ಕಾಮಿಡಿ ಸಿನ್ಮಾ ಮೂಲಕ ಕೋಮಲ್ ಹೊಸ ಇನ್ನಿಂಗ್ಸ್ ಶುರು
ನವೆಂಬರ್ ಅಂತ್ಯದಿಂದ ಶೂಟಿಂಗ್
ನಟ ಕೋಮಲ್ ಮತ್ತೆ ಸುದ್ದಿಯಲ್ಲಿದ್ದಾರೆ…
ಹೌದು, ಈ “2020” ಜಗತ್ತಿನಾದ್ಯಂತ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಅದೇ “2020” ಮೂಲಕ ಸಮಸ್ಯೆ ಬದಿಗಿಟ್ಟು, ಒಂದೊಳ್ಳೆಯ ಯಶಸ್ಸನ್ನು ಕೊಡುವ ಹುಮ್ಮಸ್ಸಿನಲ್ಲಿದ್ದಾರೆ ಕೋಮಲ್. ಹೀಗಂದಾಕ್ಷಣ, ನಟ ಕೋಮಲ್ ಹೊಸ ಚಿತ್ರ ಒಪ್ಪಿಕೊಂಡಿರುವುದು ನೆನಪಾಗುತ್ತದೆ. ಈಗಾಗಲೇ ಕೋಮಲ್ “2020” ಸಿನಿಮಾ ಒಪ್ಪಿಕೊಂಡಿರೋದು ಗೊತ್ತೇ ಇದೆ. ಆರಂಭದಲ್ಲೇ ಟೈಟಲ್ ಮೂಲಕ ಗಮನಸೆಳೆದಿರುವ “2020” ಈಗ ಒಂದಷ್ಟು ನಿರೀಕ್ಷೆಯನ್ನೂ ಹುಟ್ಟಿಸಿದೆ. ಅದಕ್ಕೆ ಕಾರಣ, ಕೋಮಲ್ ಚಿತ್ರದ ಹೈಲೈಟ್ ಆಗಿರುವುದು. ಅಷ್ಟೇ ಅಲ್ಲ, ಈ ಸಿನಿಮಾ ಮೂಲಕ ನಿರ್ದೇಶನ ಪಟ್ಟವನ್ನು ಅಲಂಕರಿಸುತ್ತಿರುವ ಕೆ.ಎಲ್.ರಾಜಶೇಖರ್.
ಹೌದು, ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಮಾತುಗಳನ್ನು ಪೋಣಿಸುವ ಮಾತುಗಾರ ಎಂದೇ ಹೆಸರಾಗಿರುವ ಕೆ.ಎಲ್.ರಾಜಶೇಖರ, ದರ್ಶನ್ ಅಭಿನಯದ “ರಾಬರ್ಟ್”, ಶರಣ್ ನಟನೆಯ “ವಿಕ್ಟರಿ -2”, ಚಿರಂಜೀವಿ ಅಭಿನಯಿಸಿದ “ಅಮ್ಮ ಐ ಲವ್ ಯು”, ಗಣೇಶ್ ಅಭಿನಯಿಸುತ್ತಿರುವ “ತ್ರಿಬಲ್ ರೈಡಿಂಗ್”, ಚಿಕ್ಕಣ್ಣ ಅವರ “ಉಪಾಧ್ಯಕ್ಷ” ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದದಾರೆ ಈ ಕೆ.ಎಲ್.ರಾಜಶೇಖರ್.
ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿರುವ ರಾಜಶೇಖರ್, ಇದೇ ಮೊದಲ ಬಾರಿಗೆ “2020” ಮ್ಯಾಚ್ ಆಡುವ ಧೈರ್ಯ ಮಾಡಿದ್ದಾರೆ. ಅವರ ಈ “2020” ಸಿನಿಮಾಗೆ, ಕೋಮಲ್ ಕೂಡ ಸಾಥ್ ನೀಡಿದ್ದು, ಈ ಬಾರಿ ಕಪ್ ನಮ್ಮದೇ ಎನ್ನುವಂತೆ ಈ ಸಲ ಸಿನಿಮಾದ ಗೆಲುವು ನಮ್ಮದೇ ಎನ್ನುವ ರೀತಿ ಕೋಮಲ್ ಕೂಡ ಪಕ್ಕಾ ತಯಾರಿಯಾಗಿದ್ದಾರೆ. ಇನ್ನು, ಕಳೆದ ವಿಜಯದಶಮಿ ಹಬ್ಬದ ದಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಪಂಚಮುಖಿ ಗಣಪತಿ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು.
ಈ ಚಿತ್ರವನ್ನು ಟಿ. ಆರ್. ಚಂದ್ರಶೇಖರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡ ಸಿನಿಮಾರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಟಿ.ಆರ್. ಚಂದ್ರಶೇಖರ್ ಅವರು ತಮ್ಮ ಕ್ರಿಸ್ಟಲ್ ಪಾರ್ಕ್ ಬ್ಯಾನರ್ನಡಿ ಈಗ “2020” ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
ಇದೊಂದು ಒಳ್ಳೆಯ ಸಂದೇಶ ಇರುವ ಸಿನಿಮಾ ಆಗಿದ್ದು, ಹಲವು ತಿರುವುಗಳ ಜೊತೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಧನ್ಯಾ ಬಾಲಕೃಷ್ಣ,ಕುರಿ ಪ್ರತಾಪ್ ತಬಲಾ ನಾಣಿ, ಗಿರಿ, ಅಪೂರ್ವ ಹಾಗೂ ಇತರರೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಟಿ.ಆರ್.ಚಂದ್ರ ಶೇಖರ್ ಪುತ್ರ ನಂದ ಕಿಶೋರ್ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ಟಿ.ಆರ್.ಚಂದ್ರ ಶೇಖರ್ ಕ್ಯಾಮರಾಗೆ ಚಾಲನೆ ನೀಡಿದ್ದಾರೆ. ಇನ್ನು, ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.
ಅಂದಹಾಗೆ, ನವಂಬರ್ ಕೊನೆ ವಾರದಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಲಿದೆ . ಪಕ್ಕಾ ಹಾಸ್ಯ ಕುರಿತ ಕಥೆ ಹೊಂದಿರುವ ಈ ಚಿತ್ರಕ್ಕೆ ನವೀನ್ ಕುಮಾರ್ .ಎಸ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನವಿದೆ.