‘ಸಿನಿ ಲಹರಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಲಯಾಳಂ ನ ‘ಬಿರಿಯಾನಿ’ ಚಿತ್ರದ ಖ್ಯಾತಿಯ ನಟಿ ಕನಿ ಕುಸ್ರುತಿ ಅಭಿಮತ.
ಮಲಯಾಳಂ ಚಿತ್ರರಂಗದಲ್ಲಿ ಭಾರೀ ಸುದ್ದಿಯಲ್ಲಿರುವ ಚಿತ್ರ ಬಿರಿಯಾನಿ. ಇದು ಇನ್ನು ಬಿಡುಗಡೆ ಆಗಿಲ್ಲ. ಅದರೆ ಈ ಚಿತ್ರ ಬೆಂಗಳೂರು ಸೇರಿದಂತೆ ಜಗತ್ತಿನ ಹಲವು ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡು, ಭಾರೀ ಮೆಚ್ಚುಗೆ ಪಡೆಯುತ್ತಿದೆ. ಚಿತ್ರದ ನಾಯಕಿ ಕನಿ ಕುಸ್ರುತಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ‘ಸಿನಿ ಲಹರಿ ‘ ಗಾಗಿ ಕನಿ ಕುಸ್ರುತಿ ಅವರೊಂದಿಗೆ ರಮೇಶ್ ಎಚ್.ಕೆ.ನಡೆಸಿದ ಅಪರೂಪದ ಸಂದರ್ಶನ ಇಲ್ಲಿದೆ.
ಸಂದರ್ಶನ ವಿವರ
ಹೇಗಿದ್ದೀರಿ, ಎಲ್ಲಿದ್ದೀರಿ,ಹೇಗಿದೆ ಸಿನಿಮಾ ಜರ್ನಿ?
ಕನಿ : ನಮಸ್ಕಾರ ನಾನು ಚೆನ್ನಾಗಿದ್ದೀನಿ. ಸದ್ಯ ಗೋವಾದಲ್ಲಿ ವಾಸವಾಗಿದ್ದೀನಿ
ನಿಮ್ಮ ಹಿನ್ನೆಲೆ ಏನು? ಅಂದ್ರೆ ನಿಮ್ನ ಪರಿಚಯ?
ಕನಿ : ನಾನು ಮೂಲತಃ ಕೇರಳದವಳು. ನಾನು ರಂಗಭೂಮಿಯ ಹಿನ್ನಲೆಯವಳು. ನಾನು ಓದಿದ್ದು ರಂಗಭೂಮಿ ವಿಷಯವನ್ನೇ. ಪ್ಯಾರಿಸ್ ನಲ್ಲಿ ಈ ವಿಷಯದ ಕುರಿತು ನಾನು ವ್ಯಾಸಂಗ ಮಾಡಿದ್ದು ಯುರೋಪ್ ನಲ್ಲಿ 2 ವರ್ಷಗಳ ಕಾಲ ನಾನು ಕೆಲಸ ಮಾಡಿದ್ದೇನೆ. ನಾನು ತುಂಬಾ ಕಡಿಮೆ ಸಿನಿಮಾಗಳಲ್ಲಿ ನಟಿಸಿದ್ದು ಈ ಸದ್ಯ ಗೋವಾಗೆ ಬಂದಿದ್ದೇನೆ. ಕೆಲವೊಮ್ಮೆ ನಾನು ಸಿನಿಮಾ ಮಾಡುತ್ತೇನೆ, ಇನ್ನು ಕೆಲವೊಮ್ಮೆ ರಂಗಭೂಮಿಯಲ್ಲಿ ತೊಡಗುತ್ತೇನೆ.
ಸಿನಿಮಾ ಎನ್ನುವ ಗ್ಲಾಮರ್ ಜಗತ್ತಿಗೆ ಬಂದಿದ್ದು ಹೇಗೆ? ಯಾಕೆ?
ಕನಿ : ನಾನು ಸಿನಿಮಾ ಕ್ಷೇತ್ರವನ್ನು ಆರಿಸಿಕೊಳ್ಳಲಿಲ್ಲ. ನಾನು ಶಾಲಾ ದಿನಗಳಿಂದಲೂ ಸಹ ರಂಗಭೂಮಿಯಲ್ಲೇ ಹೆಚ್ಚು ಆಸಕ್ತಿ ಕೆಲಸ ಮಾಡುತ್ತಿದ್ದೆ. ಆಗ ಸಿನಿಮಾಗಳಲ್ಲಿ ನಟಿಸಲು ಕರೆ ಬರುತ್ತಿತ್ತು. ಆದರೆ 2010 ರ ವರೆಗೂ ಸಹ ನನಗೆ ನಟಿಸಲು ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಆದರೆ ನಂತರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಾನು ಈ ಸಿನಿಮಾ ಕ್ಷೇತ್ರವನ್ನು ಆರಿಸಿಕೊಂಡೆ. ಹೀಗೆ ನಾನು ಆಕಸ್ಮಿಕವಾಗಿ ಸಿನಿಮಾ ಕ್ಷೇತ್ರಕ್ಕೆ ಬರುವಂತೆ ಆಯಿತು.
ಬಿರಿಯಾನಿ ಸಿನಿಮಾದ ಅನುಭವದ ಬಗ್ಗೆ ಹೇಳಿ
ಕನಿ : ಧನ್ಯವಾದಗಳು. ಬಿರಿಯಾನಿ ಸಿನಿಮಾ ಒಂದು ಸಣ್ಣ ಬಜೆಟ್ ನ ಸಿನಿಮಾ. ಇಲ್ಲಿ ಎಲ್ಲರೂ ಕೂಡಾ ಒಂದು ತಂಡವಾಗಿ ಸರಿಯಾಗಿ ಸಹಕರಿಸಿದರು. ಇಡೀ ತಂಡವು ಕುಟುಂಬದಂತೆ ಇತ್ತು. ಎಷ್ಟೋ ಸಲ ನಮಗೆ ಶೂಟಿಂಗ್ ಗೆ ಒಪ್ಪಿಗೆ ಸಿಗದ ಜಾಗದಲ್ಲಿ ಶೂಟಿಂಗ್ ಮಾಡಬೇಕಿತ್ತು. ಹೀಗಾಗಿ ಇದೊಂತರ ಗೋರಿಲ್ಲಾ ಶೂಟಿಂಗ್ ಎನಿಸಿದರೂ ಒಂದರ್ಥದಲ್ಲಿ ಚೆನ್ನಾಗಿತ್ತು.
ಬಿರಿಯಾನಿ ಸಿನಿಮಾದಲ್ಲಿನ ನಿಮ್ಮ ಅಭಿನಯದ ಬಗ್ಗೆ ಮೊದಲ ಪ್ರತಿಕ್ರಿಯೆ ಹೇಗಿತ್ತು? ಸ್ನೇಹಿತರು ಮತ್ತು ಕುಟುಂಬದವರ ಪ್ರತಿಕ್ರಿಯೆ ಏನಾಗಿತ್ತು?
ಕನಿ: ನಿಜ ಹೇಳಬೇಕೆಂದರೆ ನನ್ನ ಸ್ನೇಹಿತರಾಗಲೀ ಅಥವಾ ಕುಟುಂಬ ವರ್ಗದವರಾಗಲೀ ಈ ಚಿತ್ರವನ್ನು ನೋಡಿಲ್ಲ. ಇದು ಕೇರಳದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ. ಅಲ್ಲದೇ ನಾನೇ ಇನ್ನೂ ಈ ಸಿನಿಮಾ ನೋಡಿಲ್ಲ. ಆದರೆ ನನಗೆ ಈ ಸಿನಿಮಾಗೆ ಸಂಬಂಧಿಸಿದಂತೆ 2 ಪ್ರಶಸ್ತಿಗಳು ಬಂದಿದ್ದಕ್ಕೆ ಅವರು ಸಂತೋಷವಾಗಿದ್ದಾರೆ.
ಬಿರಿಯಾನಿ ಸಿನಿಮಾ ನಿಮ್ಮ ಸಿನಿಮಾ ಬದುಕು ಜತೆಗೆ ಖಾಸಗಿ ಬದುಕಿನಲ್ಲಿ ತಂದ ಬದಲಾವಣೆ ಏನು?
ಕನಿ: ಚಿತ್ರ ಇನ್ನೂ ಬಿಡುಗಡೆ ಕಾಣದ ಕಾರಣ ಇನ್ನೂ ಅಂತಹ ಬದಲಾವಣೆಗಳೇನೂ ಆಗಿಲ್ಲ. ಆದರೆ ಒಂದು ವೇಳೆ ಹಾಗೇನಾದರೂ ಆದರೆ ಅದು ಇಡೀ ತಂಡಕ್ಕೆ ಆಗಲಿ ಮತ್ತು ಪ್ರತಿಭಾವಂತರಾದ ಎಲ್ಲರಿಗೂ ಒಂದು ಸಮಾನ ಅವಕಾಶ ಸಿಗಲಿ.ಆದರೆ ನನಗೆ ತಿಳಿದ ಮಟ್ಟಿಗೆ ಸದ್ಯ ಸಮಾನ ಅವಕಾಶಗಳು ಸಿಗುವ ವಾತಾವರಣ ನಿರ್ಮಾಣವಾಗಿಲ್ಲ.
ಬಿರಿಯಾನಿ ಸಿನಿಮಾ ನಂತರ ನೀವು ಮುಂಬೈಗೆ ಹೋದ್ರಿ ಎನ್ನುವ ಸುದ್ದಿ ನಿಜವಾ? ಹೋಗಿದ್ದು ನಿಜವಾದ್ರೆ ಯಾಕೆ?
ಕನಿ: ಇಲ್ಲ ನಾನು ಬಿರಿಯಾನಿ ಚಿತ್ರದ ನಂತರ ಮುಂಬೈಗೆ ಹೋಗಲಿಲ್ಲ. ಆದರೆ ನಾನು ಬಿರಿಯಾನಿ ಸಿನಿಮಾಗೂ ಮುಂಚೆ ಅಲ್ಲಿದ್ದೆ. ಬಿರಿಯಾನಿ ಸಿನಿಮಾ ಶೂಟಿಂಗ್ ವೇಳೆ ನಾನು ಕೊಚ್ಚಿಯಲ್ಲಿದ್ದೆ. ಆ ಸಿನಿಮಾ ಶೂಟಿಂಗ್ ಆದ ನಂತರದಲ್ಲಿ ನಾನು ಗೋವಾಗೆ ಬಂದೆ. ಹೀಗಾಗಿ ನಾನು ಬಹಳಷ್ಟು ಸಮಯದ ಹಿಂದೆ ಮುಂಬೈನಲ್ಲಿ ಇದ್ದೆ ಅಷ್ಟೇ.
ನೀವು ಅಭಿನಯಿಸಿದ ಖದೀಜಾ ಪಾತ್ರದ ಮೂಲಕ ಸಮಾಜಕ್ಕೆ ಏನಾದ್ರೂ ಸಂದೇಶ ಹೇಳಬಹುದೇ?
ಕನಿ: ಖದೀಜಾ ಪಾತ್ರದ ಮೂಲಕ ನಾನೇನೂ ಸಹ ಸಂದೇಶವನ್ನು ನೀಡಲಾರೆ. ಕಾರಣ ನಾನೇ ಬೇರೆ ಖದೀಜಾನೇ ಬೇರೆ. ಇದು ನಿರ್ದೇಶಕ ಸಜಿನ್ ಬಾಬು ಅವರ ಕಲ್ಪನೆಯಾದ ಕಾರಣ ಅವರೇ ಈ ಪ್ರಶ್ನೆಗೆ ಉತ್ತರಿಸಬೇಕು.
ಹಾಗಾದ್ರೆ, ನೀವು ಆ ಪಾತ್ರವನ್ನು ಹೇಗೆ ರಿಲೇಟ್ ಮಾಡಿಕೊಳ್ಳುತ್ತೀರಿ?
ಕನಿ: ನಿಜ ಹೇಳಬೇಕೆಂದರೆ ನಾನು ಆ ಪಾತ್ರದೊಂದಿಗೆ ನನ್ನನ್ನು ಕಲ್ಪಿಸಿಕೊಳ್ಳಲಾರೆ. ಆದರೆ ಈ ದೇಶದಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ನಾನು ಭಾವನಾತ್ಮಕವಾಗಿ ನನ್ನನ್ನು ಕಲ್ಪಿಸಿಕೊಳ್ಳಬಲ್ಲೆ.
ಬಿರಿಯಾನಿ ಸಿನಿಮಾ ಮೂಲಭೂತವಾದಿಗಳು ಮತ್ತು ಸಂಪ್ರದಾಯವಾದಿಗಳಿಂದ ಅನೇಕ ವಿವಾದಗಳನ್ನು ಹುಟ್ಟು ಹಾಕುವ ಸಾಧ್ಯತೆಗಳಿವೆ ಎನ್ನುವ ಅನುಮಾನ ..
ಕನಿ : ಈ ಸಿನಿಮಾ ಇನ್ನೂ ಬಿಡುಗಡೆಯಾಗದ ಕಾರಣ ಮೂಲಭೂತಿವಾದಿಗಳು ಮತ್ತು ಸಂಪ್ರದಾಯವಾದಿಗಳು ಏನೆನ್ನುತ್ತಾರೆ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ. ಸೆನ್ಸಾರ್ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಏನಾಗುತ್ತದೆ ಎಂಬುದು ನಮಗೆ ತಿಳಿಯಲಿದೆ.
ಮಲಯಾಳಂ ಚಿತ್ರ ರಂಗವು ಸೇರಿ ಭಾರತೀಯ ಚಿತ್ರರಂಗದ ಇವತ್ತಿನ ವಿದ್ಯಮಾನಗಳ ಬಗ್ಗೆ ಏನ್ ಹೇಳ್ತೀರಾ?
ಕನಿ : ನಾನು ಮೂಲತಃ ಕೆಲವೇ ಕೆಲವು ಕನ್ನಡ, ತಮಿಳು, ಬಂಗಾಳಿ ಹಾಗೂ ಮರಾಠಿ ಸಿನಿಮಾಗಳನ್ನು ನೋಡಿದ್ದೇನೆ. ಹೀಗಾಗಿ ಭಾರತದ ಚಿತ್ರರಂಗದ ಕುರಿತು ಮಾತನಾಡುವಷ್ಟು ತಿಳುವಳಿಕೆ ನನಗಿಲ್ಲ.ಆದರೆ ನಾನು ಹೆಚ್ಚು ಹೆಚ್ಚು ಮಲೆಯಾಳಂ ಸಿನಿಮಾಗಳನ್ನು ನೋಡುತ್ತೇನೆ. ಕಳೆದ 10 ವರ್ಷಗಳಲ್ಲಿ ಮಲೆಯಾಳಂ ಸಿನಿಮಾವು ತನ್ನ ವೈಭವಕ್ಕೆ ಮರಳಿದ್ದು ಒಳ್ಳೆಯ ಕಥೆಗಳು ಮೂಡಿ ಬರುತ್ತಿವೆ. ಇನ್ನು ನನ್ನ ಇಷ್ಟದ ನಿರ್ದೇಶಕ ಎಂದರೆ ಅದು ಪದ್ಮರಾಜನ್.
ಎಲ್ಲಾ ಕ್ಷೇತ್ರಗಳಲ್ಲೂ ಇರುವ ಹಾಗೆ ಸಿನಿಮಾ ರಂಗದಲ್ಲೂ ಹೆಣ್ಣಿನ ಮೇಲೆ ಶೋಷಣೆ, ದಬ್ಬಾಳಿಕೆ, ತಾರತಮ್ಯ ನಡೀತಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೀರಾ?
ಕನಿ: ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಬಹಳ ಕಡಿಮೆ ಪ್ರಮಾಣದ ಹೆಣ್ಣು ಮಕ್ಕಳನ್ನು ನಾವು ಕಾಣ್ತೀವಿ. ಆದರೆ ಇತ್ತೀಚಿನ ಮಲೆಯಾಳಂ ಚಿತ್ರಗಳಲ್ಲಿ ನಾವು ಅಲ್ಲಲ್ಲಿ ಕೆಲವು ಮಹಿಳಾ ಸಹ ನಿರ್ದೇಶಕರು, ಎಡಿಟರ್ ಗಳು, ಹಾಗೂ ಕ್ಯಾಮೆರಾ ಸಹಾಯಕರು ಇರುವುದನ್ನು ಕಾಣಬಹುದು. ಆದರೆ ಅದು 50% ಗೆ ಮುಟ್ಟಬೇಕೆಂಬುದು ನನ್ನ ಆಸೆ. ಸಿನಿಮಾ ಅಷ್ಟೇ ಅಲ್ಲ ರಾಜಕೀಯ ಪಕ್ಷಗಳು ಮತ್ತು ಶಾಸನ ಸಭೆಗಳಲ್ಲಿ 50% ಗೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಇರಬೇಕೆಂದು ನಾನು ಬಯಸುತ್ತೇನೆ.ಜೊತೆಗೆ ಈಗಿರುವ ಜಾತಿ ಮತ್ತು ವರ್ಗದ ತಾರತಮ್ಯ ಹೊರಟುಹೋಗಿ ಇಂದು ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು.
ನಿಮ್ಮ ಹೊಸ ಸಿನಿಮಾಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಹೇಳಿ.
ಕನಿ : ಪ್ರಶಾಂತ್ ನಾಯರ್ ಅವರ Trust with destiny ( ಇದು ಟ್ರೈಬೇಕಾನಲ್ಲಿ ಪ್ರದರ್ಶನವಾಗಿದೆ) ಇದಾದ ಮೇಲೆ ಬಿರಿಯಾನಿ ಹಾಗೂ ನಂತರದಲ್ಲಿ ಹಾಟ್ ಸ್ಟಾರ್ ನಲ್ಲಿ ಕೆಲ ಸಣ್ಣ ಪುಟ್ಟ ವೆಬ್ ಸೀರೀಸ್ ಗಳು ಬಿಡುಗಡೆಗೊಳ್ಳಲಿವೆ. ಇದಾದ ನಂತರ ಮಲೆಯಾಳಂ ನ ಚಿತ್ರದ ಶೂಟಿಂಗ್ ಇದ್ದು, ತಮಿಳು ಚಿತ್ರದಲ್ಲಿ ನಟಿಸುವ ಮಾತುಕತೆ ನಡೆಯುತ್ತಿದೆ. ಆದರೆ ಕರೋನಾ ಕಾರಣದಿಂದಾಗಿ ಇಂದು ಎಲ್ಲವೂ ಸ್ಥಗಿತಗೊಂಡಿದೆ.
ಸಾಕಷ್ಟು ಪ್ರಶಸ್ತಿಗೆ ಪಾತ್ರರಾಗುತ್ತಿದ್ದೀರಿ, ಈ ಪ್ರಶಸ್ತಿಗಳು ಸಂತೋಷ ಮೂಡಿಸಿರಬೇಕು ಅಲ್ವಾ?
ಕನಿ : ನಾನು ಸಾಮಾನ್ಯವಾಗಿ ಪ್ರಶಸ್ತಿಯನ್ನು ನಿರೀಕ್ಷೆ ಮಾಡುವವಳಲ್ಲ. ಆದರೆ ಪ್ರಶಸ್ತಿಗಳು ಯಾವಾಗಲೂ ಸಹ ಅನಿರೀಕ್ಷಿತವಾಗಿರಬೇಕು, ನಮ್ಮೊಳಗೆ ಅಚ್ಚರಿ ಮೂಡಿಸಬೇಕು. ಆಗ ಮಾತ್ರ ಅದು ನಮಗೆ ಸಂತೋಷ ನೀಡುತ್ತದೆ. ಆದರೆ ನಮ್ಮ ಸುತ್ತ ಬಹಳಷ್ಟು ಜನ ಪ್ರತಿಭಾವಂತ ನಟ ನಟಿಯರು ಇದ್ದಾರೆ. ಹೀಗಾಗಿ ಪ್ರಶಸ್ತಿ ಅನ್ನುವುದನ್ನು ನಾನು ಅನಿರೀಕ್ಷಿತವಾಗಿ ಬರುವ ಪ್ರೋತ್ಸಾಹದ ಸಂಗತಿಯಾಗಿ ಮಾತ್ರ ಕಾಣುತ್ತೇನೆ ಅಷ್ಟೇ.
ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಎಷ್ಟು ಗೊತ್ತು? ಈ ಉದ್ಯಮದ ಬಗ್ಗೆ ಏನ್ ಹೇಳ್ತೀರಾ?
ಕನಿ : ನಾನು ಅಷ್ಟಾಗಿ ಕನ್ನಡ ಸಿನಿಮಾಗಳನ್ನು ನೋಡಿಲ್ಲ. ನಾನು ಕೇವಲ ಗಿರೀಶ್ ಕಾರ್ನಾಡ್ ಅವರ ಹಯವದನ ಹಾಗೂ ಇನ್ನಿತರೆ ನಾಟಕಗಳನ್ನು ನೋಡಿದ್ದೇನೆ. ಅವರ ನಾಟಕಗಳು ನನ್ನ ಆಲೋಚನೆಯನ್ನು ಬದಲಿಸಿವೆ.
ಕೊನೆಯದಾಗಿ ಒಂದೆರಡು ಮಾತುಗಳು
ಕನಿ : ಕೊನೆಯದಾಗಿ ಹೇಳಬಹುದಾದರೆ ನನ್ನ ಮಾತುಗಳನ್ನು ಕೇಳಿಸಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು ಮತ್ತು ಈ ದೇಶದಲ್ಲಿ ಎಲ್ಲರಿಗೂ ಕೆಲಸ ಮಾಡಲು ಸಮಾನ ಅವಕಾಶಗಳು ದೊರೆಯಲಿ ಎಂದು ನಾನು ಆಶಿಸುತ್ತೇನೆ.