ನಾರಾಯಣ್‌ ಕಂಡಂತೆ ವಿಷ್ಣು.. ಇಂಡಿಯಾ ಟೀಂ ಬೌಲರ್‌ ಜಹೀರ್‌ ಖಾನ್‌ ವೀರಪ್ಪನಾಯ್ಕನನ್ನು ಮೆಚ್ಚಿದ್ದರು

ಇದು ಲಹರಿ ವಿಶೇಷ…

ನಿರ್ದೇಶಕ ಎಸ್.ನಾರಾಯಣ್‌, ಡಾ.ವಿಷ್ಣುವರ್ಧನ್‌ ಮೇಲೆ ಸಿಕ್ಕಾಪಟ್ಟೆ ಗೌರವ ಇಟ್ಟುಕೊಂಡವರು. ವಿಷ್ಣುವರ್ಧನ್‌ ಅವರಿಗೂ ನಾರಾಯಣ್‌ ಮೇಲೆ ಅಷ್ಟೇ ಪ್ರೀತಿ ಇತ್ತು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಕನ್ನಡದ ಆರು ವಿಭಿನ್ನ ಚಿತ್ರಗಳು ಮೂಡಿಬಂದಿವೆ. ವಿಷ್ಣುವರ್ಧನ್‌ ಅವರನ್ನು ಹೊಸತರಹದ ಗೆಟಪಲ್ಲಿ ತೋರಿಸಿಕೊಟ್ಟ ನಿರ್ದೇಶಕ ಎಂಬ ಮಾತಿಗೆ ನಾರಾಯಣ್‌ ಸೇರ್ಪಡೆಯಾದವರು. ನಾರಾಯಣ್‌ ವಿಷ್ಣು ಬಗ್ಗೆ ಹೇಳಿದ ಮಾತುಗಳೇನು ಗೊತ್ತಾ?

 

ಮೂರು ಮುಖದ ಮುದ್ದಿನ ಸಿಂಹ

* ನಾನು ವಿಷ್ಣುವರ್ಧನ್‌ ಅವರ ಮೂರು ಮುಖಗಳನ್ನು ನೋಡಿದ್ದೇನೆ. ಮೊದಲನೆಯದು, ಅವರಲ್ಲಿ ತುಂಬಾ ಹುಡುಗಾಟದ ಸ್ವಭಾವವಿತ್ತು. ಸದಾ ತಮಾಷೆ ಮಾಡುತ್ತಿದ್ದರು. ಪ್ರೀತಿಯಿಂದಲೇ ಕೆಲವರನ್ನು ರೇಗಿಸುತ್ತಿದ್ದರು, ಕೆಲವೊಮ್ಮೆ ಅವರಿಗೆ ತುಂಬಾ ಇಷ್ಟವಾಗಿಬಿಟ್ಟರೆ, ಅಂತಹವರ ಹೆಗಲ ಮೇಲೆ ಕೈ ಹಾಕಿಕೊಂಡು ಮಾತಾಡೋರು. ಹಿಂದೆ ಮುಂದೆ ನೋಡದೆ, ಅವರೊಳಗಿನ ಮನಸ್ಸಿನ ಭಾವನೆ ಹೊರ ಹಾಕೋರು. ಎರಡನೆಯದು, ಆಗಾಗ ಗಂಭೀರವಾಗುತ್ತಿದ್ದರು. ಒಂಥರಾ ಮೂಡಿಯಾಗಿಬಿಡುತ್ತಿದ್ದರು. ಬಹುಶಃ ನಾನು ಅವರಷ್ಟು ಮೂಡಿ ಅಗಿರೋದನ್ನು ಬೇರೆ ನಟರಲ್ಲಿ ನೋಡಿಲ್ಲ. ಅವರಿಗೆ ಇಷ್ಟ ಅಗದೇ ಇರುವಂತಹ ಯಾವುದೇ ಚಟುವಟಿಕೆ ನಡೆದರೂ ಅವರು ಸೈಲೆಂಟ್‌ ಆಗಿಬಿಡುತ್ತಿದ್ದರು. ವಾತಾವರಣವಿರಲಿ, ಲೋಕೇಷನ್‌ ಇರಲಿ, ಅಥವಾ ಅವರ ಕಾಸ್ಟ್ಯೂಮ್ಸ್‌ ಆಗಲಿ, ಇಷ್ಟ ಆಗದಿದ್ದರೆ, ಹೇಳುತ್ತಿರಲಿಲ್ಲ. ನಾವೇ ಅವರ ಮುಖ ಭಾವ ನೋಡಿ ಅರ್ಥ ಮಾಡಿಕೊಳ್ಳುತ್ತಿದ್ದೆವು. ಇನ್ನು ಮೂರನೆಯದು, ಅವರಿಗೆ ಅಧ್ಯಾತ್ಮದ ಮೇಲೆ ಹೆಚ್ಚು ಒಲವಿತ್ತು. ಇದನ್ನು ನಿಜವಾಗಲೂ ನಂಬೋಕೆ ಸಾಧ್ಯವಿರಲಿಲ್ಲ. ಅವರಿಗೆ ಆಧ್ಯಾತ್ಮ ವಿಷಯದ ಬಗ್ಗೆ ಅಪಾರ ತಿಳಿವಳಿಕೆ ಇತ್ತು. ಒಬ್ಬ ನಟನಿಗೂ ಆಧ್ಯಾತ್ಮಕ್ಕೂ ಎಂಥಾ ಸಂಬಂಧ? ಆದರೂ ಅವರಿಗೆ ಆಧ್ಯಾತ್ಮವೆಂದರೆ ಬಲು ಇಷ್ಟ. ಅವರ ಜೊತೆ ಮಾತಿಗೆ ನಿಂತರೆ, ಸಾಧು, ಸಂತರ ಜತೆ ಮಾತಾಡಿದ ಭಾವನೆ ಬರುತ್ತಿತ್ತು. ಮನಸ್ಸಿಗೆ ಒಂಥರಾ ನೆಮ್ಮದಿ ತರುತ್ತಿತ್ತು. ಅವರ ಮೂರು ಮುಖಗಳನ್ನು ನಾನು ನೋಡಿದ್ದೇನೆ. ಅವರ ಈ ಮೂರು ಮುಖಗಳ ಜತೆಯಲ್ಲಿ ಮೂರು ಮುಖಗಳ ಸುಖಗಳನ್ನೂ ಅನುಭವಿಸಿದ್ದೇನೆ.

 

ಅಹಂ ಇರದ ನಟ

*ಅವರೊಬ್ಬ ಸೂಪರ್‌ ಸ್ಟಾರ್‌, ಕೋಟ್ಯಾಂತರ ಅಭಿಮಾನಿಗಳಿದ್ದಾರೆ ಅನ್ನುವ ಯಾವುದೇ ಅಹಂ ಇರಲಿಲ್ಲ ಯಾವಾಗಲೂ ಸಿಂಪಲ್‌ ಆಗಿಯೇ ಇರುತ್ತಿದ್ದರು. ಒಂದು ರೀತಿ ಮುಗ್ಧ ಮಕ್ಕಳ ಹಾಗೆ. ಅವರಿಗೆ ಹೆಣ್ಣುಮಕ್ಕಳ ಮೇಲೆ ಬಹಳ ಗೌರವ ಇತ್ತು. ಸೆಟ್‌ನಲ್ಲಾದರೂ ಸಹ ನಾಯಕಿಯಿರಲಿ, ಸಹಾಯಕರಿರಲಿ ತುಂಬಾ ಗೌರವದಿಂದಲೇ ಮಾತಾಡುತ್ತಿದ್ದರು. ಆಧ್ಯಾತ್ಮದಲ್ಲಿ ಪರಕಾಯ ಪ್ರವೇಶ ಮಾಡಿದ್ದರಿಂದಲೇ ಅವರಿಗೆ ಅಂತಹ ಸಹನೆ, ತಾಳ್ಮೆ ಇತ್ತು ಅನಿಸುತ್ತೆ. ಇನ್ನು, ಅವರ ಪಾತ್ರಗಳ ಬಗ್ಗೆ ಹೇಳೋದಾದರೆ, ಯಾವುದೇ ಪಾತ್ರವಿರಲಿ, ತುಂಬಾ ಸೂಕ್ಷ್ಮವಾಗಿ ಗಮನಿಸೋರು, ಬೇರೆ ಭಾಷೆಯಲ್ಲಿ ಯಾರಾದರೂ ಇಂತಹ ಪಾತ್ರ ಮಾಡಿದ್ದಾರಾ ಅಂತ ಒಮ್ಮೆ ಚರ್ಚಿಸೋರು, ಅವರೇ ಮಾಡಿದ ಅಷ್ಟೂ ಚಿತ್ರಗಳ ಪಾತ್ರಗಳನ್ನೊಮ್ಮೆ ಮೆಲುಕು ಹಾಕೋರು, ಈ ಚಿತ್ರದ ಪಾತ್ರದಲ್ಲಿ ನಾನೇನು ಹೊಸದಾಗಿ ಮಾಡಬಹುದು ಅಂತ ಕೇಳೋರು. ಅಷ್ಟೆಲ್ಲಾ ಆದರೂ, ಸೆಟ್‌ಗೆ ಬಂದಾಗ, ನಾರಾಯಣ್‌, ನೀವೊಮ್ಮೆ ನಟಿಸಿ ತೋರಿಸಿ, ಆಮೇಲೆ ನಾನು ಮಾಡ್ತೀನಿ ಅನ್ನೋರು. ಅದೇನೆ ಇದ್ದರೂ, ಆ ಪಾತ್ರಕ್ಕೆ ಒಳ್ಳೆಯ ರೂಪ ಕೊಡುತ್ತಿದ್ದರು. ತುಂಬಾ ಟೈಮ್‌ ತೆಗೆದುಕೊಂಡೇ ಅವರು ರೆಡಿಯಾಗಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರು. ಅವರು ಕ್ಯಾಮೆರಾಮೆನ್‌ ಬಳಿ ಬಂದು ನೀನು ಮೊದಲ ಪ್ರೇಕ್ಷಕ. ಮೊದಲು ನಿನ್ನ ಅಭಿಪ್ರಾಯ ಹೇಳು ಅನ್ನೋರು.

 

ಮೊದಲ ಭೇಟಿ ಅಶೋಕ ಹೋಟೇಲ್‌ನಲ್ಲಿ…

* ನನ್ನ ಅವರ ಆವರ ಮೊಮೊದಲ ಭೇಟಿಯಾಗಿದ್ದು 1986 ರಲ್ಲಿ. ನಾನು ಆಗಷ್ಟೇ ಚಿತ್ರರಂಗದ ಪ್ರವೇಶ ಮಾಡಿದ್ದೆ. “ಕೃಷ್ಣ ನೀ ಬೇಗನೆ ಬಾರೋ” ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಅಶೋಕ ಹೋಟೆಲ್‌ ನಲ್ಲಿ ಚಿತ್ರದ ಮುಹೂರ್ತ ನಡೆದಿತ್ತು. ಆ ಚಿತ್ರಕ್ಕೆ ಅವರು ಹೀರೋ. ಆಗಲೇ ಅವರನ್ನು ನೋಡಿದ್ದು ಮತ್ತು ಭೇಟಿ ಮಾಡಿ ಮಾತಾಡಿದ್ದು. ಅದಾದ ಬಳಿಕ ಅವರೊಂದಿಗೆ ಆರು ಸಿನಿಮಾಗಳನ್ನು ಮಾಡಿದೆ. “ವೀರಪ್ಪ ನಾಯ್ಕ” ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂತು. ಒಳ್ಳೆಯ ಹೆಸರೂ ಸಿಕ್ತು. ಹಣವೂ ಬಂತು ಇವತ್ತಿಗೂ “ವೀರಪ್ಪ ನಾಯ್ಕ” ಚಿತ್ರದ ಬಗ್ಗೆ ಎಲ್ಲರೂ ಮಾತಾಡುತ್ತಾರೆ. ಗೊತ್ತಿರದ ಒಂದು ಮುಖ್ಯವಾದ ವಿಷಯ ಹೇಳಲೇಬೇಕು. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರ ಕೆಲ ಆಪ್ತರಿಗೆ ಹೊರತುಪಡಿಸಿ, ಯಾರಿಗೂ ಈ ವಿಷಯ ಗೊತ್ತಿಲ್ಲ. ಭಾರತ ತಂಡದ ಬೌಲರ್‌ ಜಹೀರ್‌ ಖಾನ್‌ ಅವರು ವಿಷ್ಣುವರ್ಧನ್‌ ಅವರಿಗೆ ಒಳ್ಳೆಯ ಸ್ನೇಹಿತರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್‌ ಪಂದ್ಯ ಏರ್ಪಡುತ್ತೆ. ಆ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟಿಗರಿಗೆ ಒಂದು ಕ್ಯಾಂಪ್‌ ಹಾಕಲಾಗುತ್ತೆ. ಆ ಕ್ಯಾಂಪ್‌ನಲ್ಲಿ “ವೀರಪ್ಪನಾಯ್ಕ” ಚಿತ್ರ ಸ್ಕ್ರೀನಿಂಗ್‌ ನಡೆಯುತ್ತೆ. ಆ ಚಿತ್ರ ನೋಡಿದ ಕೂಡಲೇ ಜಹೀರ್‌ ಖಾನ್‌ ಅವರು ವಿಷ್ಣವರ್ಧನ್‌ ಸರ್‌ ಗೆ ಕಾಲ್‌ ಮಾಡಿ ಪ್ರೀತಿಯಿಂದ ಮಾತಾಡುತ್ತಾರೆ. ದೇಶಾಭಿಮಾನ ಬಗ್ಗೆ ಹುರಿದುಂಬಿಸಿರುವ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆಗ ಆ ಸರಣಿಯನ್ನು ಭಾರತ ಗೆಲ್ಲುತ್ತದೆ. ನಮ್ಮ ಸಂಸ್ಥೆಯಡಿ, ನಾನು ನಿರ್ದೇಶಿಸಿದ, ವಿಷ್ಣು ಸರ್‌ ಅಭಿನಯಿಸಿದ ಚಿತ್ರದ ಬಗ್ಗೆ ಇಂಡಿಯಾ ಟೀಮ್‌ ಹೊಗಳಿದ್ದು, ಹೆಗ್ಗಳಿಕೆ. “ವೀರಪ್ಪನಾಯ್ಕ” 25 ವಾರಗಳು ಪ್ರದರ್ಶನ ಕಾಣುತ್ತೆ. “ಸೂರ್ಯವಂಶ” ಕೂಡ 25 ವಾರಗಳು ಪ್ರದರ್ಶನವಾಗುತ್ತೆ. “ಜಮೀನ್ದಾರ”, “ಸಿಂಹಾದ್ರಿ ಸಿಂಹ”, “ಸಿರಿವಂತ” ಚಿತ್ರಗಳು ಶತದಿನ ಪೂರೈಸುತ್ತವೆ. “ವರ್ಷ” ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತೆ. ಅವರ ಜತೆ ಮಾಡಿದ ಆರು ಚಿತ್ರಗಳೂ ಯಶಸ್ಸು ಕೊಟ್ಟಿವೆ.

 

ರಾಮ್‌ ದಾಸ್‌ ಆಸೆ ಈಡೇರಲಿಲ್ಲ…

* ಅವರಿಗೆ ಎರಡು ಆಸೆಗಳಿದ್ದವು. ಒಂದು “ಶ್ರೀ ಕೃಷ್ಣ ಮಕರಂದ” ಕಥೆ ಅವರಿಗೆ ತುಂಬಾ ಇಷ್ಟವಾಗಿತ್ತು. ಮತ್ತೊಂದು “ಸಾಯಿಬಾಬಾ” ಸಿನಿಮಾದಲ್ಲಿ ಸಾಯಿಬಾಬಾ ಪಾತ್ರ ಮಾಡುವ ಆಸೆ ಇತ್ತು. ಆ ಎರಡೂ ಚಿತ್ರಗಳನ್ನೂ ನೀವೇ ನಿರ್ದೇಶಿಸಬೇಕು ಎಂದು ಹೇಳಿದ್ದರು. ಆದರೆ, ಅದು ಮಿಸ್‌ ಆಯ್ತು. ಅವರಿಗೆ ಆ ಎರಡು ಆಸೆಗಳಿದ್ದರೆ, ನನಗೆ ಅವರಿಗಾಗಿ “ರಾಮ್‌ ದಾಸ್‌ʼ” ಚಿತ್ರ ಮಾಡುವ ಆಸೆ ಇತ್ತು. ಸಂಪೂರ್ಣ ಆಧ್ಯಾತ್ಮ ಕುರಿತಾದ ಚಿತ್ರ ಮಾಡುವ ಆಸೆ ನನ್ನದ್ದಾಗಿತ್ತು. ಅದಾಗಲಿಲ್ಲ. ಇನ್ನೊಂದು ವಿಷಯವೆಂದರೆ, ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗುವಂತಹ ಚಿತ್ರ ಮಾಡಲು ರೆಡಿಯಾಗಿದ್ದೆ. ಅದು ವಿಷ್ಣುವರ್ಧನ್‌ ಮತ್ತು ಶಿವರಾಜ್ ಕುಮಾರ್‌ ಕಾಂಬಿನೇಷನ್‌ ಚಿತ್ರ. ಇಬ್ಬರೂ ನಟರೂ ಒಪ್ಪಿಗೆ ಕೊಟ್ಟಿದ್ದರು. “ಆಪ್ತರಕ್ಷಕ” ನಂತರ ಮಾಡೋಣ ಅಂದಿದ್ದರು. ಆದರೆ, ಅದು ಹಾಗೇ ಉಳಿದು ಹೋಯ್ತು.

 

ಅಣ್ಣಾವ್ರು ಮತ್ತು ವಿಷ್ಣು ಗಿರಿಜಾ ಮೀಸೆ…

* ಇನ್ನೊಂದು ವಿಶೇಷ ವಿಷಯ ಹೇಳಲೇಬೇಕು. ಬಹುಶಃ ಇದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ನನ್ನಲ್ಲಿಯೇ ಗುಟ್ಟಾಗಿದ್ದ ವಿಷಯ. ಒಮ್ಮೆ ನಾನು ಅಣ್ಣಾವ್ರ ಕಡೆಯಿಂದ ಫೋನ್‌ ಮಾಡಿಸಿ, ವಿಷ್ಣುವರ್ಧನ್‌ ಅವರನ್ನು ಮಾತಾಡಿಸಿದ್ದೆ. “ಸೂರ್ಯವಂಶ” ಚಿತ್ರದ ಗೆಟಪ್‌ ನೋಡಿ ಅಣ್ಣಾವ್ರಿಗೆ ಇಷ್ಟ ಆಗಿತ್ತು. ಎಷ್ಟು ಚೆನ್ನಾಗಿದೆ ಆ ಗಿರಿಜಾ ಮೀಸೆ ಅನ್ನೋರು. “ಶಬ್ದವೇದಿ” ಚಿತ್ರೀಕರಣ ಸಮಯದಲ್ಲಿ ಅಣ್ಣಾವ್ರು ಆಗಾಗ ವಿಷ್ಣುವರ್ಧನ್‌ ಗೆಟಪ್‌ ಬಗ್ಗೆ ಹೇಳುತ್ತಿದ್ದರು. ಆ ಸಂದರ್ಭದಲ್ಲೇ ನಾನೂ ಒಂದು ಸಲ ಅವರ ಜೊತೆ ಮಾತಾಡಿ ಅಂತ ಫೋನ್‌ ಮಾಡಿ ಕೊಟ್ಟಿದ್ದೆ. ಇಬ್ಬರು ನಟರು ಹರಟಿದ್ದರು. ಅದು ನಿಜಕ್ಕೂ ರಸಘಳಿಗೆ. ಡಾ.ರಾಜಕುಮಾರ್‌, ಡಾ.ವಿಷ್ಣುವರ್ಧನ್‌ ಮತ್ತು ಡಾ. ಅಂಬರೀಷ್‌ ಈ ಮೂವರು ಕನ್ನಡ ಚಿತ್ರರಂಗದ ಮುತ್ತುಗಳು. ಇವರ್ಯಾರೂ ನನ್ನನ್ನು ನಿರ್ದೇಶಕನನ್ನಾಗಿ ನೋಡಲಿಲ್ಲ. ಒಬ್ಬ ಗೆಳೆಯನಾಗಿ, ಕುಟುಂಬದ ಸದಸ್ಯನಾಗಿ ನೋಡಿದರು. ಹಾಗಾಗಿಯೇ ನಾನು ಅವರ ಅಂತರಂಗದೊಳಗೆ ಪ್ರವೇಶಿಸಲು ಸಾಧ್ಯವಾಯ್ತು.

Related Posts

error: Content is protected !!