ಪದವಿಪೂರ್ವ‌ ಸೇರಿದ ಯಶಾ ಶಿವಕುಮಾರ್

ಚಂದನವನಕ್ಕೆ ಎಂಟ್ರಿಯಾದ ಕರಾವಳಿಯ ಮತ್ತೊಬ್ಬಳು ಚೆಲುವೆ

ಈಗಾಗಲೇ “ಪದವಿಪೂರ್ವ” ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ಆ ಸಾಲಿಗೆ ಮತ್ತೊಂದು ಸುದ್ದಿಯೂ ಹೊರಬಿದ್ದಿದೆ.
ಹೌದು, ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ “ಪದವಿಪೂರ್ವ” ಚಿತ್ರಕ್ಕೆ ಮತ್ತೊಬ್ಬ ಹೊಸ ನಾಯಕಿ ಎಂಟ್ರಿಯಾಗಿದ್ದಾಳೆ. ಯಶಾ ಶಿವಕುಮಾರ್ ಈಗಷ್ಟೇ ಬಣ್ಣದ ಲೋಕಕ್ಕೆ ಕಾಲಿಟ್ಟ ನಾಯಕಿ.
ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ‘ಆಳ್ವಾಸ್ ಕಾಲೇಜ್’ನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಇವರು. 2019ರಲ್ಲಿ ‘ಫ್ಯಾಶನ್ ಎಬಿಸಿಡಿ’ ಸಂಸ್ಥೆ ಆಯೋಜಿಸಿದ್ದ “ಮಿಸ್ ಬೆಂಗಳೂರು 2019 ” “ಮಿಸ್ ಕರ್ನಾಟಕ ಇಂಟರ್ನ್ಯಾಷನಲ್ 2019” ಹಾಗೂ ಮುಂಬೈನಲ್ಲಿ ನಡೆದ “ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019” ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಮೂಲಕ ಅನೇಕ ಫ್ಯಾಶನ್ ಕಿರೀಟಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ ಯಶಾ ಶಿವಕುಮಾರ್.
ಈಕೆ ಭರತನಾಟ್ಯ ಮತ್ತು ಕಥಕ್ ನೃತ್ಯ ಕಲಾವಿದೆಯಾಗಿದ್ದು, ಫ್ರೀ ಸ್ಟೈಲ್, ಬಾಲಿವುಡ್, ಮಣಿಪುರಿ ಮತ್ತು ಜಾನಪದದಂತಹ ಇತರ ನೃತ್ಯ ಪ್ರಕಾರಗಳನ್ನೂ ಚೆನ್ನಾಗಿ ಅರಿತಿದ್ದಾಳೆ.
ಒಂದು ವರ್ಷ ಮಾಡೆಲಿಂಗ್ ಕ್ಷೇತ್ರದ ಅನುಭವವೂ ಇದೆ. ಆ ಅನುಭವ ಸಿನಿಮಾ ರಂಗಕ್ಕೆ ಬರಲು‌ ಕಾರಣವಾಗಿದೆ. ಚಿತ್ರರಂಗದಲ್ಲಿ ಗಟ್ಟಿನೆಲೆ ಕಾಣುವ ವಿಶ್ವಾಸ ಅವರಿಗಿದೆ.
ಚಿತ್ರಕ್ಕೆ ‘ಪೃಥ್ವಿ ಶಾಮನೂರ್ ನಾಯಕ, ‘ಅಂಜಲಿ ಅನೀಶ್ ನಾಯಕಿ. ಇವರಿಬ್ಬರಿಗೂ ಇದು ಚೊಚ್ಚಲ ಸಿನಿಮಾ.
ಅರ್ಜುನ್ ಜನ್ಯ ಸಂಗೀತವಿದೆ. ಸಂತೋಷ್ ರೈ ಪರಾಜೆ ಛಾಯಾಗ್ರಹಣವಿದೆ.

Related Posts

error: Content is protected !!