ದೀಪಾವಳಿಗೆ ಅಂತರಂಗದ ಹಾಡು- ಹೊಸ ಪ್ರಯೋಗದ ಜೊತೆ ಶುದ್ಧೀಕರಣ

ಒನ್‌ ನೈಟ್‌ ಸ್ಟೋರಿ ಸ್ಪೆಷಲ್‌, ಇಡೀ ರಾತ್ರಿ ಕಾರಲ್ಲೇ ಟ್ರಾವೆಲ್‌ !

 

“ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮದೇವನ ಒಲಿಸುವ ಪರಿ…

ಅರೇ, ಇದೇನಪ್ಪಾ, ಸಿನಿಮಾ ವೆಬ್ಸೈಟ್‌ನಲ್ಲಿ ಬಸವಣ್ಣನವರ ವಚನವಿದೆ ಎಂಬ ಸಣ್ಣ ಅಚ್ಚರಿಯಾಗಬಹುದು. ಅಚ್ಚರಿಯಾದರೂ, ಈ ವಚನಕ್ಕೂ ಇಲ್ಲಿ ಬರೆಯುತ್ತಿರೋ ಸಿನಿಮಾ ಸುದ್ದಿಗೂ ವಿಶೇಷವಿದೆ. ಇಲ್ಲೀಗ ಹೇಳಹೊರಟಿರುವ ವಿಷಯ “ಇದೇ ಅಂತರಂಗ ಶುದ್ಧಿ” ಚಿತ್ರದ್ದು. ಹೌದು, ಸಿನಿಮಾದ ಹೆಸರೇ ವಿಭಿನ್ನ ಎನಿಸುತ್ತೆ ಅಂದಮೇಲೆ, ಚಿತ್ರದ ಕಥೆ ಕೂಡ ಅಷ್ಟೇ ವಿಭಿನ್ನ ಎಂಬುದು ಚಿತ್ರತಂಡದ ಮಾತು. ಅಂದಹಾಗೆ, ಇದೊಂದು ಪ್ರಯೋಗಾತ್ಮಕ ಚಿತ್ರ. ಹೊಸ ಹೊಸ ಆಲೋಚನೆಗಳೊಂದಿಗೆ ಹೊಸಬರು ಹೊಸ ಪ್ರಯತ್ನ, ಪ್ರಯೋಗಕ್ಕಿಳಿದಿರುವುದು ಹೊಸದೇನಲ್ಲ. ಆ ಸಾಲಿಗೆ ಈ “ಇದೇ ಅಂತರಂಗ ಶುದ್ಧಿ” ಚಿತ್ರವೂ ಹೊಸದ್ದೊಂದು ಪ್ರಯೋಗ ಮಾಡ ಹೊರಟಿದೆ. “ಇದೇ ಅಂತರಂಗ ಶುದ್ಧಿ” ಚಿತ್ರದ ಹೆಸರಲ್ಲೊಂದು ವಿಶೇಷತೆಯೂ ಇದೆ. ಅದು ಸಿನಿಮಾ ಹೊರಬರುವವರೆಗೆ ಕಾಯಬೇಕಷ್ಟೇ. ಇದೇ ದೀಪಾವಳಿ ಹಬ್ಬದಂದು ಚಿತ್ರದ ಲಿರಿಕಲ್‌ ವಿಡಿಯೋ ಹೊರಬರುತ್ತಿದೆ. ನವೆಂಬರ್‌ ೧೫ರಂದು ನಿರ್ದೇಶಕ ಕುಮಾರ್‌ ದತ್‌ ಬರೆದಿರುವ “ನುಡಿಸು ಹೃದಯ” ಲಿರಿಕಲ್‌ ವಿಡಿಯೋ ರಿಲೀಸ್‌ ಆಗುತ್ತಿದೆ. ನಕುಲ್‌ ಅಭ್ಯಯಂಕರ್‌ ಹಾಡಿರುವ ಈ ಹಾಡನ್ನು ಡಿ. ಬೀಟ್ಸ್‌ ಆಡಿಯೋ ಕಂಪೆನಿ ಮೂಲಕ ಹೊರತರಲಾಗುತ್ತಿದೆ. ಅಂದಹಾಗೆ, ಈ ಚಿತ್ರದ ಕುರಿತು ನಿರ್ದೇಶಕ ಕುಮಾರ್‌ ದತ್ “ಸಿನಿ ಲಹರಿ” ಜೊತೆ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.

ಒಂದು ರಾತ್ರಿಯ ಕಥೆ
“ಇದು ನನ್ನ ಎರಡನೇ ನಿರ್ದೇಶನದ ಸಿನಿಮಾ. ಈ ಹಿಂದೆ “ಎರಡೊಂದ್ಲ ಮೂರು” ಸಿನಿಮಾ ಮಾಡಿದ್ದೆ. ಅದಾದ ಬಳಿಕ ಹೊಸ ಬಗೆಯ ಕಥೆ ಹೆಣೆದು ಸಿನಿಮಾಗೆ ಅಣಿಯಾದೆ. ಆಗ ಶುರುವಾಗಿದ್ದೇ “ಇದೇ ಅಂತರಂಗ ಶುದ್ಧಿ”. ಮೊದಲೇ ಹೇಳಿದಂತೆ, ಇದೊಂದು ಪ್ರಯೋಗಾತ್ಮಕ ಸಿನಿಮಾ. ಇಡೀ ಸಿನಿಮಾ ೨೦ ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವೆಂದರೆ, ಬಹುತೇಕ ರಾತ್ರಿ ವೇಳೆ ಚಿತ್ರೀಕರಿಸಿದ್ದೇನೆ. ಕಾರಣ, ಇದೊಂದು ಜರ್ನಿಯಲ್ಲಿ ಸಾಗುವ ಕಥೆ. ಅದರಲ್ಲೂ ರಾತ್ರಿ ಶುರುವಾಗಿ, ಬೆಳಗ್ಗೆ ಮುಗಿಯುವ ಕಥೆ. ಬೆಂಗಳೂರು ಆಚೆ ಹೋಗೋದು, ಅಲ್ಲಿಂದ ಈಚೆ ಬರುವ ದೃಶ್ಯಗಳು ಮಾತ್ರ ಇಲ್ಲಿರಲಿವೆ. ಇಲ್ಲಿ ಕಾರು, ಇನ್ನೋವ, ಟ್ಯಾಕ್ಸಿ ಇವುಗಳೂ ಹೈಲೆಟ್‌ ಆಗಿವೆ. ಒಂದು ಜರ್ನಿ ಪಾಯಿಂಟ್‌ನಲ್ಲೇ ಕಥೆ ಸಾಗಲಿದೆʼ ಎಂಬುದು ನಿರ್ದೇಶಕರ ಮಾತು.

ಕುಮಾರ್‌ ದತ್‌, ನಿರ್ದೇಶಕ

 

ಪ್ರಯೋಗಾತ್ಮಕ ಚಿತ್ರ
ಚಿತ್ರದ ಶೀರ್ಷಿಕೆಗೆ ತಕ್ಕಂತೆಯೇ ಇಲ್ಲಿ ಕಥೆ ಹೆಣೆಯಲಾಗಿದೆ. ಯಾವುದೇ ಕಾರಣಕ್ಕೂ ಶೀರ್ಷಿಕೆ ಇಲ್ಲಿ ದುರ್ಬಳಕೆಯಾಗಲ್ಲ. ಕಥೆಗೆ ಪೂರಕವಾಗಿಯೇ ಟೈಟಲ್‌ ಇಡಲಾಗಿದೆ. ಪ್ರಯೋಗಾತ್ಮಕ ಚಿತ್ರ ಅಂದಾಗ ವಿಶೇಷತೆಗಳು ಇರಲೇಬೇಕು. ಆ ಬಗ್ಗೆ ಹೇಳುವುದಾದರೆ, ಇಲ್ಲಿ ಇಡೀ ಸಿನಿಮಾದಲ್ಲಿ ಯಾವುದೇ ಸಿನಿಮಾ ಲೈಟ್‌ ಬಳಸಿಲ್ಲ. ಕಾರಿನ ಲೈಟ್ಸ್‌ಗಳು, ಬೀದಿ ದೀಪಗಳನ್ನೇ ಇಟ್ಟುಕೊಂಡು ಚಿತ್ರೀಕರಿಸಿದ್ದೇನೆ. ಎಲ್ಲವೂ ನೈಜತೆಯಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಪ್ರಯತ್ನ ಮಾಡಿದ್ದೇನೆ. ಆ ಪ್ರಯತ್ನ ಸಾರ್ಥಕವೂ ಎನಿಸಿದೆ. ಇನ್ನು, ಕಥೆ ಬಗ್ಗೆ ಹೇಳುವುದಾದರೆ, ಇಲ್ಲೂ ಲವ್‌ಟ್ರ್ಯಾಕ್‌ ಹೋಗುತ್ತೆ. ಒಂದು ಸಮಾಜಕ್ಕೊಂದು ಸಣ್ಣ ಸಂದೇಶವೂ ಇಲ್ಲಿದೆ. ಹಾಗೆಯೇ ಇಲ್ಲಿ ಉಗ್ರರ ನೆರಳೂ ಇದೆ. ಹುಡುಗಿಯೊಬ್ಬಳು ಮನೆಬಿಟ್ಟು ಹೋಗ್ತಾಳೆ, ಅವಳನ್ನು ಒಬ್ಬ ಹುಡುಗ ಭೇಟಿಯಾಗ್ತಾನೆ. ಒಬ್ಬೊಬ್ಬರು ಬಂದು ಒಂದು ಕಾರಲ್ಲಿ ಕೂರುತ್ತಾರೆ. ಅಲ್ಲಿ ಎಲ್ಲರ ಸ್ಟೋರಿಯೂ ಕನೆಕ್ಟ್‌ ಆಗ್ತಾ ಹೋಗುತ್ತದೆ ಎಂಬುದು ಅವರ ಮಾತು.

ಅಭಿಲಾಶ್‌ ಚಾಕ್ಲ , ವಜೀತ್‌ ಬುಲ್ಲರ್ ನಿರ್ಮಾಪಕರು

ಸಾಫ್ಟ್‌ವೇರ್‌ ಮಂದಿಯ ಕಲರ್‌ಫುಲ್‌ ಸಿನ್ಮಾ
ಈ ಚಿತ್ರ ಅಭಿನವ್‌ ಬ್ಯಾನರ್‌ನಲ್ಲಿ ತಯಾರಾಗಿದೆ. ಅಭಿಲಾಶ್‌ ಚಾಕ್ಲ ಮತ್ತು ವಜೀತ್‌ ಬುಲ್ಲರ್ ಈ ಚಿತ್ರದ ನಿರ್ಮಾಪಕರು. ಇವರಿಗೆ ಇದು ಮೊದಲ ಚಿತ್ರ. ಒಂದೊಳ್ಳೆಯ ಸಿನಿಮಾ ಮಾಡುವ ಆಸೆ ಇದ್ದುದರಿಂದಲೇ ಇವರು, ಕುಮಾರ್‌ ದತ್‌ ಹೇಳಿದ ಕಥೆ ಕೇಳಿ, ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಪಕರಿಗೆ ಒಳ್ಳೆಯ ಸಿನಿಮಾ ಮಾಡಿರುವ ತೃಪ್ತಿ ಇದೆ. ಇನ್ನು, ಚಿತ್ರಕ್ಕೆ ಆರ್ಯವರ್ಧನ್‌ ಹೀರೋ. ಅವರಿಗೆ ಪ್ರತಿಭಾ ಹಾಗೂ ಶ್ವೇತಾ ನಾಯಕಿಯರು. ಉಳಿದಂತೆ ಚಿತ್ರದಲ್ಲಿ ಶ್ರೀಧರ್‌, ಮಂಜುಳಾರೆಡ್ಡಿ, “ಕಾಮಿಡಿ ಕಿಲಾಡಿ” ಖ್ಯಾತಿಯ ಸೂರಜ್‌, ರೂಪೇಶ್‌ ಇತರರು ನಟಿಸಿದ್ದಾರೆ. ಲವ್‌ ಪ್ರಾಣ್‌ ಮೆಹ್ತಾ ಅವರ ಸಂಗೀತವಿದೆ. ವಿನಯ್‌ ಛಾಯಾಗ್ರಹಣ ಮಾಡಿದ್ದಾರೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ ಅಥವಾ ಜನವರಿಯಲ್ಲಿ ಚಿತ್ರ ತೆರೆಗೆ ಬರಲಿದೆ. ಸದ್ಯ ದೀಪಾವಳಿಗೆ “ನುಡಿಸು ಹೃದಯ” ಲಿರಿಕಲ್‌ ವಿಡಿಯೋ ಹೊರಬರುತ್ತಿದೆ. ಚಿತ್ರದಲ್ಲಿ ಒಂದು ಕ್ಲಾಸಿಕಲ್‌ ಗೀತೆ, ಮೆಲೋಡಿ ಹಾಗು ಕಥೆಗೆ ಪೂರಕವಾಗಿ ಸಾಗುವ ಹಾಡೊಂದು ಇದೆ. ಅದೇನೆ ಇರಲಿ, ಚಿತ್ರದ ಶೀರ್ಷಿಕೆಯೇ ಆಕರ್ಷಣೆ ಎನಿರುವುದರಿಂದ ಸಣ್ಣ ಕುತೂಹಲವಂತೂ ಚಿತ್ರದ ಮೇಲಿದೆ. ಇನ್ನು, ನ.೧೫ಕ್ಕೆ ಹೊರಬರುವ ಹಾಡು ಕೂಡ ಕೇಳುಗರಿಗೆ ಖಂಡಿತ ಇಷ್ಟವಾಗುತ್ತೆ ಎಂಬ ನಂಬಿಕೆ ಕೂಡ ಚಿತ್ರತಂಡಕ್ಕಿದೆ.

 

Related Posts

error: Content is protected !!