ರಾಜೇಂದ್ರ ಸಿಂಗ್‌ ಬಾಬು ಕಂಡಂತೆ ವಿಷ್ಣು… ಕಾದಂಬರಿ ಚಿತ್ರಕ್ಕೆ ವಿಷ್ಣು ಸರಿ ಆಯ್ಕೆ

ಇದು ಸಿನಿಲಹರಿ ವಿಶೇಷ..

 

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮತ್ತು ಡಾ.ವಿಷ್ಣುವರ್ಧನ್‌ ಅವರ ನಡುವಿನ ಗೆಳೆತನಕ್ಕೆ ನಾಲ್ಕು ದಶಕಗಳು ಕಳೆದಿವೆ. ಇವರಿಬ್ಬರ ಗೆಳೆತನಕ್ಕೆ ಒಂದು ಕಲರ್ ಫುಲ್‌ ಇತಿಹಾಸವೇ ಇದೆ. ಇಬ್ಬರೂ ಬಾಲನಟರಾಗಿ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡವರು. ಅದಕ್ಕಿಂತ ಹೆಚ್ಚಾಗಿ ಇಬ್ಬರ ನಡುವೆ ಅತಿಯಾದ ಸ್ನೇಹವಿತ್ತು. ಆಗಾಗ ಮುನಿಸು ಬರುತ್ತಿತ್ತು. ಆದರೆ, ಅದು ಕೇವಲ ಆ ಕ್ಷಣಕ್ಕೆ ಮಾತ್ರ. ಅಷ್ಟೇ ಸಲುಗೆಯಿಂದಿದ್ದ ಈ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಜೋಡಿ ಎನಿಸಿಕೊಂಡವರು. ಅಷ್ಟೇ ಅಲ್ಲ, ಹಲವಾರು ಸಕ್ಸಸ್‌ ಸಿನಿಮಾಗಳನ್ನು ಕೊಟ್ಟವರು. ವಿಷ್ಣುವರ್ಧನ್‌ ವ್ಯಕ್ತಿತ್ವ. ಅವರೊಂದಿಗಿನ ಒಡನಾಟ ಮತ್ತು ಅವರೊಳಗಿನ ಕಲಾವಿದನ ಕುರಿತು ರಾಜೇಂದ್ರ ಸಿಂಗ್‌ ಬಾಬು ಆಪ್ತ ಮಾತು.

 

ನಾನೂ ವಿಷ್ಣು ಬಾಲನಟರಾಗಿ ನಟಿಸಿದ್ದೆವು…

*ನಮ್ಮ ಫ್ಯಾಮಿಲಿಗೂ ಡಾ.ವಿಷ್ಣುವರ್ಧನ್‌ ಫ್ಯಾಮಿಲಿಗೂ ಅವಿನಾಭಾವ ಸಂಬಂಧವಿದೆ. ಕಾರಣ, ವಿಷ್ಣುವರ್ಧನ್‌ ಅವರ ತಂದೆ ಮತ್ತು ನಮ್ಮ ತಂದೆ ಇಬ್ಬರ ನಡುವೆ ಸ್ನೇಹವಿತ್ತು. ಸ್ನೇಹ ಅಷ್ಟೇ ಅಲ್ಲ, ನಮ್ಮ ಕಂಪೆನಿಗಳಲ್ಲಿ ವಿಷ್ಣುವರ್ಧನ್‌ ಅವರ ತಂದೆ ಕೆಲಸ ಮಾಡಿದ್ದರು. ಅವರ ತಂದೆ ಒಬ್ಬ ಒಳ್ಳೆಯ ಬರಹಗಾರರು ಮತ್ತು ಕಲಾವಿದರಾಗಿದ್ದರು. ಅವರಷ್ಟೇ ಅಲ್ಲ, ವಿಷ್ಣು ಸಹೋದರಿ ರಮಾ ಕೂಡ ನಮ್ಮ ಬ್ಯಾನರ್‌ನಲ್ಲಿ ತಯಾರಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. “ಶಿವಶರಣೆ ನಂಬೆಕಾʼ ಚಿತ್ರದಲ್ಲಿ ಅವರು ಅನಂತಸ್ವಾಮಿ ಹಾಡಿದ ಹಾಡೊಂದಕ್ಕೆ ಡ್ಯಾನ್ಸ್‌ ಮಾಡಿದ್ದರು. ವಿಷ್ಣುವರ್ಧನ್‌ ಮತ್ತು ನಾನು ಚಿತ್ರವೊಂದರಲ್ಲಿ ಬಾಲನಟರಾಗಿಯೂ ನಟಿಸಿದ್ದೆವು. ಅಲ್ಲಿಂದ ನಮ್ಮ ಗೆಳೆತನ ಶುರುವಾಯ್ತು. ನಮ್ಮಿಬ್ಬರ ಫ್ಯಾಮಿಲಿಯ ಸಂಬಂಧ ಕೂಡ ಗಟ್ಟಿಯಾಗುತ್ತಾ ಹೋಯ್ತು. ವಿಷ್ಣುವರ್ಧನ್‌ ಬೆಂಗಳೂರಲ್ಲಿ ಇರುತ್ತಿದ್ದರು. ನಾನು ಮೈಸೂರಲ್ಲಿ ಇರುತ್ತಿದ್ದೆ. ಅವರ ತಂದೆ ಆಗಾಗ ವಿಷ್ಣುನಾ ಕರೆದುಕೊಂಡು ಬರೋರು. ಇಬ್ಬರು ಜತೆಗೂಡಿ ಒಂದಷ್ಟು ಹರಟುತ್ತಿದ್ದೆವು. “ನಾಗರಹಾವು” ಚಿತ್ರ ಶುರುವಾಗುವ ಹೊತ್ತಿಗೆ ವಿಷ್ಣು ನನ್ನ ಆತ್ಮೀಯ ಗೆಳೆಯನಲ್ಲೊಬ್ಬನಾಗಿದ್ದ. ಕಾರಣ, ಆ ಚಿತ್ರಕ್ಕೆ ವೀರಸ್ವಾಮಿ ನಿರ್ಮಾಪಕರಾಗಿದ್ದರು. ನನಗೇ ಅವರು ಪ್ರೊಡಕ್ಷನ್‌ ನೋಡಿಕೊಳ್ಳುವಂತೆ ಹೇಳಿದ್ದರು. ಹಾಗಾಗಿ ನಾನು “ನಾಗರಹಾವುʼ ಚಿತ್ರದ ಪ್ರೊಡಕ್ಷನ್‌ ನೋಡಿಕೊಳ್ಳುತ್ತಿದ್ದೆ. ಆ ಸಿನಿಮಾದಿಂದಲೂ ನಮ್ಮ ಗೆಳೆತನ ಮತ್ತಷ್ಟು ಗಟ್ಟಿಯಾಯ್ತು. ನಾನು ನಿರ್ದೇಶಿಸಿದ ಮೊದಲ ಚಿತ್ರ “ನಾಗಕನ್ಯೆʼ. ಆ ಚಿತ್ರದಲ್ಲಿ ವಿಷ್ಣುವರ್ಧನ್‌ ಅಭಿನಯಿಸಿದ್ದ. ನನ್ನ ಮೊದಲ ನಿರ್ದೇಶನದಲ್ಲಿ ವಿಷ್ಣು ಇರಬೇಕು ಎಂದು ಬಯಸಿದ್ದೆ. ಅವನು ಕೂಡ ನಟಿಸಲು ಬಯಸಿದ್ದ. ಆ ಬಳಿಕ ಒಂದಷ್ಟು ಚಿತ್ರಗಳನ್ನು ಜತೆಯಾಗಿ ಮಾಡಿದೆವು. ಇಬ್ಬರ ನಡುವೆ ಕೇವಲ ಸ್ನೇಹ ಮಾತ್ರ ಇರಲಿಲ್ಲ. ಕಷ್ಟ–ಸುಖ ಬಗ್ಗೆಯೂ ಮಾತಾಡುತ್ತಿದ್ದೆವು. ಅವರ ಫ್ಯಾಮಿಲಿ ನಮ್ಮ ಮನೆಗೆ ಬರೋದು, ನಾವು ಅವರ ಮನೆಗೆ ಹೋಗೋದು, ಹೀಗೆ ಒಳ್ಳೆಯ ವಾತಾವರಣ ನಮ್ಮ ನಡುವೆ ಬೆಳೆದಿತ್ತು.

 

ವಿಷ್ಣು ಸದಾ ಪಾಸಿಟಿವ್‌ ಥಿಂಕ್‌ ಮ್ಯಾನ್

*ವಿಷ್ಣುವಿನ ವ್ಯಕ್ತಿತ್ವ ಬಗ್ಗೆ ಹೇಳುವುದಾದರೆ, ಅವನೊಬ್ಬ ತುಂಬಾ ಒಳ್ಳೆಯ ಮನುಷ್ಯ. ಅಷ್ಟೇ ಅದ್ಭುತ ನಟ. ಎಲ್ಲರ ಕಷ್ಟವನ್ನು ಆಲಿಸುತ್ತಿದ್ದ. ಕೈಲಾದ ಸಹಾಯವನ್ನೂ ಮಾಡುತ್ತಿದ್ದ. ಆದರೆ, ಯಾವುದನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಅವನೊಂದಿಗೆ ನಾನು ದಶಕಗಳ ಕಾಲ ಸ್ನೇಹ ಇಟ್ಟುಕೊಂಡಿದ್ದೆ ಅನ್ನೋದೇ ದೊಡ್ಡ ಖುಷಿಯ ಅನುಭವ. ತುಂಬಾ ಬುದ್ಧಿವಂತ ಮನುಷ್ಯನಾಗಿದ್ದ. ವಿಷ್ಣು ಎಲ್ಲರ ಜೊತೆಯಲ್ಲೂ ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದ. ಅದರಲ್ಲೂ ನನ್ನ ಜತೆಯಲ್ಲಂತೂ ಸದಾ ಮಾತಾಡುತ್ತಿರಬೇಕು, ಮಿಸ್‌ ಮಾಡದೆ ದಿನಾಲೂ ಮೀಟ್‌ ಮಾಡುತ್ತಿರಬೇಕು.  ಹರಟುತ್ತಿರಬೇಕು. ಅಷ್ಟರಮಟ್ಟಿಗೆ ನಾವಿದ್ದೆವು. ಅವನಲ್ಲಿ ನಾನು ಮೈನಸ್‌ ಅಂಶಗಳನ್ನು ನೋಡಿಯೇ ಇಲ್ಲ. ಯಾವಾಗಲೂ ಪಾಸಿಟಿವ್‌ ಆಗಿಯೇ ಥಿಂಕ್‌ ಮಾಡೋನು. ನಮಗೂ ಅದನ್ನೇ ಹೇಳೋನು. ಎಲ್ಲರ ಹೃದಯಕ್ಕೆ ಹತ್ತಿರವಾಗಿರುತ್ತಿದ್ದ ಹೃದಯವಂತ ನಟ ಅವನು.

 

ಟರ್ನಿಂಗ್‌ ಪಾಯಿಂಟ್‌ ಕೊಟ್ಟ ಬಂಧನ

* ವಿಷ್ಣುವರ್ಧನ್‌ಗೆ ನನ್ನ ನಿರ್ದೇಶನದ “ಬಂಧನ” ಚಿತ್ರ ಟರ್ನಿಂಗ್‌ ಪಾಯಿಂಟ್‌ ಆಯ್ತು. ಆ ಸಿನಿಮಾದಿಂದ ವಿಷ್ಣುವರ್ಧನ್‌ಗೆ ಬೇರೆಯದ್ದೇ ಇಮೇಜ್ ಸಿಕ್ತು. ಆ ಸಿನಿಮಾ ನೋಡಿದವರೆಲ್ಲರೂ ವಿಷ್ಣು ಅವರನ್ನು ಕಂಡಾಗ “ಬಂಧನʼದ ನಟನೆ ಬಗ್ಗೆಯೇ ಮಾತಾಡುತ್ತಿದ್ದರು. ಆ ಚಿತ್ರ ನನಗೂ ಮತ್ತು ವಿಷ್ಣು ಇಬ್ಬರಿಗೂ ಅತ್ಯಂತ ಜನಪ್ರಿಯತೆ ತಂದುಕೊಟ್ಟಿತು. ಇನ್ನೊಂದು ವಿಷಯ ಹೇಳಲೇಬೇಕು. “ಬಂಧನʼ ಬಳಿಕ ವಿಷ್ಣುವರ್ಧನ್‌ಗೆ ಲೇಡಿಸ್‌ ಆಡಿಯನ್ಸ್‌ ಹೆಚ್ಚಾದರು. ಆ ಸಿನಿಮಾ ಬಳಿಕ “ಕರ್ಣʼ, “ಹಿಮಪಾತʼ, ʼಮುತ್ತಿನಹಾರʼ, ʼಮಹಾಕ್ಷತ್ರಿಯʼ ಚಿತ್ರಗಳಿಗೆ ಹೆಚ್ಚಾಗಿ ಲೇಡಿಸ್‌ ಆಡಿಯನ್ಸ್‌ ನಿಂದಲೇ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು.

 

ಇಂದಿಗೂ ಆ ಕಥೆ ಹಾಗೇ ಇದೆ…

*ವಿಷ್ಣು ಕಾದಂಬರಿ ಬೇಸ್ಡ್‌ ಸಿನಿಮಾಗಳಿಗೆ ಸರಿ ಹೊಂದುತ್ತಿದ್ದ. ಡಾ.ರಾಜಕುಮಾರ್‌ ಅವರನ್ನು ಬಿಟ್ಟರೆ, ಕಾದಂಬರಿ ಕುರಿತ ಚಿತ್ರಗಳಿಗೆ ವಿಷ್ಣು ಸೂಕ್ತ ನಟ ಎಂಬ ಮಾತು ಆಗ ಕೇಳಿಬರುತ್ತಿತ್ತು. “ಭಾಗ್ಯ ಜ್ಯೋತಿʼ, “ಹೊಂಬಿಸಲುʼ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಷ್ಣು ಅಭಿನಯ ಜನ ಮೆಚ್ಚುಗೆ ಪಡೆದಿತ್ತು. “ಬಂಗಾರದ ಜಿಂಕೆʼ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ವಿಷ್ಣು ಅವರನ್ನು ಇಂದಿಗೂ ಮರೆಯುವಂತಿಲ್ಲ. ಅಷ್ಟರಮಟ್ಟಿಗೆ ಅಭಿನಯಿಸಿದ್ದಾನೆ. ನಾನು ವಿಷ್ಣುಗೆ ನಿರ್ದೇಶಿಸಿದ ಕೊನೆಯ ಚಿತ್ರ “ಮಹಾಕ್ಷತ್ರಿಯʼ ವಿಷ್ಣುಗೆ ಇನ್ನು, ಒಂದಷ್ಟು ಚಿತ್ರಗಳನ್ನು ಮಾಡುವ ಬಗ್ಗೆ ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಮಾಡಿಕೊಂಡಿದ್ದೆ. ಆ ಸಮಯದಲ್ಲಿ ವಿಷ್ಣುವರ್ಧನ್‌, ಒಂದು ದಿನವೂ ಬಿಡುವಿರದಂತೆ ಚಿತ್ರಗಳಲ್ಲಿ ನಟಿಸುತ್ತಿದ್ದರು. ಅತ್ತ, ನಾನು ಬೇರೆ ಚಿತ್ರಗಳನ್ನು ನಿರ್ದೇಶಿಸುತ್ತಿದ್ದೆ. ವಿಷ್ಣುಗಾಗಿಯೇ ನಾನು ಒಂದೊಳ್ಳೆಯ ಕಥೆ ರೆಡಿಮಾಡಿಕೊಂಡಿದ್ದೆ. ಅದನ್ನು ನೀನೇ ಮಾಡಬೇಕು ಕಥೆ ಹೇಳ್ತೀನಿ, ಕೇಳು ಅಂದಿದ್ದೆ. ಆಗ ವಿಷ್ಣು ಮೈಸೂರಲ್ಲಿದ್ದರು. ಹೊಸ ವರ್ಷ ಶುರುವಾಗುತ್ತೆ. ಒಂದನೇ ತಾರೀಖಿಗೆ ಬಂದು ಬಿಡು. ಕಥೆ ಹೇಳು ಕೇಳ್ತೀನಿ ಅಂದಿದ್ದ. ಆದರೆ, ಅದು ಸಾಧ್ಯವಾಗಲೇ ಇಲ್ಲ. ಇವತ್ತಿಗೂ ಆ ಕಥೆ ಹಾಗೆಯೇ ಇದೆ. ಆ ಕಥೆಗೆ ವಿಷ್ಣುವರ್ಧನ್‌ ಹೊರತಾಗಿ ಬೇರೆ ಯಾರೂ ಸೂಟ್‌ ಆಗೋದಿಲ್ಲ.

Related Posts

error: Content is protected !!