ಶಂಕರ್‌ ನಾಗ್‌ ಹುಟ್ಟು ಹಬ್ಬಕ್ಕೆ ಶುಭಕೋರಿದ ಫ್ಯಾನ್ಸ್‌

ಆಟೋರಾಜನ ನೆನಪಿಸಿಕೊಂಡ ಚಿತ್ರರಂಗ

ಕನ್ನಡ‌ ಚಿತ್ರರಂಗ ಕಂಡ ಅದ್ಬುತ ನಟ,‌ ನಿರ್ದೇಶಕ ಮತ್ತು ತಂತ್ರಜ್ಞ. ಇದ್ದ ಅಲ್ಪ ಸಮಯದಲ್ಲೇ ಸಾಕಷ್ಟು ಸಂದೇಶವುಳ್ಳ ಸಿನಿಮಾ ಕಟ್ಟಿಕೊಡುವ ಮೂಲಕ ಕನ್ಮಡಿಗರ ಪಾಲಿಗೆ ಪ್ರೀತಿಯ ಶಂಕ್ರಣ್ಣ ಆಗಿ ಉಳಿದವರು. ನವೆಂಬರ್‌ 9 ಅವರ ಹುಟ್ಟುಹಬ್ಬ. ಎಲ್ಲೆಡೆ ಅವರ ಅಭಿಮಾನಿಗಳು ಹುಟ್ಟುಹಬ್ಬವನ್ನು ಪ್ರೀತಿಯಿಂದ ಆಚರಿಸಿದ್ದಾರೆ. ಇನ್ನು, ಸಿನಿಮಾರಂಗದಿಂದಲೂ ಸಾಕಷ್ಟು ಸ್ಟಾರ್‌ ನಟರು ಪ್ರೀತಿಯಿಂದಲೇ ಶಂಕರ್‌ನಾಗ್‌ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಕಿಚ್ಚ ಸುದೀಪ್‌ ಕೂಡ ಶಂಕರ್‌ ನಾಗ್‌ ಅವರ ಹುಟ್ಟುಹಬ್ಬಕ್ಕೆ ತಮ್ಮ ಟ್ವೀಟ್‌ನಲ್ಲಿ ಶಂಕರ್ ನಾಗ್‌ ಅವರ ಫೋಟೋ ಹಂಚಿಕೊಂಡು ಶುಭಕೋರಿದ್ದಾರೆ. ಉಳಿದಂತೆ ಸಾಕಷ್ಟು ಮಂದಿ ಶುಭಕೋರಿದ್ದಾರೆ.


ಶಂಕರ್‌ ನಾಗ್‌ ಅವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳ ಮೂಲಕ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಉತ್ತತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಮಲ್ಲಾಪುರ ಗ್ರಾಮದ ಶಂಕರ್‌ನಾಗ್‌, ಮುಂಬೈ ವಿಶ್ವವಿದ್ಯಾಲಯದಲ್ಲಿ ಕಾಮರ್ಸ್‌ ಪದವಿ ಓದಿದವರು. ಬ್ಯಾಂಕ್‌ ನೌಕರರಾಗಿ ಮೊದಲು ಸೇವೆ ಸಲ್ಲಿಸಿದವರು. “ಒಂದಾನೊಂದು ಕಾಲದಲ್ಲಿ” ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು. “ಸೀತಾರಾಮು” ಅವರ ವೃತ್ತಿ ಬದುಕಲ್ಲಿ ದೊಡ್ಡ ತಿರುವು ಕೊಟ್ಟ ಚಿತ್ರ. ಆ ಬಳಿಕ “ಮಿಂಚಿನ ಓಟ” ಎಂಬ ಸಿನಿಮಾ ಮೂಲಕ ನಿರ್ದೇಶನಕ್ಕೆ ಎಂಟ್ರಿಕೊಟ್ಟರು. ಆ ಸಿನಿಮಾ ಮೂಲಕವೇ ನಿರ್ಮಾಪಕರೂ ಆಗಿಬಿಟ್ಟರು. ಇನ್ನು, “ಸಂಕೇತ್‌ ಸ್ಟುಡಿಯೋ” ಕಟ್ಟಿದ್ದ ಅವರು ದೊಡ್ಡ ಕೊಡುಗೆ ಕೊಟ್ಟವರು. “ಮಾಲ್ಗುಡಿ ಡೇಸ್”‌ ಎಂಬ ಧಾರಾವಾಹಿ ನಿರ್ದೇಶಿಸಿ, ಇಂದಿಗೂ ಮನೆಮಾತಾದವರು. 1978 ರಿಂದ 1990ರ ತನಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. ಅವರು ಇರುವವರೆಗೆ 83 ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬುದು ವಿಶೇಷ. ಅವರ ಅಭಿನಯದ ಕೊನೆಯ ಚಿತ್ರ “ಸುಂದರ ಕಾಂಡ”. ಈಗ ಅವರು ಇಲ್ಲದ 30 ವರ್ಷಗಳು ಕಳೆದಿವೆ. ಸೆ.30, 1990 ಅವರು ಇಹಲೋಕ ತ್ಯಜಿಸಿದರು. ಮೂರು ದಶಕ ಕಳೆದರೂ ಅವರ ನೆನಪು ಮಾತ್ರ ಜೀವಂತ. ಸೆ.30 ಆಟೋರಾಜನ ಪುಣ್ಯಸ್ಮರಣೆ. ನವೆಂಬರ್‌ 9 ಅವರ ಹುಟ್ಟುಹಬ್ಬ. ಶಂಕರ್ ನಾಗ್ ಅವರಿಗೆ ಎಲ್ಲಾ ವರ್ಗದ ಅಭಿಮಾನಿಗಳೂ ಇದ್ದಾರೆ. ಅವರ ಎದೆಯಲ್ಲಿ ಸದಾ ಹಸಿರಾಗಿರುವ ಶಂಕರ್ ನಾಗ್ ಎಂದೂ ಮರೆಯದ ಧ್ರುವತಾರೆ. ಇಂದಿಗೂ ಅವರು ಗೀತಾ, ಸಾಂಗ್ಲಿಯಾನ, ಮಿಂಚಿನ ಓಟ, ಒಂದು ಮುತ್ತಿನ ಕಥೆ, ಮಾಲ್ಗುಡಿ ಡೇಸ್… ಮೂಲಕ ನೆನಪಾಗುತ್ತಲೇ ಇದ್ದಾರೆ. ಇಂತಹ ಮಹಾನ್‌ ನಟನಿಗೆ “ಸಿನಿಲಹರಿ” ಕಡೆಯಿಂದ ಹುಟ್ಟುಹಬ್ಬದ ಶುಭಾಶಯ.

Related Posts

error: Content is protected !!