ಮಾಸ್ಕೋ ಫಿಲ್ಮ್ ಫೆಸ್ಟಿವಲ್ ನಲ್ಲಿ ಕನಿ‌ ಕುಸ್ರುತಿ‌ ಅತ್ಯುತ್ತಮ ನಟಿ‌

* ಮಾಸ್ಕೋ ಪ್ರಶಸ್ತಿ ಗೆದ್ದ ಮೊದಲ‌ ಮಲಯಾಳಂ ಚಿತ್ರ

* ಭಾರತದ ಮೊ‌ದಲ‌ ದಲಿತ ನಟಿ‌ ಪಿ.ಕೆ. ರೋಸಿಗೆ ಪ್ರಶಸ್ತಿ ಅರ್ಪಿಸಿದ ಕನಿ‌ಕುಸ್ರುತಿ

* ಚಿತ್ರರಂಗದಲ್ಲೀಗ ಸಾಮಾರ್ಥ್ಯಕ್ಕೆ ತಕ್ಕಂತಹ ಪಾತ್ರ ಸಿಗುತ್ತಿಲ್ಲ ಎನ್ನುವ ಬೇಸರ ಹೊರಹಾಕಿದ ನಟಿ

* ಜಾತಿ, ಧರ್ಮ, ವರ್ಗ, ಮೈಬಣ್ಣದ ಹೊರತಾಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಲಿ – ಕನಿ‌ಮಾತು

* ಖದೀಜಾ” ಎಂಬ ಪಾತ್ರವನ್ನು ಬರೆಯುವಾಗ ನಾನು ಕೇವಲ ಕನಿ ಕುಸ್ರುತಿ ಅವರನ್ನೇ ಗಮನದಲ್ಲಿಟ್ಟು ಕೊಂಡಿದ್ದೆ- ನಿರ್ದೇಶಕ ಸಜಿನ್ ಬಾಬು

ಬರಹ- ರಮೇಶ್ ಹೆಚ್.ಕೆ. ಶಿವಮೊಗ್ಗ
…………………………………………………….

ಸಜಿನ್ ಬಾಬು ಅವರ “ಬಿರಿಯಾನಿ” ಚಿತ್ರದಲ್ಲಿನ ತಮ್ಮ ಅತ್ಯುತ್ತಮ ನಟನೆಗಾಗಿ ನಟಿ ಕನಿ ಕಸ್ರುತಿ , 42 ನೇ ಮಾಸ್ಕೋ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟಿ ‌ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೆನೇ, ಮಾಸ್ಕೋ ಸಿನಿಮೋತ್ಸವದಲ್ಲಿ ಪ್ರಶಸ್ತಿ‌ ಗೆದ್ದ ಮೊದಲ ಮಲೆಯಾಳಂ ಚಿತ್ರ ಎಂಬ ಹೆಗ್ಗಳಿಕೆ ಬಿರಿಯಾನಿ ಚಿತ್ರದ ಪಾಲಾಗಿದೆ.

ಮೊನ್ನೆ ಮೊನ್ನೆಯಷ್ಟೇ ಮ್ಯಾಂಡ್ರಿಡ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಗೆ ಪಾತ್ರವಾಗಿದ್ದ ನಟಿ‌ ಕನಿಗೆ ಈಗ ಮಾಸ್ಕೋ‌ ಫೆಸ್ಟಿವಲ್ ಪ್ರಶಸ್ತಿ ಸಂದಿದೆ. ಹಾಗೆಯೇ ಈ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಮೊದಲ‌ ನಟಿ ಹಾಗೂ ಭಾರತೀಯ ಚಿತ್ರರಂಗದ ಮೊದಲ ದಲಿತ ನಟಿ ಪಿ.ಕೆ. ರೋಸಿ ಅವರಿಗೆ ಅರ್ಪಿಸಿರುವುದು ವಿಶೇಷ.
ಪ್ರಶಸ್ತಿಯ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಕನಿ ‌ಕುಸ್ರುತಿ “ ಈ ಪ್ರಶಸ್ತಿಯನ್ನು ನಾನು ಮಲಯಾಳಂನ ಮೊದಲ ನಾಯಕಿ ನಟಿ, ಹಾಗೂ ಭಾರತದ ಸಿನಿಮಾ ರಂಗದ ಮೊದಲ ದಲಿತ ನಟಿಯಾದ ಪಿಕೆ ರೋಸಿ, ಅವರಿಗೆ ಅರ್ಪಿಸುತ್ತೇನೆ. ಇತ್ತೀಚೆಗೆ ಚಿತ್ರರಂಗದಲ್ಲಿ ಬಹುತೇಕ ನಟ ನಟಿಯರಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾದ ಪಾತ್ರ ದೊರೆಯದೇ ಇರುವಂತಹ ಪರಿಸ್ಥಿತಿಯಿದ್ದು ಸಂಪನ್ಮೂಲಗಳ ಕಾರಣಕ್ಕೇ ಅವರಿಗೆ ಸಿಗಬೇಕಾದ ಪಾತ್ರಗಳು ದೊರೆಯದಂತಾಗಿದೆ. ಹೀಗಾಗಿ ಈ ಪ್ರಶಸ್ತಿಯನ್ನು ಅಂತಹ ಪ್ರತಿಭಾನ್ವಿತ ನಟ ನಟಿಯರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಈ ಮೂಲಕ ನಾನು ಎಲ್ಲಾ ನಟ ನಟಿಯರಿಗೆ ಜಾತಿ, ಧರ್ಮ, ವರ್ಗ, ಮೈಬಣ್ಣದ ಹೊರತಾಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಲಿ ಎಂದು ನಾನು ಆಶಿಸುತ್ತೇನೆ” ಎಂದು‌ ನಟಿ ಕನಿ ಪ್ರತಿಕ್ರಿಯೆ ನೀಡಿದ್ದಾರೆ.

“ಬಿರಿಯಾನಿ” ಸಿನಿಮಾವು ಖದೀಜಾ ಎಂಬ ಬಡ ಮುಸ್ಲಿಂ ಮಹಿಳೆಯೊಬ್ಬಳ ಬದುಕಿನ ಪಯಣದ ಕುರಿತಾಗಿದ್ದು ಆಕೆ ಜಾತಿ ಧರ್ಮಾಧಾರಿತವಾಗಿ ರಚನೆಗೊಂಡಿರುವ ಸಮಾಜದಲ್ಲಿ ಇರುವಂತಹ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಜೀವಿಸುವ ಚಿತ್ರಣವಿದೆ. ಈ ಚಿತ್ರವು ಸಂಪೂರ್ಣವಾಗಿ ಮಹಿಳೆಯ ದೃಷ್ಟಿಕೋನದಲ್ಲಿ ಇದ್ದು ಯಾವ ಕಾರಣಕ್ಕಾಗಿ ಖದೀಜಾ ಈ ಸಾಮಾಜಿಕ ಹಾಗೂ ಧಾರ್ಮಿಕ ನಿಯಮಗಳ ವಿರುದ್ಧ ಬಂಡೇಳುತ್ತಾಳೆ ಎಂಬುದರ ಕುರಿತಾಗಿದೆ.

ಈ ಸಿನಿಮಾವು ಈ ವರ್ಷ ರೋಮ್ ನಲ್ಲಿ ನಡೆದ ಏಷಿಯಾಟಿಕ್ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದ್ದು ನೆಟ್ ಪ್ಯಾಕ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗಳಿಸಿದೆ.
ಇದಕ್ಕಿಂತ ಮುಂಚೆ ಕನಿ ಅವರು ಮ್ಯಾಡ್ರೀಡ್ ನಲ್ಲಿ ನಡೆದ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರವಾಗಿದ್ದರು. ನ್ಯೂಯಾರ್ಕ್ ನಲ್ಲಿ ನಡೆದ ಟ್ರುಬೆಕಾ ಸಿನಿಮೋತ್ಸವದಲ್ಲೂ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು. ಇನ್ನು ಚಿತ್ರದ ನಿರ್ದೇಶಕ ಸಜಿನ್ ಬಾಬು ಸಂದರ್ಶನವೊಂದೆಲ್ಲಿ ಹೇಳುವಂತೆ “ಇಂತಹ ಪ್ರಭಾವಿ ಚಿತ್ರಕ್ಕೆ “ಖದೀಜಾ” ಎಂಬ ಪಾತ್ರವನ್ನು ಬರೆಯುವಾಗ ನಾನು ಕೇವಲ ಕನಿ ಕುಸ್ರುತಿ ಅವರನ್ನು ಗಮನದಲ್ಲಿ ಇಟ್ಟುಕೊಂಡೇ ಬರೆದಿದ್ದೆ, ಎಂದು ಹೇಳಿಕೊಂಡಿದ್ದಾರೆ


ಕರೋನಾ ಕಾರಣದಿಂದಾಗಿ ಕನಿ ಅವರಿಗೆ ಖುದ್ಧಾಗಿ ತೆರಳಿ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕನಿ ಅವರು “ನಾನು ಮನೆಯಲ್ಲೇ ಹಸಿರು ವಾತಾವರಣದ ನಡುವೆ ಇರಲು ಇಷ್ಟ ಪಡುತ್ತೇನೆ, ನನಗೆ ಪ್ರಯಾಣ ಎಂದರೆ ಆಗಿ ಬರುವುದಿಲ್ಲ” ಎಂದಷ್ಟೇ ಹೇಳಿ ನಗುತ್ತಾರೆ.” ಇನ್ನು ಈ ವರ್ಷ “Tryst with Destiny, ಮತ್ತು OK Computer ಎಂಬ ಇವರ ಎರಡು ಚಿತ್ರಗಳು ಬಿಡುಗಡೆಗೊಳ್ಳಲಿದ್ದು ಈ ಚಿತ್ರಗಳನ್ನು ಕ್ರಮವಾಗಿ ಪೂಜಾ ಶೆಟ್ಟಿ, ಹಾಗೂ ನೀಲ್ ಪಾಗೇದಾರ್ ಅವರು ನಿರ್ದೇಶಿಸಿದ್ದಾರೆ. ಆನಂದ್ ಗಾಂಧಿ ನಿರ್ಮಾಣ ಮಾಡಿದ್ದಾರಂತೆ.

Related Posts

error: Content is protected !!