ನವರಸ ನಾಯಕ ಜಗ್ಗೇಶ್ ಕನ್ನಡದ ಅಪರೂಪದ ನಟ. ನೂರಾರು ಸಿನಿಮಾ, ಹತ್ತಾರು ಗೆಟಪ್, ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರನ್ನು ಭರಪೂರ ರಂಜಿಸಿದ ಪಕ್ಕಾ ದೇಸಿ ಪ್ರತಿಭೆ. ಅದು ಬಿಟ್ಟರೆ, ನಟನೆಯ ಆಚೆ ಈಗವರು ಮನಸ್ಸು ಪರಿವರ್ತಿಸೋ ಮಾತುಗಾರ. ಅವರ ಮಾತು ಬರೀ ಮಾತಲ್ಲ. ಅವು ವಾಸ್ತವ ಬದುಕಿನ ನೀತಿಪಾಠ. ಒಂಥರ ಬೋಧನೆ. ಇದು ಅವರ ಇನ್ನೊಂದು ಅವತಾರ. ಅದಕ್ಕೆ ವೇದಿಕೆ ಆಗಿದೆ ‘ ಕಾಮಿಡಿ ಕಿಲಾಡಿಗಳು ‘ ಹೆಸರಿನ ಒಂದು ರಿಯಾಲಿಟಿ ಶೋ.
ಅವು ಬರೀ ಮಾತಲ್ಲ…
ಅಲ್ಲಿ ಅವರು ಮಾತನಾಡುತ್ತಾರಂದ್ರೆ , ಕೇಳ್ಬೇಕು ನೀವು. ಯಾಕಂದ್ರೆ, ಆ ಮಾತುಗಳೇ ಹಾಗೆ. ಅವು ಮೌಲ್ಯಯುತ ಬದುಕಿನ ಅಣಿ ಮುತ್ತು. ಮೌಲ್ಯಗಳೇ ಕಳೆದು ಹೋಗುತ್ತಿರುವ ಈ ಸಮಾಜಕ್ಕೆ ಅವರ ಪ್ರತಿ ಮಾತು , ಮನೆ ಮದ್ದು ಇದ್ದಂತೆ. ಸುತ್ತಲ ಸಮಾಜದ ಆಗು- ಹೋಗು, ಮಕ್ಕಳಿಗೆ ತಂದೆ- ತಾಯಿ ಮೇಲಿರಬೇಕಾದ ಗೌರವ, ಅವರ ಲಾಲನೆ-ಪಾಲನೆ, ದೇವರ ಮೇಲಿನ ನಂಬಿಕೆ, ಸಿನಿಮಾ ಬದುಕು, ಸಿನಿಮಾ ಎನ್ನುವ ಕಲಾ ಸೇವೆಗೆ ಇರುವ ಶಕ್ತಿ, ಅದನ್ನು ತಾವು ಶ್ರದ್ದೆಯಿಂದ ಒಲಿಸಿಕೊಂಡ ಪರಿ, ಪ್ರಸಕ್ತ ವಿದ್ಯಮಾನ, ಸಿದ್ಧಾಂತ ಇಲ್ಲದ ರಾಜಕಾರಣ, ಅಕ್ರಮ ಸಂಪಾದನೆಯ ಕೆಡಕು, ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗುತ್ತಿರುವ ಯುವ ಜಗತ್ತು…ಹೀಗೆ ಎಲ್ಲದರ ಕುರಿತು ಅವರು ಮಾತನಾಡುತ್ತಾರೆ. ಸಮಾಜದ ಕೆಡುಕುಗಳ ಮೇಲೆ ತಮ್ಮದೇ ಮಾತುಗಳ ಮೂಲಕ ಬೆಳಕು ಚೆಲ್ಲಿ ವೀಕ್ಷಕರ ಮನ ಗೆಲ್ಲುತ್ತಾ ಹೋಗುತ್ತಾರೆ ಜಗ್ಗೇಶ್.
ಇದು ರಿಯಾಲಿಟಿ ಶೋ ವಿಶೇಷ..
‘ ಕಾಮಿಡಿ ಕಿಲಾಡಿಗಳು ‘ ಎನ್ನುವ ಶಿರ್ಷಿಕೆಯೇ ಹೇಳುವ ಹಾಗೆ ಇದೊಂದು ಕಾಮಿಡಿ ಪ್ರಧಾನ ರಿಯಾಲಿಟಿ ಶೋ. ನವ ನವೀನ ಪರಿಕಲ್ಪನೆಗಳ ಮೂಲಕ ವೀಕ್ಷರನ್ನು ರಂಜಿಸುವುದು ಈ ಕಾರ್ಯಕ್ರಮ ದ ಉದ್ದೇಶ. ಇನ್ನು ಜಗ್ಗೇಶ್ ಅವರದ್ದು ಕೂಡ ಕಾಮಿಡಿಯೇ ಟ್ರಂಪ್ ಕಾರ್ಡ್. ಅವರೇ ಈ ಶೋ ತೀರ್ಪುಗಾರರಾದರೆ ವೀಕ್ಷರು ಇನ್ನಷ್ಟು ನಗಬಹುದು, ಕಾರ್ಯಕ್ರಮ ಕೂಡ ಸಕ್ಸಸ್ ಆಗಬಹುದು ಎನ್ನುವುದು ಚಾನೆಲ್ ನ ನಿರೀಕ್ಷೆಯೂ ಆಗಿತ್ತೇನೋ. ಆದರೆ ಅದು ಜಗ್ಗೇಶ್ ಅವರ ಎಂಟ್ರಿ ಮೂಲಕ ಅಷ್ಟಕ್ಕೆ ಮಾತ್ರ ಸೀಮಿತವಾಗದೆ ಪರಿಣಾಮಕಾರಿ ಮಾತುಗಳ ಮೂಲಕ ಜನ ಮನ ಗೆದಿದ್ದು ಅದರ ಇನ್ನೊಂದು ಹೆಗ್ಗಳಿಕೆ.ಅಷ್ಟೇ ಅಲ್ಲ, ಅದು ಕಿರುತೆರೆಯೊಂದರ ರಿಯಾಲಿಟಿ ಶೋ ನ ವಿಶೇಷತೆಯೂ ಹೌದು.
ಕಿರುತೆರೆ ವೀಕ್ಷಕರಿಗೆ ಗೊತ್ತಿರುವಂತೆ ‘ ಕಾಮಿಡಿಕಿಲಾಡಿಗಳು ‘ ರಿಯಾಲಿಟಿ ಶೋ ಈಗಾಗಲೇ ಮೂರು ಸೀಸನ್ ಮುಗಿಸಿದೆ. ಈ ಮೂರು ಸೀಸನ್ ಗಳಲ್ಲೂ ನಿರ್ದೇಶಕ ಯೋಗರಾಜ್ ಭಟ್, ನಟಿ ರಕ್ಷಿತಾ ಅವರ ಜತೆಗೆ ನಟ ಜಗ್ಗೇಶ್ ಕೂಡ ಅದರ ಖಾಯಂ ಜಡ್ಜ್. ಹಾಗೆ ನೋಡಿದರೆ ಅವರೇ ಅಲ್ಲಿ ಹೈಲೈಟ್. ಶೋ ವೇದಿಕೆ ಮೇಲೆ ಪ್ರತಿವಾರ ನಡೆಯುವ ಕಂಟೆಸ್ಟೆಡ್ ಗಳ ಅಭಿನಯ ಅಥವಾ ಪ್ರದರ್ಶನಕ್ಕೆ ಅಯ್ಕೆ ಮಾಡಿಕೊಂಡ ಕಾನ್ಸೆಪ್ಟ್ ಬಗ್ಗೆ ಯೋಗರಾಜ್ ಭಟ್ ಅಥವಾ ರಕ್ಷಿತಾ ಏನ್ ಹೇಳ್ತಾರೆ ಎನ್ನುವುದಕ್ಕಿಂತ ಜಗ್ಗೇಶ್ ಅವರ ಮಾತುಗಳ ಬಗ್ಗೆಯೇ ದೊಡ್ಡ ಕುತೂಹಲ ಇರುತ್ತೆ.
ಮನಸ್ಸು ಪರಿವರ್ತಿಸುವ ಮಾತು..
ಅಂತಹದೊಂದು ಸಂದರ್ಭವನ್ನೆ ಬಳಸಿಕೊಂಡು ಮಾತಿಗಿಳಿಯುವ ಜಗ್ಗೇಶ್ , ಅಲ್ಲಿನ ಸನ್ನಿವೇಶಕ್ಕೆ ತಕ್ಕಂತೆ ತಮ್ಮ ಅನುಭದ ಮಾತುಗಳನ್ನು ಪೋಣಿಸಿ, ಹಾಸ್ಯದ ಜತೆಗೆ ಗಂಭೀರತೆಯೂ ತುಂಬಿಕೊಳ್ಳುವಂತೆ ಮಾಡುತ್ತಾರೆ. ಅದು ವೀಕ್ಷಕರಿಗೆ ತುಂಬಾ ಹಿಡಿಸುತ್ತದೆ.’ ನಾನು ಕಾಮಿಡಿ ಕಿಲಾಡಿಗಳು’ ಶೋ ನ ಖಾಯಂ ವೀಕ್ಷಕ. ಪ್ರತಿ ವಾರ ಮಿಸ್ ಮಾಡೋದಿಲ್ಲ. ಅದಕ್ಕೆ ಎರಡು ಕಾರಣ. ನಕ್ಕು ಹಗುರಾಗಬೇಕೆನ್ನುವುದರ ಜತೆಗೆ ಜಗ್ಗೇಶ್ ಅವರ ವಾಸ್ತವದ ಮಾತುಗಳನ್ನು ಕೇಳಬೇಕು. ಅವರ ಅಲ್ಲಿ ಆಡುವ ಪ್ರತಿ ಮಾತು ವೇದವಾಕ್ಯ. ನನಗೇ ಗೊತ್ತಿರುವಂತೆ ಒಂದಿಬ್ಬರು ಗೆಳೆಯರು ಜಗ್ಗೇಶ್ ಅವರ ಮಾತಿನಿಂದ ಮನಸ್ಸು ಪರಿವರ್ತನೆ ಮಾಡಿಕೊಂಡಿದ್ದಾರೆ. ವೃದ್ದಾಶ್ರಮದಲ್ಲಿದ್ದ ತಮ್ಮ ತಂದೆ- ತಾಯಿಯನ್ನು ಮನೆಗೆ ಕರೆದುಕೊಂಡು ಬಂದೀಗ ಸಂತೋಷದಲ್ಲಿದ್ದಾರೆ. ಆ ಮಟ್ಟಿಗೆ ಮನಪರಿವರ್ತನೆ ಮಾಡಿಸುವ ಶಕ್ತಿ ಜಗ್ಗೇಶ್ ಅವರ ಮಾತುಗಳಲ್ಲಿರುತ್ತವೆ. ಒಂದೆಡೆ ನಗು, ಮತ್ತೊಂದೆಡೆ ಮನಪರಿವರ್ತಿಸುವ ಮಾತು ಈ ಕಾರ್ಯಕ್ರಮದಲ್ಲಿ ಸಿಗುತ್ತದೆ’ ಎನ್ನುತ್ತಾರೆ ಕಲಬುರಗಿ ನಿವಾಸಿ ಅನಿಲ್ ಕುಮಾರ್ ಕೋಟೆ.
ಇತಿ ಮಿತಿಯ ಪರಧಿಯಾಚೆ…
ರಿಯಾಲಿಟಿ ಶೋ ಗಳಲ್ಲಿ ಚಾನೆಲ್ ಕಡೆಯಿಂದ ತೀರ್ಪುಗಾರರಿಗೂ ಕೆಲವು ಷರತ್ತು ವಿಧಿಸುವುದು ಸಹಜ. ಅವರ ಇತಿ ಮಿತಿಗಳ ಪರಿಧಿಯೊಳಗೆಯೇ ಅವರೆಲ್ಲ ಮಾತನಾಡ ಬೇಕಾಗುತ್ತದೆ. ಅಂತಹ ಅನೇಕ ರಿಯಾಲಿಟಿ ಶೋ ಗೆ ಕನ್ನಡದ ಸ್ಟಾರ್ ಗಳೇ ತೀರ್ಪುಗಾರರಾಗಿದ್ದು ಗೊತ್ತೇ ಇದೆ. ಅವರೆಲ್ಲ ಆ ಪರಿಮಿತಿಯೊಳಗೆ ತಮ್ಮ ಅಭಿಪ್ರಾಯ ಮಂಡಿಸಿ, ಶೋ ಮುಗಿಸಿದ್ದಾರೆ.ಆದರೆ ಜಗ್ಗೇಶ್ ಹಾಗಲ್ಲ,ಅಲ್ಲಿನ ಮಿತಿಗಳನ್ನು ದಾಟಿ ತಮ್ಮ ಅನುಭವ ಸೇರಿಸಿ ಅದಕ್ಕೊಂದು ಹೊಸ ನೋಟ ಸಿಗುವಂತೆ ಮಾಡುತ್ತಾರೆ. ಹಾಗೆಯೇ ಹೊಸ ಪ್ರತಿಭೆಗಳಿಗೂ ದೊಡ್ಡ ಪ್ರೋತ್ಸಾಹ ನೀಡುತ್ತಾರೆ.
‘ ನಟ ಜಗ್ಗೇಶ್ ಅಂದ್ರೆ ಒಂದು ಸ್ಪೂರ್ತಿಯ ವ್ಯಕ್ತಿತ್ವ. ಕಾಮಿಡಿ ಕಿಲಾಡಿಗಳ ಶೋ ಗೆ ನಾನು ಆಯ್ಕೆಯಾದಾಗ ನೆಚ್ಚಿನ ನಟ ಜಗ್ಗೇಶ್ ಅವರನ್ನು ಹತ್ತಿರದಿಂದ ನೋಡುವ ಸಿಕ್ಕಿತ್ತಲ್ಲ ಅಂತಲೇ ಖುಷಿ ಪಟ್ಟಿದ್ದೆ. ಅಷ್ಟರವರೆಗೆ ಅವರನ್ನು ನಟನಾಗಿ ಕಂಡಿದ್ದ ನನಗೆ ಅಲ್ಲಿಗೆ ಹೋದಾಗ ಗೊತ್ತಾಗಿದ್ದ ಅವರೊಬ್ಬ ಗುರು ಅಂತ. ಹಳ್ಳಿಗರಂದ್ರೆ ಅವರಿಗೆ ವಿಶೇಷ ಪ್ರೀತಿ. ಶೋಮೊದಲ ದಿನವೇ ನನ್ನ ಅಭಿನಯ ಮೆಚ್ವಿಕೊಂಡು ಮಾತನಾಡಿದ್ದು ದೊಡ್ಡ ಹುಮ್ಮಸ್ಸು ತುಂಬಿತು. ನನ್ನ ಹಾಗೆ ಅವರು ಪ್ರತಿಭಾವಂತ ಪ್ರತಿಯೊಬ್ಬರನ್ನು ಇಷ್ಟಪಡುತ್ತಾರೆ. ಅವರು ಕೂಡ ಹಳ್ಳಿಯಿಂದ ಬಂದವರು. ಹಳ್ಳಿಯ ಜೀವನದ ಕಷ್ಟ-ಸುಖದ ಮಾತುಗಳನ್ನು ಹೇಳುತ್ತಲೇ, ನಮ್ಮನ್ನು ಮತ್ತಷ್ಟು ಪ್ರೇರೆಪಿಸುತ್ತಿದ್ದರು. ಒಂದು ಸ್ಟ್ರಿಪ್ ನಲ್ಲಿನ ನನ್ನ ಅಭಿನಯ ನೋಡಿ, ಜೂನಿಯರ್ ಶ್ರೀನಿವಾಸ ಮೂರ್ತಿ ಕಣೋ ನೀನು ಅಂತ ಬಿರುದು ಕೊಟ್ಟರು. ಅದು ನನ್ನೊಳಗಿನ ನಟನೆಯ ಆಸೆಯನ್ನು ದುಪ್ಪಟ್ಟು ಮಾಡಿತು. ಹಾಗೆಯೇ ಕಾಮಿಡಿಕಿಲಾಡಿಗಳು ಎನ್ನುವ ಒಂದು ಕಾಮಿಡಿ ಶೋ ಪ್ರತಿಯೊಬ್ಬರಿಗೂ ಇಷ್ಟವಾಗುವುದಕ್ಕೆ ಮುಖ್ಯ ಕಾರಣ ಜಗ್ಗೇಶ್ ಅವರ ಮಾತು, ಜತೆಗೆ ಸ್ಕಿಟ್ ಗಳ ಕೊನೆಯಲ್ಲಿ ಹೇಳುವ ಮೆಸೇಜ್. ನನಗೆ ತಿಳಿದಿರುವಂತೆ ಅದು ಅಲ್ಲಿ ಸೇರಿಕೊಂಡಿದ್ದೇ ಜಗ್ಗೇಶ್ ಅವರ ಕಾರಣಕ್ಕೆ. ಶೋ ಯಶಸ್ಸಿನಲ್ಲಿ ಅದು ಕೂಡ ಕಾರಣ ಎಂದರೆ ತಪ್ಪಲ್ಲ’ ಎನ್ನುತ್ತಾರೆ ‘ ಕಾಮಿಡಿ ಕಿಲಾಡಿಗಳು’ ಸೀಸನ್ 3 ಕಂಟೆಸ್ಟೆಡ್ ಆಗಿದ್ದ ದಾವಣಗೆರೆ ಜಿಲ್ಲೆ ಹಿರೇಗೊಣಿಗೆರೆಯ ಚಂದ್ರ ಶೇಖರ್.