ಫ್ಯಾಂಟಸಿ ಮುಕ್ತಾಯ, ಹೊಸಬರ ಥ್ರಿಲ್ಲರ್‌ ಸಿನಿಮಾ

ಫೆಬ್ರವರಿಯಲ್ಲಿ ಬಿಡುಗಡೆಗೆ ತಯಾರಿ

ಕೆಲವು ಸಿನಿಮಾಗಳು ಸದ್ದಿಲ್ಲದೆಯೇ ಶುರುವಾಗಿ ಸದ್ದಿಲ್ಲದೆಯೇ ಮುಕ್ತಾಯಗೊಳ್ಳುತ್ತವೆ. ಅಂತಹ ಚಿತ್ರಗಳ ಸಾಲಿಗೆ ಈಗ “ಫ್ಯಾಂಟಸಿ” ಸಿನಿಮಾವೂ ಒಂದು. ಹೌದು, ಇತ್ತೀಚೆಗಷ್ಟೇ ಶುರುವಾಗಿದ್ದ “ಫ್ಯಾಂಟಸಿ” ಚಿತ್ರ ತನ್ನ ಶೂಟಿಂಗ್‌ ಮುಗಿಸಿದೆ. ಕೇವಲ 24 ದಿನಗಳಲ್ಲಿ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಈಗ ಖುಷಿಯಲ್ಲಿದೆ. ಇತ್ತೀಚೆಗೆ ರಾಕ್‌ಲೈನ್‌ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಿ, ಅಂದೇ ಚಿತ್ರ ಪೂರ್ಣಗೊಳಿಸಿದೆ. ಇನ್ನು, ಪವನ್​ ಡ್ರೀಮ್​ ಫಿಲಂಸ್ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಪವನ್‌ ಕುಮಾರ್‌ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರದೆ. ಅಷ್ಟೇ ಅಲ್ಲ, ನಿರ್ಮಾಣವನ್ನೂ ಮಾಡಿದ್ದಾರೆ. ಪೋಷಕರಾದ ಎಂ. ಮಹಾದೇವಿ, ಟಿ. ರಂಗಸ್ವಾಮಿ ಅವರು ಸಹ ನಿರ್ಮಾಪಕರು.


ತಮ್ಮ ಸಿನಿ ಜರ್ನಿ ಕುರಿತು ಹೇಳುವ ನಿರ್ದೇಶಕ ಪವನ್‌ ಕುಮಾರ್‌, ” ಆರಂಭದಲ್ಲಿ ನಾನು ನಿರ್ದೇಶಕ ಗುರು ದೇಶಪಾಂಡೆ ‘ಸಂಹಾರ’ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಗಾಂಧಿನಗರಕ್ಕೆ ಎಂಟ್ರಿಯಾದೆ. ನಂತರದ ದಿನಗಳಲ್ಲಿ ‘ಅಮ್ಮ ಐ ಲವ್​ ಯೂ’ ಹಾಗೂ ‘ಆದ್ಯಾ’ ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಚಿರು ಸರ್ಜಾ ಅವರೇ ನಾನು ಈ ಸಿನಿರಂಗಕ್ಕೆ ಬರಲು ಕಾರಣ. ಇನ್ನು, ನಿರ್ದೇಶಕ ಚೈತನ್ಯ ಅವರಿಂದ ನಿರ್ದೇಶನದ ಕೆಲಸ ಕಲಿತಿದ್ದೇನೆ ಎನ್ನುವ ಅವರು, ಇದೊಂದು ಥ್ರಿಲ್ಲರ್ ಶೈಲಿಯ ಸಿನಿಮಾ. ಚಿತ್ರದ ಶೇ. 90 ಭಾಗ ಒಳಾಂಗಣದಲ್ಲಿ ನಡೆದರೆ, ಇನ್ನು ಶೇ. 10 ಹೊರಾಂಗಣದಲ್ಲಿ ಶೂಟ್ ಮಾಡಿದ್ದೇವೆ. ಪೋಸ್ಟ್ ಪ್ರೊಡಕ್ಷನ್​ ಕೆಲಸವೂ ನಡೆಯುತ್ತಿದೆ. ಫೆಬ್ರವರಿ ವೇಳೆಗೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಎನ್ನುತ್ತಾರೆ ಅವರು.


ಈ ಸಿನಿಮಾಗೆ ಛಾಯಾಗ್ರಾಹಕ ಪಿ.ಕೆ.ಎಚ್.​ ದಾಸ್​ ಶಕ್ತಿಯಾಗಿದ್ದಾರೆ. ಗಣೇಶ್​ ನಾರಾಯಣ್​ ಸಂಗೀತ ನೀಡಿದ್ದಾರೆ. ಶಶಿರಾಮ್​ ಸಂಕಲನ ಮಾಡಿದ್ದಾರೆ. ಬಲರಾಜ ವಾಡಿ ಇಲ್ಲಿ ಹೊಸ ರೀತಿಯ ಪಾತ್ರ ನಿರ್ವಹಿಸಿದ್ದಾರಂತೆ. ಭಾಸ್ಕರ್ ಪೊನ್ನಪ್ಪ ಎಂಬ ಪಾತ್ರ ಚಿತ್ರದ ವಿಶೇಷತೆಗಳಲ್ಲೊಂದು ಎಂಬುದು ಅವರ ಮಾತು. ಇನ್ನು,
ಚಿತ್ರದ ನಾಯಕಿ ಪ್ರಿಯಾಂಕಾ ಸಹ ಸಿನಿಮಾ ಬಗ್ಗೆ ತುಂಬಾಬೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಬಿಗ್​ಬಾಸ್ʼ ನಂತರದ ದಿನಗಳಲ್ಲಿ ಸಾಕಷ್ಟು ಕಥೆ ಬಂದಿದ್ದುಂಟು. ಆ ಬಳಿಕ ಈ “ಫ್ಯಾಂಟಸಿ” ಸಿನಿಮಾ ಬಂತು. ಇದು ನನ್ನ ಮೊದಲ ಸಿನಿಮಾ. ಧಾರಾವಾಹಿಯಂತೆ ಇಲ್ಲಿಯು ನೆಗೆಟಿವ್​ ಪಾತ್ರ ಮುಂದುವರಿದಿದೆʼ ಎನ್ನುತ್ತಾರೆ. ಬಾಲನಟ ಅನುರಾಗ್ ಕೂಡ ತನ್ನ ಸಿನಿಮಾ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ನಟ ಹೇಮಂತ್, ಹರಿಣಿ, ಮೂರ್ತಿ, ಗೌರಿ ಇತರರು ನಟಿಸಿದ್ದಾರೆ.

Related Posts

error: Content is protected !!