ಪೆಂಟಗನ್‌ ಎಂಬ ಹೊಸ ಪ್ರಯೋಗ

ವಿಭಿನ್ನ ಪ್ರಯತ್ನಕ್ಕೆ ಮುಂದಾದ ಗುರುದೇಶಪಾಂಡೆ

ಗುರುದೇಶಪಾಂಡೆ

ನಿರ್ದೇಶಕ ಕಮ್‌ ನಿರ್ಮಾಪಕ ಗುರುದೇಶಪಾಂಡೆ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಈ ವರ್ಷದ ಆರಂಭದಲ್ಲಿ “ಜಂಟಲ್‌ ಮ್ಯಾನ್‌” ಸಿನಿಮಾ ರಿಲೀಸ್‌ ಮಾಡಿ ಗೆಲುವು ಕಂಡಿದ್ದ ಗುರುದೇಶಪಾಂಡೆ, ಈಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅವರು ತಮ್ಮ ಜಿ ಸಿನಿಮಾಸ್‌ ಬ್ಯಾನರ್‌ನಡಿಯಲ್ಲಿ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಮ್ಮ ಹೊಸ ಚಿತ್ರಕ್ಕೆ “ಪೆಂಟಗನ್‌” ಎಂದು ಹೆಸರಿಡಲಾಗಿದೆ. ಅಂದಹಾಗೆ, ಈ ಚಿತ್ರವನ್ನು ಐವರು ಪ್ರತಿಭಾವಂತ ನಿರ್ದೇಶಕರು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಐವರು ನಿರ್ದೇಶಕರಿಂದ ವಿಭಿನ್ನ ಸಿನಿಮಾ ಕೊಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ದೇಶಪಾಂಡೆ. ಇನ್ನು, ಐವರು ನಿರ್ದೇಶಕರು ನಿರ್ದೇಶನ ಮಾಡುತ್ತಿದ್ದಾರೆ ಅಂದಮೇಲೆ, ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡ ಕಥೆಗಳು ಕೂಡ ಒಂದಕ್ಕಿಂತ ಒಂದು ಭಿನ್ನವಾಗಿರಲಿವೆ. ಪ್ರತಿ ಕಥೆಯಿಂದ ಇನ್ನೊಂದು ಕಥೆಗೆ ಹೊಂದಾಣಿಕೆಯಾಗುವಂತೆಯೇ ಕಥೆ ಹೆಣೆಯಲಾಗಿದೆ. ಕಥೆಯಲ್ಲಿ ಒಳ್ಳೆಯ ಆಶಯವಿದೆ. ಐದು ಬೇರೆ ಬೇರೆ ಕಥೆಗಳಿದ್ದರೂ, ಅಂತ್ಯದಲ್ಲಿ ಒಂದಕ್ಕೊಂದು ಲಿಂಕ್‌ ಇರಲಿದೆ. ಈ “ಪೆಂಟಗನ್‌” ಸಿನಿಮಾ ಕುರಿತು ಮಾತನಾಡುವ ಗುರುದೇಶಪಾಂಡೆ, “ನನ್ನ ನಿರ್ಮಾಣ ಸಂಸ್ಥೆಯಲ್ಲಿ ಸೃಜನಶೀಲ ಹಾಗೂ ಹೊಸತನಗಳಿಂದ ಕೂಡಿದ ಚಿತ್ರಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದೇನೆ. ಅದು “ಜಂಟಲ್‌ಮನ್”‌ ನಂತರವೂ ನಾನು ಮುಂದುವರೆಸುತ್ತಿದ್ದೇನೆ ಎನ್ನುತ್ತಾರೆ  ಅವರು.

ಗುರು ಶೂಟಿಂಗ್‌ ಶುರು…
ಈಗಾಗಲೇ ಸದ್ದಿಲ್ಲದೆಯೇ “ಪೆಂಟಗನ್‌” ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಐದು ಕಥೆಗಳ ಪೈಕಿ ಎರಡು ಕಥೆಗಳ ಚಿತ್ರೀಕರಣವನ್ನೂ ಮುಗಿಸಲಾಗಿದೆ. ಇತರೆ ಕಥೆಗಳ ಚಿತ್ರೀಕರಣ ಬಾಕಿ ಇದೆ. ಈ ಸಿನಿಮಾಗೆ ಹಲವು ತಿಂಗಳ ಹಿಂದೆಯೇ ಸಿದ್ಧತೆ ನಡೆಸಲಾಗಿತ್ತು. ಕೊರೊನಾ ಸಮಸ್ಯೆಯಿಂದಾಗಿ ಎಲ್ಲೂ ಸುದ್ದಿಯಾಗಿರಲಿಲ್ಲ. ಈಗ “ಪೆಂಟಗನ್‌” ಕುರಿತು ವಿವರಿಸುತ್ತಿರುವುದಾಗಿ ಹೇಳುತ್ತಾರೆ ಗುರುದೇಶಪಾಂಡೆ. ಇನ್ನು ಶೀರ್ಷಿಕೆ ಕುರಿತು ಹೇಳುವ ಗುರುದೇಶಪಾಂಡೆ, “ಪೆಂಟಗನ್‌” ಅಂದರೆ, ಐದು ಮುಖಗಳ ಆಕಾರ. ಕಥೆ ಕೂಡ ಶೀರ್ಷಿಕೆಗೆ ಹೊಂದಿಕೊಳ್ಳುತ್ತದೆ. ಒಟ್ಟಾರೆ, ಒಂದೊಳ್ಳೆಯ ಸಿನಿಮಾ ಕೊಡುವ ಉದ್ದೇಶದಿಂದ ಐದು ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರ ಎಲ್ಲರಿಗೂ ರುಚಿಸಲಿದೆ ಎಂಬ ನಂಬಿಕೆ ನನಗಿದೆ. ಇನ್ನು, ಚಿತ್ರದಲ್ಲಿ ಐವರು ಪ್ರತಿಭಾವಂತ ನಿರ್ದೇಶಕರು ಮಾತ್ರವಲ್ಲದೆ, ಪ್ರಸಿದ್ಧ ನಟರು ಮತ್ತು ತಾಂತ್ರಿಕರು ಕೆಲಸ ಮಾಡುತ್ತಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಈಗಾಗಲೇ ತಮ್ಮದೇ ಆದ ಕೊಡುಗೆ ನೀಡಿದ ನಿರ್ದೇಶಕರು ಮತ್ತು ಹೊಸ ಹಾಗೂ ಅನುಭವಿ ಕಲಾವಿದರು ಮತ್ತು ತಾಂತ್ರಿಕರು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಇಷ್ಟರಲ್ಲೇ ಅವರನ್ನು ಪರಿಚಯಿಸುವ ಪ್ರಯತ್ನ ಮಾಡುವುದಾಗಿ ವಿವರ ಕೊಡುತ್ತಾರೆ ಗರು.

Related Posts

error: Content is protected !!