ಲವ್‌ ಹಾಸ್ಟೆಲ್‌ನಲ್ಲಿ ನಿಂತ ಶಾರುಖ್!

ಹೊಸ ಸಿನ್ಮಾ ನಿರ್ಮಾಣಕ್ಕೆ ಕೈ ಹಾಕಿದ ಬಾಲಿವುಡ್‌ ಬಾದ್‌ಶಾ

ಶಾರುಖ್‌ಖಾನ್‌ ಸದ್ಯಕ್ಕೆ ಐಪಿಎಲ್‌ ಪಂದ್ಯಾವಳಿಯಲ್ಲೇ ಬಿಝಿಯಾಗಿದ್ದಾರೆ. ಅಷ್ಟಕ್ಕೂ ಅವರ ಮುಂದಿನ ಸಿನಿಮಾ ಯಾವುದು ಅನ್ನುವುದಕ್ಕೆ ಇದುವರೆಗೆ ಉತ್ತರವಿರಲಿಲ್ಲ. ಇದೀಗ ಅವರೇ ಸ್ವತಃ ಹೊಸ ಚಿತ್ರ ಮಾಡುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಹೌದು, ಬಾಲಿವುಡ್‌ ನಟ ಶಾರುಖ್‌ ಖಾನ್‌ ಕಳೆದ ಎರಡು ವರ್ಷಗಳಿಂದಲೂ ಯಾವುದೇ ಸಿನಿಮಾ ಘೋಷಣೆ ಮಾಡಿರಲಿಲ್ಲ. ತಮ್ಮ ಬಹು ಕನಸಿನ “ಜೀರೋ” ಸಿನಿಮಾ ನಂತರ ಹೊಸದೊಂದು ಮ್ಯಾಜಿಕ್‌ ಆಗುತ್ತೆ ಅಂದುಕೊಂಡಿದ್ದರು. ಆದರೆ, ಅವರು ಅಂದುಕೊಂಡಂತಹ ದೊಡ್ಡ ಮ್ಯಾಜಿಕ್‌ ನಡೆಯಲೇ ಇಲ್ಲ. “ಜೀರೋ” ಕೂಡ ಪ್ರೇಕ್ಷಕ ಪ್ರಭುವಿನ ಮನಸ್ಸನ್ನು ತಟ್ಟಲಿಲ್ಲ. ಹಾಗಾಗಿ ಅವರು ಈಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಹಾಗಂತ ಶಾರುಖ್‌ ಖಾನ್‌ ಅವರು ನಟಿಸುತ್ತಿದ್ದಾರಾ? ಈ ಪ್ರಶ್ನೆಗೆ ಉತ್ತರ, ಖಂಡಿತ ಇಲ್ಲ. ಅವರು ತಮ್ಮ ರೆಡ್‌ ಚಿಲ್ಲಿಸ್‌ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ಹೊಸದೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಎಂಬುದು ಸುದ್ದಿ.

 

ಆ ಸಿನಿಮಾಗೆ “ಲವ್‌ ಹಾಸ್ಟೆಲ್‌” ಎಂಬ ಹೆಸರನ್ನಿಡಲಾಗಿದೆ. ಅಂದಹಾಗೆ, “ಲವ್‌ ಹಾಸ್ಟೆಲ್‌” ಕ್ರೈಂ ಥ್ರಿಲ್ಲರ್‌ ಕಥೆ ಹೊಂದಿದೆ. ಈ ಚಿತ್ರಕ್ಕೆ ಶಂಕರ್‌ ರಾಮನ್‌ ನಿರ್ದೇಶನವಿದೆ. ಗೌರಿ ಖಾನ್‌ ಮತ್ತು ಮನೀಶ್‌ ಮುಂದ್ರ, ಗೌರವ್‌ ವರ್ಮಾ ಅವರು ಜೊತೆಗೂಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಹೊಸ ಚಿತ್ರದಲ್ಲಿ ಸನ್ಯ ಮಲ್ಹೋತ್ರ, ವಿಕ್ರಾಂತ್ ಮಸ್ಸಿ, ಮತ್ತು ಬಾಬಿ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಮುಂದಿನ ವರ್ಷ ಶುರುವಾಗಲಿದ್ದು, ವರ್ಷದ ಅಂತ್ಯದಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ.
ಹಾಗಾದರೆ, ಶಾರುಖ್‌ಖಾನ್‌ ನಟಿಸೋದು ಯಾವಾಗ? ಅವರ ಮುಂದಿನ ಚಿತ್ರ ಯಾವುದು? ಇದಕ್ಕಿನ್ನೂ ಉತ್ತರವಿಲ್ಲ. ಆದರೆ, ತಮಿಳು ನಿರ್ದೇಶಕ ಅಟ್ಲಿ ಹಾಗೂ ರಾಜ್‌ಕುಮಾರ್‌ ಹಿರಾನಿ ಮತ್ತು ಸಿದ್ಧಾರ್ಥ್‌ ಆನಂದ ನಿರ್ದೇಶಕರ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕಿನ್ನೂ ಸ್ಪಷ್ಟತೆ ಇಲ್ಲ.

Related Posts

error: Content is protected !!