ಕಿಚ್ಚನ ಜೊತೆ ಜೋಗಿ ಪ್ರೇಮ್‌ ಚಿತ್ರ ಈ ಬಾರಿ ಸ್ಪೆಷಲ್‌ ಸ್ಟೋರಿ ಜೊತೆ ಬರ್ತಾರಂತೆ ಪ್ರೇಮ್

ಶ್ರೀಲೀಲಾ
ಸುದೀಪ್‌ ಈಗ ಬಿಝಿ. ಅದು ಎಲ್ಲರಿಗೂ ಗೊತ್ತಿದೆ. ಅವರ ಅಭಿನಯದ “ಕೋಟಿಗೊಬ್ಬ 3′ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಅನೂಪ್‌ ಭಂಡಾರಿ ನಿರ್ದೇಶನದ, ಜಾಕ್‌ ಮಂಜು ನಿರ್ಮಾಣದ “ಫ್ಯಾಂಟಮ್‌” ಕೂಡ ಚಿತ್ರೀಕರಣದಲ್ಲಿದೆ. ಇದರ ನಡುವೆ ಒಂದಷ್ಟು ಹೊಸ ಸಿನಿಮಾಗಳೂ ಕೂಡ ಸೆಟ್ಟೇರಲು ಸಜ್ಜಾಗಿವೆ. ವಿಶೇಷವೆಂದರೆ, ಸುದೀಪ್‌ ಮತ್ತೊಮ್ಮೆ ಜೋಗಿ ಪ್ರೇಮ್‌ ಜೊತೆ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ.
ಹೌದು, ಈ ವಿಷಯವನ್ನು ಸ್ವತಃ ಜೋಗಿ ಪ್ರೇಮ್‌ ಸ್ಪಷ್ಟಪಡಿಸಿದ್ದಾರೆ. ಸುದೀಪ್‌ ಹುಟ್ಟುಹಬ್ಬಕ್ಕೆ ಟ್ವಿಟ್ಟರ್‌ನಲ್ಲಿ ಶುಭಕೋರಿದ್ದ ಪ್ರೇಮ್‌ ಅವರಿಗೆ ಸುದೀಪ್‌ ಅಭಿಮಾನಿಗಳು ತಮ್ಮ ಮುಂದಿನ ಸಿನಿಮಾ ಯಾವಾಗ, ಯಾರ ಜೊತೆ ಎಂದು ಪ್ರಶ್ನಿಸಿದ್ದರು. ಅವರ ಪ್ರಶ್ನೆಗಳಿಗೆ ಪ್ರೇಮ್‌, ನಾನು ಸುದೀಪ್‌ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದೇನೆ ಎಂದಿದ್ದಾರೆ. “ದಿ ವಿಲನ್‌” ಬಳಿಕ ಮಾಡುತ್ತಿರುವ ಸಿನಿಮಾ ಇದಾಗಿರುವುದರಿಂದ ಕಥೆ, ಪಾತ್ರ ಎಲ್ಲವೂ ವಿಶೇಷವಾಗಿರಲಿದೆ ಎಂಬುದು ಪ್ರೇಮ್‌ ಸ್ಪಷ್ಟನೆ. ಹೊಸ ಚಿತ್ರದಲ್ಲಿ ಸುದೀಪ್‌ ಅವರ ಗೆಟಪ್‌ ವಿಭಿನ್ನವಾಗಿರಲಿದೆ ಎಂದಿದ್ದಾರೆ ಪ್ರೇಮ್.‌
ಸದ್ಯಕ್ಕೆ ಪ್ರೇಮ್‌ ಅವರು ರಕ್ಷಿತಾ ಸಹೋದರ ರಾಣಾ ಅವರ “ಏಕ್‌ ಲವ್‌ ಯಾ” ಸಿನಿಮಾದತ್ತ ಗಮನ ಹರಿಸಿದ್ದಾರೆ. ಆ ಚಿತ್ರದಲ್ಲಿ ರಿಷಾ ಮತ್ತು ರಚಿತಾ ನಾಯಕಿಯರು. ರಕ್ಷಿತಾ ತಮ್ಮ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದೇನೆ ಇರಲಿ, ಜೋಗಿ ಪ್ರೇಮ್‌ ಪುನಃ ಸುದೀಪ್‌ ಜೊತೆ ಸಿನಿಮಾ ಮಾಡುವ ವಿಷಯ ಹೊರಹಾಕಿದ್ದಾರೆ. ಆದರೆ, ಆ ಚಿತ್ರ ಯಾವಾಗ ಸೆಟ್ಟೇರಲಿದೆ, ಯಾರು ನಿರ್ಮಾಣ ಮಾಡಲಿದ್ದಾರೆ. ಕಥೆ ಹೇಗಿರಲಿದೆ. ಸುದೀಪ್‌ ಅವರ ಗೆಟಪ್‌ ಹೇಗೆಲ್ಲಾ ಇರಲಿದೆ. ಇಲ್ಲೂ ಸುದೀಪ್‌ ಜೊತೆ ಬೇರೆ ಸ್ಟಾರ್‌ ಯಾರಾದರೂ ಇರುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಯ ಉತ್ತರವಿಲ್ಲ. ಹೊಸ ಸಿನಿಮಾ ಮಾಡ್ತೀನಿ ಅಂತ ಪ್ರೇಮ್‌ ಹೇಳಿದ್ದಾರೆ. ಆದರೆ, ಅದು ಸೆಟ್ಟೇರಿ, ಶೀರ್ಷಿಕೆ ಅನೌನ್ಸ್‌ ಮಾಡಿ, ಟೀಮ್‌ ಸೆಟ್‌ ಮಾಡುವವರೆಗೂ ಪ್ರೇಮ್‌ ಇನ್ನೂ ಸಾಕಷ್ಟು ಸರ್‌ ಪ್ರೈಸ್‌ ನ್ಯೂಸ್‌ಗಳನ್ನು ಕೊಡುತ್ತಲೇ ಇರುತ್ತಾರೆ ಎಂಬುದಂತೂ ಸತ್ಯ.

Related Posts

error: Content is protected !!