಚಿತ್ರ ದೊಡ್ಡ ಮಟ್ಟದ ಗೆಲುವು ಪಡೆದಿದೆ. ಪ್ರಶಂಸೆಯನ್ನೂ ಗಿಟ್ಟಿಸಿಕೊಂಡಿದೆ.

ಬಿಡುಗಡೆಗೆ ಅನುಮಾನ ಬೇಡ

ಈಗ ಸ್ಟಾರ್ಸ್‌ ಸಿನಿಮಾಗಳಷ್ಟೇ ಅಲ್ಲ, ಬಿಡುಗಡೆಗೆ ರೆಡಿಯಾಗಿರುವ ಎಲ್ಲಾ ಸಿನಿಮಾಗಳೂ ಒಂದೊಂದಾಗಿಯೇ ಚಿತ್ರಮಂದಿರದತ್ತ ದಾಪುಗಾಲು ಇಡಲು ಯಾವುದೇ ಅನುಮಾನ ಬೇಡ.
“ಆಕ್ಟ್‌ -೧೯೭೮” ಚಿತ್ರ ಕೂಡ ಮುಂಜಾಗ್ರತಾ ಕ್ರಮ ಕೈಗೊಂಡೇ ಬಿಡುಗಡೆಯಾಗಿತ್ತು. ಚಿತ್ರಮಂದಿರಗಳ ಪ್ರದರ್ಶಕರು ಅಂಥದ್ದೊಂದು ಧೈರ್ಯ ಮಾಡಿ ಬಿಡುಗಡೆಗೆ ಅನುವು ಮಾಡಿಕೊಟ್ಟಿದ್ದರಿಂದ ಇಷ್ಟೆಲ್ಲಾ ಸಾಧ್ಯವಾಗಿದೆ. ಒಂದೊಳ್ಳೆಯ ಕಂಟೆಂಟ್‌ ಸಿನಿಮಾ ಬಂದರೆ, ಅದಕ್ಕೆ ಯಾವತ್ತೂ ಬೆಲೆ ಇದ್ದೇ ಇರುತ್ತೆ ಎಂದು ಸಾಬೀತುಪಡಿಸಿರುವ ಮಂಸೋರೆ ನಿರ್ದೇಶನದ “ಆಕ್ಟ್‌ -೧೯೭೮” ಸದ್ಯ ಇತರೆ ಚಿತ್ರಗಳ ಬಿಡುಗಡೆಗೆ ಉತ್ಸಾಹ ತುಂಬಿರುವುದಂತೂ ದಿಟ.

ಸ್ಟಾರ್ಸ್‌ ಸಿನ್ಮಾ ಬರಬೇಕಿದೆ
ಹೊಸಬರು ಈಗ ಬಿಡುಗಡೆಗೆ ಸಜ್ಜಾಗಿವೆ. ಒಂದಷ್ಟು ಸಿನಿಮಾಗಳೂ ಕೂಡ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಘೋಷಿಸಿಕೊಂಡಿವೆ. ಅವುಗಳಿಗೂ ಪ್ರೇಕ್ಷಕ ಬೆನ್ನುತಟ್ಟುವಂತಾಗಲಿ. ಇಷ್ಟು ದಿನ ಬೇಸತ್ತು, ಎಲ್ಲವೂ ಮುಗಿದೇ ಹೋಯ್ತು ಅಂದುಕೊಂಡಿದ್ದ ಸಿನಿಮಾ ಮಂದಿ ಮೊಗದಲ್ಲೀಗ ಸಣ್ಣದ್ದೊಂದು ಆಶಾಭಾವನೆ ಇದೆ. ಎಲ್ಲವೂ ಮೊದಲಿನಂತೆ ಆಗುತ್ತದೆ. ಅದಕ್ಕೆ ಮಾಡಬೇಕಿರೋದು ಇಷ್ಟೇ, ಈಗಾದರೂ, ಬಿಡುಗಡೆಗೆ ರೆಡಿಯಾಗಿರುವ ಸ್ಟಾರ್ಸ್‌ ಚಿತ್ರಗಳು ಚಿತ್ರಮಂದಿರಕ್ಕೆ ಬಂದರೆ, ಖಂಡಿತವಾಗಿಯೂ, ಕನ್ನಡ ಚಿತ್ರರಂಗ ಶೈನ್‌ ಆಗಲಿದೆ. ಅಂಥದ್ದೊಂದು ಪ್ರಯತ್ನಕ್ಕೆ ನಿರ್ಮಾಪಕರೂ ಮನಸ್ಸು ಮಾಡಬೇಕಿದೆ.

ಆತಂಕ ದೂರಾಗಲಿ

ಕನ್ನಡ ಪ್ರೇಕ್ಷಕ ಕನ್ನಡ ಚಿತ್ರವನ್ನು ಎಂದಿಗೂ ಕೈ ಬಿಟ್ಟಿಲ್ಲ. ಬಿಡುವುದೂ ಇಲ್ಲ. ಆ ನಂಬಿಕೆ ಮೇಲೆ, ಸ್ಟಾರ್ಸ್‌ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದರೆ, ಚಿತ್ರರಂಗದ ಪಾಲಿಗೆ ಮತ್ತೆ ಒಳ್ಳೆಯ ದಿನಗಳು ಬರುವುದು ದೂರವಿಲ್ಲ. ಸದ್ಯ ಪ್ರೇಕ್ಷಕರು, ಆಯಾ ಸ್ಟಾರ್‌ ನಟರ ಅಭಿಮಾನಿಗಳು ತಮ್ಮ ನಾಯಕನ ಸಿನಮಾ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. ಅವರು ತೋರುವ ಪ್ರೀತಿಯ ಮುಂದೆ, ಎಲ್ಲವೂ ಶೂನ್ಯ. ಒಂದಷ್ಟು ಸುರಕ್ಷಿತ ಕ್ರಮ ಅನುಸರಿಸಿ, ಚಿತ್ರಮಂದಿರಕ್ಕೆ ಬರುವ ಧೈರ್ಯ ಮಾಡಬೇಕಿದೆ. ಚಿತ್ರರಂಗದಲ್ಲಿರುವ ಆತಂಕ ದೂರ ಮಾಡಬೇಕಿದೆ.

Related Posts

error: Content is protected !!