‘ಭೀಮಸೇನ ನಳಮಹಾರಾಜ’ ತಮಗೆ ಯಾಕಷ್ಟು ಇಂಪಾರ್ಟೆಂಟ್ ಎನ್ನುವುದರ ಕುರಿತು ‘ ಸಿನಿಲಹರಿ’ ಜತೆ ಮನಬಿಚ್ಚಿ ಮಾತನಾಡಿದ ‘ದೃಶ್ಯ ‘ ಖ್ಯಾತಿಯ ನಟಿ
……………………………………
‘ದೃಶ್ಯ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಟಿಯಾಗಿ ಎಂಟ್ರಿಯಾದ ಹೊಸ ಪ್ರತಿಭೆ ಆರೋಹಿ ನಾರಾಯಣ್ ಸಂಭ್ರಮದಲ್ಲಿದ್ದಾರೆ. ಹಾಗಂತ ಅವರಿಗೇನು ಮದುವೆ ಫಿಕ್ಸ್ ಆಯ್ತಾ? ಹೊಸ ಮನೆ ಕಟ್ಟಿದ್ರಾ? ಇಲ್ಲವೇ ಹೊಸ ಕಾರು ಖರೀಸಿದ್ರಾ? ಹಾಗೆಲ್ಲ ಭಾವಿಸಿಕೊಳ್ಳಬೇಕಿಲ್ಲ. ಬದಲಿಗೆ ಅವರು ಅಭಿನಯಿಸಿದ ಎರಡು ಚಿತ್ರಗಳು ಈ ತಿಂಗಳು ಬಿಡುಗಡೆ ಆಗುತ್ತಿವೆ. ಅದೇ ಅವರ ಸಂಭ್ರಮಕ್ಕೆ ಕಾರಣ.
ತೆರೆ ಕಾಣುತ್ತಿರುವ ಚಿತ್ರಗಳಿವು…
ಬಹು ದಿನಗಳಿಂದ ಒಂದೇ ಉಸಿರಿನಲ್ಲಿ ಅವರು ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಚಿತ್ರ ‘ ಭೀಮಸೇನ ನಳಮಹಾರಾಜ’ ಅಕ್ಟೋಬರ್ 29 ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ತೆರೆ ಕಾಣುತ್ತಿದೆ. ಮತ್ತೊಂದೆಡೆ ಕೊರೋನಾ ಆರಂಭಕ್ಕೂ ಮುನ್ನವೇ ಚಿತ್ರಮಂದಿರಕ್ಕೆ ಬಂದು ಜನ ಮೆಚ್ಚುಗೆ ಪಡೆದಿದ್ದ ‘ಶಿವಾಜಿ ಸುರತ್ಕಲ್’ ಕೂಡ ಈಗ ಟಾಕೀಸ್ ಗಳಲ್ಲಿಯೇ ರೀ ರಿಲೀಸ್ ಆಗುತ್ತಿದೆ. ಒಂದೆಡೆ ಆನ್ ಲೈನ್ ಪ್ಲಾಟ್ ಫಾರ್ಮ್ ಮತ್ತೊಂದೆಡೆ ಟಾಕೀಸ್, ಎರಡು ಕಡೆಗಳಲ್ಲೂ ಧೂಳೆಬ್ಬಿಸಲು ಬರುತ್ತಿದ್ದಾರೆ ನಟಿ ಆರೋಹಿ ನಾರಾಯಣ್.
ಯಾರಿಗೆ ಖುಷಿಯಾಗಲ್ಲ ಹೇಳಿ…
ನಟರೋ ಅಥವಾ ನಟಿಯರೋ ಹೊಸಬರ ಮಟ್ಟಿಗೆ ಇದೊಂದು ಥ್ರಿಲ್ ಕೊಡುವ ವಿಷಯ. ಜತೆಗೆ ಕೊರೋನಾ ಕಾರಣಕ್ಕೆ ಸಿನಿಮಾ ಕೆಲಸ ಇಲ್ಲದೆ ಎಲ್ಲವೂ ಸ್ಥಬ್ದವಾಗಿರುವ ಸಂದರ್ಭದಲ್ಲಿ ಮತ್ತೆ ಶುರುವಾದ ಚಟುವಟಿಕೆಗಳ ಮೂಲಕ ತಾವು ಅಭಿನಯಿಸಿದ ಸಿನಿಮಾ ರಿಲೀಸ್ ಆಗುತ್ತಿವೆ ಅಂದ್ರೆ, ಯಾರಿಗೆ ಖುಷಿಯಾಗಲ್ಲ? ಆ ಖುಷಿ ಈಗ ನಟಿ ಆರೋಹಿ ನಾರಾಯಣ್ ಮೊಗದಲ್ಲಿ ಕಾಣುತ್ತಿದೆ.
ಇದು ಸಹಜವಾದ ಸಂಭ್ರಮ..
ಏನ್ ಹೇಳ್ಬೇಕೋ ಗೊತ್ತಾಗುತ್ತಿಲ್ಲ. ಎರಡು ಈಗ ಎರಡು ಚಿತ್ರಗಳು ಜನರದೆ ಮುಂದೆ ಬರುತ್ತಿವೆ. ಬದಲಾದ ಸಂದರ್ಭವೋ, ನನ್ನ ಅದೃಷ್ಟವೋ ಗೊತ್ತಿಲ್ಲ. ಇದು ತುಂಬಾ ಅನಿರೀಕ್ಷಿತ. ಒಂದಂತೂ ಹೌದು, ತುಂಬಾ ಖುಷಿಯಾಗುತ್ತಿದೆ. ಹೀಗಾಗುತ್ತೆ ಅಂತ ನಾನು ಕನಸಲ್ಲೂ ಎಣಿಸಿರಲಿಲ್ಲ .’ ಶಿವಾಜಿ ಸುರತ್ಕಲ್’ ಈಗಾಗಲೇ ರಿಲೀಸ್ ಆಗಿತ್ತು. ಕೊರೋನಾ ಕಾರಣಕ್ಕೆ ಅರ್ಧದಲ್ಲೇ ಪ್ರದರ್ಶನ ನಿಂತು ಹೋಗಿದ್ದವು. ಅದು ತೀವ್ರಬೇಸರ ತರಿಸಿತ್ತು.ಆದ್ರೆಇಡೀ ಜಗತ್ತೇ ಸ್ಥಬ್ಧವಾಗಿತ್ತಲ್ಲ, ನಾವೇನು ಮಾಡೋದಿಕ್ಕೆ ಸಾಧ್ಯ? ಈಗ ಅದು ಮತ್ತೆ ರಿಲೀಸ್ ಆಗುತ್ತಿದೆ. ಅದರ ಜತೆಗೆ ‘ ಭೀಮಸೇನ ನಳಮಹಾರಾಜ’ ಕೊಂಚ ತಡವಾಗಿ ಬರುತ್ತಿದೆ. ತಡವಾದರೂ ಚಿತ್ರದ ಕಂಟೆಂಟ್ ಹಾಗೂ ಮೇಕಿಂಗ್ ಅದ್ಬುತವಾಗಿದೆ. ಜನ ಅದನ್ನು ಇಷ್ಟ ಪಡುವ ಬಗ್ಗೆ ಅಪಾರ ನಂಬಿಕೆಯಿದೆ. ಹಾಗೆಯೇ ದೇವರ ಆಶೀರ್ವಾದವೂ ಬೇಕಿದೆ’ ಎನ್ನುತ್ತಾರೆ ನಟಿ ಆರೋಹಿ ನಾರಾಯಣ್.
ಪಾತ್ರಗಳ ವೈಶಿಷ್ಟ್ಯ ತೆಯೇ ವಿಶೇಷ..
‘ಶಿವಾಜಿ ಸುರತ್ಕಲ್’ ಸಿನಿಮಾದ ಕತೆಯೇನು, ಅಲ್ಲಿ ನಾನೇನು ಅನ್ನೋದು ಬಹುತೇಕ ಜನರಿಗೆ ಗೊತ್ತು. ಯಾಕಂದ್ರೆ ಅದು ಈಗಾಗಲೇ ರಿಲೀಸ್ ಆದ ಸಿನಿಮಾ. ಒಂದು ಡಿಫೆರೆಂಟ್ ಕಥಾ ಹಂದರ ಚಿತ್ರವದು. ರಮೇಶ್ ಸರ್ ಅಲ್ಲಿ ತನಿಖಾಧಿಕಾರಿ. ನಾನು ಸೈಕಾಲಜಿಸ್ಟ್. ರಮೇಶ್ ಸರ್ ಕಾರಣಕ್ಕೆ ನಾನು ಆ ಸಿನಿಮಾ ಒಪ್ಪಿಕೊಂಡಿದ್ದೆ. ನಟಿಯಾಗಿ ಆ ಪಾತ್ರ ಸಾಕಷ್ಟು ಖುಷಿ ಕೊಟ್ಟಿದೆ. ಇನ್ನು ‘ ಭೀಮಸೇನ ನಳಮಹಾರಾಜ’ ತುಂಬಾ ಡಿಫೆರೆಂಟ್ ಕಥಾ ಹಂದರದ ಚಿತ್ರ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಮನೋರಂಜನೆಯ ನಳಪಾಕ.ಇಲ್ಲಿ ನಾನು ಅಯ್ಯಂಗಾರ್ ಬ್ರಾಹ್ಮಣರ ಹುಡುಗಿ. ಆಕೆ ತನ್ನ ಹುಟ್ಟು, ಸಂಸ್ಕೃತಿಗೆ ವಿರುದ್ಧ ವಾದ ಹುಡುಗಿ. ಒಂಥರ ಟಾಮ್ ಬಾಯ್. ಹಾಗೆ ನೋಡಿದರೆ ಈ ಪಾತ್ರದಲ್ಲಿ ರಾಧಿಕಾ ಪಂಡಿತ್ ಅಭಿನಯಿಸಬೇಕಿತ್ತಂತೆ. ಪ್ರಿಯಾಂಕಾ ಅಭಿನಯಿಸಿದ ಪಾತ್ರಕ್ಕೆ ರಾಧಿಕಾ ಅವರನ್ನು ನಿರ್ಮಾಪಕರು ಭೇಟಿಮಾಡಿದ್ದಾಗ ಕತೆ ಕೇಳಿ, ನಾನು ನಿರ್ವಹಿಸಿದ ಪಾತ್ರ ಚೆನ್ನಾಗಿದೆ ಅಂದಿದ್ರಂತೆ. ಕಾರಣಾಂತರಗಳಿಂದ ಅವರು ಅಭಿನಯಿಸಲು ಆಗಲಿಲ್ಲ. ಆ ಪಾತ್ರವೇ ನಂದು.ಹಾಗಾಗಿ ತುಂಬಾ ಎಚ್ಚರಿಕೆ ಯಿಂದ ಅಭಿನಯಿಸಿದ್ದೇನೆ. ಪ್ರೇಕ್ಷಕರಿಗೆ ಇಷ್ಟವಾಗುತ್ತೆ’ ಎನ್ನುತ್ತಾ ನಗು ಬೀರುತ್ತಾರೆ ಚೆಲುವೆ ಆರೋಹಿ ನಾರಾಯಣ್.
ಚಿತ್ರೀಕರಣದ ಅನುಭವವೇ ಅದ್ಬುತ, ವಿಭಿನ್ನ..
‘ಶಿವಾಜಿ ಸುರತ್ಕಲ್ ‘ ಚಿತ್ರೀಕರಣ ಪಕ್ಕಾ ಪ್ರೊಪೆಷನಲ್ ಆಗಿತ್ತು. ರಮೇಶ್ ಸರ್ ಅಂದ್ರೆ ಹೇಳ್ಬೇಕೆ, ಅವರ ಕೆಲಸವೇ ಹಾಗೆ, ಎಲ್ಲದೂ ಅಚ್ಚುಕಟ್ಟು, ಪಕ್ಕಾ ಪ್ರೊಪೆಷನಲ್. ನಿರ್ದೇಶಕರು ಹಾಗೆಯೇ ಚಿತ್ರೀಕರಣ ಮುಗಿಸಿದರು. ಅನೇಕ ಸಂಗತಿಗಳನ್ನುನಾವು ಕಲಿಯುವುದಕ್ಕೆ ಸಾಧ್ಯವಾಯಿತು. ಇನ್ನು ‘ಭೀಮಸೇನ ನಳಮಹಾರಾಜ’ ತುಂಬಾ ಸಮಯ ತೆಗೆದುಕೊಂಡಿತು. ಆದರೂ ನಂಗೆ ಎಲ್ಲೂ ಬೇಸರ ಎನಿಸಿಲ್ಲ. ನಿರ್ಮಾಪಕರಾದ ಪುಷ್ಕರ್ ಅವರಾಗಲಿ, ನಿರ್ದೇಶಕ ಕಾರ್ತಿಕ್ ಅವರಾಗಲಿ ಕಿಂಚಿತ್ತು ಬೇಜಾರು ತರಿಸಿಲ್ಲ. ಇಡೀ ಸೆಟ್ ವಾತಾವರಣವೇ ಫ್ಯಾಮಿಲಿ ಥರ ಇತ್ತು. ಇವತ್ತಿಗೂ ನಂಗೆ ಅವರೆಲ್ಲರ ಜತೆಗೆ ತುಂಬಾ ಕಂಫರ್ಟ್ ಫೀಲ್ ಇದೆ. ಸೆಟ್ ಗಳಲ್ಲಿ ಇಂತಹ ವಾತಾವರಣ ಇರೋದೆ ಅಪರೂಪ. ಬಟ್ ನಮಗೆ ಇದು ಸಿಕ್ಕಿದೆ ಎನ್ನುವ ಮಾತು ಆರೋಹಿ ನಾರಾಯಣ್ ಅವರದು.
ನಾನು ಕಾದಿದ್ದಕ್ಕೂ ಕಾರಣವಿತ್ತು…
ನಿಜ , ತುಂಬಾ ತಾಳ್ಮೆಬೇಕು.ಹಾಗಂತ ಅದು ಬೇಕಂತಲೇ ಆಗಿದ್ದಲ್ಲ. ಅದಕ್ಕೆ ಅದರದ್ದೇಯಾದ ಹಲವು ಕಾರಣವಿದೆ. ಹಾಗಾಗಿ ತಡವಾಗಿದೆ. ಇನ್ನು ನಾನು ಬೇಕಂತಲೇ ಆ ಸಿನಿಮಾಕ್ಕಾಗಿ ಕಾದಿದ್ದೇನೆ. ಕಾರಣ ಆ ಚಿತ್ರದಲ್ಲಿನ ನನ್ನ ಪಾತ್ರ. ನಾನಿನ್ನು ಅಭಿನಯದ ಮೂಲಕ ನಟಿಯಾಗಿ ಗುರುತಿಸಿಕೊಂಡಿಲ್ಲ .ಹೊಸಬರು ಅಂತ ಸಾಕಷ್ಟು ಆಫರ್ ಬಂದಿವೆ. ಅವೆಲ್ಲ ನನಗೆ ಇಷ್ಟವಾಗದ ಪಾತ್ರಗಳು. ಬಂದವರಿಗೂ ನನ್ನ ನಟನೆ ಗೊತ್ತಿಲ್ಲ. ‘ಭೀಮಸೇನ ನಳಮಹಾರಾಜ ‘ತೆರೆಕಂಡರೆ ನಾನೇನು, ನನ್ನಪಾತ್ರ ಆಯ್ಕೆಯ ಅಭಿರುಚಿಯೇನು ಅಂತ ಗೊತ್ತಾಗಲಿದೆ. ಹಾಗಾಗಿಯೇ ಈ ಸಿನಿಮಾ ಒಪ್ಪಿಕೊಂಡ ನಂತರದ ದಿನಗಳಲ್ಲಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ರಮೇಶ್ ಕಾರಣಕ್ಕೆ ಮಾತ್ರ ‘ ಶಿವಾಜಿ ಸುರತ್ಕಲ್’ ಒಪ್ಪಿಕೊಂಡಿದ್ದೆ. ಅದು ಬಿಟ್ಟರೆ ‘ ಭೀಮಸೇನ ನಳಮಹಾರಾಜ ‘ ನನ್ನ ಸಿನಿಜರ್ನಿಗೆ ಟರ್ನಿಂಗ್ ನೀಡುವುದು ಗ್ಯಾರಂಟಿ ಎನ್ನುವ ಭರವಸೆಯ ಮಾತುಗಳನ್ನಾಡುತ್ತಾರೆ ದೃಶ್ಯ ಖ್ಯಾತಿಯ ನಟಿ.