ಶಿವಣ್ಣ ಮೆಚ್ಚಿದ ಟ್ರೇಲರ್
ಆಕೆ ಹೇಳುತ್ತಾಳೆ- “ಆ ಮೋಡಗಳನ್ನು ನೋಡು ಎಷ್ಟು ಚೆನ್ನಾಗಿವೆ.
ಅವನು ಹೀಗನ್ನುತ್ತಾನೆ- “ಎಲ್ಲಿಗೆ ಹೋಗುತ್ತವೆʼ
ಅವನ ಪ್ರಶ್ನೆಗೆ ಆಕೆಯ ಉತ್ತರ- “ಎಲ್ಲಿಯವರೆಗೆ ಹೋಗುತ್ತವೋ ಅವುಗಳಿಗೇ ಗೊತ್ತಿಲ್ಲ. ಹಾಗೆ ಹೋಗ್ತಾ ಹೋಗ್ತಾ ಕರಗಿ ಮಳೆಯಾಗುತ್ತೆ. ಒಂದು ಮಳೆಯಾದರೆ, ಇನ್ನೊಂದು ಒಂಟಿಯಾಗ್ ಬಿಡುತ್ತೆ…”
ಇದು ಕೇಳುವುದಕ್ಕಷ್ಟೇ ಅಲ್ಲ, ನೋಡುವುದಕ್ಕೂ ಅಷ್ಟೇ ಅದ್ಭುತವಾಗಿದೆ. ಇಷ್ಟಕ್ಕೂ ಇಲ್ಲಿ ಹೇಳಹೊರಟಿರುವ ವಿಷಯ “ಗಮನಂ” ಚಿತ್ರದ್ದು. ಹೌದು, ಇದೇ ಮೊದಲ ಬಾರಿಗೆ ನಿರ್ದೇಶಕಿಯಾಗಿರುವ ಸುಜನಾರಾವ್ ಅವರ ಚೊಚ್ಚಲ ಚಿತ್ರವಿದು. ಚಿತ್ರದ ಟ್ರೇಲರ್ ರಿಲೀಸ್ ಮಾಡಿರುವ ನಟ ಶಿವರಾಜಕುಮಾರ್, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಷ್ಟೇ ಅಲ್ಲ, “ಗಮನಂ” ಟ್ರೇಲರ್ ನೋಡಿದ ಶಿವರಾಜಕುಮಾರ್, ” ಈ ಚಿತ್ರ ಗಮನಸೆಳೆಯಿತು ಎಂದಿದ್ದಾರೆ. ಅಂದಹಾಗೆ, ಇದು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಚಿತ್ರ. ಕನ್ನಡ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಆಲ್ದಿ ಬೆಸ್ಟ್ ಹೇಳಿರು ಶಿವರಾಜಕುಮಾರ್, ಚಿತ್ರತಂಡಕ್ಕೆ ಗೆಲುವು ಸಿಗಲಿʼ ಎಂದು ಹಾರೈಸಿದ್ದಾರೆ.
ಅಂದಹಾಗೆ, ಕ್ರಿಯಾ ಫಿಲಂ ಕಾರ್ಪ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಸಾಕಷ್ಟು “ಗಮನ”ಸೆಳೆದಿದೆ. ಈ ಹಿಂದೆ ಫ್ಯಾಷನ್ ಡಿಸೈನಿಂಗ್ ಕಲಿತು, ಎಡಿಟಿಂಗ್ ಕೋರ್ಸ್ ಮುಗಿಸಿ, ದೆಹಲಿಯ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸಿ, ಜತೆಗೆ ಸಾಕಷ್ಟು ಜಾಹೀರಾತುಗಳನ್ನು ನಿರ್ದೇಶಿಸಿದ್ದ ಸುಜನಾ ರಾವ್, ಈಗ “ಗಮನಂ” ಮೂಲಕ ನಿರ್ದೇಶಕಿಯಾಗಿ ಸಿನಿಮಾರಂಗದ ಗಮನಸೆಳೆಯುತ್ತಿದ್ದಾರೆ. ಈ ಚಿತ್ರವನ್ನು ರಮೇಶ್ ಕರುತೂರಿ. ವೆಂಕಿ ಪುಶದಾಪು ಮತ್ತು ಜ್ಞಾನಶೇಖರ್ ವಿ.ಎಸ್. ಸೇರಿ ಕ್ರಿಯಾ ಫಿಲ್ಮ್ಸ್ ಕಾರ್ಪ್ ಮೂಲಕ ನಿರ್ಮಾಣ ಮಾಡಿದ್ದಾರೆ. ಈನ್ನು, ಈ ಚಿತ್ರದ ಟ್ರೇಲರ್ ಅನ್ನು, ಕನ್ನಡದಲ್ಲಿ ಶಿವರಾಜಕುಮಾರ್ ಬಿಡುಗಡೆ ಮಾಡಿದರೆ, ತೆಲುಗಿನಲ್ಲಿ ಪವನ್ ಕಲ್ಯಾಣ್ ಬಿಡುಗಡೆ ಮಾಡಿದ್ದಾರೆ. ಅತ್ತ, ತಮಿಳಿನಲ್ಲಿ ಜಯಂರವಿ, ಮಲಯಾಳಂನಲ್ಲಿ ಫಹಾದ್ ಫಾಸಿಲ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಬಹುತಾರಾಗಣದ ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರಿದ್ದಾರೆ ಎಂಬುದು ವಿಶೇಷ. ಹಿರಿಯ ನಟ ಚಾರು ಹಾಸನ್, ಶ್ರಿಯಾ ಸರಣ್, ಪ್ರಿಯಾಂಕಾ ಜವಾಲ್ಕರ್, ಶಿವ ಕಂದುಕುರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಸ್ವರೂಪ್, ಇಂದೂ ಆನಂದ್, ಪ್ರಿಯಾ, ಸುಹಾಸ್, ಮಾಸ್ಟರ್ ನೇಹಾಂತ್, ಬಿತಿರಿ ಸತ್ತಿ, ರವಿಪ್ರಕಾಶ್ ಮುಂತಾದ ಕಲಾವಿದರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಗಾಯಕಿಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷ.
ಗಮನಂ ವಿಶೇಷ
ಬದುಕಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಹಂಬಲಿಕೆ, ಹುಡುಕಾಟ, ಪರದಾಟಗಳು ಇದ್ದೇ ಇರುತ್ತವೆ. ಅವುಗಳ ನಡುವೆ ಒಂಚೂರು ವಿಷಾದ, ನೋವು, ನಲಿವು ಎಲ್ಲವೂ ಇರುತ್ತವೆ. ಕನಸುಗಳನ್ನೆಲ್ಲಾ ಹರವಿಕೊಂಡು, ಮತ್ತೆ ಜೋಡಿಸಲು ಆಗಬಹುದಾ ಎಂಬ ಆಸೆ ಪಡುವವರು, ಅವರೆದುರು ಕೂತು ʻಇದು ಕಷ್ಟ ಸಾಧ್ಯʼ ಎನ್ನುವರಿಗೇನೂ ಕಮ್ಮಿ ಇಲ್ಲ. ಯಾರಿಗೂ ಕೆಟ್ಟದ್ದನ್ನು ಬಯಸದ ಒಂದಷ್ಟು ಜೀವಗಳು, ನಗರದಲ್ಲಿ ಕಾಣಸಿಗುವ ಒಂದಷ್ಟು ವಿಚಾರಗಳು ಚಿತ್ರದ ಹೈಲೈಟ್. ಹಿರಿಯ ಸಂಗೀತ ನಿರ್ದೇಶಕ, ಇಳಯರಾಜಾ ʻಗಮನಂʼಗೆ ಸಂಗೀತ ನೀಡಿದ್ದಾರೆ. ಹಿಂದಿಯ ಮಣಿ ಕರ್ಣಿಕಾ, ತೆಲುಗಿನ ಗೌತಮೀಪುತ್ರ ಶಾತಕರ್ಣಿ, ವೇದಂ ಮೊದಲಾದ ಸಿನಿಮಾಗಳಿಗೆ ಕ್ಯಾಮರಾ ಕೆಲಸ ನಿರ್ವಹಿಸಿದ್ದ ಜ್ಞಾನಶೇಖರ್ ವಿ.ಎಸ್. ಛಾಯಾಗ್ರಹಣವಿದೆ. ಸಾಯಿ ಮಾಧವ ಬುರಾ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ.