6ನೇ ಕ್ಲಾಸ್ ಓದಿದವರ ಸಿನ್ಮಾ ಪ್ರೀತಿ
ಈ ಬಣ್ಣದ ಲೋಕವೇ ಹಾಗೆ, ಇಲ್ಲಿ ಒಮ್ಮೆ ಒಳನುಗ್ಗಿದರೆ ಮುಗೀತು. ಅದು ಸೋಲಿರಲಿ, ಗೆಲುವಿರಲಿ ಮತ್ತೆ ಮತ್ತೆ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರಬೇಕು. ಇದು ಈಗಿನದ್ದಲ್ಲ. ಸಿನಿಮಾ ಹುಟ್ಟು ಯಾವಾಗ ಶುರುವಾಯ್ತೋ ಅಂದಿನಿಂದಲೂ ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಈಗಾಗಲೇ ಅಂತಹ ಅನೇಕ ಪ್ರತಿಭೆಗಳು ಸಿನಿಮಾರಂಗ ಸ್ಪರ್ಶಿಸಿದ್ದು, ಗೆಲುವು ಕಾಣುವ ಉತ್ಸಾಹದಲ್ಲೇ ಒಂದಷ್ಟು ಪ್ರಯತ್ನಗಳೊಂದಿಗೆ ಮರಳಿ ಯತ್ನ ಮಾಡುತ್ತಲೇ ಇದ್ದಾರೆ. ಅದೆಷ್ಟೋ ಮಂದಿ ಸಿನಿಮಾವನ್ನೇ ಬದುಕಾಗಿಸಿಕೊಂಡಿದ್ದಾರೆ. ಸದ್ದಿಲ್ಲದೆಯೇ ಈ ಕಲೆಯ ಕಾಯಕ ಮಾಡುತ್ತಲೇ ಬದುಕು ಸವೆಸುತ್ತಿದ್ದಾರೆ. ಅಂತಹವರ ಸಾಲಿಗೆ ಶ್ರೀಧರ್ ಶೆಟ್ಟಿ ಕೂಡ ಒಬ್ಬರು.
ಶ್ರೀಧರ್ ಶೆಟ್ಟಿ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಕಳೆದ ಎರಡುವರೆ ದಶಕಗಳಿಗೂ ಹೆಚ್ಚು ಕಾಲ ಇವರಿಗೆ ಸಿನಿಮಾರಂಗದ ಒಡನಾಟವಿದೆ. ಇಷ್ಟು ವರ್ಷಗಳ ಅನುಭವ ಇರುವ ಅವರು, ಹಲವು ಧಾರಾವಾಹಿಗಳಿಗೆ ಕಥೆ, ಸಂಭಾಷಣೆ, ಚಿತ್ರಕಥೆ ಬರೆದಿದ್ದಾರೆ. ಇದರೊಂದಿಗೆ ಈವರೆಗೆ ಮೂರು ಸಿನಿಮಾ ನಿರ್ದೇಶಿಸಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಮೂರು ಸಿನಿಮಾಗಳನ್ನು ನಿರ್ದೇಶಿಸಲು ತಯಾರಿ ನಡೆಸಿದ್ದಾರೆ. ಇಷ್ಟಕ್ಕೂ ಈ ಶ್ರೀಧರ್ ಶೆಟ್ಟಿ ಯಾರು ಎಂಬ ಪ್ರಶ್ನೆಗೆ ಈ ಕೆಳಗಿರುವ ಸುದ್ದಿ ನೋಡಿ.
“1993 ರಲ್ಲಿ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರನ್ನು ಭೇಟಿಯಾದ ಶ್ರೀಧರ್, ತಾವು ಬರೆದ ಕಥೆ ಹೇಳಿದಾಗ, ಸಿದ್ಧಲಿಂಗಯ್ಯ ಅವರು “ಡಬ್ಬಾ ಥರಾ ಇದೆ ಎಂದು ಬೈದು ಕಳಿಸಿದ್ದರಂತೆ”
ಸಿನಿಮಾರಂಗ ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ. ಆದರೆ, ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೆ. ಇಲ್ಲಿ ಪ್ರತಿಭೆ ಮತ್ತು ಅದೃಷ್ಟ ಇದ್ದರೆ ಯಾವುದೇ ಡಿಗ್ರಿಯ ಅಗತ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಶ್ರೀಧರ್ ಶೆಟ್ಟಿ ಬಗ್ಗೆ ಹೇಳೋದಾದರೆ, ಈಗಾಗಲೇ ಬದುಕಿನ ಅರ್ಧಸೆಂಚುರಿ ಮುಗಿಸಿ ಮುನ್ನೆಡೆಯುತ್ತಿದ್ದಾರೆ. ಆದರೆ, ಅವರ ಸಿನಿಮಾ ಉತ್ಸಾಹ ಮಾತ್ರ ಕುಗ್ಗಿಲ್ಲ. ಇವರು ಓದಿದ್ದು ಕೇವಲ 6 ನೇ ತರಗತಿ. ಹಾಗಂತ, ಇವರು ಬದುಕು ಬಲುಕಷ್ಟ ಅಂದುಕೊಳ್ಳಲೂ ಇಲ್ಲ. ಓದುವ ಆಸಕ್ತಿ ಇಟ್ಟುಕೊಳ್ಳದ ಇವರು ಸಿನಿಮಾ ಆಸಕ್ತಿ ಬೆಳೆಸಿಕೊಂಡರು. ಓದುವ ದಿನಗಳಲ್ಲೇ ಹಾಡು ಹಾಡುವ ಗೀಳು ಇಟ್ಟುಕೊಂಡವರು. ಕಾಲಕ್ರಮೇಣ ಇವರು ಕಥೆ ಬರೆಯುವುದರ ಕಡೆ ವಾಲಿದರು. ಆ ಸಮಯದಲ್ಲಿ ನಾಲ್ಕು ಕಥೆ ಬರೆದಿಟ್ಟುಕೊಂಡಿದ್ದರು. ಆಗಿನ ಒಂದಷ್ಟು ತಿಂಗಳ ಹಾಗೂ ವಾರದ ಪತ್ರಿಕೆಗಳಲ್ಲಿ ಪ್ರಕಟಿಸಲು ಕಳುಹಿಸಿದರೂ, ಇವರ ಕಥೆ ರಿಜೆಕ್ಟ್ ಆಗಿತ್ತು. ಬೇಸರಿಸಿಕೊಳ್ಳದ ಅವರು ಸಂಪಂಗಿರಾಮ ನಗರದ ದೇವರಾಜು ಎಂಬುವವರು ಗಣೇಶ ಹಬ್ಬದಲ್ಲಿ ಮಾಡುತ್ತಿದ್ದ ನಾಟಕವೊಂದರಲ್ಲಿನಟಿಸಲು ಅವಕಾಶ ಕೊಟ್ಟಿದ್ದಾರೆ. ನಟನೆಯ ಗಂಧ ತಿಳಿಯದ ಅವರಿಗೆ ಅಲ್ಲಿಂದ ನಟನೆ ಕಡೆ ಆಸಕ್ತಿ ಬೆಳೆದಿದೆ. ಅಲ್ಲಿಂದಲೇ ಅವರು ಸಿನಮಾ ಕಡೆ ವಾಲುವಂತಾಗಿದೆ. ನಟನೆ ಜೊತೆ ಕಥೆ ಬರೆಯುವ ಹುಚ್ಚು ಇಟ್ಟುಕೊಂಡಿದ್ದ ಶ್ರೀಧರ್ ಶೆಟ್ಟಿ, 1993 ರಲ್ಲಿ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರನ್ನು ಭೇಟಿಯಾದ ಶ್ರೀಧರ್ ತಾವು ಬರೆದ ಕಥೆ ಹೇಳಿದಾಗ, ಸಿದ್ಧಲಿಂಗಯ್ಯ ಅವರು “ಡಬ್ಬಾ ಥರಾ ಇದೆ ಎಂದು ಬೈದು ಕಳಿಸಿದ್ದರಂತೆ. ಅಷ್ಟಾದರೂ ಶ್ರೀಧರ್ ಕಥೆ ಬರೆಯುವುದನ್ನು ನಿಲ್ಲಿಸದೆ, ಸಿದ್ಧಲಿಂಗಯ್ಯ ಇರುತ್ತಿದ್ದ ಟೂರಿಸ್ಟ್ ಹೋಟೆಲ್ಗೆ ಹೋಗಿ ಕಥೆ ಹೇಳಲು ಕಾಡಿದ್ದಾರೆ. ಕೊನೆಗೆ ಇವರ ಕಾಟ ತಾಳಲಾರದೆ, ಸಿದ್ಧಲಿಂಗಯ್ಯ ಕೂರಿಸಿಕೊಂಡು ಕಥೆ ಬರೆಯುವುದನ್ನು ಹೇಳಿಕೊಟ್ಟಿದ್ದಾರೆ. ಆ ಬಳಿಕ ಶ್ರೀಧರ್, ಮತ್ತೊಂದು ಹೊಸ ಕಥೆ ಬರೆದುಕೊಂಡು ಹೋಗಿ ಕಥೆ ಹೇಳಿದಾಗ, ಪರವಾಗಿಲ್ಲ ಅರಿತಿದ್ದೀಯ ಅಂತ ಹೇಳಿದ್ದಲ್ಲದೆ, ನಾನೇ ಈ ಕಥೆಯನ್ನು ಸಿನಿಮಾ ಮಾಡ್ತೀನಿ ಎಂದಿದ್ದಾರೆ. ಆ ವೇಳೆ “ಪ್ರೇಮ ಪ್ರೇಮ” ಸಿನಿಮಾ ಸೋಲು ಕಂಡಿದ್ದರಿಂದ ಅವರು ಸಿನಿಮಾ ಮಾಡುವ ಪ್ರಯತ್ನ ಮಾಡಲಿಲ್ಲ. ಅಂದು ಶ್ರೀಧರ್ ಅವರ ಕಥೆಗೆ ಸಿದ್ಧಲಿಂಗಯ್ಯ ಅವರು ಇಟ್ಟ ಹೆಸರು, “ಬನವಾಸಿಯ ಬಯಲಲ್ಲಿ”. ಇಂದಿಗೂ ಆ ಕಥೆ ಹಾಗೆಯೇ ಇದೆ ಎಂಬುದು ಶ್ರೀಧರ್ ಶೆಟ್ಟಿ ಮಾತು.
ಇಷ್ಟಾದರೂ ಶ್ರೀಧರ್ ಸಿನಿಮಾ ಮೇಲಿನ ಆಸಕ್ತಿ ಕಳೆದುಕೊಳ್ಳದೆ, ಮರಳಿ ಯತ್ನವ ಮಾಡು ಎಂಬಂತೆ ಅವಕಾಶಕ್ಕಾಗಿ ಅಲೆದಾಡಿದ್ದಾರೆ. ಕೊನೆಗೆ ಕಿರುತೆರೆ ನಿರ್ದೇಶಕ ಅಮರ್ದೇವ್, ನಾಗತಿಹಳ್ಳಿ ಚಂದ್ರಶೇಖರ್ ಅವರ ಸಂಪರ್ಕ ಬೆಳೆಸಿಕೊಂಡು “ವಠಾರ” ಧಾರಾವಾಹಿಗೆ ಬರೆಯುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸುಮಾರು 600 ಸಂಚಿಕೆಗಳಿಗೆ ಬರೆಯುವುದರ ಜೊತೆಗೆ 300 ಸಂಚಿಕೆಗಳಲ್ಲಿ ನಟಿಸುವ ಅವಕಾಶವನ್ನೂ ಪಡೆದ ಶ್ರೀಧರ್, ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ “ಬೆಳ್ಳಿಚುಕ್ಕಿ”ಯಲ್ಲೂ ಬರೆಯುವ ಅವಕಾಶ ಪಡೆದಿದ್ದಾರೆ. ಆದರೆ, 6ನೇ ತರಗತಿ ಓದಿದವನು ಹೇಗೆಲ್ಲಾ ಬರೆಯಬಹುದು ಎಂಬ ಅನುಮಾನದ ಮಾತುಗಳನ್ನಾಡಿದ್ದರಿಂದ, ಬೇಸತ್ತು, ಅಲ್ಲಿಂದ ಹೊರಬಂದಿದ್ದಾರೆ. ಕಾಲ ಕ್ರಮೇಣ ಅವರು ಸಿನಿಮಾ ನಿರ್ದೇಶನ ಕಡೆ ಮುಖ ಮಾಡಿದ್ದಾರೆ. “ಚಕ್ರ ಸುಳಿ” ಎಂಬ ಸಿನಿಮಾಗೆ ಕೈ ಹಾಕಿದ್ದಾರೆ. ಆ ಸಿನಿಮಾ ಮುಗಿಯುವ ಹಂತದಲ್ಲೇ ಅವರು “ಜನುಮದ ಸ್ನೇಹಿತರು” ಚಿತ್ರ ಮಾಡಿದ್ದಾರೆ. ಆ ಚಿತ್ರದ ಹೀರೋ ರೋಹಿತ್ ಶೆಟ್ಟಿ ಅವರು “ಆರೋಹಣ” ಚಿತ್ರ ನಿರ್ದೇಶನಕ್ಕೆ ಅವಕಾಶವನ್ನೂ ಕೊಟ್ಟಿದ್ದಾರೆ. ಈಗ ಅವರ “ಚಕ್ರ ಸುಳಿ” ಬಿಡುಗಡೆಗೆ ಸಿದ್ಧಗೊಂಡಿದೆ. ಕೈಯಲ್ಲಿ “ಮ್ಯಾಜಿಕ್ ಮನೆ” ಚಿತ್ರವಿದೆ. ಕಳೆದ ಯುಗಾದಿಯಲ್ಲಿ ಪೂಜೆಯಾಗಿದೆ. ಆದರೆ, ಲಾಕ್ಡೌನ್ ಆಗಿದ್ದರಿಂದ ಅದು ಸದ್ಯಕ್ಕೆ ಬ್ರೇಕ್ನಲ್ಲಿದೆ. ಇದರೊಂದಿಗೆ ಮೈಸೂರಿನ ರವಿ ಮತ್ತು ಅರ್ಬಾಜ್ ಎಂಬುವವರ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ತಡವಾದರೂ, ಅವಕಾಶ ಪಡೆದ ಶ್ರೀಧರ್, ಕನ್ನಡ ಚಿತ್ರರಂಗದಲ್ಲಿ ಚಂದದ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಅನುಭವ ಹೊಂದಿರುವ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆ ಸೂಕ್ತ ಕಾಲದಲ್ಲಿ ಅವಕಾಶ ಸಿಗಬೇಕಷ್ಟೆ. ಇಲ್ಲಿ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡರೆ, ಮುಂದಿನ ದಿನಗಳಲ್ಲಿ ಒಳ್ಳೆಯ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ.