ನವೆಂಬರ್ 20ಕ್ಕೆ ಆ್ಯಕ್ಟ್ 1978 ಜಾರಿ !

 

ಲಾಕ್ ಡೌನ್ ತೆರವಿನ ನಂತರ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ ಮೊಟ್ಟ ಮೊದಲ ಫ್ರೆಶ್ ಸಿನಿಮಾ


ಲಾಕ್ ಡೌನ್ ತೆರವಾದ ನಂತರ ಸಿನಿಮಾ ರಿಲೀಸ್ ಆಗಿವೆ.‌ ಅಕ್ಟೋಬರ್‌ 15 ರಿಂದಲೇ ರಾಜ್ಯದಲ್ಲಿ ಚಿತ್ರಮಂದಿರಗಳು ಒಪನ್ ಆಗಿವೆ‌. ಅಲ್ಲಿಂದ ಒಂದಷ್ಟು ಸಿನಿಮಾಗಳು ಕೂಡ ತೆರೆಕಂಡಿವೆ.‌ ಆದರೆ ಅವ್ಯಾವ ಫ್ರೆಶ್ ಸಿನಿಮಾ ಅಲ್ಲ. ಅದಾಗಲೇ, ಅಂದರೆ ಲಾಕ್ ಡೌನ್ ಮುಂಚೆ ತೆರೆ ಕಂಡಿದ್ದ ಸಿನಿಮಾಗಳೇ ರೀ ರಿಲೀಸ್ ಆಗಿವೆ‌.ಆದರೆ ಈಗ ಮಂಸೋರೆ ನಿರ್ದೇಶನದ ಆ್ಯಕ್ಟ್ 1978 ಚಿತ್ರ ಹೊಸ ದಾಖಲೆ ಬರೆಯಲು ಹೊರಟಿದೆ. ಟೈಟಲ್, ಟ್ರೇಲರ್ ಮೂಲಕ ತೀವ್ರ ಕುತೂಹಲ ಹುಟ್ಟು ಹಾಕಿರುವ ಈ ಚಿತ್ರ ನವೆಂಬರ್20 ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಲಾಕ್ ಡೌನ್ ನಂತರ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲೇ ತೆರೆ ಕಾಣುತ್ತಿರುವ ಮೊದಲ ಸಿನಿಮಾ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಹೊಸದಾಗಿ ಸಿನಿಮಾ ರಿಲೀಸ್ ಮಾಡುವವರಿಗೆ ಚಿತ್ರಮಂದಿರಗಳ ಸ್ಥಿತಿ ಗತಿ ಬಗ್ಗೆ ಆತಂಕ ಇದೆ.ಆದರೆ ಆ್ಯಕ್ಟ್ 1978ಚಿತ್ರಕ್ಕೆ ಸಾಕಷ್ಟು ಚಿತ್ರ ಮಂದಿರಗಳು ಸಿಕ್ಕಿವೆ. ಚಿತ್ರ ತಂಡ ದೊಡ್ಡ ಸಾಹಸ ಮಾಡಿಯೇ ಸಿನಿಮಾ ರಿಲೀಸ್ ಮಾಡುತ್ತಿದೆ. ಆ ಮೂಲಕ ರಿಲೀಸ್ ಯಾವಾಗ ಎನ್ನುವ ದೊಡ್ಡ ಕುತೂಹಲಕ್ಕೆ ತೆರೆ ಏಳೆದು ಗುರುವಾರ ತಡ ರಾತ್ರಿ ದಿನಾಂಕ ಪ್ರಕಟಿಸಿದೆ.
ಚಿತ್ರದ ರಿಲೀಸ್ ಪ್ರಕಟಣೆ ಕುರಿತು ನಿರ್ದೇಶಕ ಮಂಸೋರೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡ ವಿವರ ಇಲ್ಲಿದೆ.


‘ ಲಾಕ್ ಡೌನ್ ಶುರುವಾದಾಗ ಹುಟ್ಟಿದ ಈ ಪ್ರಶ್ನೆಗೆ ಈಗ ನಿಮ್ಮ ಮುಂದೆ ನಮ್ಮ ಉತ್ತರ. ಪ್ರಶ್ನೆ ನಿಮ್ಮದಷ್ಟೇ ಅಲ್ಲಾ, ನಮ್ಮದೂ ಕೂಡ ಆಗಿತ್ತು.. ನನಗೇ ನಾನೇ ಅದೆಷ್ಟು ಬಾರಿ ಕೇಳಿಕೊಂಡೆನೋ, ಈ ಸಿನೆಮಾ ಯಾವಾಗ ಬಿಡುಗಡೆಯಾಗುತ್ತದೆ? ಎಲ್ಲಿ ಬಿಡುಗಡೆಯಾಗುತ್ತದೆ? ಇವತ್ತಿನವರೆಗೂ ಇದರ ಬಗ್ಗೆ ನಡೆದದ್ದು ಅದೆಷ್ಟೋ ಚರ್ಚೆಗಳು. ಸಂಪರ್ಕಿಸಿದ್ದು ಸಾಕಷ್ಟು ಜನರನ್ನು. ಹಿರಿಯರು, ಕಿರಿಯರು, ಚಿತ್ರರಂಗದ ಒಳಗೆ, ಹೊರಗೆ, ಅನುಭವಿಗಳು, ಯುವಕರು, ಮಹಿಳೆಯರು, ಪತ್ರಕರ್ತರು, ಥಿಯೇಟರುಗಳ ಮಾಲೀಕರು, ಹೀಗೆ ಸಾಧ್ಯವಾದ ವಲಯದಲ್ಲೆಲ್ಲಾ ಇದರ ಬಗ್ಗೆ ಚರ್ಚೆ ಮಾಡಿ ಕೊನೆಗೂ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ, ಅಂದರೆ ನವೆಂಬರ್ 20 ರಂದು ನಮ್ಮ ಸಿನೆಮಾ ‘ಥಿಯೇಟರ್’ನಲ್ಲಿ ತೆರೆಕಾಣಲಿದೆ. ನೂರಾರು ಜನರ ಶ್ರಮ, ನಮ್ಮೆಲ್ಲರ ಕನಸು ನಿಮ್ಮ ಮುಂದೆ ಬರಲಿದೆ.

ಈ ಸಿನೆಮಾ ತೆರೆಗೆ ಬರುವುದು ಬರೀ ಸಿನೆಮಾವಾಗಿ ಮಾತ್ರವಲ್ಲಾ, ಸಾವಿರಾರು ಮಂದಿ ಸಿನೆಮಾ ಕುಟುಂಬದ ಭರವಸೆಯ ನಿರೀಕ್ಷೆಯಂತೆ ಇದು ತೆರೆಕಾಣುತ್ತಿದೆ. ಇದರ ಫಲಿತಾಂಶದ ಮೇಲೆ ಸಾವಿರಾರು ಮಂದಿ ಕಾರ್ಮಿಕರು ಮುಂದಿನ ದಿನಗಳ ಭವಿಷ್ಯದ ಕುರಿತು ಇರುವ ಆತಂಕದ ಕಾರ್ಮೋಡ ಸರಿಯುವುದೆಂಬ ನಿರೀಕ್ಷೆಯಲ್ಲಿ ಈ ಸಿನೆಮಾದ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ.
ಪ್ರೇಕ್ಷಕ ಪ್ರಭುಗಳು ಆ ಕಾರ್ಮೋಡವನ್ನು ಸರಿಸುವಿರಿ ಎಂಬ ನಿರೀಕ್ಷೆಯಲ್ಲಿ ನಾನು ಹಾಗೂ ನಮ್ಮ ತಂಡ.

ತಪ್ಪದೇ ಚಿತ್ರಮಂದಿರಗಳಲ್ಲಿ ನೋಡಿ, ಹರಿಸಿ, ಹಾರೈಸಲು ಪ್ರೇಕ್ಷಕ ಪ್ರಭುಗಳಲ್ಲಿ ಕೋರುವ ACT-1978 ಚಿತ್ರತಂಡ’

Related Posts

error: Content is protected !!