- ಕಳೆದು ಹೋಗುತ್ತಿರುವ ಚಿತ್ರಮಂದಿರಗಳ ಗೋಳು ಕೇಳುತ್ತೀರಾ?
” ಶುಕ್ರವಾರ ಬಂತೆಂದರೆ ಸಾಕು, ನನ್ನ ಎದುರು ಜನಜಾತ್ರೆ. ಹಲಗೆ, ಡೊಳ್ಳು, ಶಿಳ್ಳೆ, ಕೇಕೆ ಜೊತೆ ಕುಣಿತದ ಸಂಭ್ರಮವೇ ತುಂಬಿ ತುಳುಕುತ್ತಿತ್ತು. ಹಾರ, ತುರಾಯಿ ಹಾರಾಟ ಜೋರಾಗಿಯೇ ಇರುತ್ತಿತ್ತು. ಅದೆಷ್ಟೋ ಜನರನ್ನು ಕುಣಿಸಿದ್ದೇನೆ, ಖುಷಿಪಡಿಸಿದ್ದೇನೆ. ರಂಜಿಸಿದ್ದೇನೆ. ಹೇಳಲಾಗದಷ್ಟು ಸಂಭ್ರಮಕ್ಕೆ ಕಾರಣವಾಗಿದ್ದೇನೆ. ಆದರೆ, ಕೊರೊನಾ ಎಂಬ ಮಹಾಮಾರಿ ನನ್ನಲ್ಲಿದ್ದ ಆ ಖುಷಿಯನ್ನು ದೂರಪಡಿಸಿತ್ತಲ್ಲದೆ, ನನ್ನೊಂದಿಗಿದ್ದ ನೌಕರರನ್ನೂ ನನ್ನಿಂದ ದೂರ ಮಾಡುವಂತಹ ಪರಿಸ್ಥಿತಿಗೆ ನೂಕಿಬಿಟ್ಟಿದೆ. ಇಷ್ಟೇ ಆಗಿದ್ದರೆ, ನನ್ನ ನೋವನ್ನು ನಾನೀಗ ತೋಡಿಕೊಳ್ಳುತ್ತಿರಲಿಲ್ಲ. ಕೊರೊನಾ ನೆಪ ಹೇಳಿ ಇನ್ನು ಮುಂದೆ ಸಂಪೂರ್ಣವಾಗಿಯೇ ನನ್ನನ್ನು ಕಡೆಗಣಿಸುತ್ತಾರೇನೋ ಎಂಬ ಭಯ ನನ್ನನ್ನು ಕಾಡುತ್ತಿದೆ…”
– ಇದು ಯಾರೋ ಹೇಳಿದ ಮಾತಲ್ಲ. ಪ್ರಸ್ತುತ ರಾಜ್ಯದಲ್ಲಿರುವ ಕೆಲವು ಚಿತ್ರಮಂದಿರಗಳು ಹೇಳಿಕೊಳ್ಳುತ್ತಿರುವ ಪರಿ. ಹೌದು, ಕೊರೊನಾ ಇಡೀ ಜಗತ್ತನ್ನೇ ಕಾಡಿದ್ದು ಸುಳ್ಳಲ್ಲ. ಇದಕ್ಕೆ ಚಿತ್ರರಂಗವೂ ಹೊರತಲ್ಲ ಬಿಡಿ. ಕೊರೊನಾದಿಂದ ಅದೆಷ್ಟೋ ಮಂದಿ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ನೆಲೆ ಕಾಣದೆ ಪರಿತಪಿಸುತ್ತಿದ್ದಾರೆ. ಹೊಸ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಡೀ ಜಗತ್ತಿನ ವ್ಯಾಪಾರ-ವಹಿವಾಟು ಕುಸಿದಿದ್ದಷ್ಟೇ ಅಲ್ಲ, ಕಷ್ಟಪಟ್ಟು ಕಟ್ಟಿಕೊಂಡಿದ್ದ ಬದುಕು ಕೂಡ ರಪ್ಪನೆ ಕಳಚಿಬಿದ್ದಿದೆ. ಇಲ್ಲೀಗ ಕಳಚಿ ಬೀಳುತ್ತಿರುವ ಚಿತ್ರಮಂದಿರಗಳ ಬಗ್ಗೆಯೂ ಹೇಳಲೇಬೇಕಿದೆ.
ಹೌದು, ಕಪ್ಪು-ಬಿಳುಪು ಸಿನಿಮಾಗಳ ಕಾಲದಿಂದಲೂ ದಶಕಗಳ ಕಾಲ ಜನರನ್ನು ರಂಜಿಸುತ್ತಿದ್ದ ಅದೆಷ್ಟೋ ಚಿತ್ರಮಂದಿರಗಳು ಈಗಲೂ ಇವೆ. ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು, ಪಟ್ಟಣಗಳಲ್ಲಿದ್ದ ಕೆಲವು ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದು ಗೊತ್ತೇ ಇದೆ. ಜನರಿಗೆ ರಸದೌತಣ ನೀಡುತ್ತಿದ್ದ ಚಿತ್ರಮಂದಿರಗಳು ಮಾಲೀಕರ ನಿರ್ಧಾರದಿಂದಾಗಿ ನೆಲಸಮಗೊಂಡು ಕಮರ್ಷಿಯಲ್ ಬಿಲ್ಡಿಂಗ್ ರೂಪ ಪಡೆದುಕೊಂಡಿವೆ. ಈಗ ಕೊರೊನೊ ತಂದ ಅವಾಂತರದಿಂದಾಗಿ, ಇದ್ದ ಬದ್ದ ಕೆಲವು ಚಿತ್ರಮಂದಿರಗಳೂ ಕೂಡ ಸಂಪೂರ್ಣ ಮುಚ್ಚುವ ಸಾಧ್ಯತೆ ಇದೆ. ಇದಕ್ಕೆ ಕಾರಣ, ಮತ್ತದೇ ಕೊರೊನಾ!
ಇದು ನಿಜಕ್ಕೂ ನೋವಿನ ಸಂಗತಿ
ದಶಕಗಳ ಕಾಲ ಸಾವಿರಾರು ಸಿನಿಮಾಗಳ ಪ್ರದರ್ಶನ ಮಾಡಿರುವ ಕೆಲವು ಚಿತ್ರಮಂದಿರಗಳು ಕೊರೊನಾ ಹೊಡೆತಕ್ಕೆ ಬಲಿಯಾಗುತ್ತಿವೆ ಎಂಬ ಮಾತು ಜೋರಾಗಿಯೇ ಕೇಳಿಬರುತ್ತಿವೆ. ಇದು ನಿಜವಾದರೂ, ಎಷ್ಟರ ಮಟ್ಟಿಗೆ ಅದು ದೃಢ ಎಂಬುದು ಸದ್ಯಕ್ಕೆ ಸ್ಪಷ್ಟವಿಲ್ಲ. ಆದರೂ, ಒಂದಷ್ಟು ಚಿತ್ರಮಂದಿರಗಳು ಪುನಃ ಬಾಗಿಲು ತೆಗೆಯುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಲೇ ಇದೆ. ಎಲ್ಲಾ ಸರಿ, ಅಷ್ಟಕ್ಕೂ ಚಿತ್ರಮಂದಿರಗಳೇಕೆ ಮುಚ್ಚುವ ಪರಿಸ್ಥಿತಿಯಲ್ಲಿವೆ ಎಂಬ ಪ್ರಶ್ನೆಗೆ ಉತ್ತರ, ಕೊರೊನಾ ತಂದ ನಷ್ಟ.
ನಿಜ, ಕೊರೊನಾದಿಂದಾಗಿ ಲಾಕ್ಡೌನ್ ಮಾಡಬೇಕಾದ ಪರಿಸ್ಥಿತಿ ಬಂದೊದಗಿತು. ಇದರಿಂದ ಎಲ್ಲವೂ ಬಂದ್ ಆಯ್ತು. ಚಿತ್ರಮಂದಿರಗಳೂ ಇದಕ್ಕೆ ಹೊರತಾಗಲಿಲ್ಲ. ಕಳೆದ ಎಂಟು ತಿಂಗಳಿನಿಂದಲೂ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದರಿಂದ, ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು ನೌಕರರು ಕೂಡ ಬೀದಿಗೆ ಬಿದ್ದರು. ಅಷ್ಟೇ ಯಾಕೆ, ಸ್ವತಃ ಮಾಲೀಕರು ಸಹ, ಚಿತ್ರಮಂದಿರವನ್ನು ಮೇಂಟೈನ್ ಮಾಡದಂತಹ ಪರಿಸ್ಥಿತಿಗೆ ಬಂದು ಮುಚ್ಚುವ ನಿರ್ಧಾರ ಮಾಡುವಂತಾಗಿದೆ. ಮಾಹಿತಿ ಪ್ರಕಾರ ರಾಜ್ಯದಲ್ಲಿರುವ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳು ಬಾಗಿಲು ಮುಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಬೆಳವಣಿಗೆಗೆ ಕಾರಣ? ನಷ್ಟ. ಇದು ನಿಜ, ಚಿತ್ರಮಂದಿರಗಳು ಈಗ ನಷ್ಟದಲ್ಲಿವೆ.
ಅದರಲ್ಲೂ ಈ ಲಾಕ್ಡೌನ್ ಟೈಮ್ನಲ್ಲಿ ಬಾಗಿಲು ಮುಚ್ಚಿದ್ದರಿಂದ ಕರೆಂಟ್ ಬಿಲ್, ವಾಟರ್ ಬಿಲ್ ಇತ್ಯಾದಿ ಖರ್ಚುಗಳೆಲ್ಲವೂ ಚಿತ್ರಮಂದಿರಗಳ ಮಾಲೀಕರ ಮೇಲೆಯೇ ಬಂದಿದೆ. ಅದು ಸಾವಿರಾರು ರುಪಾಯಿ ಆಗಿದ್ದರೆ, ಹೇಗೋ ಪರಿಸ್ಥಿತಿ ನಿವಾರಿಸಿಕೊಳ್ಳಬಹುದಿತ್ತೇನೋ? ಆದರೆ, ಲಕ್ಷಾಂತರ ರುಪಾಯಿ ಬಿಲ್ ಪಾವತಿಸುವುದೆಂದರೆ ನಿಜಕ್ಕೂ ನಿವಾರಿಸುವುದು ಕಷ್ಟ ಸಾಧ್ಯ. ಇದೊಂದೇ ಕಾರಣಕ್ಕೆ ಮಾಲೀಕರು ತಮ್ಮ ಚಿತ್ರಮಂದಿರಗಳನ್ನು ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟುವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ದುಡಿದ ನೌಕರರನ್ನೂ ಹೊರಗಿಡುವ ಪರಿಸ್ಥಿತಿ ಬಂದೊದಗಿದೆ ಎಂಬುದು ಚಿತ್ರಮಂದಿರ ಮಾಲೀಕರೊಬ್ಬರ ನೋವಿನ ನುಡಿ. ಚಿತ್ರಮಂದಿರಗಳನ್ನು ಪುನಃ ಆರಂಭಿಸುವ ಮುನ್ನ, ಕರೆಂಟ್ ಬಿಲ್ ಸೇರಿದಂತೆ ಇತ್ಯಾದಿ ಬಿಲ್ಗಳನ್ನು ಭರಿಸಲೇಬೇಕು. ಭರಿಸಲು ಮಾಲೀಕರಲ್ಲಿ ಈಗ ಅಷ್ಟೊಂದು ಹಣವಿಲ್ಲ.
ಸಿನಿಮಾ ಬಿಡುಗಡೆಯಾಗಿ, ಥಿಯೇಟರ್ ಚಾಲನೆಯಲ್ಲಿರುತ್ತಿದ್ದರೆ, ಎಲ್ಲವೂ ಸರಿಯಾಗಿರುತ್ತಿತ್ತು. ಆದರೆ, ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಹೀಗಾಗಿಯೇ, ಚಿತ್ರಮಂದಿರಗಳನ್ನು ಮುಚ್ಚುವುದರ ಜೊತೆಗೆ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಮಾಲೀಕರು ಬಂದಿದ್ದಾರೆ ಎನ್ನಲಾಗಿದೆ. ಅದೇನೆ ಇರಲಿ, ವರ್ಷಾನುಗಟ್ಟಲೆ ರಂಜಿಸಿದ್ದ ಚಿತ್ರಮಂದಿರಗಳು ಹೀಗೆ ದಿಢೀರನೆ ಮುಚ್ಚುತ್ತವೆ ಅಂದಾಗ, ಎಂಥವರಿಗೂ ಬೇಸರ ಇದ್ದೇ ಇರುತ್ತೆ. ಸಿನಿರಸಿಕರಿಗಂತೂ ಚಿತ್ರಮಂದಿರಗಳ ಮೇಲೆ ಪ್ರೀತಿ ಇದ್ದೇ ಇರುತ್ತೆ. ಅದರಲ್ಲೂ ಚಿತ್ರಮಂದಿರವನ್ನು ಸ್ವಚ್ಛವಾಗಿಟ್ಟುಕೊಂಡು, ಪ್ರತಿ ದಿನ ಬರುವ ಪ್ರೇಕ್ಷಕರನ್ನು ಅಷ್ಟೇ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಕೂಡ ಈಗ ಅಕರಶಃ ಬೀದಿಪಾಲು. ಇದಕ್ಕೊಂದು ಪರಿಹಾರ ಇದೆಯಾ? ಗೊತ್ತಿಲ್ಲ. ಅದನ್ನು ಚಿತ್ರಮಂದಿರ ಮಾಲೀಕರೇ ನಿರ್ಧರಿಸಬೇಕು, ಚಿತ್ರಮಂದಿರ ಪಾಲಿಗೆ ಒಳ್ಳೆಯ ದಿನಗಳು ಬರಬೇಕು ಅನ್ನುವುದು “ಸಿನಿಲಹರಿ” ಆಶಯ.