ಹೊಸ ಸಿನ್ಮಾ ಖಾತರಿಪಡಿಸಿದ ದುನಿಯಾ ವಿಜಯ್

ಲಕ್ಕಿ ಎಂಬ ಹೊಸ ಪ್ರತಿಭಾವಂತ ಹುಡುಗನಿಗೆ ನಿರ್ದೇಶನ

ಇತ್ತೀಚೆಗಷ್ಟೇ “ಹೊಸ ಲವ್ ನಲ್ಲಿ ದುನಿಯಾ ವಿಜಯ್” ಶೀರ್ಷಿಕೆಯಡಿ ವಿಜಯ್ ಹೊಸದೊಂದು ಕ್ಯೂಟ್ ಲವ್ ಸ್ಟೋರಿ ಸಿನಿಮಾ‌ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಮಾಡಲಾಗಿತ್ತು. ಆ ಕುರಿತು ಸ್ವತಃ “ದುನಿಯಾ”ವಿಜಯ್ ಅವರೇ ” ಸಿನಿ ಲಹರಿ” ಗೆ ಸ್ಪಷ್ಟಪಡಿಸಿದ್ದರು. ಈಗ ಅದಕ್ಕೆ ಪೂರಕವಾಗಿ ವಿಜಯ್ ತಮ್ಮಫೇಸ್ ಬುಕ್ ಖಾತೆಯಲ್ಲಿ ಆ ಬಗ್ಗೆ ಬರೆದುಕೊಂಡಿದ್ದಾರೆ. ಅವರ ಪೂರ್ಣ ಬರಹ ಇಲ್ಲಿದೆ ಓದಿ.

‘ನಟನಾಗಬೇಕು ಎಂಬ ಹಂಬಲದಿಂದ ಅಭಿನಯ ಕಲಿತಿದ್ದ ನನಗೆ ಚಿತ್ರರಂಗ ಪ್ರವೇಶಿಸುವುದು ಕೊಂಚ ಕಷ್ಟದ ಕೆಲಸವಾಗಿತ್ತು. ಆ ಕಷ್ಟವನ್ನು ಮತ್ತೊಂದು ಕಷ್ಟದ ಮೂಲಕವೇ ಜಯಿಸಬೇಕು ಎಂದು ತೀರ್ಮಾನಿಸಿ ಸ್ಟಂಟ್ ಕಲಿತು ಸಾಹಸ ಕಲಾವಿದನಾಗಿ ಚಿತ್ರರಂಗಕ್ಕೆ ಬಂದೆ ನಂತರದ ದಿನಗಳಲ್ಲಿ ಸಾಹಸದ ಜತೆಯಲ್ಲಿ ಒಳ್ಳೊಳ್ಳೆ ಪಾತ್ರಗಳಲ್ಲಿಯೂ ನಟಿಸಲು ಆರಂಭಿಸಿದೆ. ಒಂದಷ್ಟು ದಿನಗಳ ನಂತರ ‘ದುನಿಯಾ’ ಸಿನಿಮಾದ ಮೂಲಕ ನಾಯಕನಾದೆ. ಕನ್ನಡಿಗರು ಅಭಿಮಾನದಿಂದ ತಮ್ಮೆರೆಡು ಕೈಗಳಿಂದ ನನ್ನನ್ನು ಬಾಚಿ ತಬ್ಬಿಕೊಂಡು ಸಿನಿಮಾ ಗೆಲ್ಲಿಸಿದರು. ಜತೆಗೆ ಈ ಹುಡುಗನಲ್ಲಿ ಪ್ರತಿಭೆ ಇದೆ ಎಂದು ಅವರ ಮನಸ್ಸಿನಲ್ಲಿ ನನಗೊಂದು ಸ್ಥಾನವನ್ನು ನೀಡಿದರು.

ಇದೆಲ್ಲವೂ ಒಂದು ಹಂತವಾದರೆ ಕೆಲ ದಿನಗಳ ಹಿಂದೆ ಅಭಿಮಾನಿಗಳ ಆಶೀರ್ವಾದಿಂದಾಗಿ ಸಲಗ ಸಿನಿಮಾವನ್ನು ನಿರ್ದೇಶನ ಮಾಡಲು ನಿರ್ಧಾರ ಮಾಡಿದೆ. ಕೆ ಪಿ ಶ್ರೀಕಾಂತ್, ನಾಗಿ ಮತ್ತು ನನ್ನ ತಂಡ ನೀಡಿದ ಸಾಥ್ ನಿಂದಾಗಿ ಸಲಗ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಹೊಸ ಆಲೋಚನೆಗಳೊಂದಿಗೆ ಹೊಸ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇನೆ. ನಾಯಕನಾಗಿದ್ದವನು ನಿರ್ದೇಶಕನಾದೆ, ಈಗ ಹೊಸಬರೊಂದಿಗೆ ಹೊಸ ಪ್ರಯೋಗಕ್ಕೆ ಇಳಿಯುತ್ತಿದ್ದೇನೆ. ನನ್ನ ‌ಹೊಸ ಕಥೆಗೆ ಲಕ್ಕಿ ಎಂಬ ಹೊಸ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸದ್ಯದಲ್ಲೇ ನಾಯಕಿ ಮತ್ತು ನಿರ್ಮಾಪಕರ್ಯಾರು ಎಂಬುದನ್ನು ಹೇಳುತ್ತೇವೆ.

ನನ್ನ ಈ ಪ್ರಯತ್ನಕ್ಕೆ ಹಿರಿಯರು ನನ್ನ ಸೋದರ ಸಮಾನರಾದ ಶಿವಣ್ಣ, ಗೀತಾಕ್ಕ ಮನಃ ಪೂರ್ವಕವಾಗಿ ಹಾರೈಸಿದ್ದಾರೆ. ನನಗೆ ಬೆನ್ನೆಲುಬಾಗಿ ಸಲಗ ಸಿನಿಮಾದ ನಿರ್ಮಾಪಕರಾದ ಶ್ರೀಕಾಂತ್ ಮತ್ತು ನಾಗಿ ಇದ್ದಾರೆ. ಇವರೆಲ್ಲರ ಜತೆ ನಿಮ್ಮ ಹಾರೈಕೆ , ಆಶೀರ್ವಾದ ನನ್ನ ಪ್ರಯತ್ನಕ್ಕೆ ಬೇಕೇ ಬೇಕು.

ವಿಜಯ ದಶಮಿಯಂದು ನಾಯಕನಾರು ಎಂಬುದನ್ನು ಅನೌನ್ಸ್ ಮಾಡುತ್ತಿದ್ದೇನೆ. ನಮ್ಮ ಇಡೀ ತಂಡಕ್ಕೆ ವಿಜಯ ಸಿಗಲಿ ಎಂದು ನೀವು ಹಾರೈಸಬೇಕು’

-ನಿಮ್ಮವ
ದುನಿಯಾ ವಿಜಯ್.

Related Posts

error: Content is protected !!