ವಿಭಿನ್ನ ಕ್ರೈಂ ಥ್ರಿಲ್ಲರ್ ನಲ್ಲಿ ರೋಬೋ ಗಣೇಶ್
ಮಾನಸ ಜೋಶಿ ಈ ಹೆಸರು ಕೇಳಿದಾಕ್ಷಣ , ಹಾಗೊಮ್ಮೆ ‘ಕಿರಗೂರಿನ ಗಯ್ಯಾಳಿಗಳು’ ಸಿನ್ಮಾ ನೆನಪಾಗುತ್ತೆ. ಪಕ್ಕಾ ಜಗಳಗಂಟಿ ಹೆಣ್ಣಾಗಿ ಗಮನ ಸೆಳೆದಿದ್ದ ಮಾನಸ ಜೋಶಿ ಆ ಬಳಿಕ ಹೊಸ ಬಗೆಯ ಕಥೆ, ಪಾತ್ರಗಳತ್ತ ಗಮನಹರಿಸಿದರು. ಈಗ ತಮಗೆ ಸರಿಹೊಂದುವ ಕಥೆ ,ಪಾತ್ರ ಹಾಗೂ ಒಳ್ಳೆಯ ತಂಡ ಸಿಕ್ಕ ಖುಷಿಯಲ್ಲಿ ಹೊಸದೊಂದು ಚಿತ್ರಕ್ಕೆ ಜೈ ಎಂದಿದ್ದಾರೆ.
ಹೌದು, ಮಾನಸ ಜೋಶಿ ಈ ಬಾರಿ ವಿಭಿನ್ನ ಕಥೆ, ಪಾತ್ರವಿರುವ ಚಿತ್ರ ಒಪ್ಪಿಕೊಂಡಿದ್ದು, ಹೊಸ ಗೆಟಪ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ ‘ಎವಿಡೆನ್ಸ್’ ಎಂದು ನಾಮಕರಣ ಮಾಡಲಾಗಿದೆ.
ಈ ಚಿತ್ರವನ್ನು ಪ್ರವೀಣ್ (ಪಿ ಆರ್) ನಿರ್ದೇಶನ ಮಾಡುತ್ತಿದ್ದಾರೆ. ಅವರದೇ ಶ್ರೀ ಧೃತಿ ಪ್ರೊಡಕ್ಷನ್ ಮೂಲಕ ತಯಾರಾಗುತ್ತಿರುವ ‘ಎವಿಡೆನ್ಸ್’ ಚಿತ್ರಕ್ಕೆ ಅರವಿಂದ್ ಕುಮಾರ್, ಸುರೇಂದ್ರ ಶೆಟ್ಟಿ, ನರಸಿಂಹಮೂರ್ತಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ಕೇವಲ ಎರಡು ಮುಖ್ಯ ಪಾತ್ರಗಳಿವೆ. ಮಾನಸ ಜೋಶಿ ಜೊತೆ ರೋಬೊ ಗಣೇಶ್ ನಟಿಸುತ್ತಿದ್ದಾರೆ. ಅವರಿಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದರೆ, ಮಾನಸ ಜೋಶಿ ಮೊದಲ ಸಲ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದು, ಒಂದೇ ರೂಮ್ ನಲ್ಲಿ ಕಥೆ ನಡಯಲಿದೆ. ಎರಡು ತಾಸು ಇಡೀ ಚಿತ್ರ ಒಂದೇ ರೂಮ್ ನಲ್ಲಿ ಸಾಗಲಿದೆ ಎಂಬುದು ವಿಶೇಷ.
ಚಿತ್ರಕ್ಕೆ ರವಿಸುವರ್ಣ ಛಾಯಾಗ್ರಹಣವಿದೆ. ಇದು ಅವರ 25ನೇ ಚಿತ್ರ ಎಂಬುದು ಮತ್ತೊಂದು ವಿಶೇಷ.
ಚಿತ್ರಕ್ಕೆ ಆರ್. ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ವೆಂಕಟೇಶ್ ಸಂಗೀತ, ಸಾಹಿತ್ಯವಿದೆ.
ಸೆಪ್ಟೆಂಬರ್ 9ರಂದು ‘ಎವಿಡೆನ್ಸ್’ ಗೆ ಪೂಜೆ ನಡೆಯಲಿದೆ. ಇಡೀ ಸಿನಿಮಾ ಕೇವಲ 7 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ