ಲೋಕೇಂದ್ರನ ಸಿನ್ಮಾ ಲೋಕ !

ಬಿಲ್ಡಿಂಗ್‌ ಕಟ್ಟೋ ಪ್ರೇಮಿಯ ಸಿನ್ಮಾ ಕಟ್ಟೋ ಕಾಯಕ

“ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು”

– ಬಹುಶಃ ಬಹುತೇಕ ಕನ್ನಡಿಗರಿಗೆ ಈ ಚಿತ್ರದ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೆ, ಕನ್ನಡ ಚಿತ್ರರಂಗದ ಒಂದಷ್ಟು ಮಂದಿಗಂತೂ ಈ ಸಿನಿಮಾ ಬಗ್ಗೆ ಗೊತ್ತು. ಅದರಲ್ಲೂ ಸಿನಿಪ್ರೇಮಿಗಳಿಗೆ ಈ ಚಿತ್ರ ಅಚ್ಚುಮೆಚ್ಚು ಅನ್ನೋದು ವಿಶೇಷ. ಅಂದಹಾಗೆ, ಈ ಚಿತ್ರ 2019ರಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ಪ್ರದರ್ಶನದಲ್ಲಿ ಬೆರಳೆಣಿಕೆ ಜನ ಮಾತ್ರ ಚಿತ್ರಮಂದಿರದಲ್ಲಿದ್ದರು. ಸಿನಿಮಾ ವೀಕ್ಷಿಸಿದ ಪತ್ರಕರ್ತರು ಚಂದದ ವಿಮರ್ಶೆ ಬರೆದ ನಂತರ ಈ ಚಿತ್ರದ ಚಿತ್ರಣವೇ ಬದಲಾಯಿತು. ಜನರು ಹುಡುಕಿ ಬಂದು ಸಿನಿಮಾ ನೋಡಿದರು. ಭರಪೂರ ಮೆಚ್ಚುಗೆಯೂ ಸಿಕ್ಕಿತು. ನಂತರದ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನ ಕಂಡು ಅಲ್ಲಿನ ಜ್ಯೂರಿಗಳಿಂದ ಮೆಚ್ಚುಗೆ ಪಡೆದದ್ದು ವಿಶೇಷತೆಗಳಲ್ಲೊಂದು.
ಇಷ್ಟಕ್ಕೂ ಈ ಸಿನಿಮಾ ಕುರಿತು ಹೇಳ ಹೊರಟ ವಿಷಯವಿಷ್ಟೇ. ಇಂಥದ್ದೊಂದು ಸೂಕ್ಷ್ಮತೆಯ ಚಿತ್ರ ಕಟ್ಟಿಕೊಟ್ಟ ನಿರ್ದೇಶಕ ಕಮ್‌ ನಟ ಲೋಕೇಂದ್ರ ಸೂರ್ಯ ಈಗ ಮತ್ತೊಂದು ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ನಾಯಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಎರಡನೇ ನಿರ್ದೇಶನದ ಚಿತ್ರಕ್ಕೆ ಇಟ್ಟುಕೊಂಡಿರುವ ಹೆಸರು “ಹಾಫ್”.‌ ಹೌದು, ಲೋಕೇಂದ್ರ ಅವರು “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳುʼ ಸಿನಿಮಾ ಬಳಿಕ ನಿರ್ದೇಶಕ “ಆಸ್ಕರ್”‌ ಕೃಷ್ಣ ಅವರ ಜೊತೆಗೂಡಿ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರದಲ್ಲಿ ನಟಿಸಿದ್ದಾರೆ. ಆ ಬಳಿಕ ಅವರೀಗ “ಹಾಫ್”‌ ಕೈಗೆತ್ತಿಕೊಳ್ಳಲು ಹೊರಟಿದ್ದಾರೆ.
ತಮ್ಮ ಸಿನಿಜರ್ನಿ ಹಾಗೂ ಈಗ ಮಾಡಹೊರಟಿರುವ ಹೊಸ ಸಿನಿಮಾ ಕುರಿತು “ಸಿನಿ ಲಹರಿ” ಜೊತೆ ಮಾತಿಗಿಳಿದ ಲೋಕೇಂದ್ರ ಹೇಳಿದ್ದಿಷ್ಟು. “

ಸಿನ್ಮಾ ಆಸಕ್ತಿ ಹೆಚ್ಚಿಸಿದ ದಾದಾ ..

“ಬೇಸಿಕಲಿ ನಾನೊಬ್ಬ ಸಿಂಗರ್.‌ ಸಿನಿಮಾಗೆ ಬರಬೇಕು ಅನ್ನೋದು ನನ್ನ ಎರಡು ದಶಕದ ಕನಸು. ಅದು ಈಡೇರಿದ್ದು ಕಳೆದ ವರ್ಷ ಬಂದ “ಅಟ್ಟಯ್ಯ ವರ್ಸ್‌ಸ್‌ ಹಂದಿ ಕಾಯೋಳು” ಚಿತ್ರದ ಮೂಲಕ. ಚಿಕ್ಕಂದಿನಿಂದಲೂ ಸಿನಿಮಾ ಮೇಲಿ ಪ್ರೀತಿ ಇತ್ತು. ರಾಜಕುಮಾರ್‌, ವಿಷ್ಣುವರ್ಧನ್‌ ಅವರ ಸಿನಿಮಾಗಳನ್ನು ನೋಡಿ ಬೆಳೆದವನು. ವಿಷ್ಣುವರ್ಧನ್‌ ಅವರ “ದಾದಾ” ಚಿತ್ರ ನೋಡಿದ ಮೇಲೆ ಇನ್ನಷ್ಟು ಸಿನಿಮಾ ಮೇಲೆ ಪ್ರೀತಿ ಬಂತು. ಆಸಕ್ತಿಯೂ ಹೆಚ್ಚಾಯ್ತು. ಆ ನಂತರ “ಓಂ” ಸಿನಿಮಾ ಬಂದಮೇಲೆ ಸಿನಿಮಾದಲ್ಲೂ ನಾನು ಕೆಲಸ ಮಾಡಲೇಬೇಕು ಎಂಬ ಆಸೆ ದುಪ್ಪಟ್ಟಾಯ್ತು. ಆದರೆ, ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಹಾಗಂತ ಪ್ರಯತ್ನ ಬಿಡಲಿಲ್ಲ. ಒಂದುವರೆ ದಶಕ ಕಾಲ ನಾನು ಆರ್ಕೇಸ್ಟ್ರಾ ನಡೆಸಿದೆ. ಅದು ತಿಂಡಿಗಷ್ಟೇ ಸಾಲುತ್ತಿತ್ತು. ಊಟಕ್ಕಾಗುತ್ತಿರಲಿಲ್ಲ. ಆ ಬಳಿಕ ಕನ್ಸ್‌ಸ್ಟ್ರಕ್ಷನ್‌ ಫೀಲ್ಡ್‌ಗೆ ಎಂಟ್ರಿಯಾದೆ. ಅಲ್ಲಿ ಹಗಲಿರುಳು ಒಂದಷ್ಟು ದುಡಿದೆ. ಯಾರನ್ನೂ ಕಾಸು ಹಾಕಿ ಸಿನಿಮಾ ಮಾಡ್ತೀನಿ ಅಂತ ಹೋಗದೆ, ನಾನೇ ಹೊಸ ಪ್ರಯತ್ನಕ್ಕೆ ಮುಂದಾದೆ, ಸಿನಿಮಾರಂಗದಿಂದ ಹೊರಗೆ ಇರುವವರನ್ನು ಕಲೆಹಾಕಿ ನಾನು ಸಿನಿಮಾ ಮಾಡಿದೆ. ಆಗ ಆಗದ್ದೇ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು”. ಆ ಸಿನಿಮಾಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿತು. ಸಿನಿಮಾರಂಗದಲ್ಲೇ ಇದ್ದು ಕೆಲಸ ಮಾಡಲು ಸ್ಫೂರ್ತಿಯೂ ತುಂಬಿತು. ಈಗ ನಾನು “ಹಾಫ್‌” ಸಿನಿಮಾ ಕೈಗೆತ್ತಿಕೊಂಡಿದ್ದೇನೆʼ ಎಂದು ವಿವರಿಸುತ್ತಾರೆ ಲೋಕೇಂದ್ರ ಸೂರ್ಯ.

 

” ಒಂದುವರೆ ದಶಕ ಕಾಲ ನಾನು ಆರ್ಕೇಸ್ಟ್ರಾ ನಡೆಸಿದೆ. ಅದು ತಿಂಡಿಗಷ್ಟೇ ಸಾಲುತ್ತಿತ್ತು. ಊಟಕ್ಕಾಗುತ್ತಿರಲಿಲ್ಲ. ಆ ಬಳಿಕ ಕನ್ಸ್‌ಸ್ಟ್ರಕ್ಷನ್‌ ಫೀಲ್ಡ್‌ಗೆ ಎಂಟ್ರಿಯಾದೆ. ಅಲ್ಲಿ ಹಗಲಿರುಳು ಒಂದಷ್ಟು ದುಡಿದೆ. ಯಾರನ್ನೂ ಕಾಸು ಹಾಕಿ ಸಿನಿಮಾ ಮಾಡ್ತೀನಿ ಅಂತ ಹೋಗದೆ, ನಾನೇ ಹೊಸ ಪ್ರಯತ್ನಕ್ಕೆ ಮುಂದಾದೆ, ಸಿನಿಮಾರಂಗದಿಂದ ಹೊರಗೆ ಇರುವವರನ್ನು ಕಲೆಹಾಕಿ ನಾನು ಸಿನಿಮಾ ಮಾಡಿದೆ” 

 

ಕಲಾತ್ಮಕದಿಂದ ಕಮರ್ಷಿಯಲ್‌ ಕಡೆಗೆ…

ಈ ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ರೌಡಿಸಂ ಹಿನ್ನೆಲೆಯಲ್ಲಿ ಸಾಗುವ ಕಥೆ. ಒಂದು ಕಲಾತ್ಮಕ ಎಳೆಯನ್ನು ಇಟ್ಟುಕೊಂಡು ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿ ಮಾಡುವ ಯೋಚನೆ ನನಗಿದೆ.
ರೌಡಿಸಂ ಹಿನ್ನೆಲೆ ಇದ್ದರೂ ಎರಡು ಗ್ಯಾಂಗ್‌ ನಡುವೆ ಒಳಗೊಳಗೇ ಹೇಗೆ ಫೈಟ್‌ ಮಾಡ್ತಾರೆ ಎನ್ನುವುದೇ ಕಥೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ನಾನು ಕಂಡಂತೆ ಇಲ್ಲಿಯವರೆಗೆ ಆಯ್ಕೆ ಮಾಡದಂತಹ ಕಲಾತ್ಮಕ ಎಳೆ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದೇನೆ. “ಹಾಫ್‌ʼ ಎಂಬ ಶೀರ್ಷಿಕೆ ಬೇರೆ ಭಾಷೆಗೂ ಹೋಗಬೇಕು ಎಂಬ ಉದ್ದೇಶದಿಂದ ಇಡಲಾಗಿದ್ದು, ಕಥೆ ಕೂಡ ಯುನಿರ್ವಸಲ್‌ ಆಗಿದೆ. ಚಿತ್ರಕ್ಕೆ ರಾಕಿಸೋನು ಸಂಗೀತವಿದೆ. ಚಿತ್ರದಲ್ಲಿ ಒಂದೇ ಒಂದು ಹಾಡು ಬರಲಿದ್ದು, ಆ ಹಾಡಿಗೆ ನಾಗೇಂದ್ರ ಪ್ರಸಾದ್‌ ಬಳಿ ಸಾಹಿತ್ಯ ಬರೆಸುವ ಯೋಚನೆಯೂ ಇದೆ. ಇನ್ನು, ಸಿನಿ ಮಲ್ಲಿಕ್‌ ಛಾಯಾಗ್ರಹಣವಿದೆ. ಇದು ಆರ್.ಡಿ.ಪ್ರೊಡಕ್ಷನ್‌ ಮೂಲಕ ನಿರ್ಮಾಣವಾಗುತ್ತಿದೆ. ನಾಲ್ಕೈದು ಮಂದಿ ಗೆಳೆಯರು ನಿರ್ಮಾಣಕ್ಕೆ ಸಾಥ್‌ ಕೊಡುತ್ತಿದ್ದಾರೆ. ಚಿತ್ರದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಪಾತ್ರಗಳಿವೆ ಎಂದು ವಿವರ ಕೊಡುವ ಲೋಕೇಂದ್ರ, ತಮ್ಮ ಅಭಿನಯದ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಸಿನಿಮಾ ಮುಗಿಸಿದ್ದಾರೆ. “ಹಾಫ್”‌ ಅವರ ಎರಡನೇ ನಿರ್ದೇಶನದ ಚಿತ್ರವಾಗಿದ್ದು, ನವೆಂಬರ್‌ನಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ ಎನ್ನುತ್ತಾರೆ ಲೋಕೇಂದ್ರ.

Related Posts

error: Content is protected !!