ನವೆಂಬರ್ 27ಕ್ಕೆ ಚಿತ್ರ ರಿಲೀಸ್
“ಬೆಂಗಳೂರಿನ ಕೊತ್ತನೂರು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಯಾಂಡಲ್ ವುಡ್ ನಿರ್ಮಾಪಕರು ಉದ್ಯಮಿಯೂ ಆಗಿರುವ ಮಂಜುನಾಥ ಭಟ್ ಎಂಬುವರನ್ನು ಹತ್ಯೆ ಮಾಡಲಾಗಿದೆ. ಮೂವರು ಶಂಕಿತರನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಮಂಜುನಾಥ್ ಭಟ್ ಅವರ ಪತ್ನಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಹಂತಕರು ಈ ಕೃತ್ಯ ಎಸಗಿದ್ದಾರೆ. ವಿಷಯ ತಿಳಿದ ಪತ್ನಿ ಆಘಾತಕ್ಕೊಳಗಾಗಿದ್ದು, ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…
ಮೇಲಿನ ಸಾಲುಗಳನ್ನು ಓದಿದಾಕ್ಷಣ, ಅಚ್ಚರಿಯಾದರೆ ಅನುಮಾನವಿಲ್ಲ. ಹಾಗಂತ ಇದು ಯಾವುದೋ ಕ್ರೈಮ್ ಸುದ್ದಿಯಲ್ಲ. ಬದಲಿಗೆ ಚಿತ್ರವೊಂದರ ಟ್ರೇಲರ್‌ನಲ್ಲಿ ಬರುವ ಡೈಲಾಗ್. ಹೌದು, ಇದಿಷ್ಟು ಕೇಳಿದ ಮೇಲೆ ಚಿತ್ರದ ಬಗ್ಗೆ ಒಂದಷ್ಟು ಕುತೂಹಲ ಮೂಡಿಸುವುದಂತೂ ಹೌದು. ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡಲೇಬೇಕು ಎನಿಸುವುದೂ ಉಂಟು. ಅಂಥದ್ದೊಂದು ಹೊಸ ನಿರೀಕ್ಷೆ, ಭರವಸೆ ಹುಟ್ಟಿಸಿರುವ ಚಿತ್ರ “ಅರಿಷಡ್ವರ್ಗʼ. ಹೌದು, ಇದು ಪಕ್ಕಾ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಸಿನಿಮಾ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲಾ ಕಡೆಯಿಂದಲೂ ಉತ್ತಮ ಮೆಚ್ಚುಗೆ ಸಿಕ್ಕಿದೆ.
ಕನ್ನಡದಲ್ಲಿ ಈಗಾಗಲೇ ವಿಭಿನ್ನ ರೀತಿಯಲ್ಲಿರುವ ಶೀರ್ಷಿಕೆಯ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಈಗ “ಅರಿಷಡ್ವರ್ಗ” ಕೂಡ ಸೇರಿದೆ ಎಂಬುದು ವಿಶೇಷ. ಈಗಾಗಲೇ ಚಿತ್ರ ನವೆಂಬರ್ 27ರಂದು ಬಿಡುಗಡೆಗೆ ರೆಡಿಯಾಗಿದ್ದು, ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದಲ್ಲದೆ, ನಟ ಸುದೀಪ್ ಕೂಡ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಅರಿಷಡ್ವರ್ಗ” ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಸುದೀಪ್, ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ.
ಅರವಿಂದ್ ಕಾಮತ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನವನ್ನೂ ನಿರ್ವಹಿಸಿರುವ ಅರವಿಂದ್ ಕಾಮತ್, “ಅರಿಷಡ್ವರ್ಗ” ಚಿತ್ರದ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ, ಒಂದು ಸಂಬಂಧಗಳ ಚಾಲಿತ, ನಿಗೂಢತೆ ಇರುವ ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಸಿನಿಮಾದಲ್ಲಿ ಹೀರೋ ಕೆಲಸ ಅರಸಿ ಒಂದು ಮನೆಗೆ ಹೋದಾಗ, ಅಚ್ಚರಿಯೆಂಬಂತೆ ಕೊಲೆಯ ಕೇಸಿನಲ್ಲಿ ಸಿಲುಕುತ್ತಾನೆ. ಅವನೊಂದಿಗೆ ಸಿನಿಮಾದ ಹುಚ್ಚು ಹಿಡಿಸಿಕೊಂಡ ಒಬ್ಬ ಹುಡುಗಿ ಮತ್ತು ಆ ಮನೆಯಲ್ಲಿ ಕಳವು ಮಾಡಲು ಬರುವ ಒಬ್ಬ ಕಳ್ಳನೂ ಆ ವೇಳೆ ಎಂಟ್ರಿಯಾಗುತ್ತಾರೆ. ಅವರೆಲ್ಲರೂ ಅ ಕೊಲೆಯ ಪೇಚಿಗೆ ಸಿಲುಕುತ್ತಾರೆ. ಇವುಗಳ ಜೊತೆ ಉದ್ಯಮಿ ದಂಪತಿ ಸುತ್ತವೇ ಕಥೆ ಸುತ್ತುತ್ತದೆ. ಈ ನಡುವೆ ಕೊಲೆ ಹಾಗೂ ಅಲ್ಲಿ ಸಿಗುವ ಮೂವರಿಗೂ ಇರುವ ಸಂಬಂಧದ ಕುರಿತು ನಡೆಯುವ ತನಿಖೆ ಸಿನಿಮಾದ ಹೈಲೈಟ್.
ಅಂದಹಾಗೆ, ಇದು ಕಾಮ, ಕ್ರೋಧ, ಪ್ರೀತಿ, ದುರಾಸೆ, ಅಧಿಕಾರ ಮತ್ತು ಅಹಂಕಾರ ಎಲ್ಲವನ್ನೂ ತಪ್ಪಾಗಿ ಅರ್ಥೈಸಿಕೊಳ್ಳುವುದೇ ಇಲ್ಲಿನ ಪಾತ್ರಗಳ ಕಥೆ ವ್ಯಥೆ. ತಮ್ಮ ಸಂಕಷ್ಟಗಳಿಂದ ಹೊರಬರಲು ಪ್ರತೀ ಪಾತ್ರಗಳ ಹೋರಾಟ, ಅಸಹಾಯಕತೆ ಚಿತ್ರದಲ್ಲಿದೆ.
ಚಿತ್ರದಲ್ಲಿ ಅವಿನಾಶ್ ಯಳಂದೂರ್, ಮಹೇಶ್ ಬಂಗ್, ಸಂಯುಕ್ತಾ ಹೊರನಾಡು, ಅಂಜು ಆಳ್ವಾ ನಾಯಕ್, ನಂದಗೋಪಾಲ್, ಗೋಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬಯಲು, ಅರವಿಂದ್ ಕುಪ್ಳಿಕರ್ ಇತರರು ಇದ್ದಾರೆ. ಬಾಲಾಜಿ ಮನೋಹರ್ ಛಾಯಾಗ್ರಹಣವಿದೆ. ಉದಿತ್ ಹರಿತಸ್ ಸಂಗೀತ ಮತ್ತು ಪವನ್ ಕುಮಾರ್ ಸಾಹಿತ್ಯವಿದೆ.
ಕನಸು ಟಾಕೀಸ್ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಾಣಗೊಂಡಿದೆ. ಅಂದಹಾಗೆ, ಕಳೆದ 2019ರ ಲಂಡನ್ ವರ್ಲ್ಡ್ ಪ್ರೀಮಿಯರ್ ಮತ್ತು ಸಿಂಗಾಪಪುರದಲ್ಲಿ ನಡೆದ ಸೌತ್ ಏಷ್ಯನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ “ಅರಿಷಡ್ವರ್ಗ” ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ.