ಕನ್ನಡ ಚಿತ್ರರಂಗದ ಹಾಸ್ಯ ನಟ ರಾಕ್ ಲೈನ್ ಸುಧಾಕರ್ (65) ಗುರುವಾರ (ಸೆ.24) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ವಿಶಿಷ್ಠ ಧ್ವನಿ ಮತ್ತು ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಪರಿಚಿತರಾಗಿದ್ದ ಸುಧಾಕರ್ ಅವರು, ‘ಶುಗರ್ ಲೆಸ್’ ಸಿನಿಮಾದ ಚಿತ್ರೀಕರಣದಲ್ಲಿರುವಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ.
‘ಪಂಚರಂಗಿ’, ‘ಪರಮಾತ್ಮ’, ‘ಡ್ರಾಮಾ’, ‘ಟೋಪಿವಾಲಾ’, ‘ಝೂಮ್’, ‘ವಾಸ್ತು ಪ್ರಕಾರ’, ‘ಲವ್ ಇನ್ ಮಂಡ್ಯ’, ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’,’ಶೋಕಿವಾಲ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ಚಿತ್ರಗಳಲ್ಲಿ ಖಾಯಂ ಕಲಾವಿದರಾಗಿದ್ದರು.
ಸುಧಾಕರ್ ಅವರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು. ಹಾಗಾಗಿ ಅವರಿಗೆ ರಾಕ್ ಲೈನ್ ಸುಧಾಕರ್ ಎಂದೇ ಕರೆಯಲಾಗುತ್ತಿತ್ತು.
ಕೆ.ಎಂ.ಶಶಿಧರ್ ನಿರ್ದೇಶಿಸಿ, ನಿರ್ಮಿಸುತ್ತಿರುವ ‘ಶುಗರ್ ಲೆಸ್’ ಚಿತ್ರದಲ್ಲಿ ಅವರು, ಮೂರು ದಿನಗಳ ಕಾಲ ನಟಿಸಿದ್ದರು. ಗುರುವಾರ ಬೆಳಗ್ಗೆ ಬನ್ನೇರುಘಟ್ಟ ಸಮೀಪ ಚಿತ್ರೀಕರಣ ನಡೆಯುತ್ತಿತ್ತು. ತಮ್ಮ ಪಾತ್ರಕ್ಕೆ ಮೇಕಪ್ ಮಾಡಿಕೊಂಡು ಶಾಟ್ ಗೆ ರೆಡಿಯಾಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿದ್ದಾರೆ.ಮೃತರ ಅಂತ್ಯಕ್ರಿಯೆ ಶುಕ್ರವಾರ (ಸೆ.25)ರಂದು ನಡೆಯಲಿದೆ.
ಸಂತಾಪ: ಕನ್ನಡ ಚಿತ್ರರಂಗದ ಗಣ್ಯರು, ನಟ, ನಿರ್ಮಾಪಕ, ನಿರ್ದೇಶಕರು
ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ.