ಲವ್ ಬರ್ಡ್ ಗೆ ಸಿಕ್ಕಿತು ಲವ್ ಮಾಕ್ಟೆಲ್ ಎಂಬ ಸ್ವೀಟ್ ಕಾಕ್ಟೆಲ್

ಇಡೀ ಜಗತ್ತಿನ ಪಾಲಿಗೆ 2020 ಮರೆಯಲಾಗದ ವರ್ಷ.ಕೊರೋನಾ ಬಂದು ಇಡೀ ವಿಶ್ವವೇ ಅಲ್ಲೋಲ ಕಲ್ಲೋಲ ಆಯ್ತು. ಆದರೂ ಕೆಲವರಿಗೆ ಇದು ವರವೂ ಆಯ್ತು. ಮುಖೇಶ್ ಅಂಬಾನಿ ಮನೆಯಲ್ಲೇ ಕುಳಿತು ದಿನಕ್ಕೆ 80 ಕೋಟಿ ದುಡಿದರೂ ಅಂತ ಸುದ್ದಿ ಬಂತು. ಇದೊಂಥರ ಲಕ್. ಈ ವರ್ಷದಲ್ಲಿ ಇಂತಹ ಅದೃಷ್ಟ ಕಂಡವರು ನಟಿ ಮಿಲನಾ ನಾಗಾರಾಜ್ ಕೂಡ ಒಬ್ಬರು.

ಅವಕಾಶಕ್ಕಾಗಿ ಕಾಯುತ್ತಿದ್ದರು !
‘ನಮ್ ದುನಿಯಾ ನಮ್ ಸ್ಟೈಲ್ ‘ ಮೂಲಕ ಚೆಂದನವನಕ್ಕೆ ಬಂದ ನಟಿ ಮಿಲನಾ ನಾಗರಾಜ್. ನಟಿಯಾಗುವ ಮೊದಲು ಅಥ್ಲಿಟ್ ಆಗಿ ಹೆಸರು ಮಾಡಿದವರು. ಕ್ರೀಡೆಯಿಂದ ಸಿನಿಮಾ ಕಡೆ ಮುಖ ಮಾಡಿದರು. ಆದರೆ ಸಿನಿಮಾ ಬದುಕು ಅವರಂದು ಕೊಂಡಷ್ಟು ಸುಲಭ ಇರಲಿಲ್ಲ. ಬದಲಿಗೆ ಅವಕಾಶಗಳಿಗೇ ಇಲ್ಲಿ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಎದುರಿಸಿದರು. ಅವಕಾಶ ಸಿಕ್ಕರೂ ಗಟ್ಟಿ ನೆಲೆ ಕಾಣಲು ಒಂದು ಸಕ್ಸಸ್ ಅನ್ನೋದು ಸಿಗಲಿಲ್ಲ. ಗೆಲುವಿಗಾಗಿ ಐದಾರು ವರ್ಷ ಸೈಕಲ್ ಹೊಡೆದರು. ಆ್ಯಡ್ ಶೂಟ್ ಗಳಲ್ಲಿ ಕಾಣಿಸಿಕೊಂಡರು.ಸಾಲದೆಂಬಂತೆ ಪರಭಾಷೆಗಳಿಗೂ ಹೋಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಫಲ ಸಿಗಲಿಲ್ಲ.

ಇನ್ನೇನು ಮನೆಯಲ್ಲೇ ಕೂರಬೇಕೆನೋ ಎನ್ನುವ ಹೊತ್ತಿಗೆ ಪವಾಡವೇ ನಡೆದು ಹೋಯಿತು. 2020 ಕ್ಕೆ ದೊಡ್ಡ ಗೆಲುವು ಕಾಣುವ ಯೋಗವಿತ್ತೇನೋ . ಈ ವರ್ಷ ದೊಡ್ಡ ಗೆಲುವು ಸಿಕ್ಕಿತು. ಅದು ಅವರ ಇದುವರೆಗಿನ ಪಯಣದ ನೋವು ಮರೆಸಿ, ನಟಿಯಾಗಿ ಮೆರೆಸಿದೆ.

ಲವ್ ಮಾಕ್ಟೆಲ್ ಬರಬೇಕಾಯಿತು !
2020 ಕನ್ನಡ ಚಿತ್ರರಂಗವನ್ನು ಬಹುವಾಗಿ ಕಾಡಿಸಿದ ವರ್ಷ. ಚಿತ್ರರಂಗ ಎಂದೂ ಕಂಡರಿಯದ ಹಾಗೆ, ಚಿತ್ರೋದ್ಯಮ ಬಂದ್ ಆಯ್ತು. ಸಿನಿಮಾ ಟಾಕೀಸ್ ಗಳು ಬಾಗಿಲು ಮುಚ್ಚಿದವು. ಇಷ್ಟಾಗಿಯೂ ಚಿತ್ರರಂಗದ ಇತಿಹಾಸಕ್ಕೆ ದಾಖಲಾಗುವ ಹಾಗೆ ಎರಡು ಚಿತ್ರಗಳು ಸಕ್ಸಸ್ ಕಂಡವು. ಆ ಎರಡರ ಪೈಕಿ ಲವ್ ಮಾಕ್ಟೆಲ್ ಚಿತ್ರವೂ ಒಂದು. ಈ ಮೂಲಕ ಸ್ಟಾರ್ ನಟಿ ಅಂತ ಗುರುತಿಸಿಕೊಂಡಿದ್ದು ನಟಿ ಮಿಲನಾ ನಾಗರಾಜ್.

ಈ ಚಿತ್ರವುಚಿತ್ ಮಂದಿರಗಳಲ್ಲೇ ದೊಡ್ಡ ಹವಾ ಸೃಷ್ಟಿಸಿದ್ದು ಮಾತ್ರವಲ್ಲ, ಟಿವಿ ರೈಟ್ಸ್ ಜತೆಗೆ ಡಿಜಿಟಲ್ ಹಕ್ಕುಗಳು ಕೂಡ ಅತ್ಯಧಿಕ ಬೆಲೆ ಮಾರಾಟವಾದವು. ನಿರ್ಮಾಣದ ಜತೆಗೆ ಚಿತ್ರದ ಕಲಾವಿದರಾದ ಮದರಂಗಿ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೇಬು ತುಂಬ ಕಾಂಚಣ ಕಂಡರು. ಸಕ್ಸಸ್ ಕಾಣದೆ ನೊಂದಿದ್ದ ಮಿಲನಾ ನಾಗರಾಜ್, ಭರ್ಜರಿ ಗೆಲವು ಕಂಡು ಸಂಭ್ರಮಪಟ್ಟರು. ಮತ್ತೊಂದೆಡೆ ನಿರ್ಮಾಪಕಿ ಆಗಿಯೂ ಭರ್ಜರಿ ಹಣ ಸಂಪಾದಿಸಿದ್ದು ತಮಾಷೆ ಅಲ್ಲ. ಡಬಲ್ ಧಮಾಕಾ ಅಂತಾರಲ್ಲ, ಹಾಗೆ.

ಮತ್ತೊಂದು ಲವ್ ಮಾಕ್ಟೆಲ್ ರೆಡಿ ಆಯ್ತು!
ಒಂದು ಚಿತ್ರದ ಸಕ್ಸಸ್ ಬಹಳಷ್ಟು ಜನರ ಹಣೆ ಬರಹ ಬರೆಯುತ್ತೆ. ಅದು ಚಿತ್ರರಂಗದ ಇತಿಹಾಸ. ಲವ್ ಮಾಕ್ಟೆಲ್ ಕೂಡ ಅಷ್ಟೇನೆ. ಮದರಂಗಿಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ಬಹು ದಿನಗಳಿಂದ ಗೆಲುವಿಗಾಗಿ ಕಾದಿದ್ದವರು. ಈಗ ಲವ್ ಮಾಕ್ಟೆಲ್ ಚಿತ್ರದ ಗೆಲುವು ಇವರಿಬ್ಬರನ್ನು ಬಹು ಎತ್ತರಕ್ಕೇರಿಸಿದೆ. ಗೆದ್ದ ಖುಷಿಯಲ್ಲೇ ಈ ಜೋಡಿ ಲವ್ ಮಾಕ್ಟೆಲ್ ೨ ಶುರು ಮಾಡಿತು. ಅದರ ಜತೆಗೆ ಖಾಸಗಿ ಬದುಕಲ್ಲೂ ಜೋಡಿ ಆಗುತ್ತಿರುವ ಖುಷಿ ರಿವೀಲ್ ಮಾಡಿತು. ಅದರ ಜತೆಗೆಯೇ ಮದರಂಗಿಕೃಷ್ಣ ಬೇಡಿಕೆಯ ನಟರಾದರು. ಇದೆಲ್ಲ ಲವ್ ಮಾಕ್ಟೆಲ್ ಪ್ರಭಾವ. ಒಂದು ದೊಡ್ಡ ಗೆಲುವಿನೊಂದಿಗೆ ಭಾಗ 2 ಮೂಲಕ ತೆರೆಮೇಲೆ ಬರುವ ತವಕ ಮಿಲನಾ ನಾಗರಾಜ್ ಹಾಗೂ ಮದರಂಗಿಕೃಷ್ಣ ಅವರದು. ಇನ್ನು ಪ್ರೇಕ್ಷಕರಿಗೆ ಆ ಚಿತ್ರ ಹೇಗೆ ಬರುತ್ತೆ ಎನ್ನುವ ಕುತೂಹಲ. ಆಲ್ ದಿ ಬೆಸ್ಟ್ ಮಿಲನಾ ನಾಗಾರಾಜ್.




