ಕೊರೋನಾ ನಡುವೆಯೂ ಸಿನಿಮಾ ರಿಲೀಸ್ , ಉದ್ಯಮದ ಹಿತಕ್ಕಾಗಿ ಈ ರಿಸ್ಕ್ – ನಿರ್ಮಾಪಕ ಜಾಕ್ ಮಂಜು
ನಿರ್ಮಾಪಕ ಕಮ್ ವಿತರಕ ಜಾಕ್ ಮಂಜು ಅಲಿಯಾಸ್ ಮಂಜುನಾಥ್ ಗೌಡ ಮತ್ತೊಂದು ರಿಸ್ಕ್ ಅಥವಾ ಸಾಹಸಕ್ಕೆ ಮುಂದಾಗಿದ್ದಾರೆ. ಸರ್ಕಾರದ ಸೂಕ್ತ ಮಾರ್ಗಸೂಚಿಗಳ ಅನುಸಾರ ಅಕ್ಟೋಬರ್ 16 ಕ್ಕೆ ರಾಜ್ಯಾದಾದ್ಯಂತ ‘ಲವ್ ಮಾಕ್ಟೆಲ್’ ಚಿತ್ರ ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಜನರಲ್ಲಿ ಈಗಲೂ ಕೊರೋನಾ ಆತಂಕ ಇದೆ. ಹಾಗಾಗಿ ಇದಕ್ಕೆ ಎಷ್ಟು ಬೆಂಬಲ ಸಿಗಬಹುದೆನ್ನುವ ಕುತೂಹಲ ಈಗ ಗರಿಗೆದರಿದೆ.
ಅಸಾಧ್ಯ ಅಂತೇನಲ್ಲ…
ಹಾಗಂತ ಇದು ಸಾಧ್ಯ ಅಂತೇನು ಭಾವಿಸಬೇಕಿಲ್ಲ. ಯಾಕಂದ್ರೆ, ಲಾಕ್ ಡೌನ್ ತೆರವಾಗಿ ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿದ್ದಂತೆಯೇ ಕೊರೋನಾ ಆತಂಕದ ನಡುವೆಯೇ ಜಾಕ್ ಮಂಜು ತಮ್ಮನಿರ್ಮಾಣದ ‘ಪ್ಯಾಂಟಮ್’ ಚಿತ್ರೀಕರಣ ಶುರು ಮಾಡಿದ್ದರು. ಅದಕ್ಕಾಗಿಯೇ ಚಿತ್ರ ತಂಡದ ಜತೆಗೆ ಹೈದರಾಬಾದ್ ಗೆ ತೆರಳಿದ್ದರು. ಚಿತ್ರೋದ್ಯಮ ಕುತೂಹಲದಿಂದ ನೋಡುತ್ತಿತ್ತು. ಅಚ್ಚರಿ ಎನ್ನುವ ಹಾಗೆ ಹೈದರಾಬಾದ್ ನ ರಾಮೋಜಿಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಶುರು ಮಾಡಿದ್ದರು. ವಾರ ಕಳೆಯಿತು. ಅಲ್ಲಿಂದ ಚಿತ್ರೀಕರಣ ಯಶಸ್ವಿಯಾಗಿ ನಡೆಯುತ್ತಾ ಬಂತು. ಅದು ಚಿತ್ರೋದ್ಯಮದ ಇತರೆ ತಂಡಗಳಿಗೂ ಸ್ಪೂರ್ತಿ ನೀಡಿತು. ಒಂದರ ಹಿಂದೆ ಒಂದು ಸಿನಿಮಾಗಳ ಚಿತ್ರೀಕರಣ ಶುರುವಾಗಿದವು. ಆ ಮೂಲಕ ಚಿತ್ರೋದ್ಯಮದ ಚಟುವಟಿಕೆಗಳಿಗೆ ಜಾಕ್ ಪರೋಕ್ಷವಾಗಿ ಕಾರಣರಾದರು. ಹಾಗಂತ ಇದು ಅಷ್ಟು ಸುಲಭವಾಗಿ ಆಗಿದ್ದಲ್ಲ. ಅದು ರಿಸ್ಕ್ ಕೆಲಸವೇ ಆಗಿತ್ತು. ಆದರೆ ಜಾಕ್ ಮಂಜು ಅದನ್ನು ಗೆದ್ದರು. ಅದು ಎಲ್ಲರಿಗೂ ಗೊತ್ತು. ಅದೇ ರೀತಿ ಈಗ ಸಿನಿಮಾ ಬಿಡುಗಡೆಗೂ ಯಾಕೆ ಚಾಲನೆ ಸಿಗಬಾರದು ಎನ್ನುವುದು ನಿರ್ಮಾಪಕ ಜಾಕ್ ಮಂಜು ಆಶಯ.
ರಿಸ್ಕ್ ಉದ್ಯಮದ ಹಿತಕ್ಕಾಗಿ ..
‘ ಇದು ಖಂಡಿತವಾಗಿಯೂ ನನಗಾಗಿ ತೆಗೆದುಕೊಂಡ ರಿಸ್ಕ್ ಅಲ್ಲ. ಚಿತ್ರೋದ್ಯಮದ ಹಿತಕ್ಕಾಗಿ. ಯಾಕಂದ್ರೆ ಸಾಕಷ್ಟು ಸಿನಿಮಾಗಳು ಈಗ ಬಿಡುಗಡೆ ಹಂತದಲ್ಲಿವೆ. ಸಾಕಷ್ಟು ಮಂದಿ ಸಾಲ- ಶೂಲ ಮಾಡಿ ಸಿನಿಮಾ ಮಾಡಿದ್ದಾರೆ. ಅಷ್ಟೇ ಅಲ್ಲ, ಉದ್ಯಮ ನಂಬಿಕೊಂಡವರ ಬದುಕು ಕೂಡ ಕಷ್ಟದಲ್ಲಿದೆ. ಅವರಿಗೆ ಈಗ ಸಿನಿಮಾ ಬಿಡುಗಡೆ ಆಗಬೇಕು. ಆದರೆ ಕೊರೋನಾ ಭಯ. ಹಾಗಂತ ಎಷ್ಟು ದಿನ? ಲಾಕ್ ಡೌನ್ ಇತ್ತು ಎನ್ನುವ ಕಾರಣಕ್ಕೆ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಅದು ಸರಿಯೂ ಹೌದು. ಈಗ ಕೇಂದ್ರ ಸರ್ಕಾರದಿಂದ ಟಾಕೀಸ್ ಒಪನ್ ಗೆ ಅನುಮತಿ ಸಿಕ್ಕಿದೆ. ಸೂಕ್ತ ಎಚ್ಚರಿಕೆಯೊಂದಿಗೆ ಟಾಕೀಸ್ ಆರಂಭ ಮಾಡಬಹುದು. ಅದಕ್ಕೆ ಒಂದು ದಾರಿ ಬೇಕು. ಅದನ್ನು ನಾವೇ ಹಾಕಿಕೊಟ್ಟರೆ ಉಳಿದವರು ಧೈರ್ಯ ಮಾಡಬಹುದು ಎನ್ನುವ ಉದ್ದೇಶದಿಂದಲೇ ಈ ಪ್ರಯತ್ನಕ್ಕೆ ಕೈ ಹಾಕಿರುವೆ ‘ ಎನ್ನುತ್ತಾರೆ ವಿತರಕ ಜಾಕ್ ಮಂಜು.
ಅ.16 ಕ್ಕೆ ಲವ್ ಮಾಕ್ಟೆಲ್…
ಎಲ್ಕವೂ ಅಂದುಕೊಂಡಂತಾದರೆ’ ಲವ್ ಮಾಕ್ಟೆಲ್’ ಅಕ್ಟೋಬರ್ 16 ಕ್ಕೆ ತೆರೆಗೆ ಬರುತ್ತಿದೆ. ಅದಕ್ಕೆ ಎಲ್ಲ ರೀತಿಯ ಸಿದ್ದತೆಗಳು ನಡೆದಿವೆ. ಜಾಕ್ ಮಂಜು ಪ್ರಕಾರ ಇನ್ನು ಚಿತ್ರ ಮಂದಿರಗಳ ಅಂಕೆ- ಸಂಖ್ಯೆ ಖಚಿತವಾಗಿಲ್ಲ. ಬಿಡುಗಡೆಗೆ ಮುಂದೆ ಬಂದರೆ ಚಿತ್ರಮಂದಿರಗಳು ಆಟೋಮೆಟಿಕ್ ಆಗಿ ರೆಡಿಯಾಗುತ್ತಿವೆ. ಈಗಾಗಲೇ ಮಲ್ಟಿಪ್ಲೆಕ್ಸ್ ಗಳೂ ಅದೇ ರೀತಿಯ ಸಿದ್ದತೆ ನಡೆಸಿವೆ. ಎಲ್ಲವೂ ಮುಂದಿನ ನಾಲ್ಕೈದು ದಿನಗಳಲ್ಲಿ ಕನ್ ಫರ್ಮ್ ಆಗಲಿವೆ ಎನ್ನುವ ವಿಶ್ವಾಸ ಜಾಕ್ ಅವರದು. ಕೊರೋನಾ ಕಾಲದ ಲಾಕ್ ಡೌನ್ ಬಳಿಕ ಚಿತ್ರೀಕರಣಕ್ಕೆ ನಾಂದಿ ಹಾಡಿದ ಮೊದಲ ಸಿನಿಮಾ ‘ಪ್ಯಾಂಟಮ್’ ನದ್ದದಾರೆ, ಇನ್ನು ಕೊರೋನಾ ಕಾಲದ ಏಳು ತಿಂಗಳ ಬಳಿಕ ಜಾಕ್ ಮಂಜು ಅವರ ಮೂಲಕವೇ, ಚಿತ್ರಮಂದಿರಕ್ಕೆ ಬರುತ್ತಿರುವ ಮೊದಲ ಸಿನಿಮಾ ಎನ್ನುವ ಖ್ಯಾತಿ ‘ಲವ್ ಮಾಕ್ಟೆಲ್ ‘ ಗೆ ಸಿಗಲಿದೆ. ಹಾಗಂತ ಇದು ಮರು ಬಿಡುಗಡೆ ಅಲ್ಲ. ಕೊರೋನಾ ಬರುವ ಮುನ್ನವೇ ಈ ಚಿತ್ರ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿತ್ತು. ಕೊರೋನಾ ಕಾರಣಕ್ಕೆ ಟಾಕೀಸ್ ಬಂದ್ ಆದವು. ಈ ಚಿತ್ರದ ಪ್ರದರ್ಶನ ನಿಂತು ಹೋಗಿತ್ತು. ಹಾಗಾಗಿ ಅದರ ಮುಂದುವರೆಕೆಯ ಪ್ರದರ್ಶನ ಇದು ಎನ್ನುವ ಜಾಕ್ ಮಂಜು, ಈ ಚಿತ್ರವನ್ನೇ ರೀ ರಿಲೀಸ್ ಗೆ ಆಯ್ಕೆ ಮಾಡಿಕೊಂಡಿರುವುದು ಸುಮ್ಮನೆ ಅಲ್ಲ. ಅದಕ್ಕೂ ಒಂದು ಕಾರಣವಿದೆ.ಅದೇನು ಅಂತ ಜಾಕ್ ಮಂಜು ಹೇಳ್ತಾರೆ ಕೇಳಿ.
ನಕು
‘ 2020 ಕ್ಕೆ ಕನ್ನಡದ ಸೂಪರ್ ಹಿಟ್ ಚಿತ್ರ’ ಲವ್ ಮಾಕ್ಟೆಲ್’. ಒಟಿಟಿ ಮೂಲಗಳ ಪ್ರಕಾರ ಇದು ಕನ್ನಡದ ಅತೀ ಹೆಚ್ಚು ಗಳಿಕೆಯ ಸಿನಿಮಾ. ಕನ್ನಡದವರು ಮಾತ್ರವಲ್ಲ, ಅನ್ಯಭಾಷೆಯ ಜನರು ಕೂಡ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತುಂಬಾ ಸುದ್ದಿಯಾದ ಸಿನಿಮಾ ಇದು. ವರ್ಷದ ಆರಂಭದಲ್ಲೇ ನಾನೇ ಇದರ ವಿತರಣೆಯ ಹೊಣೆ ಹೊತ್ತು ಬಿಡುಗಡೆ ಮಾಡಿದ್ದೆ. ಮೂರೇ ದಿನದಲ್ಲಿ ಚಿತ್ರ ಟಾಕೀಸ್ ಗಳಲ್ಲಿ ಎತ್ತಂಗಡಿ ಆಯಿತು.ಒಂದೇ ಒಂದು ಚಿತ್ರಮಂದಿರದಲ್ಲಿ ಉಳಿದುಕೊಂಡು, ಅಲ್ಲಿಂದ ಭರ್ಜರಿ ಓಟ ಶುರು ಮಾಡಿದ್ದು ಎಲ್ಲರಿಗೂ ಗೊತ್ತು. ಆನಂತರ ಕೊರೋನಾ ಬಂತು. ಪ್ರದರ್ಶನ ನಿಂತು ಹೋಯಿತು. ಆದರೂ ಜನ ಈ ಸಿನಿಮಾ ಬಗ್ಗೆ ಮಾತನಾಡಿದರು. ಅದೇ ಕಾರಣಕ್ಕೆ ಈ ಚಿತ್ರವನ್ನೇ ಮರು ಬಿಡುಗಡೆ ಮಾಡೋಣ ಅಂತ ನಮ್ಮ ಅಫೀಸ್ ಟೀಮ್ ಮತ್ತು ಚಿತ್ರ ತಂಡದ ಜತೆಗೆ ಚರ್ಚೆ ಮಾಡಿ, ಈ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಹಾಗೆಯೇ ಅಕ್ಟೋಬರ್ 16 ಕ್ಕೆ ವಿತರಕ ಕಾರ್ತಿಕ್ ಗೌಡ ಕೂಡ ಒಂದೆರೆಡು ಸಿನಿಮಾ ರಿಲೀಸ್ ಗೆ ಸಿದ್ದತೆ ನಡೆಸಿರುವ ಮಾಹಿತಿ ಇದೆ. ನೋಡೋಣ ಏನೇನುಆಗುತ್ತೆ ಅಂತ. ಆದರೆ ಜನರ ಸಹಕಾರ ಇದ್ರೆ ಚಿತ್ರೋದ್ಯಮ ಚೇತರಿಕೆ ಕಾಣಲಿದೆ’ ಎನ್ನುವುದು ಜಾಕ್‌ಮಂಜು ಮಾತು.
ನಿರ್ಮಾಪಕ ಜಾಕ್ ಮಂಜು ತುಂಬಾ ರಿಸ್ಕ್ ತೆಗೆದುಕೊಂಡೇ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಕೊರೋನಾ ಆತಂಕದಿಂದ ಇಡೀ ಉದ್ಯಮ ಸೈಲೆಂಟ್ ಆಗಿದೆ. ಇದೇ ಪರಿಸ್ಥಿತಿ ಇನ್ನೆಷ್ಟು ದಿನವೋ ಗೊತ್ತಿಲ್ಲ. ಅದರೆ ಲಾಕ್ ಡೌನ್ ದಿನಗಳಲ್ಲಿ ಉದ್ಯಮದ ಮಂದಿ ಅನುಭವಿಸಿರುವ ನೋವು ಅವರಿಗೂ ಗೊತ್ತಿದೆ. ಅದೇ ಕಾರಣಕ್ಕಾಗಿಯೇ ಈಗ ಕೊರೋನಾಕ್ಕೂ ಚಾಲೆಂಜ್ ಹಾಕೋಣ. ಉದ್ಯಮ ಚಟುವಟಿಕೆ ಆರಂಭಿಸೋಣ ಎನ್ನುತ್ತಾರೆ ಜಾಕ್ ಮಂಜು.
…