ವಿಡಿಯೋ ಸಾಂಗ್ ರಿಲೀಸ್
ಇಡೀ ಪ್ರಪಂಚದಲ್ಲಿ ಕೊರೊನಾ ತಂದಿಟ್ಟ ಅವಾಂತರ ಅಷ್ಟಿಷ್ಟಲ್ಲ. ಸಿನಿಮಾರಂಗ ಕೂಡ ಇದಕ್ಕೆ ಹೊರತಲ್ಲ. ದೊಡ್ಡ ಹೊಡೆತ ತಿಂದಿರುವ ಸಿನಿಮಾರಂಗ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಒಂದಷ್ಟು ಸಿನಿಮಾಗಳು ಬಿಡುಗಡೆ ಕಂಡರೆ, ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಇದರ ನಡುವೆಯೇ ಸಾಕಷ್ಟು ಚಿತ್ರಗಳು ಪ್ರಚಾರಕ್ಕೂ ಇಳಿದಿವೆ. ತಮ್ಮ ಚಿತ್ರದ ಟ್ರೇಲರ್, ಟೀಸರ್, ಫಸ್ಟ್ ಲುಕ್ ಹೀಗೆ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಮುಂದಾಗಿವೆ. ಇನ್ನು, ಕೊರೊನಾ ಸಮಸ್ಯೆ ಕುರಿತಂತೆಯೂ ಒಂದಷ್ಟು ಕಿರುಚಿತ್ರಗಳು, ಆಲ್ಬಂ ಸಾಂಗ್ಗಳೂ ಹೊರಬಂದಿವೆ. ಆ ಸಾಲಿಗೆ ಈಗ “ಆತ್ಮ ನಿರ್ಭರತ ಭಾರತ” ವಿಶ್ವಕ್ಕೆ ಗುರುವಾಗಲಿ.. ಎಂಬ ವಿಡಿಯೋ ಆಲ್ಬಂ ಸಾಂಗ್ ನಿರ್ಮಾಣಗೊಂಡಿದೆ.
ಕಳೆದ ಒಂಬತ್ತು ತಿಂಗಳಿನಿಂದಲೂ ಕೊರೊನಾ ಹಾವಳಿ ಅಷ್ಟಿಷ್ಟಲ್ಲ. ಇದರಿಂದಾಗಿ ಪ್ರತಿಯೊಬ್ಬರ ಆರ್ಥಿಕ ಸ್ಥಿತಿಯಂತೂ ಹೇಳತೀರದು. ಪ್ರತಿಯೊಂದು ಕುಟುಂಬದ ಮೇಲೂ ಸಾಕಷ್ಟು ಗಂಭೀರ ಪರಿಣಾಮ ಬೀರಿ, ಸಾರ್ವಜನಿಕರ ಜನಜೀವನ ಬದುಕಿನ ಶೈಲಿಯೇ ಬದಲಾಗಿದ್ದು ಎಲ್ಲರಿಗೂ ಗೊತ್ತಿದೆ. ಇಂತಹ ಸ್ಥಿತಿಯಲ್ಲಿ ಕೊರೊನಾ ವಿರುದ್ಧ ಹೋರಾಟ ಮಾಡಲು, ಆತ್ಮಸ್ಥೈರ್ಯ ತುಂಬುವ ಸಲುವಾಗಿ “ಆತ್ಮ ನಿರ್ಭರತ ಭಾರತ” ಎಂಬ ವಿಡಿಯೋ ಸಾಂಗ್ ನಿರ್ಮಿಸಲಾಗಿದೆ.
ಈ ವಿಡಿಯೊ ಆಲ್ಬಂ ಸಾಂಗ್ನಲ್ಲಿ ನಮ್ಮ ಪರಂಪರೆ, ನಮ್ಮ ಶಕ್ತಿ, ನಮ್ಮ ಸಾಧನೆ ಏನು ಎಂಬ ಅಂಶಗಳೊಂದಿಗೆ ಧೈರ್ಯ ತುಂಬುವುದರ ಜೊತೆಯಲ್ಲಿ ಎಷ್ಟೋ ಕಷ್ಟಗಳನ್ನು ಎದುರಿಸಿರುವ ನಾವು ಕೊರೋನ ವಿರುದ್ಧ ಹೋರಡಲಾರೆವಾ? ಎಂದು ಎಲ್ಲರಿಗೂ ಧೈರ್ಯ ತುಂಬುವ ಗೀತೆಯಾಗಿ ಈ ಹಾಡನ್ನು ಹೊರತರಲಾಗಿದೆ. ಅಂದಹಾಗೆ, ಮಾರುತಿ ಮೆಡಿಕಲ್ಸ್ ಮಹೇಂದ್ರ ಮುನೋತ್ ಅವರು ಆನಂದ್ ಸಿನಿಮಾಸ್ ಮೂಲಕ ಈ ವಿಡಿಯೋ ಸಾಂಗ್ ನಿರ್ಮಿಸಿದ್ದಾರೆ. ಈ ಹಿಂದೆ “ನಮಗಾಗಿ ಜೀವ ಕೊಟ್ಟವರು” ಎಂಬ ವಿಡಿಯೋ ಸಾಂಗ್ ಕೂಡ ಬಿಡುಗಡೆ ಮಾಡಿದ್ದರು. ಈಗ “ಆತ್ಮ ನಿರ್ಭರತ ಭಾರತ” ಮಾಡಿದ್ದಾರೆ. ಎಂ.ಗಜೇಂದ್ರ ನಿರ್ದೇಶನ ಮಾಡಿದ್ದಾರೆ. ಇನ್ನು, ಈ ಹಾಡಿಗೆ ಮೂರುರಾಯರಗಂಡ ಅವರ ಸಾಹಿತ್ಯವಿದೆ. ವಿಜಯ್ ಕೃಷ್ಣ ಅವರ ಸಂಗೀತವಿದೆ. ರಾಜ್ಯ ಪ್ರಶಸ್ತಿ ವಿಜೇತ ಗಾಯಕ ತೇಜಸ್ವಿ ಹರಿದಾಸ್ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಲಕ್ಷ್ಮೀಕಾಂತ್ ಮತ್ತು ವೀರೇಶ್ ಅವರ ಛಾಯಾಗ್ರಹಣವಿದೆ. ಜವಳಿ ಅವರ ಸಂಕಲನವಿದೆ.