ಸ್ಟಾರ್ಸ್‌ ಬರಬೇಕು, ಸಿನ್ಮಾ ರಥ ಸಾಗಬೇಕು‌ !

ಉತ್ಸಾಹದಲ್ಲಿ ಕನ್ನಡ ಚಿತ್ರರಂಗ

 

ಚಿತ್ರಮಂದಿರಕ್ಕೆ ಸ್ಟಾರ್ಸ್‌ ಸಿನಿಮಾಗಳು ಬರುವ ಮೂಲಕ ಸಿನಿರಸಿಕರನ್ನು ಕರೆತರುವ ಅಗತ್ಯವಿದೆ. ಆದರೆ, ಮೊದಲು ಚಿತ್ರಮಂದಿರಕ್ಕೆ ಬರುವ ಧೈರ್ಯ ಯಾರು ಮಾಡುತ್ತಾರೆ ಅನ್ನೋದು ಮುಖ್ಯ. ಸ್ಟಾರ್ಸ್‌ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿರುತ್ತೆ. ಅವರು ಬಿಡುಗಡೆಗೆ ರೆಡಿಯಾಗಿರುವ ತಮ್ಮ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಮನಸ್ಸು ಮಾಡಿ, ಬಿಡುಗಡೆ ಮಾಡಿದ್ದಲ್ಲಿ, ಫ್ಯಾನ್ಸ್‌ ಸಿನಿಮಾ ನೋಡೋಕೆ ಬರುತ್ತಾರೆ.

ಸದ್ಯ ಕನ್ನಡ ಚಿತ್ರರಂಗ ಇದೀಗ ಗರಿಗೆದರಿದೆ. ಹೌದು, ಸತತ ಎಂಟು ತಿಂಗಳು ಕಾಲ ಕೊರೊನಾ ಹಾವಳಿಯಿಂದ ತತ್ತರಿಸಿದ್ದ ಚಿತ್ರರಂಗ, ಈಗ ಮೆಲ್ಲನೆ ತನ್ನ ಕಾರ್ಯಚಟುವಟಿಕೆಯಲ್ಲಿ ನಿರತವಾಗಿದೆ. ಎಂದಿನ ಉತ್ಸಾಹದಲ್ಲೇ ಸಿನಿಮಾ ಮಂದಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಸಂಪೂರ್ಣವಾಗಿ ಬೇಸತ್ತಿದ್ದ ಸ್ಯಾಂಡಲ್‌ವುಡ್‌ಗೆ ಈಗ ಮತ್ತದೇ ಕಳೆ ಬಂದಿದೆ. ಹೌದು, ಚಿತ್ರರಂಗದ ತನ್ನ ವೇಗ ಹೆಚ್ಚಿಸಿಕೊಂಡಿದೆ. ಪ್ರತಿನಿತ್ಯ ಎಂದಿನಂತೆ ಹಲವು ಸಿನಿಮಾಗಳು ತಮ್ಮ ಚಿತ್ರೀಕರಣ ನಡೆಸುತ್ತಿವೆ. ಸ್ಟಾರ್ಸ್‌ ಸಿನಿಮಾಗಳು ಸೇರಿದಂತೆ ಹೊಸಬರ ಚಿತ್ರಗಳು ಕೂಡ ಸೆಟ್ಟೇರಿವೆ. ಹಲವು ಹೊಸ ಪ್ರತಿಭೆಗಳು ಹೊಸ ಕನಸುಗಳೊಂದಿಗೆ ಗಾಂಧಿನಗರಕ್ಕೆ ಎಂಟ್ರಿಯಾಗುತ್ತಿವೆ. ಮತ್ತದೇ ಹುರುಪು, ಹುಮ್ಮಸ್ಸಿನೊಂದಿಗೆ ಸಿನಿಮಾ ಚಟುವಟಿಕೆಗಳು ಜೋರಾಗಿವೆ. ಅದೇನೆ ಇರಲಿ, ಈಗ ಸ್ಯಾಂಡಲ್‌ವುಡ್‌ಗೆ ಮೊದಲಿನ ಕಳೆ ಬಂದಿದೆ. ನೋವು, ದುಃಖ, ಸಂಕಷ್ಟ, ಒದ್ದಾಟಗಳೆಲ್ಲವನ್ನೂ ಬದಿಗೊತ್ತಿರುವ ಸಿನಿಮಾ ಮಂದಿ ಕಲರ್‌ಫುಲ್‌ ಕನಸಿನೊಂದಿಗೆ ಸಿನಿಮಾ ಕೆಲಸಗಳಿಗೆ ಕೈ ಹಾಕಿದ್ದಾರೆ.

 

ಮುಹೂರ್ತ ಕಂಡಿದ್ದು ಇಪ್ಪತ್ತುಕ್ಕೂ ಹೆಚ್ಚು ಸಿನಿಮಾಗಳು

ಹೌದು, ಹಾಗೇ ನೋಡಿದರೆ, ಕನ್ನಡ ಚಿತ್ರರಂಗ ಪರಭಾಷೆ ಸಿನಿಮಾಗಳಿಗೆ ಹೋಲಿಸಿದರೆ ಕಡಿಮೇ ಏನಿಲ್ಲ. ಕಳೆದ ಎರಡು-ಮೂರು ವರ್ಷಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿನ ಚಿತ್ರಗಳ ಸಂಖ್ಯೆಗೇನೂ ಕಮ್ಮಿ ಇಲ್ಲ. ವರ್ಷಕ್ಕೆ ೧೨೦ ರಿಂದ ೧೩೦ರವರೆಗೆ ಸಿನಿಮಾಗಳು ಬಿಡುಗಡೆ ಕಾಣುತ್ತಿದ್ದವು. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆಯೂ ಹೌದು. ೨೦೨೦ರಲ್ಲಿ ಕೊರೊನಾ ಹಾವಳಿ ಇರದೇ ಹೋಗಿದ್ದರೆ, ನಿಜಕ್ಕೂ ಈ ಬಾರಿ ಸಿನಿಮಾ ಬಿಡುಗಡೆಯ ಸಂಖ್ಯೆ ೧೫೦ ದಾಟುತ್ತಿತ್ತು. ಇದರಲ್ಲಿ ಯಾವುದೇ ಅನುಮಾನ ಬೇಡ. ಇಷ್ಟಾದರೂ, ಸಿನಿಮಾರಂಗ ತನ್ನ ಉತ್ಸಾಹ ಕಳೆದುಕೊಳ್ಳದೆ, ಮತ್ತದೇ ದಿನಗಳನ್ನು ನೆನಪಿಸುವತ್ತ ಹೊರಟಿದೆ ಎಂಬುದೇ ವಿಶೇಷ.

ಇನ್ನು, ಲಾಕ್‌ಡೌನ್‌ ತೆರವುಗೊಳ್ಳುತ್ತಿದ್ದಂತೆಯೇ, ಸಾಕಷ್ಟು ಹೊಸಬರ ಚಿತ್ರಗಳು ಸೆಟ್ಟೇರಿವೆ ಎಂಬುದು ವಿಶೇಷತೆಗಳಲ್ಲೊಂದು. ಹೊಸಬರು ಹಾಗು ಹಳಬರು ಸೇರಿದಂತೆ ಸುಮಾರು ೨೦ಕ್ಕೂ ಹೆಚ್ಚು ಚಿತ್ರಗಳಿಗೆ ಮುಹೂರ್ತ ನಡೆಸಿದ್ದಾರೆ. ಇವು ಲೆಕ್ಕಕ್ಕೆ ಇಡಬಹುದಾದ ಸಂಖ್ಯೆಯಾದರೂ, ಗೊತ್ತಿಲ್ಲದೆಯೇ ಶುರುಮಾಡಿರುವ ಹೊಸಬರ ಚಿತ್ರಗಳ ಸಂಖ್ಯೆ ಕೂಡ ಇದೆ. ಇನ್ನು, ಅನೇಕರು ಸದ್ದಿಲ್ಲದೆಯೇ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. ಇನ್ನೂ ಕೆಲವರು, ಕಡಿಮೆ ಅವಧಿಯಲ್ಲೇ ಚಿತ್ರಗಳನ್ನು ಮುಗಿಸಿರುವುದೂ ಉಂಟು. ಕೆಲವರು ಸ್ಕ್ರಿಪ್ಟ್‌ ಪೂಜೆ ಮಾಡಿ, ಚಿತ್ರಕಥೆಯಲ್ಲಿ ತೊಡಗಿಕೊಂಡರೆ, ಇನ್ನು ಕೆಲವರು ಬಿಡುಗಡೆ ತಯಾರಿಯಲ್ಲಿದ್ದಾರೆ. ಮತ್ತಷ್ಟು ಮಂದಿ ತಮ್ಮ ಕಥೆಗಳಿಗೆ ಸರಿಹೊಂದುವ ನಾಯಕರ ಡೇಟ್‌ ಹೊಂದಿಸಲು ಓಡಾಟ ನಡೆಸುತ್ತಿದ್ದಾರೆ. ಇದೇ ವೇಗದಲ್ಲಿ ಸಿನಿಮಾ ಮಂದಿ ತಮ್ಮ ಉತ್ಸಾಹ ತೋರಿದ್ದಲ್ಲಿ, ಡಿಸೆಂಬರ್‌ ಅಂತ್ಯದ ಒಳಗೆ ಇನ್ನೂ ಇಪ್ಪತ್ತಕ್ಕೂ ಹೆಚ್ಚು ಹೊಸ ಚಿತ್ರಗಳು ಸೆಟ್ಟೇರುವುದರಲ್ಲಿ ಯಾವುದೇ ಅನುಮಾನವಿಲ್ಲ.

 

ಪ್ರಚಾರ ಶುರುವಿಟ್ಟುಕೊಂಡ ಚಿತ್ರತಂಡ

ಇವೆಲ್ಲದರ ನಡುವೆ ಹೊಸ ಬೆಳವಣಿಗೆ ಅಂದರೆ, ಬಿಡುಗಡೆ ಮಾಡಲು ಸಜ್ಜಾಗುತ್ತಿರುವ ಚಿತ್ರಗಳು, ಮೆಲ್ಲನೆ ತಮ್ಮ ಪ್ರಚಾರ ಶುರುವಿಟ್ಟುಕೊಂಡಿವೆ. ಈಗಾಗಲೇ ಕೆಲವು ಸಿನಿಮಾಗಳು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಸಿನಿಮಾಗಳ ಕುರಿತು ಸಂಪೂರ್ಣ ವಿವರ ಕೊಡುತ್ತಿದ್ದಾರೆ. ಇನ್ನು, ಕೆಲವು ಸಿನಿಮಾಗಳು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸಿದ್ದು, ಮೊದಲ ಪೋಸ್ಟರ್‌, ಟೀಸರ್‌, ಟ್ರೇಲರ್‌, ಆಡಿಯೋ ಹೀಗೆ ಒಂದಷ್ಟು ವಿಶೇಷತೆಗಳನ್ನು ಆನ್‌ಲೈನ್‌ ಮೂಲಕ ಬಿಡುಗಡೆ ಮಾಡಿ, ತಮ್ಮ ಸಿನಿಮಾಗಳ ಬಗ್ಗೆ ಪ್ರಚಾರ ಮಾಡುತ್ತಿವೆ.

ಚಿತ್ರಮಂದಿರಕ್ಕೆ ಬರಲು ಸಜ್ಜು

ಇದರೊಂದಿಗೆ ಚಿತ್ರಮಂದಿರಕ್ಕೆ ಬರಲು ಆನೇಕ ಚಿತ್ರಗಳು ತಯಾರಿಯನ್ನೂ ನಡೆಸಿವೆ. ಅಕ್ಟೋಬರ್‌ 15ರಿಂದ ಚಿತ್ರಮಂದಿರಗಳು ಬಾಗಿಲು ತೆರೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಒಂದಷ್ಟು ಸಿನಿಮಾಗಳು ಮರುಬಿಡುಗಡೆಯಾಗಿದ್ದೂ ಇದೆ. ಕೆಲವು ಸಿನಿಮಾಗಳು ನೇರ ಅಮೆಜಾನ್‌ ಮೂಲಕವೂ ಬಿಡುಗಡೆ ಕಂಡಿವೆ. ಈಗ ಮಲ್ಟಿಪ್ಲೆಕ್ಸ್‌ ಹಾಗೂ ಚಿತ್ರಮಂದಿರಗಳಿಗೆ ಬರಲು ಒಂದಷ್ಟು ಸಿನಿಮಾಗಳು ತಯಾರಿ ನಡೆಸಿವೆ ಎಂಬುದೇ ಸಮಾಧಾನದ ವಿಷಯ.

ಸ್ಟಾರ್ಸ್‌ ಸಿನ್ಮಾ ಬರಲೇಬೇಕು…

ಚಿತ್ರರಂಗದಲ್ಲಿ ಮೊದಲಿನಂತೆ ಉತ್ಸಾಹ ಬರುವುದಕ್ಕೆ ಸ್ಟಾರ್ಸ್‌ ಸಿನಿಮಾಗಳು ಈಗ ಬರಲೇಬೇಕಿದೆ. ಹೌದು, ಚಿತ್ರಮಂದಿರಕ್ಕೆ ಸ್ಟಾರ್ಸ್‌ ಸಿನಿಮಾಗಳು ಬರುವ ಮೂಲಕ ಸಿನಿರಸಿಕರನ್ನು ಕರೆತರುವ ಅಗತ್ಯವಿದೆ. ಆದರೆ, ಮೊದಲು ಚಿತ್ರಮಂದಿರಕ್ಕೆ ಬರುವ ಧೈರ್ಯ ಯಾರು ಮಾಡುತ್ತಾರೆ ಅನ್ನೋದು ಮುಖ್ಯ. ಸ್ಟಾರ್ಸ್‌ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿರುತ್ತೆ. ಅವರು ಬಿಡುಗಡೆಗೆ ರೆಡಿಯಾಗಿರುವ ತಮ್ಮ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಮನಸ್ಸು ಮಾಡಿ, ಬಿಡುಗಡೆ ಮಾಡಿದ್ದಲ್ಲಿ, ಫ್ಯಾನ್ಸ್‌ ಸಿನಿಮಾ ನೋಡೋಕೆ ಬರುತ್ತಾರೆ. ಸಹಜವಾಗಿಯೇ ಚಿತ್ರಮಂದಿರಗಳು ಕೂಡ ಒಂದಷ್ಟು ಚೈತನ್ಯ ಪಡೆದುಕೊಳ್ಳುತ್ತವೆ. ಅದಾದ ಬಳಿಕ ಹೊಸಬರು ಕೂಡ ತಮ್ಮ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಮನಸ್ಸು ಮಾಡುತ್ತಾರೆ. ಎಂದಿನಂತೆ ಚಿತ್ರರಂಗ ಕೂಡ ಎಂದಿನಂತೆ ಕಲರ್‌ಫುಲ್‌ ಆಗಿಯೇ ಸಾಗಲಿದೆ. ಸ್ಟಾರ್ಸ್‌ ಸಿನಿಮಾಗಳ ಬಿಡುಗಡೆಯನ್ನು ಪ್ರೇಕ್ಷಕ ಈಗ ಎದುರು ನೋಡುತ್ತಿರುವುದಂತೂ ಸತ್ಯ.

Related Posts

error: Content is protected !!