ಕನ್ನಡದಲ್ಲಿ “ಯು ಟರ್ನ್ ” ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ಜೋರು ಸುದ್ದಿ ಮಾಡಿದ ಚಿತ್ರವದು. ಈಗ ಮತ್ತೆ “ಯು ಟರ್ನ್ ” ಸುದ್ದಿ ಮಾಡುತ್ತಿದೆ. ಆದರೆ, ಇದು ಆ “ಯು ಟರ್ನ್ ” ಅಲ್ಲ ಅನ್ನೋದು ವಿಶೇಷ. ಹೌದು, ಇದು “ಯು ಟರ್ನ್ 2” ಹಾಗಂತ, ಆ “ಯು ಟರ್ನ್ ” ಚಿತ್ರಕ್ಕೂ ಈ “ಯು ಟರ್ನ್ 2” ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅದೇ ಬೇರೆ, ಇದೇ ಬೇರೆ. ಹೊಸ ಬಗೆಯ ಕಥೆ, ಚಿತ್ರಕಥೆ, ನಿರೂಪಣೆಯೊಂದಿಗೆ ತಯಾರಾಗಿರುವ ಸಿನಿಮಾ ಇದು. ಈ ಚಿತ್ರದ ಮೂಲಕ ಚಂದ್ರು ಓಬಯ್ಯ ನಿರ್ದೇಶಕರಾಗುತ್ತಿದ್ದಾರೆ. ಹಾಗಂತ ಚಂದ್ರು ಓಬಯ್ಯ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಚಂದ್ರು ಓಬಯ್ಯ ಅವರು ನಿರ್ದೇಶಕರಾಗುವುದಕ್ಕೂ ಮುನ್ನ ಸಂಗೀತ ನಿರ್ದೇಶಕರಾದವರು. “ಟ್ರಿಗರ್”, “ಮನೋರಥ”, ” ರಾಜಪಥ” ಚಿತ್ರಗಳಿಗೆ ಸಂಗೀತ ಸಂಯೋಜಿಸಿದವರು. ಈಗ “ಯು ಟರ್ನ್ 2” ನಿರ್ದೇಶನದ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ರಂಗಿನ ಲೋಕಕ್ಕೆ ಕಲರ್ ಫುಲ್ ಕನಸಿನೊಂದಿಗೆ ಎಂಟ್ರಿಯಾದ ಚಂದ್ರ ಓಬಯ್ಯ ಇದೀಗ ತಮ್ಮ ಕನಸಿನ ನಿರ್ದೇಶನದ ಚಿತ್ರದ ಮೂಲಕ ಹೊಸ ಯಶಸ್ಸು ಕಾಣುವ ಉತ್ಸಾಹದಲ್ಲಿದ್ದಾರೆ. ಆ ಉತ್ಸಾಹದ ಮೊದಲ ಮೆಟ್ಟಿಲೆಂಬಂತೆ ಚಿತ್ರದ ಲಿರಿಕಲ್ ಸಾಂಗ್ ಕೂಡ ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.
“ಯು ಟರ್ನ್ 2” ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನು ಐದು ದಿನಗಳ ಪ್ಯಾಚ್ ವರ್ಕ್ ಮುಗಿದರೆ ಸಿನಿಮಾ ಕಂಪ್ಲೀಟ್ ಆಗಲಿದೆ. ಸೆ. 11 ರಂದು ಚಿತ್ರದ ಲಿರಿಕಲ್ ವಿಡಿಯೊ ರಿಲೀಸ್ ಆಗಿದ್ದು, “ಊರ ಬಿಟ್ಟು ಊರೀಗೆ ಬಂದೀವಿ…” ಎಂಬ ಅರ್ಥಪೂರ್ಣ ಸಾಹಿತ್ಯವಿರುವ ಈ ಹಾಡಿಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನವೀನ್ ಸಜ್ಜು ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಆನಂದ್ ಆಡಿಯೋ ಚಾನೆಲ್ನಲ್ಲಿ ಬಿಡುಗಡೆಗೊಂಡಿದ್ದು, ರಿಲೀಸ್ ಆದ ಕೆಲ ಗಂಟೆಗಳಲ್ಲೇ ಸಾವಿರಾರು ಲೈಕ್ಸ್ ಪಡೆದುಕೊಂಡಿದೆ. ಹಾಡಲ್ಲಿ ಸಾಹಿತ್ಯದ ಜೊತೆಗೆ ಸಂಗೀತದ ಮಾಧುರ್ಯ ಕೂಡ ಸೊಗಸಾಗಿದೆ. ಲೈವ್ ಜರ್ಮನ್ ಫ್ಲ್ಯೂಟ್ ಬಳಸಲಾಗಿದೆ. ಗುಣಮಟ್ಟದಿಂದ ಕೂಡಿರುವ ಹಾಡು ಕೊಡುವ ಉದ್ದೇಶದಿಂದ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಹಾಡನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ ಎಂಬುದು ನಿರ್ದೇಶಕ ಚಂದ್ರು ಓಬಯ್ಯ ಅವರ ಮಾತು.
ಮೂವೀಸ್ ಫೋರ್ಟ್ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗಿದ್ದು, ಆನಂದ್ ಸಂಪಂಗಿ ನಿರ್ಮಾಣವಿದೆ. ಇನ್ನು, ಈ ಸಿನಿಮಾದಲ್ಲಿ “ತಿಥಿʼ ಖ್ಯಾತಿಯ ಪೂಜಾ ನಾಯಕಿಯಾದರೆ, ಪ್ರಮುಖವಾಗಿ ನಿರ್ದೇಶಕ ಚಂದ್ರು ಓಬಯ್ಯ, ಕರಿಸುಬ್ಬು, “ಕಿರಿಕ್ ಪಾರ್ಟಿ” ರಾಘು, ಉಗ್ರಂ ರವಿ ಇತರರು ನಟಿಸಿದ್ದಾರೆ. ಇದೊಂದು ಹಾರರ್ ಜಾನರ್ ಸಿನಿಮಾ ಆಗಿದ್ದು, ಮೊದಲು ಬಂದ ಯು ಟರ್ನ್ ಸಿನಿಮಾಗೂ ಈ ಚಿತ್ರಕ್ಕೂ ಯಾವ ಸಂಬಂಧವಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸುತ್ತಾರೆ. ಸುಮಾರು 50 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಸಾಂಗ್ ಶೂಟ್ ಮಾಡಿದರೆ ಚಿತ್ರೀಕರಣ ಮುಗಿಯಲಿದೆ. ಚಿತ್ರಕ್ಕೆ ನವೀನ್ ತುರುವೇಕೆರೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಉಳಿದಂತೆ ಚೆಲುವ ಮೂರ್ತಿ, ಪ್ರಮೋದ್ ಗೌಡ, ಸ್ವರಾಜ್, ಅಶೋಕ್ ಇತರರು ” ಯು ಟರ್ನ್ 2 ” ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಸಿನಿಮಾ ರೆಡಿಯಾಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.