ಈಗಂತೂ ಡಿಜಿಟಲ್ನದ್ದೇ ಸುದ್ದಿ. ಅದರಲ್ಲೂ ಈಗಿನ ಯೂಥ್ ಡಿಜಿಟಲ್ ವೇದಿಕೆಯನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಂತೂ ಈಗಾಗಲೇ ವೆಬ್ಸೀರೀಸ್ ಹವಾ ಜೋರಾಗಿಯೇ ಇದೆ. ಅಷ್ಟಕ್ಕೂ ಈ ವೆಬ್ ಸೀರೀಸ್ ನಲ್ಲಿ ಹೊಸಬರೇ ಇದ್ದಾರೆ ಅನ್ನೋದು ವಿಶೇಷ. ಆ ಮೂಲಕ ಕೆಲವರು ಸುದ್ದಿಯಾಗಿದ್ದಾರೆ ಕೂಡ. ಆ ಸಾಲಿಗೆ “ಮಂಗಳʼ ಹೆಸರಿನ ವೆಬ್ಸೀರೀಸ್ ಕೂಡ ಸೇರಿದೆ. ಹೌದು, ಈಗಾಗಲೇ “ಮಂಗಳʼ ಎಂಬ ವೆಬ್ ಸೀರೀಸ್ ಹಿಂದೆ ಹೊಸಬರ ತಂಡ ಅಣಿಯಾಗಿದೆ. ಈಗಾಗಲೇ “ಮಂಗಳ” ವೆಬ್ ಸೀರೀಸ್ ನ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದೆದು, ಆ ಪೋಸ್ಟರ್ಗೆ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ.
ಅಂದಹಾಗೆ, ಈ “ಮಂಗಳʼ ವೆಬ್ಸೀರೀಸ್ಗೆ ಪೃಥ್ವಿ ಕುಣಿಗಲ್ ನಿರ್ದೇಶಕರು. ಕಥೆ, ಚಿತ್ರಕಥೆ ಇವರೇ ಬರೆದಿದ್ದಾರೆ. ಜೆ.ಜಿ.ಪ್ರೊಡಕ್ಷನ್ಸ್ ನಡಿ ಈ ವೆಬ್ ಸೀರೀಸ್ ನಿರ್ಮಾಣ ಮಾಡಲಾಗಿದೆ. “ಮಂಗಳ” ಕುರಿತು ನಿರ್ದೇಶಕ ಪೃಥ್ವಿ ಕುಣಿಗಲ್ ಹೇಳುವುದೇನು ಗೊತ್ತಾ? ಈ ವೆಬ್ ಸೀರೀಸ್ ನಲ್ಲಿ ಏಳು ಎಪಿಸೋಡ್ಗಳು ಇರಲಿವೆ. ಇದೊಂದು ಮಂಗಳಮುಖಿಯರ ಕುರಿತು ಸಾಗುವ ಕಥೆ. ಮಂಗಳ ಮುಖಿ ಅವರ ಬಗ್ಗೆ ಮಾಡುತ್ತಿರುವುದರಿಂದ ಸಾಕಷ್ಟು ಸಂಶೋಧನೆ ನಡೆಸಿ, ಚಿತ್ರಕ್ಕೆ ಕೈ ಹಾಕಿದ್ದು, ಮಂಗಳ ಮುಖಿಯರು ವಾಸ ಮಾಡುವಂತಹ ಸ್ಥಳಗಳಿಗೆ ಹೋಗಿ, ಅವರ ಹಾವ-ಭಾವ, ನೋವು-ನಲಿವು ಸೇರಿದಂತೆ ಅವರ ಕಷ್ಟ-ಸುಖ ಎಲ್ಲವನ್ನೂ ಆಲಿಸಿ, ಒಂದು ವರ್ಷಗಳ ಕಾಲ ಗಮನಿಸಿ, ಸಂಶೋಧನೆಯನ್ನೂ ನಡೆಸಿ, ಈಗ ವೆಬ್ ಸೀರೀಸ್ ಮಾಡಲಾಗುತ್ತಿದೆ. ಈ “ಮಂಗಳʼ ವೆಬ್ ಸೀರೀಸ್ ಒಂದು ಥ್ರಿಲ್ಲರ್ ಸ್ಟೋರಿ. ಒಂದು ಕೊಲೆಯ ಸುತ್ತ ನಡೆಯೋ ಕಥೆ ಇದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ, ಮಂಗಳ ಮುಖಿಯೊಬ್ಬರು ಸಿಲುಕುತ್ತಾರೆ. ಅದರಿಂದ ಅವರು ಹೇಗೆಲ್ಲಾ ಪರಿತಪಿಸುತ್ತಾರೆ. ಆಮೇಲೆ ಅದರಿಂದ ಅವರು ಹೊರ ಬರುತ್ತಾರೋ ಇಲ್ಲವೋ ಎಂಬುದು ಸಸ್ಪೆನ್ಸ್.
ವಿಶೇಷವೆಂದರೆ, “ಮಂಗಳ” ಈಗಾಗಲೇ ಮಾರತಹಳ್ಳಿ ಸುತ್ತಮುತ್ತ ಹಂತದ ಚಿತ್ರೀಕರಣ ಮುಗಿಸಿದೆ. ಇಷ್ಟರಲ್ಲೇ ದೂರದ ಕೊಲ್ಕೊತ್ತಾದಲ್ಲೂ ಹೋಗಿ ಚಿತ್ರೀಕರಣ ಮಾಡುವ ಯೋಚನೆ ನಿರ್ದೇಶಕ ಪೃಥ್ವಿ ಕುಣಿಗಲ್ ಅವರದು. ಅಂದಹಾಗೆ, ಈ ವೆಬ್ ಸೀರೀಸ್ ನಲ್ಲಿ ಅಜಯ್ ರಾಜ್, ವಿನಯ್ ಕೃಷ್ಣಸ್ವಾಮಿ, ಕಾವ್ಯಾಶಾಸ್ತ್ರಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಘವೇಂದ್ರ, ಬೇಬಿ ಅಂಕಿತ, ಮಂಜು ಪಾವಗಡ, ಅಮರ್ ನಾಥ್, ಕಿರಣ್ ಬಗಾಡೆ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಆನಂದ್ ಸುಂದರೇಶ ಕ್ಯಾಮೆರಾ ಹಿಡಿದರೆ, ಮಯೂರೇಶ್ ಸಂಗೀತವಿದೆ. ಇನ್ನು ಪ್ರಮೋದ್ ಮರವಂತೆ ಸಂಭಾಷಣೆ ಬರೆದಿದ್ದಾರೆ. ಮಹೇಶ್ ತೊಗಟ ಸಂಕಲನವಿದೆ. ಒಟ್ಟಾರೆ, ಥ್ರಿಲ್ ಎನಿಸುವ ವೆಬ್ ಸೀರೀಸ್ ಕಟ್ಟಿಕೊಡುವ ಉತ್ಸಾಹದಲ್ಲಿರುವ ಪೃಥ್ವಿ ಮತ್ತು ತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ.