ಧ್ರುವ ಈಗ ಇನ್ನಷ್ಟು ದುಬಾರಿ

ಉದಯ್ ಮೆಹ್ತಾ ಸಿನಿಮಾ ಟೈಟಲ್ ಫಿಕ್ಸ್

 

“ಪೊಗರು” ಚಿತ್ರ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಬೆನ್ನಲೇ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ ಜೋಡಿ ಮತ್ತೊಂದು ಚಿತ್ರಕ್ಕೆ ರೆಡಿಯಾಗಿದ್ದು ಗೊತ್ತೇ ಇದೆ. ವಾಸವಿ ಎಂಟರ್​ಪ್ರೈಸಸ್​​ ಅಡಿಯಲ್ಲಿ ಉದಯ್ ಕೆ. ಮೆಹ್ತಾ ಪ್ರೊಡಕ್ಸನ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಎಂಬುದೂ ಎಲ್ಲರಿಗೂ ಗೊತ್ತು. ಅದ್ದೂರಿ‌ ವೆಚ್ಚದ ಸಿನಿಮಾ‌‌ಗೆ “ದುಬಾರಿ” ಎಂಬ ಶೀರ್ಷಿಕೆ ಇಡಲಾಗಿದೆ. ನವೆಂಬರ್ 6ಕ್ಕೆ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಶುಕ್ರವಾರ ಬೆಳಗ್ಗೆ 5 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ನವರಂಗ ಸಮೀಪದ ಗಣೇಶ್ ದೇವಾಲಯದಲ್ಲಿ ಪೂಜೆ ನೆರವೇರಿದೆ. ಹಿರಿಯ ನಟ ದೊಡ್ಡಣ್ಣ ಮತ್ತು ನಟಿ ತಾರಾ ಆಗಮಿಸಿ ತಂಡದ ಮುಹೂರ್ತಕ್ಕೆ ಚಾಲನೆ ನೀಡಿ, ಕ್ಲಾಪ್​ ಮಾಡಿದರು.   ಸರ್ಜಾ‌ ಕುಟುಂಬಕ್ಕೆ ತುಂಬಾನೆ ಹತ್ತಿರದಲ್ಲಿರುವ ನಿರ್ಮಾಪಕ‌ ಉದಯ್ ಕೆ.‌ಮೆಹ್ತಾ ಅವರು ತಮ್ಮ ಹೊಸ ಚಿತ್ರದ ಮುಹೂರ್ತವನ್ನು ಇತ್ತೀಚೆಗೆ ಬಸವೇಶ್ವರ ನಗರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ನಡೆಸಿದ್ದರು.

ಈ ಹಿಂದೆ ಚಿರು ಕಾಂಬಿನೇಷನ್‌ಮೂಲಕ’ ಸಿಂಗ ‘ ಚಿತ್ರ ನಿರ್ಮಿಸಿ ತೆರೆಗೆ‌‌ ತಂದಿದ್ದ ನಿರ್ಮಾಪಕ‌ ಮೆಹ್ತಾ ಅವರು, ಆಗಲೇ ಧ್ರುವ ಸರ್ಜಾ ಕಾಂಬಿನೇಷನ್ ಮೂಲಕ‌ ಮತ್ತೊಂದು ಸಿನಿಮಾ‌ ನಿರ್ಮಾಣಕ್ಕೂ ಮುಂದಾಗಿದ್ದರು. ಇನ್ನು ನಂದ‌ಕಿಶೋರ್ ಈ ಚಿತ್ರ ನಿರ್ದೇಶಿಸಲಿದ್ದಾರೆ. ಕೊರೊನಾ ನಡುವೆಯೇ ಈಗ ಒಂದಷ್ಟು ಚಟುವಟಿಕೆಗಳಿಗೆ ಚಿತ್ರೋದ್ಯಮ ತೆರೆದುಕೊಂಡಿದೆ. ಅದರ ಬೆನ್ನಲೇ ಉದಯ್ ಮೆಹ್ತಾ ಅವರು ಧ್ರುವ ಸರ್ಜಾ ಅವರ “ದುಬಾರಿ” ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.  ಸದ್ಯ ಧ್ರುವ ಸರ್ಜಾ ಫ್ಯಾನ್ಸ್ ಗಳಿಗೆ ಕ್ರೇಜ್ ಹೆಚ್ಚಿಸಿದೆ. ಈಗಾಗಲೇ ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕ ಒಂದು ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಇದು ಧ್ರುವ ಸರ್ಜಾ ಅಭಿನಯದ ಐದನೇ ಸಿನಿಮಾ.

ನವೆಂಬರ್​ ಅಂತ್ಯದಲ್ಲಿ ಚಿತ್ರೀಕರಣ ಶುರು…

ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ, ನವೆಂಬರ್‌ ಅಂತ್ಯದಲ್ಲಿ ಚಿತ್ರೀಕರಣ ನಡೆಸಲು ತಯಾರಿ ನಡೆಸಿದೆ. “ಪೊಗರು” ನಿರ್ದೇಶಕ ನಂದಕಿಶೋರ್​, “ದುಬಾರಿ”ಗೂ ಆ್ಯಕ್ಷನ್​ ಕಟ್​ ಹೇಳಲಿದ್ದು, ಈಗಾಗಲೇ ಚಿತ್ರಕಥೆ ಎಲ್ಲವೂ ಅಂತಿಮವಾಗಿದೆ. ಈ ಕುರಿತು ಮಾತನಾಡುವ  ನಿರ್ಮಾಪಕ ಉದಯ್​ ಮೆಹ್ತಾ, “ಪ್ರೀ ಪ್ರೊಡಕ್ಷನ್​ ಕೆಲಸಗಳು ಬಹುತೇಕ ಎಲ್ಲವೂ ಮುಗಿದಿದೆ. ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ಹೋಗಬೇಕಿದೆ. ಬೆಂಗಳೂರು, ಮಂಡ್ಯ ಮತ್ತು ವಿದೇಶದ ಹಲವೆಡೆ ಶೂಟಿಂಗ್ ನಡೆಯಲಿದೆ” ಎಂದು ವಿವರ ಕೊಡುತ್ತಾರೆ.

 

ಈಗಾಗಲೇ 8 ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಉದಯ್ ಮೆಹ್ತಾ, ಇದೀಗ 9 ಚಿತ್ರದಲ್ಲಿ ಧ್ರುವ ಜತೆ ಕೈ ಜೋಡಿಸಿದ್ದಾರೆ. ಅದ್ದೂರಿ ವೆಚ್ಚದಲ್ಲಿ ಈ ಚಿತ್ರ ಸಿದ್ಧವಾಗಲಿದ್ದು, ಹಿಂದೆಂದೂ ಕಾಣಿಸದ ರೀತಿಯಲ್ಲಿ ಸ್ಟೈಲಿಶ್​ ಆಗಿ ಧ್ರುವ ಕಾಣಿಸಿಕೊಳ್ಳಲಿದ್ದಾರಂತೆ.  ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತವಿದೆ. ಶೇಖರ್ ಚಂದ್ರು ಛಾಯಾಗ್ರಹಣ ಮಾಡಿದರೆ, ಕೆ.ಎಂ ಪ್ರಕಾಶ್​ ಸಂಕಲನವಿದೆ. ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಮತ್ತು ಪ್ರಶಾಂತ್ ರಾಜಪ್ಪ ಸಂಭಾಷಣೆ ಇದೆ. ಮುಹೂರ್ತ ವೇಳೆ ನಟ ಧರ್ಮ, ಚಂದನ್​ ಶೆಟ್ಟಿ, , ಮಹೇಶ್ ಕುಮಾರ್, ಪ್ರಥಮ್​ ಇತರರು ಇದ್ದರು.

 

“ರಿ” ಎಂಬ ಯಶಸ್ಸಿನ ಅಕ್ಷರ ಕುರಿತು ಗೊತ್ತಾ?

ಧ್ರುವ ಸರ್ಜಾ ಅವರೀಗ “ದುಬಾರಿ” ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಶೀರ್ಷಿಕೆಯಲ್ಲೊಂದು ವಿಶೇಷತೆಯೂ ಇದೆ. ಅದೇನೆಂದರೆ “ರೀ”. ಹೌದು, ಮೊದಲ ಚಿತ್ರ “ಅದ್ಧೂರಿ” ಆ ಬಳಿಕ ಬಂದಿದ್ದು, “ಭರ್ಜರಿ”. ಈಗ “ದುಬಾರಿ” ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, “ರಿ”ಗೆ ಒಂದು ವಿಶೇಷ ಸಂಬಂಧವಂತೂ ಇದೆ. “ಪೊಗರು” ಚಿತ್ರದಲ್ಲಿ “ರಿ” ಇರದಿದ್ದರೂ, “ರ” ಅಕ್ಷರ ಕನೆಕ್ಟ್‌ ಇದೆ. “ರ ಮತ್ತು ರಿ”ಗೆ ಒಂದು ಯಶಸ್ಸಿದೆ. ಈಗಾಗಲೇ ಅದು ಸಾಬೀತಾಗಿದೆ ಕೂಡ. ಇಲ್ಲೂ “ರಿ” ಅಕ್ಷರ ಮುಂದುವರೆದಿದೆ. ಕನ್ನಡ ಚಿತ್ರರಂಗಕ್ಕೆ “ದುಬಾರಿ” ದೊಡ್ಡ ಕೊಡುಗೆ ಕೊಡಲಿ ಎಂಬುದು “ಸಿನಿ ಲಹರಿ” ಹಾರೈಕೆ.

 

Related Posts

error: Content is protected !!