ಹಿರಿಯ ರಂಗಕರ್ಮಿ ಹಾಗೂ ನಟ ಹೆಚ್. ಜಿ. ಸೋಮಶೇಖರ ರಾವ್ (ಸೋಮಣ್ಣ)ಇಂದು ವಿಧಿವಶರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.ವಯೋ ಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಅವರು ನಿಧನರಾದರು.
ಹಿರಿಯ ನಟ ದತ್ತಣ್ಣ ನವರ ಸಹೋದರರಾಗಿದ್ದ ಸೋಮಶೇಖರ ರಾವ್, ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದರು. ಆದರೂ ಸಹ ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕಕಾರರ ಕೃತಿಗಳನ್ನು ರಂಗ ಪ್ರಯೋಗಕ್ಕೆ ತಂದಿದ್ದರು. ಆ ಪ್ರಯೋಗಗಳ ಮೂಲಕ ಆ ನಾಟಕಕಾರರನ್ನು ಜೀವಂತಗೊಳಿಸಿದ್ದುಗಮನಾರ್ಹ.
ಸೋಮಶೇಖರ್ ರಾವ್ ಅವರು ಚಿತ್ರರಂಗವನ್ನು ಪ್ರವೇಶಿಸಿದ್ದು 1981 ರಲ್ಲಿ, ಟಿ.ಎಸ್.ರಂಗಾರವರ ನಿರ್ದೇಶನದ ‘ಸಾವಿತ್ರಿ’ಮೂಲಕ. ಖ್ಯಾತ ನಟ ಅನಿಲ್ ಠಕ್ಕರ್ ಅವರ ” ಪ್ರತಿದ್ವಂದಿʼ ಯಾಗಿ ಇವರು ನೀಡಿದ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಆನಂತರ ಸೋಮಶೇಖರ್ ರಾವ್ ಅವರು, ಅನೇಕ ಚಿತ್ರಗಳಲ್ಲಿ ಭಾವಪ್ರಧಾನ ಮತ್ತು ಹಾಸ್ಯಪ್ರಧಾನ ಪಾತ್ರ ನಿರ್ವಹಿಸಿದರು. ರವಿ ನಿರ್ದೇಶನದ ‘ಮಿಥಿಲೆಯ ಸೀತೆಯರು’ಇವರ ಅಭಿನಯ ಸಾಮರ್ಥ್ಯವನ್ನು ಸಮರ್ಥವಾಗಿ ಗುರುತಿಸುವಂತೆ ಮಾಡಿತು.
ರವೀಯವರೇ ನಿರ್ದೇಶಿಸಿದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರ ರಾವ್ ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಅವರಿ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು. ಕೆನರಾ ಬ್ಯಾಂಕ್ ನಲ್ಲಿ ಉನ್ನತ ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ನಂತರ ಸೋಮಣ್ಣ, ಕನ್ನಡ ರಂಗಭೂಮಿಗೆ ತಮ್ಮ ಸೇವೆಯನ್ನು ಸಲ್ಲಿಸುವುದೇ ನಿಜವಾದ ಕಾಯಕವಾಗಿ ಮಾಡಿಕೊಂಡರು.
ನಟ, ರಂಗ ಕರ್ಮಿ ಸೋಮಶೇಖರ ರಾವ್ ಬದುಕಿನ ಅನುಭವ ಕಥನವು ಪ್ರಕಟವಾಗಿದ್ದು, ಅವರ ಕಲಾ ಸೇವೆಯನ್ನು ಗಂಭೀರವಾಗಿ ದಾಖಲು ಮಾಡಲಾಗಿದೆ. ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ರಾವ್ ಅವರು, ತಮ್ಮ 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದು, ರಂಗಭೂಮಿ ಮತ್ತು ಕಿರುತೆರೆ ಎರಡು ಕ್ಷೇತ್ರಗಳು ಬಡವಾಗುವಂತೆ ಮಾಡಿದೆ. ಸಿನಿಮಾ ಮತ್ತು ರಂಗಭೂಮಿ ಎರಡು ಕ್ಷೇತ್ರದ ಗಣ್ಯರು ರಾವ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
( ಫೋಟೋ – ಪ್ರಗತಿ ಅಶ್ವಥ್ ನಾರಾಯಣ)