ತನಿಖೆಗೆ ಬಂದ ಹೊಸಬರು

ನವೆಂಬರ್‌ 20ಕ್ಕೆ ನಮ್ಮ ಫ್ಲಿಕ್ಸ್‌ನಲ್ಲಿ ಚಿತ್ರ ರಿಲೀಸ್

ಕನ್ನಡದಲ್ಲಿ ಈಗಾಗಲೇ ಓಟಿಟಿ ಫ್ಲಾಟ್‌ಫಾರ್ಮ್‌ ಮೂಲಕ ಒಂದಷ್ಟು ಸಿನಿಮಾಗಳು ಬಿಡುಗಡೆಯಾಗಿವೆ.ಇನ್ನಷ್ಟು ಚಿತ್ರಗಳು ಬಿಡುಗಡೆಗೂ ಸಜ್ಜಾಗಿವೆ. ಆ ಸಾಲಿಗೆ ಈಗ “ತನಿಖೆ” ಎಂಬ ಹೊಸಬರ ಚಿತ್ರವೂ ಸೇರಿದೆ

ಚಂದನಾ, ನಾಯಕಿ

“ತನಿಖೆ” ಎಂಬ ಶೀರ್ಷಿಕೆ ಕೇಳಿದಾಕ್ಷಣ, ಕಳೆದ ಎರಡುವರೆ ದಶಕದ ಹಿಂದೆ ಬಂದ ಗುಲ್ಜಾರ್‌ ಖಾನ್‌ ಅವರ “ತನಿಖೆ” ನೆನಪಾಗದೇ ಇರದು. ಈಗ ಆದೇ ಶೀರ್ಷಿಕೆ ಇಟ್ಟುಕೊಂಡು ಹೊಸಬರು ಹೊಸ ಪ್ರಯತ್ನದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ಈ ಹೊಸಬರ “ತನಿಖೆ” ಸಿನಿಮಾ ಈ ಹಿಂದೆಯೇ ತೆರೆಗೆ ಬರಬೇಕಿತ್ತು. ಕೊರೊನಾ ಹಾವಳಿಯಿಂದಾಗಿ, ಚಿತ್ರ ಈಗ ಬಿಡುಗಡೆಯಾಗುತ್ತಿದೆ. ಅದರಲ್ಲೂ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ.

ತನಿಖೆ ಚಿತ್ರತಂಡ…

“ನಮ್ಮ ಫ್ಲಿಕ್ಸ್” ಎಂಬ ಓಟಿಟಿ ಫ್ಲಾಟ್‌ಫಾರ್ಮ್ ನಲ್ಲಿ ನವೆಂಬರ್‌ 20 ರಂದು “ತನಿಖೆ” ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಕಲಿಗೌಡ ನಿರ್ದೇಶನ ಮಾಡಿದ್ದಾರೆ. ಇವರಿಗೆ ಇದು ಮೊದಲ ಚಿತ್ರ. ತಮ್ಮ ಗೆಳೆಯರ ಜೊತೆಗೂಡಿ ನಿರ್ಮಾಣವನ್ನೂ ಮಾಡಿದ್ದಾರೆ. ಇನ್ನು, ಈ ಚಿತ್ರ ಬಿಡುಗಡೆ ಕುರಿತು ನಿರ್ದೇಶಕ ಕಲಿಗೌಡ ಹೇಳುವುದಿಷ್ಟು. “ಬಹುತೇಕ ಹೊಸಬರೇ ಸೇರಿ ಮಾಡಿರುವ “ತನಿಖೆ” ಇದು. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೊದಲೇ ನಾವು, “ನಮ್ಮ ಫ್ಲಿಕ್ಸ್” ಓಟಿಟಿ ಫ್ಲಾಟ್‌ಫಾರ್ಮ್‌ ನಲ್ಲಿ ನೇರವಾಗಿ ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ನಾವು ಟಿಕೆಟ್‌ಗಳನ್ನೂ ವಿತರಿಸಿದ್ದೇವೆ. ಸುಮಾರು 30 ಸಾವಿರ ಟಿಕೆಟ್‌ ವಿತರಿಸಲಾಗಿದೆ. ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ೯೯ ರುಪಾಯಿ ಕೊಟ್ಟು ಟಿಕೆಟ್‌ ಖರೀದಿಸುವ ಪ್ರೇಕ್ಷಕ ನಾವು ಕೊಡುವ ಒಂದು ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ, ತಮ್ಮ ಮೊಬೈಲ್, ಲ್ಯಾಪ್‌ ಟಾಪ್‌, ಟಿವಿಯಲ್ಲಿ ನಮ್ಮ ಸಿನಿಮಾವನ್ನು ವೀಕ್ಷಿಸಬಹುದು.

ಕಲಿಗೌಡ, ನಿರ್ದೇಶಕ

 

ಕೇವಲ 99 ರುಪಾಯಿಗೆ ಮನೆಮಂದಿ ಕೂಡ ಸಿನಿಮಾ ನೋಡಬಹುದಾಗಿದೆ. ಇದೊಂದು ಒಳ್ಳೆಯ ವೇದಿಕೆಯಾಗಿದ್ದರಿಂದ ನಾವು ಓಟಿಟಿ ಮೊರೆ ಹೋಗಿದ್ದೇವೆ. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ಗ್ರಾಮದಲ್ಲಿ ನಡೆಯುವ ಕಥೆ. ಐವರು ಸೋಮಾರಿ ಗೆಳೆಯರ ಸುತ್ತ ನಡೆಯುವ ಸ್ಟೋರಿ ಇದಾಗಿದ್ದು, ಅವರು ಇರುವ ಹಳ್ಳಿಯಲ್ಲೊಂದು ಕ್ರೈಮ್‌ ನಡೆದು ಹೋಗುತ್ತದೆ. ಅದು ಅವರ ಮೇಲೆ ಆರೋಪ ಕೇಳಿಬರುತ್ತದೆ. ಆಗ ಭಯಗೊಂಡ ಆ ಐವರು ಗೆಳೆಯರು ಊರು ಬಿಟ್ಟು ಹೋಗುತ್ತಾರೆ. ಆಗ ಅಲ್ಲಿಗೆ ಬರುವ ಖಡಕ್‌ ಪೊಲೀಸ್‌ ಅಧಿಕಾರಿ, “ತನಿಖೆ” ನಡೆಸುತ್ತಾರೆ. ಆ ತನಿಖೆಯೇ ಸಸ್ಪೆನ್ಸ್.‌ ಅದನ್ನು ಸಿನಿಮಾದಲ್ಲೇ ನೋಡಬೇಕು” ಎನ್ನುತ್ತಾರೆ ಕಲಿಗೌಡ.
ಈ ಚಿತ್ರವನ್ನು “ನಮ್ಮ ಫ್ಲಿಕ್ಸ್”‌ ಬಿಡುಗಡೆ ಮಾಡುತ್ತಿರುವ ಓಟಿಟಿಯ ಮುಖ್ಯಸ್ಥ ವಿಜಯಪ್ರಕಾಶ್‌, ಮಾತನಾಡಿ, ಇದೊಂದು ಒಳ್ಳೆಯ ಬೆಳವಣಿಗೆ. ಸಿನಿಮಾ ತಂಡ ಹೊಸದು. ಅವರಿಗೆ ನಮ್ಮ ಫ್ಲಾಟ್‌ಫಾರ್ಮ್ ಕಲ್ಪಿಸಿಕೊಡುತ್ತಿದ್ದೇವೆ. ಈಗಾಗಲೇ30 ಸಾವಿರ ಟಿಕೆಟ್‌ ಸೇಲ್‌ ಆಗಿದೆ. ಚಿತ್ರ ಬಿಡುಗಡೆ ನಂತರವೂ ಚಿತ್ರಕ್ಕೆ ಟಿಕೆಟ್‌ ಪಡೆದು ವೀಕ್ಷಿಸಬಹುದು. ಕನ್ನಡ ಚಿತ್ರರಂಗಕ್ಕೆ, ಕನ್ನಡ ಚಿತ್ರಗಳಿಗಾಗಿಯೇ ಈ ವೇದಿಕೆ ಕಲ್ಪಿಸಲಾಗಿದೆ ಎಂದರು.


ನಾಯಕಿ ಚಂದನಾ ಜಾನಕಿ ಅವರಿಗೆ ಇದು ಮೊದಲ ಸಿನಿಮಾ. ಅವರು ಈ ಚಿತ್ರದ ಮೇಲೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದಾರಂತೆ. ಅವರೇ ಹೇಳುವಂತೆ, “ಇದು ನನ್ನ ಮೊದಲ ಚಿತ್ರ. ನಾನಿಲ್ಲಿ ಶಾಲೆಯ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ಕಾಲೇಜು ದಿನಗಳಲ್ಲಿ ಕ್ರಶ್‌ ಆಗುತ್ತೆ. ಆಮೇಲೆ ಒಂದಷ್ಟು ಸಮಸ್ಯೆಗಳೂ ನಡೆದುಹೋಗುತ್ತವೆ. ಆಗ ಏನೆಲ್ಲಾ ಸಮಸ್ಯೆ ಎದುರಿಸುತ್ತೇನೆ ಎಂಬುದು ಕಥೆ. ಈ ಚಿತ್ರ ನವೆಂಬರ್‌ 20 ರಂದು ರಿಲೀಸ್‌ ಆಗುತ್ತಿದೆ. ಎಲ್ಲರೂ ವೀಕ್ಷಿಸಿ, ಕನ್ನಡ ಚಿತ್ರರಂಗವನ್ನು ಬೆಳೆಸಿ” ಎಂದರು ಚಂದನಾ.
ಮಚ್ಚು ಮುನಿ ಅವರಿಗೆ ಇದು ಮೊದಲ ಚಿತ್ರವಂತೆ. ಇಲ್ಲಿ ಎಲ್ಲರೂ ಹೊಸಬರೇ ಸೇರಿ ಸಿನಿಮಾ ಮಾಡಿದ್ದೇವೆ. ನಮ್ಮಂತಹ ಹೊಸಬರನ್ನು ಪ್ರೋತ್ಸಾಹಿಸಿ ಎಂದರು ಮುನಿ. ಛಾಯಾಗ್ರಾಹಕ ಶ್ಯಾಮ್‌ ಸುಂದರ್‌ ಕೂಡ, “ತನಿಖೆ” ಚಿತ್ರ ಹೊಸಬರಿಂದ ಕೂಡಿದೆ. ಒಂದು ಕ್ರೈಂ ಸುತ್ತ ನಡೆಯುವ ಕಥೆ ಇದು. ಇಡೀ ಸಿನಿಮಾ ಸಸ್ಪೆನ್ಸ್‌ ಆಗಿಯೇ ಸಾಗಲಿದೆ ಎಂದರು. ಅನಿಲ್‌ ಆಡಿ, ಹರ್ಷಿಕಾ, ಅನಿಲ್‌,‌ ಅಪ್ಪು ಬಡಿಗೇರ್ ಇತರರು ಇದ್ದರು.

Related Posts

error: Content is protected !!