ನೋಡಿರದ, ಮಾಡಿರದ ಒಂದು ಅದ್ಭುತ ಪಾತ್ರ ಎಂದ ಸಿಂಹ
ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೊಸ ಛಾಪು ಮೂಡಿಸಿರುವುದು ಗೊತ್ತೇ ಇದೆ. ತಮ್ಮ ಕಂಠದಿಂದ, ಅದ್ಭುತ ನಟನೆಯಿಂದ ಅವರು ಈಗಾಗಲೇ ಒಂದಷ್ಟು ಅಭಿಮಾನಿ ಬಳಗವನ್ನು ಹೊಂದಿರುವುದೂ ಗೊತ್ತಿದೆ. ಅವರು ಕನ್ನಡಕ್ಕಷ್ಟೇ ಸೀಮಿತ ಅಂದುಕೊಂಡರೆ ಆ ಊಹೆ ಶುದ್ಧ ತಪ್ಪು. ಅವರು ಈಗಾಗಲೇ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದ್ದು ಗೊತ್ತಿದೆ. ಅವರು ತೆಲುಗಿನ “ಓದೆಲ ರೈಲ್ವೇ ಸ್ಟೇಷನ್” ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಳೆಯ ಸುದ್ದಿಯೇನೋ ನಿಜ. ಆದರೆ, ತಮ್ಮ ಮೊದಲ ತೆಲುಗು ಸಿನಿಮಾದಿಂದ ಹೀಗೊಂದು ಫಸ್ಟ್ ಲುಕ್ ಹೊರಬಂದಿದೆ. ಅದೇ ಈ ಹೊತ್ತಿನ ವಿಶೇಷ.
ಹೌದು, ವಸಿಷ್ಠ ಸಿಂಹ ಅವರು “ಓದೆಲ ರೈಲ್ವೇ ಸ್ಟೇಷನ್” ಚಿತ್ರದಲ್ಲಿ ಹೀರೋ. ಅದೊಂದು ವಿಶಿಷ್ಠ , ವಿಭಿನ್ನ ಕಥೆ, ಪಾತ್ರ ಹೊಂದಿರುವ ಸಿನಿಮಾ. ಈ ಚಿತ್ರದ ಫಸ್ಟ್ ಲುಕ್ ಬಿಡುಗೆಡಯಾಗಿದೆ. ಇನ್ನು, ಆ ಚಿತ್ರದಲ್ಲಿ ನಟ ವಸಿಷ್ಠ ಸಿಂಹ ಅವರು ತಿರುಪತಿ ಎನ್ನುವ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅವರ ಫಸ್ಟ್ ಲುಕ್ ಪೋಸ್ಟರ್ ನೋಡಿದವರಿಗೆ ವಸಿಷ್ಠ ಸಿಂಹ ಒಬ್ಬ ಧೋಬಿ ಪಾತ್ರದಾರಿ ಎಂಬುದು ಗೊತ್ತಾಗುತ್ತದೆ. ಇನ್ನು, ವಸಿಷ್ಠ ಅವರು ತಮ್ಮ ಚೊಚ್ಚಲ ತೆಲುಗು ಚಿತ್ರವಾಗಿರುವ “ಓದೆಲ ರೈಲ್ವೇ ಸ್ಟೇಷನ್” ಚಿತ್ರದ ಫಸ್ಟ್ ಶೇರ್ ಮಾಡುವ ಮೂಲಕ, “ಇದುವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ..” ಎಂದು ಹೇಳಿಕೊಂಡಿದ್ದಾರೆ.
‘ತಿರುಪತಿ ಎಂಬ ಮೃದು ಮನಸ್ಸಿನ ಸಾಧಾರಣ ಯುವಕ, ಹಳ್ಳಿ ಹೈದ, ಓರ್ವ ಧೋಬಿ. ಇದು ನನ್ನ ಚೊಚ್ಚಲ ತೆಲುಗು ಸಿನೆಮಾ “ಓದೆಲ ರೈಲ್ವೇ ಸ್ಟೇಷನ್”ನ ಪಾತ್ರದ ಪರಿಚಯ ಎಂದಿರುವ ಅವರು, ನಾನು ಈವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ’ ಎಂದಿದ್ದಾರೆ. ಸದ್ಯಕ್ಕೆ ವಸಿಷ್ಠ ಸಿಂಹ ಅವರು ಶೇರ್ ಮಾಡಿರುವ ಆ ಫಸ್ಟ್ ಲುಕ್ ಪೋಸ್ಟರ್‌ಗೆ ಎಲ್ಲಡೆಯಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. “ಓದೆಲ ರೈಲ್ವೆ ಸ್ಟೇಷನ್” ಒಂದು ನೈಜ ಘಟನೆ ಆಧಾರಿತ ಚಿತ್ರವಂತೆ. ಖರೀಮ್ ನಗರದಲ್ಲಿ ನಡೆದ ಒಂದು ಘಟನೆ ಇಟ್ಟುಕೊಂಡು ಚಿತ್ರ ಮಾಡಲಾಗುತ್ತಿದ್ದು, ಕಥೆ, ಪಾತ್ರ ಕೇಳಿಯೇ ವಸಿಷ್ಠ ಸಿನಿಮಾ ಬಿಡಬಾರದು ಅಂತ ಒಪ್ಪಿ, ಅಪ್ಪಿಕೊಂಡು ಚಿತ್ರ ಮಾಡುತ್ತಿದ್ದಾರೆ.
ಇನ್ನು, ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಹೆಬಾ ಪಟೇಲ್ ಮತ್ತು ಪೂಜಿತಾ ಪೊನ್ನಡ ವಸಿಷ್ಠಗೆ ಜೋಡಿ. ಈಗಾಗಲೇ ಹೆಬಾ ಪಟೇಲ್ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಹೆಬಾ ಪಟೇಲ್ ಈಗಾಗಲೇ ಕನ್ನಡದ “ಅಧ್ಯಕ್ಷ” ಚಿತ್ರದಲ್ಲಿ ಟಿಸಿದ್ದಾರೆ. ಅಶೋಕ್ ತೇಜ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ
ವಸಿಷ್ಠ ಅವರು ಫುಲ್ ಬಿಝಿಯಾಗಿದ್ದಾರೆ. ಅವರ ಕೈಯಲ್ಲಿ ಒಂದಷ್ಟು ಸಾಲು ಸಾಲು ಚಿತ್ರಗಳಿವೆ. “ಕಾಲಚಕ್ರ”, “ಪಂತ”, “ಯುವರತ್ನ” ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ. ಇತ್ತೀಚೆಗೆ “ತಲ್ವಾರ್” ಚಿತ್ರವೂ ಸೆಟ್ಟೇರಿದೆ. ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ವಸಿಷ್ಠ ಸಿಂಹ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂಬುದು ವಿಶೇಷ.