ಗುಡ್‌ ಗುಡ್ಡರ್‌ ಗುಡ್ಡೆಸ್ಟ್…!‌ ವಿನೂತನ ಚಿತ್ರ

ಹೊಸಬರ ಹೊಸ ಪ್ರಯತ್ನ, ಪ್ರಯೋಗ

ನಿರ್ದೇಶಕ ಸಂದೀಪ್‌ ಬಿ.ಹೆಚ್

ಕನ್ನಡ ಚಿತ್ರರಂಗ ಇದೀಗ ಗರಿಗೆದರಿದೆ. ಕಳೆದ ಏಳೆಂಟು ತಿಂಗಳಿನಿಂದಲೂ ಕೊರೊನಾ ಹೊಡೆತಕ್ಕೆ ಮೆತ್ತಗಾಗಿದ್ದ ಚಿತ್ರರಂಗ ಇದಿಗ ಪುನಃ ಪುಟಿದೇಳುತ್ತಿದೆ. ಹೌದು, ಕೊರೊನಾ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದ ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಕಳೆದ ಅಕ್ಟೋಬರ್ ಎರಡನೇ ವಾರದಿಂದ‌ ಕೆಲವು ಚಿತ್ರಗಳು ಮರುಬಿಡುಗಡೆಯಾಗುವ ಮೂಲಕ ಚಿತ್ರಮಂದಿರಕ್ಕೆ ಬರಲು ನಾವ್‌ ರೆಡಿ ಎಂಬುದನ್ನು ಸಾಬೀತುಪಡಿಸಿವೆ. ಅದಕ್ಕೆ ತಕ್ಕಂತೆ ಸಿನಿಮಾ ಪ್ರೇಕ್ಷಕರು ಕೂಡ ಸಿನಿಮಾರಂಗದ ಬೆನ್ನುತಟ್ಟುವ ಕೆಲಸ ಮಾಡಿದ್ದಾರೆ. ಹಾಗೆ ನೋಡಿದರೆ, ಸ್ಟಾರ್‌ ನಟರ ಜೊತೆ ಸಾಕಷ್ಟು ಹೊಸಬರ ಚಿತ್ರಗಳು ಸೆಟ್ಟೇರಿವೆ ಎಂಬುದು ವಿಶೇಷ. ಇನ್ನೂ ಒಂದಷ್ಟು ಹೊಸಬರ ಚಿತ್ರಗಳು ಈ ವರ್ಷವೇ ಸೆಟ್ಟೇರಲು ಸಜ್ಜಾಗಿವೆ. ಕೆಲ ಚಿತ್ರಗಳು ಶೀರ್ಷಿಕೆ ಅನಾವರಣ ಮಾಡಲು ತಯಾರು ನಡೆಸಿವೆ. ಆ ಸಾಲಿಗೆ ಸಂದೀಪ್‌ ಬಿ.ಹೆಚ್.‌ ನಿರ್ದೇಶನದ ಹೊಸ ಸಿನಿಮಾವೂ ಒಂದು. ಅವರು ತಮ್ಮ ಚಿತ್ರಕ್ಕೆ ಹೊಸ ಬಗೆಯ ಶೀರ್ಷಿಕೆ ಇಟ್ಟಿದ್ದಾರೆ ಅನ್ನೋದೇ ವಿಶೇಷತೆಗಳಲ್ಲೊಂದು. ಇನ್ನೊಂದು ವಿಶೇಷವೆಂದರೆ, ನವೆಂಬರ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ, ಶುಭ ಹಾರೈಸಲಿದ್ದಾರೆ.

 

ನಿರ್ಮಾಪಕ ಸುರೇಶ್‌ ಬಿ.

ಗ್ರಾಮರ್‌ ಮತ್ತು ಗ್ಲಾಮರ್
ಅಷ್ಟಕ್ಕೂ ಸಂದೀಪ್‌ ತಮ್ಮ ನಿರ್ದೇಶನದ ಚಿತ್ರಕ್ಕೆ ಇಟ್ಟುಕೊಂಡಿರುವ ಹೆಸರೇನು ಗೊತ್ತಾ? “ಗುಡ್‌ ಗುಡ್ಡರ್‌ ಗುಡ್ಡೆಸ್ಟ್”.‌ ಈ ಶೀರ್ಷಿಕೆ ನೋಡಿದಾಕ್ಷಣ, ವಿಭಿನ್ನ ಎನಿಸದೇ ಇರದು. ಕಥೆಗೆ ಪೂರಕವಾಗಿಯೇ ಈ ಶೀರ್ಷಿಕೆ ಇಟ್ಟಿದ್ದಾರಂತೆ ಸಂದೀಪ್.‌ ತಮ್ಮ ಶೀರ್ಷಿಕೆ ಕುರಿತು ನಿರ್ದೇಶಕ ಸಂದೀಪ್‌ ಹೇಳುವುದಿಷ್ಟು. “ಗ್ರಾಮೀಣ ಭಾಗದಲ್ಲಿ ಗ್ರಾಮರ್‌ ಬರದಂತಹ ಹುಡುಗರು ಮಾಡುವ ಜೋಕ್‌ ಇಟ್ಟುಕೊಂಡೇ ಈ ಶೀರ್ಷಿಕೆ ಇಡಲಾಗಿದೆ. ಗುಡ್‌ ಅಂದರೆ ಉತ್ತಮ, ಗುಡ್ಡರ್‌ಗೆ ಅತ್ಯುತ್ತಮ, ಗುಡ್ಡೆಸ್ಟ್‌ಗೆ ಸರ್ವೋತ್ತಮ ಎಂಬ ಅರ್ಥ ಗ್ರಾಮೀಣ ಹುಡುಗರದು. ಕಥೆಯಲ್ಲಿ ಬರುವ ಹಂತಗಳಲ್ಲಿ ಈ ಗ್ರಾಮೀಣ ಗ್ರಾಮರ್‌ ಬಳಕೆಯಾಗಲಿದೆ. ಇಲ್ಲಿ ಬ್ಯಾಡ್‌ ಗ್ರಾಮರ್‌ ಇದ್ದರೂ, ಗ್ರಾಮೀಣದ ಕೆಲ ಹುಡುಗರಿಗೆ ಅದು ಒಂದು ರೀತಿ ಕರೆಕ್ಟ್‌ ಗ್ರಾಮರ್. ಅದನ್ನಿಟ್ಟುಕೊಂಡು ಶೀರ್ಷಿಕೆ ಇಡಲಾಗಿದೆ. ಸಿನಿಮಾ ನೋಡಿದವರಿಗೆ ಶೀರ್ಷಿಕೆ ಕೂಡ ಪೂರಕ ಅನ್ನೋದು ಗೊತ್ತಾಗುತ್ತೆ.‌ ಇನ್ನು, ಗ್ರಾಮರ್‌ ಕುರಿತ ವಿಷಯವಿದ್ದರೂ, ಗ್ಲಾಮರ್‌ಗೂ ಇಲ್ಲಿ ಕಮ್ಮಿ ಇಲ್ಲ. ಗ್ರಾಮರ್‌ ಜೊತೆಯಲ್ಲಿ ಗ್ಲಾಮರ್‌ಗೂ ಇಲ್ಲಿ ಜಾಗವಿದೆ. ಹಾಗಾಗಿ ಗ್ಲಾಮರ್‌ ಎಷ್ಟಿದೆ, ಗ್ರಾಮರ್‌ ಎಷ್ಟಿದೆ ಅನ್ನುವುದನ್ನೂ ಚಿತ್ರದಲ್ಲೇ ನೋಡಬೇಕು. ಅದೇನೆ ಇದ್ದರೂ, ಸಿನಿಮಾ ಗ್ರಾಮರ್‌ ಇಟ್ಟುಕೊಂಡೇ ಸಿನಿಮಾ ಮಾಡುತ್ತಿದ್ದರೂ, ಹೇಳುವ ವಿಷಯದಲ್ಲಿ ಮಾತ್ರ ಸ್ಪಷ್ಟತೆ ಇರಲಿದೆ. ಹೊಸ ಪ್ರಯತ್ನದ ಜೊತೆಯಲ್ಲಿ ಪ್ರಯೋಗವೂ ಇಲ್ಲಿರಲಿದೆ” ಎನ್ನುತ್ತಾರೆ ಸಂದೀಪ್.

 

ಕನಸಿನ ಸಿನಿಮಾ
ಇನ್ನು, ಈ ಚಿತ್ರದ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸುತ್ತಿರುವ ಸಂದೀಪ್‌ ಬಗ್ಗೆ ಹೇಳುವುದಾದರೆ, ಇದು ಇವೆ ಚೊಚ್ಚಲ ನಿರ್ದೇಶನದ ಸಿನಿಮಾ. ಪಕ್ಕಾ ಅನುಭವ ಪಡೆದುಕೊಂಡೇ ಅವರು ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಸರಿ ಸುಮಾರ 17 ವರ್ಷಗಳಿಂದಲೂ ಕನ್ನಡ ಚಿತ್ರರಂಗವನ್ನು ಬಲ್ಲವರು. ಇಷ್ಟು ವರ್ಷಗಳ ಕಾಲ ಪಕ್ವಗೊಂಡು ಈಗ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.
ತಮ್ಮ ಚೊಚ್ಚಲ ಪ್ರಯತ್ನದ ಕುರಿತು “ಸಿನಿ ಲಹರಿʼ ಜೊತೆ ಮಾತನಾಡುವ ನಿರ್ದೇಶಕ ಸಂದೀಪ್‌, “ಇದು ನನ್ನ ಕನಸಿನ ಚಿತ್ರ. ಇಷ್ಟು ವರ್ಷಗಳ ಅನುಭವಗಳನ್ನು ಈ ಸಿನಿಮಾಗೆ ಸುರಿಯುತ್ತಿದ್ದೇನೆ. ನನ್ನ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿರೋದು ನಿರ್ಮಾಪಕರಾದ ಸುರೇಶ ಬಿ. ಅವರಿಗೂ ಇದು ಮೊದಲ ಪ್ರಯತ್ನ. ಅವರಿಗೆ ಪ್ಯಾಷನ್‌ ಇರುವುದರಿಂದಲೇ ಹೊಸ ಬಗೆಯ ಕಥೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟು, ನಮ್ಮಂತಹ ಹೊಸಬರಿಗೆ ಬೆನ್ನು ತಟ್ಟುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಹೇಳುವುದಾದರೆ, ಇದೊಂದು ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರ. ಇದರೊಂದಿಗೆ ರೊಮ್ಯಾನ್ಸ್‌, ಥ್ರಿಲ್ಲರ್‌, ಡ್ರಾಮಾ, ಕ್ರೈಮ್‌, ಸ್ಟಂಟ್ಸ್‌ ಸೇರಿದಂತೆ ಇತ್ಯಾದಿ ಅಂಶಗಳೂ ಸೇರಿವೆ. ಇದು ಒಂದೇ ಜಾನರ್‌ಗೆ ಸೇರುವ ಸಿನಿಮಾವಲ್ಲ. ಹಲವು ಜಾನರ್‌ಗಳ ಸಮ್ಮಿಶ್ರಣವಿದೆ. ಹಾಗಾಗಿ ನನ್ನ ಪ್ರಕಾರ ಇದು ಕನ್ನಡಕ್ಕೆ ಹೊಸ ಪ್ರಯತ್ನ.

 

ಇಲ್ಲಿ ಎಲ್ಲವೂ ವಿಶೇಷ
ಇನ್ನು, ಚಿತ್ರಕಥೆಯೇ ಚಿತ್ರದ ಜೀವಾಳ. ಅದರಲ್ಲೂ ಅದು ವಿಭಿನ್ನವಾಗಿ ಮೂಡಿಬರಲಿದೆ. ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲೂ ಮೂರು ಆ್ಯಕ್ಟ್‌ ಸ್ಟ್ರಕ್ಚರ್ಸ್‌ ಇದ್ದರೆ, ಇಲ್ಲಿ ಆರು ಆ್ಯಕ್ಟ್‌ ಸ್ಟ್ರಕ್ಚರ್ಸ್‌ ಇರಲಿದೆ. ಹೇಗೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಪ್ರಮಖ ಪಾತ್ರಗಳೊಂದಿಗೆ 80 ಕ್ಕೂ ಹೆಚ್ಚು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಆ ಎಲ್ಲಾ ಪಾತ್ರಗಳಿಗೂ ತನ್ನದೇ ಆದಂತಹ ವಿಶೇಷತೆಗಳಿವೆ. ಇನ್ನುಳಿದಂತೆ ರಂಗಶಂಕರ, ನೀನಾಸಂ, ಮಾಲ್ಗುಡಿ ಡೇಸ್‌ನಲ್ಲಿ ಕೆಲಸ ಮಾಡಿದ ಹಿರಿಯ ರಂಗಕಲಾವಿದರು ಇಲ್ಲಿರಲಿದ್ದಾರೆ. ಸುಮಾರು 45 ದಿನಗಳ ಕಾಲ ಬೆಂಗಳೂರಲ್ಲೇ ಚಿತ್ರೀಕರಣ ನಡೆಸುವ ಯೋಚನೆ ಇದೆ” ಎಂದು ವಿವರ ಕೊಡುತ್ತಾರೆ ಸಂದೀಪ್‌ ಬಿ.ಹೆಚ್.‌

ಚಿತ್ರಕ್ಕೆ ನಾಯಕ ಮತ್ತು ನಾಯಕಿಯ ಅಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ತಂತ್ರಜ್ವರ ಆಯ್ಕೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಎಲ್ಲವೂ ಪೂರ್ಣಗೊಂಡ ಬಳಿಕ ಸಿನಿಮಾಗೆ ಚಾಲನೆ ಸಿಗಲಿದೆ.

Related Posts

error: Content is protected !!