ಅಭಿಮಾನಿಯನ್ನು ‘ಪದವಿಪೂರ್ವ’ ಕ್ಕೆ ಸೇರಿಸಿದ ಜಗ್ಗೇಶ್

ಯೋಗರಾಜ್ ಭಟ್ಟರ’ ಪದವಿ ಪೂರ್ವ’ ಕ್ಕೆ ಭರ್ಜರಿ ಹೊಸ ಮುಖಗಳು ಸೇರ್ಪಡೆ ಆಗುತ್ತಿವೆ. ಮೊನ್ನೆಯಷ್ಟೆ ಆಳ್ವಾಸ ಕಾಲೇಜು ವಿದ್ಯಾರ್ಥಿನಿ‌, ಮಾಡೆಲಿಂಗ್ ಬೆಡಗಿ ಬೆಂಗಳೂರು ಮೂಲದ ಯಶಾ ಶಿವಕುಮಾರ್ ಸೇರ್ಪಡೆಯಾದ ಬೆನ್ನಲೇ ಮತ್ತೊರ್ವ ಯುವ ಪ್ರತಿಭೆ ಬುಧವಾರ ಪದವಿ ಪೂರ್ವ ಕ್ಕೆ ಜಾಯಿನ್ ಆಗಿದ್ದಾರೆ‌. ಆತನ ಹೆಸರು ವಿಜೇಶ್ ಅಲಿಯಾಸ್ ವೆಂಕಟೇಶ್ ಗಂಗಾಧರಪ್ಪ.

ವಿಜೇಶ್

ಹಾಸನದ ಅರಕಲುಗೂಡಿನ ಯುವ ಪ್ರತಿಭೆ. ನವರಸನಾಯಕ ಜಗ್ಗೇಶ್ ಅಭಿನಯದ ಚಿತ್ರಗಳ ತುಣುಕುಗಳಿಗೆ ತನ್ನ ವಿಚಿತ್ರ ಮ್ಯಾನರಿಸಂ ಮೂಲಕ ಹೊಸ ಟಚ್ ನೀಡಿ ಜನರನ್ನು ನಕ್ಕು ನಗಿಸುತ್ತಿದ್ದ ಹುಡುಗನಿಗೆ ‘ಪದವಿಪೂರ್ವ’ ಚಿತ್ರ ಅದೃಷ್ಟ ಹೊತ್ತು ತಂದಿದೆ. ಸ್ವತಃ ಜಗ್ಗೇಶ್ ಅವರೇ ಈತನ ಅಭಿನಯ ಶೈಲಿಯನ್ನು ಮೆಚ್ಚಿ ‘ಪದವಿಪೂರ್ವ’ ಚಿತ್ರತಂಡಕ್ಕೆ ಪರಿಚಯಿಸುವ ಮೂಲಕ ಹೊಸ ಕಲಾವಿದನಿಗೆ ಆಸರೆಯಾಗಿದ್ದಾರಂತೆ.

ಚಿತ್ರದ ನಾಯಕನಾಗಿ “ಪೃಥ್ವಿ ಶಾಮನೂರ್” ಅಭಿನಯಿಸುತ್ತಿದ್ದು, ನಾಯಕಿಯರಾಗಿ “ಅಂಜಲಿ ಅನೀಶ್” ಹಾಗು “ಯಶ ಶಿವಕುಮಾರ್” ಈಗಾಗಾಲೇ ಆಯ್ಕೆಯಾಗಿದ್ದಾರೆ. ಅರ್ಜುನ್ ಜನ್ಯ, ಸಂತೋಷ್ ರೈ ಪಾತಾಜೆರಂತ ಅತ್ಯುತ್ತಮ ತಂತ್ರಜ್ಞರನ್ನೂಳಗೊಂಡ ‘ಪದವಿಪೂರ್ವ’ ತಂಡಕ್ಕೆ, ‘ಪಂಚತಂತ್ರ ‘ ಚಿತ್ರದ ರೇಸ್ ದೃಶ್ಯಗಳನ್ನು ಅಚ್ಚು’ಕಟ್’ ಆಗಿ ತೆರೆಯ ಮೇಲೆ ಮೂಡುವಂತೆ ಮಾಡಿದ್ದ ಸಂಕಲನಕಾರ “ಮಧು ತುಂಬಕೆರೆ” ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಚಿತ್ರದ ಪೂರ್ವತಯಾರಿ ಕಾರ್ಯಭರದಿಂದ ಸಾಗಿದ್ದು, ಪ್ರಮುಖ ಪಾತ್ರಧಾರಿಗಳಿಗೆ “ಆಕ್ಟಿಂಗ್ ವರ್ಕ್‌ಶಾಪ್” ನಡೆಸಲಾಗುತ್ತಿದೆ. ಶಿವಮೊಗ್ಗ, ಮಂಗಳೂರು ಹಾಗು ಬೆಂಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಆಲೋಚಿಸುತ್ತಿದ್ದು, ನವೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಶುರು ಮಾಡಲು ಚಿತ್ರ ಸಿದ್ಧತೆ ನಡೆಸಿದೆ.

Related Posts

error: Content is protected !!