ಸಿನಿ ದುನಿಯಾದ ಅದೃಷ್ಟ
ಈ ಚಿತ್ರರಂಗವೇ ಹಾಗೆ. ಒಮ್ಮೆ ಈ ಬಣ್ಣದ ಲೋಕಕ್ಕೆ ಕಾಲಿಟ್ಟರೆ, ಮನಸು ಸಾಧಿಸೋವರೆಗೂ ಬಿಡಲ್ಲ. ಕಲೆ ಎಲ್ಲರನ್ನೂ ಒಪ್ಪಿ ಅಪ್ಪಿಕೊಳ್ಳುವುದಿಲ್ಲ.
ನೂರಾರು ಸಂಕಷ್ಟಗಳ ನಡುವೆಯೇ ಇಲ್ಲಿ ಬದುಕು ಕಟ್ಟಿಕೊಂಡವರೂ ಇದ್ದಾರೆ. ಬೆಟ್ಟದಷ್ಟು ಕನಸು ಕಟ್ಟಿಕೊಂಡು ಬಂದ ಪ್ರತಿಭೆಗಳೂ ಇಲ್ಲಿವೆ. ಆ ಸಾಲಿಗೆ ಈಗ ಸಿದ್ದು ಎಂಬ ಹೊಸ ಪ್ರತಿಭೆಯೂ ಸೇರಿದೆ.
ಸಿದ್ದು ಮೂಲತಃ ಕೋಟೆ ನಾಡು ಚಿತ್ರದುರ್ಗದವರು.
ಸಿದ್ದು, ಸಿನಿಮಾರಂಗಕ್ಕೆ ಬಂದದ್ದು ತಾನೊಬ್ಬ ನಟ ಆಗಬೇಕು, ನಿರ್ದೇಶಕನಾಗಬೇಕು ಅಂತ. ಆದರೆ, ಆ ಕನಸು ಸುಲಭವಾಗಿರಲಿಲ್ಲ. ವರ್ಷಗಟ್ಟಲೆ ಕಷ್ಟಪಟ್ಟಿದ್ದೂ ಇದೆ. ಈಗಲೂ ಆ ಶ್ರಮ ಮುಂದುವರೆದಿದೆ.
ಆಗ ಲೈಟ್ ಬಾಯ್, ಈಗ ನಿರ್ಮಾಪಕ
ಸಿದ್ದು ಆರಂಭದ ದಿನಗಳಲ್ಲಿ ಆಫೀಸ್ ಬಾಯ್ ಆಗಿ, ಲೈಟ್ ಬಾಯ್ ಆಗಿ ನಂತರದ ದಿನಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ, ಬರಹಗಾರನಾಗಿಯೂ ಕೆಲಸ ಮಾಡಿದ್ದಾರೆ.
ಈ ಅನುಭವದೊಂದಿಗೆ ಅವರು, 2017 ರಲ್ಲಿ “ಅನಾಸಿನ್” ಎಂಬ ಕಿರುಚಿತ್ರದಲ್ಲಿ ಒಬ್ಬರೇ 6 ಪಾತ್ರಗಳಲ್ಲಿ ನಟಿಸಿ, ನಿರ್ದೇಶನ ಮಾಡಿದ್ದಾರೆ.
ಆಮೇಲೆ ಸ್ವಂತವಾಗಿ ಸಿನಿ ಪ್ಯಾಲೇಸ್ ಸ್ಟುಡಿಯೋ ಎಂಬ ಕ್ಯಾಮೆರಾ ರೆಂಟಲ್ ಶುರು ಮಾಡಿ ಸಿನಿಮಾಗಳು, ಕಿರುಚಿತ್ರಗಳು, ಆಲ್ಬಮ್ ಸಾಂಗ್, ಸೀರಿಯಲ್, ವೆಬ್ ಸೀರೀಸ್ ಗಳು ಮಾಡಿದ್ದಾರೆ.
ಆರ್ಮಿಗೆ ಸೆಲ್ಯೂಟ್
ಕಳೆದ 2019ರಲ್ಲಿ ‘ಸೆಲ್ಯೂಟ್ ಫಾರ್ ಸೋಲ್ಡ್ಜರ್ಸ್’ ಎಂಬ ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದಾರೆ. 2020 ರಲ್ಲಿ ‘ ಆಯ್ತು ಬಿಡಿ’ ಎಂಬ ಆಲ್ಬಮ್ ಸಾಂಗ್ ಗೆ ಸಾಹಿತ್ಯ ಬರೆದು, ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಹಾಡಿಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.ಇದರೊಂದಿಗೆ ಸಿದ್ದು, ‘ಬ್ರಾಂಡೆಡ್ ಲವ್’ ಎಂಬ 30 ನಿಮಿಷದ ಕಿರುಚಿತ್ರ ತಯಾರಿಸಿದ್ದಾರೆ. ಈಗ ಇದೇ ಅನುಭವದೊಂದಿಗೆ ಒಂದು ಸಿನಿಮಾವನ್ನು ನಿರ್ದೇಶಿಸಿ, ನಿರ್ಮಿಸಿ, ನಟಿಸಿದ್ದಾರೆ. ಅದನ್ನೀಗ ಬಿಡುಗಡೆಗೆ ರೆಡಿ ಮಾಡುತ್ತಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಒಂದು ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸುವ ಯೋಚನೆಯಲ್ಲಿದ್ದಾರೆ ಸಿದ್ದು.