Categories
ಸೌತ್‌ ಸೆನ್ಸೇಷನ್

ವೆಟ್ರಿ ಮಾರನ್ ಜೊತೆ ವಿಜಯ್ ಸೇತುಪತಿ ‘ವಿದುತಲೈ’ ಚಿತ್ರ; ಥ್ರಿಲ್ಲರ್​ ಸಿನಿಮಾಗೆ ಇಳಯರಾಜಾ ಸಂಗೀತ

ವಿಜಯ್ ಸೇತುಪತಿ ಇದೀಗ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಅವರೀಗ ಪ್ಯಾನ್​ ಇಂಡಿಯಾ ಪರಿಕಲ್ಪನೆಯಲ್ಲಿ “ವಿದುತಲೈ” ಹೆಸರಿನ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. “ವಿದುತಲೈ” ಅಂದರೆ, ಮಾಸ್ಟರ್ ಅಥವಾ ಶಿಕ್ಷಕ ಎಂದರ್ಥ. ಮೂಲ ತಮಿಳಿನ ಈ ಸಿನಿಮಾ ಸೌತ್ ಇಂಡಿಯನ್ ಭಾಷೆಗಳು ಸೇರಿ ಹಿಂದಿಯಲ್ಲಿಯೂ ಬಿಡುಗಡೆಯಾಗಲಿದೆ.

ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ವೆಟ್ರಿ ಮಾರನ್ ನಿರ್ದೇಶನ ಮಾಡಲಿದ್ದಾರೆ. ಗುರುವಾರವಷ್ಟೇ ಈ ಚಿತ್ರದ ಪೋಸ್ಟರ್​ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಎಲ್ರೆಡ್​ ಕುಮಾರ್​ ಅವರ ಆರ್​ ಎಸ್​ ಇಂಫೋಟೈನ್​​ಮೆಂಟ್​ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಮ್ಯೂಸಿಕ್ ಮ್ಯಾಸ್ಟ್ರೋ ಇಳಯರಾಜ ಸಂಗೀತ ನೀಡುತ್ತಿದ್ದಾರೆ. ವೆಟ್ರಿ ಮಾರನ್ ಮತ್ತು ಇಳಯರಾಜಾ ಅವರ ಕಾಂಬಿನೇಷನ್‌ನ ಮೊದಲ ಸಿನಿಮಾ ಇದು.
“ವಿದುತಲೈ” ಚಿತ್ರದ ಚಿತ್ರೀಕರಣ ಸಂಪೂರ್ಣ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ನಡೆಯಲಿದೆ. ಅಚ್ಚರಿಯ ವಿಷಯವೆಂದರೆ, ಈಗಾಗಲೇ ಲೊಕೇಶನ್ ಅಂತಿಮವಾಗಿದ್ದು, ವಿದ್ಯುತ್ ಮತ್ತು ಫೋನ್ ನೆಟ್​ವರ್ಕ್​ ಸಂಪರ್ಕ ಇಲ್ಲದ ಕಡೆಗಳಲ್ಲಿ ಇಡೀ ತಂಡ ಕೆಲಸ ಮಾಡಲಿದೆ.

ಅಲ್ಲಿ ವಾಸವಿರುವ ಬುಡಕಟ್ಟು ಸಮುದಾಯದ ಜತೆಗೆ ತಂಡ ಕಾಲ ಕಳೆಯಲಿದೆ. ಈಗಾಗಲೇ “ಅಸುರನ್” ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ವೆಟ್ರಿ ಮಾರನ್, ಇದೀಗ “ವಿದುತಲೈ” ಚಿತ್ರದಲ್ಲಿಯೂ ಅಷ್ಟೇ ವಿಶೇಷವಾದ ಕಥೆ ಹೇಳಲಿದ್ದಾರೆ. ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ವೆಲರಾಜ್​ ಛಾಯಾಗ್ರಹಣವಿದೆ. ಆರ್​. ರಮರ್ ಸಂಕಲನ ಮಾಡಿದರೆ, ಪೀಟರ್ ಹೇನ್ ಸಾಹಸ ನಿರ್ದೇಶನವಿದೆ. ಜಾಖಿ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.

Categories
ಸೌತ್‌ ಸೆನ್ಸೇಷನ್

ತಮಿಳು ಚಿತ್ರರಂಗದ ಹಾಸ್ಯ ಕಲಾವಿದ ವಿವೇಕ್ ಇನ್ನಿಲ್ಲ:

ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ (59) ಶನಿವಾರ ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ
ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್ ಅವರಿಗೆ ಶುಕ್ರವಾರವಷ್ಟೇ ಹೃದಯಘಾತವಾಗಿತ್ತು. ಹೀಗಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿವೇಕ್ ಅವರು ಗುರುವಾರ ಕೋವಿಡ್​ ಲಸಿಕೆ ಪಡೆದಿದ್ದರು. ಆ ಬಳಿಕ ಅವರು ಆ ಕುರಿತು ಜಾಗೃತಿ ಮೂಡಿಸಿದ್ದರು. ಅವರು ಲಸಿಕೆ ಪಡೆದುಕೊಂಡಿದ್ದಕ್ಕೂ ಹೃದಯಸ್ತಂಭನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಲಾಗಿದೆ.

ಪದ್ಮಶ್ರೀ ಪುರಸ್ಕೃತ ವಿವೇಕ್​ ಅವರು ರಜನಿಕಾಂತ್, ವಿಜಯ್, ಅಜಿತ್ ಕುಮಾರ್ ಸೇರಿದಂತೆ ಅನೇಕ ಖ್ಯಾತ ನಾಯಕರ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

Categories
ಸೌತ್‌ ಸೆನ್ಸೇಷನ್

ಮಾಸ್ಟರ್‌ ಆಗ್ತಾರಾ ಸಲ್ಮಾನ್‌ ಖಾನ್? ಹಿಂದಿಗೆ ರಿಮೇಕ್‌ ಆಗಲಿದೆ ತಮಿಳಿನ ಹಿಟ್‌ ಸಿನ್ಮಾ ಮಾಸ್ಟರ್‌

‌ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯಿಸಿರೋ “ಮಾಸ್ಟರ್” ಚಿತ್ರ ಹಿಂದಿ ರಿಮೇಕ್‌ಗಾಗಿ ಸಜ್ಜಾಗುತ್ತಿದೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಚಿತ್ರಕ್ಕೆ ಸೇರಿಸಲು ಟೀಮ್ ಮಾಸ್ಟರ್ ಉತ್ಸುಕರಾಗಿದ್ದಾರೆ. ಹಿಂದಿ ಸಿನಿಮಾದಲ್ಲಿ ಮಾಸ್ಟರ್ ಮತ್ತು ಬ್ಯಾಡ್ಡಿ ಭವಾನಿ ಅವರ ಪ್ರಮುಖ ಪಾತ್ರಕ್ಕಾಗಿ “ಮಾಸ್ಟರ್” ತಂಡವು ನಟರನ್ನು ಸಂಪರ್ಕಿಸಲು ಮುಂದಾಗಿದೆ.

ತಮಿಳು ಮೂಲದ ಬಹಳಷ್ಟು ಅಂಶಗಳನ್ನು ಸರಿ ಹೊಂದುವಂತೆ ತಿರುಚಬೇಕಾಗಿರುವುದರಿಂದ “ಮಾಸ್ಟರ್” ತಂಡವು ಹಿಂದಿಯಲ್ಲಿ ಬೌಂಡ್ ಸ್ಕ್ರಿಪ್ಟ್‌ನೊಂದಿಗೆ ತನ್ನ ಬಳಿಗೆ ಬರಲು ಕಾಯುತ್ತಿದೆ.

ಸಲ್ಮಾನ್ ಖಾನ್ ಕೂಡ ಈ ಚಿತ್ರದ ವಿಷಯಗಳನ್ನು ಒಪ್ಪಿಕೊಂಡಿದ್ದು.‌‌ ತುಂಬಾ ಕಾತರರಾಗಿದ್ದಾರೆ ಅನ್ನೋದಂತು ಸತ್ಯ. ಆದರೆ, ಇದು ಯಾವಾಗ ಶುರುವಾಗುತ್ತೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಕಾದು ನೋಡಬೇಕಿದೆ.

Categories
ಸೌತ್‌ ಸೆನ್ಸೇಷನ್

‘ನಲ್ಲ’ನ ನಾಯಕಿ ಸಂಗೀತಾಗೆ ‘ಕಲೈಮಮಣಿ’ ಗೌರವ; ಪತಿ, ಪುತ್ರಿಯೊಂದಿಗೆ ಸಂತಸ ಹಂಚಿಕೊಂಡ ನಟಿ

ದಕ್ಷಿಣ ಭಾರತದ ನಟಿ ಸಂಗೀತಾ ‘ಕಲೈಮಮಣಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.  ತಮಿಳುನಾಡು ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಗೌರವವಿದು. ತಮಗೆ ಸಿಕ್ಕ ಪದಕವನ್ನು ಮಗಳ ಕೊರಳಿಗೆ ಹಾಕಿ ಪತಿ – ಪುತ್ರಿಯೊಂದಿಗೆ ಸಂಭ್ರಮಿಸಿದ್ದಾರೆ. ಕಾಲಿವುಡ್‌ನ ಪ್ರಮುಖ ಚಿತ್ರನಿರ್ಮಾಪಕ ಕೆ.ಆರ್.ಬಾಲನ್‌ ಅವರ ಪುತ್ರಿ ಸಂಗೀತಾ. ‘ಪೂಂಜಲೈ’ ತಮಿಳು ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ನಟಿ ತಮಿಳು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಬಹುಬೇಗ ಹೆಸರು ಮಾಡಿದರು.

ಸುದೀಪ್‌ ಹೀರೋ ಆಗಿದ್ದ ‘ನಲ್ಲ’ ಚಿತ್ರದೊಂದಿಗೆ ಕನ್ನಡಕ್ಕೂ ಬಂದರೂ ಅವರು ಹೆಚ್ಚಾಗಿ ತಮಿಳು, ಮಲಯಾಳಂನಲ್ಲೇ ಸಕ್ರಿಯರಾಗಿದ್ದುದು. 2010ರಲ್ಲಿ ತೆರೆಕಂಡ ‘ಬೊಂಬಾಟ್ ಕಾರ್‌’ ಚಿತ್ರಕ್ಕೆಂದು ಮತ್ತೆ ಕನ್ನಡಕ್ಕೆ ಬಂದ ಅವರು ತೆಲುಗು ಸಿನಿಪ್ರೇಮಿಗಳಿಗೂ ಚಿರಪರಿಚಿರತರು. ಖಡ್ಗಂ, ಪಿತಾಮಗನ್‌, ಉಯಿರ್‌, ಧನಂ.. ಚಿತ್ರಗಳಲ್ಲಿ ಅಪರೂಪದ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ ಗಾಯಕಿಯೂ ಹೌದು. ಗಾಯಕ ಕ್ರಿಷ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದ (2009) ಅವರಿಗೆ ಒಂಬತ್ತು ವರ್ಷದ ಪುತ್ರಿ ಇದ್ದಾಳೆ. ಮದುವೆ ನಂತರವೂ ವಯಸ್ಸಿಗೆ ಒಪ್ಪುವ ಪಾತ್ರಗಳ ಮೂಲಕ ಸಂಗೀತಾ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಎರಡು ದಶಕಗಳ ಸಿನಿಮಾ ಪಯಣ ಅವರಿಗೆ ‘ಕಲೈಮಮಣಿ’ ಗೌರವ ತಂದುಕೊಟ್ಟಿದೆ.

Categories
ಸೌತ್‌ ಸೆನ್ಸೇಷನ್

ಜಗಮೇ ತಂಧಿರಂ ಸಿನಿಮಾ ಟೀಸರ್ ಬಿಡುಗಡೆ – ಓಟಿಟಿ ರಿಲೀಸ್‌ಗೆ ಧನುಷ್‌ ಅಸಮಾಧಾನ!

ಧನುಷ್ ನಟನೆಯ ಬಹುನಿರೀಕ್ಷಿತ ತಮಿಳು ಸಿನಿಮಾ ‘ಜಗಮೇ ತಂಧಿರಂ’ ಟೀಸರ್ ಬಿಡುಗಡೆಯಾಗಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಇದು ಡಾರ್ಕ್ ಕಾಮಿಡಿ ಪ್ರಯೋಗ. ಅಮೆರಿಕ ಭೂಗತ ಜಗತ್ತಿನಲ್ಲಿ ಸದ್ದು ಮಾಡುವ ಭಾರತೀಯ ಗ್ಯಾಂಗ್‌ಸ್ಟರ್‌ ಕತೆಯ ತೆಳುಹಾಸ್ಯದ ಚಿತ್ರವಿದು.

“ಹೂ ಈಸ್ ದಿಸ್‌ ಗಾಯ್ ಸುರಳಿ?” ಎನ್ನುವ ಪ್ರಶ್ನೆಯೊಂದಿಗೆ ಟೀಸರ್ ಶುರುವಾಗುತ್ತದೆ. ಹಳ್ಳಿಯ ಎಲ್ಲರ ಮುಚ್ಚಟೆಯ ವ್ಯಕ್ತಿ ಸುರಳಿ ಕಂಟ್ರಿ ಬಾಂಬ್‌ ತಯಾರಿಸುವುದರಲ್ಲಿ ಎಕ್ಸ್‌ಪರ್ಟ್‌. ಹೊಡಿ, ಬಡಿ, ಕಡಿ ಜಾಯಮಾನದ ವ್ಯಕ್ತಿ. ಇಂತಹ ಸುರಳಿ ಅಮೆರಿಕದ ಗ್ಯಾಂಗ್‌ಸ್ಟರ್‌ಗಳಿಗೆ ಹೇಗೆ ನಿದ್ದೆ ಕೆಡಿಸುತ್ತಾನೆ? ಇದಕ್ಕೆ ಸಿನಿಮಾ ರಿಲೀಸ್‌ಗೆ ಕಾಯಬೇಕು.

ನಿರ್ಮಾಪಕ ಎಸ್‌.ಶಶಿಕಾಂತ್ ಈ ಚಿತ್ರವನ್ನು ಓಟಿಟಿ ಫ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಅವರ ಈ ನಿರ್ಧಾರಕ್ಕೆ ಹೀರೋ ಧನುಷ್‌ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಈಗ ಚಿತ್ರಮಂದಿರದಲ್ಲಿ ಶೇಕಡಾ ನೂರರಷ್ಟು ಪ್ರೇಕ್ಷಕರಿಗೆ ಅವಕಾಶ ಒದಗಿಸಿದ್ದೂ ನಿರ್ಮಾಪಕರೇಕೆ ಓಟಿಟಿಗೆ ಹೋಗಬೇಕು ಎನ್ನುವುದು ಹಲವರ ಪ್ರಶ್ನೆ.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಚಿತ್ರ ಕಳೆದ ವರ್ಷ ಮೇ ತಿಂಗಳಲ್ಲೇ ತೆರೆಕಾಣಬೇಕಿತ್ತು. ಕೊರೋನಾ ಕಾರಣದಿಂದಾಗಿ ಎಲ್ಲವೂ ಮುಂದಕ್ಕೆ ಹೋಯಿತು. ಸದ್ಯದಲ್ಲೇ ಓಟಿಟಿ ರಿಲೀಸ್ ಡೇಟ್ ಹೊರಬೀಳಲಿದೆ. ಐಶ್ವರ್ಯಾ ಲಕ್ಷ್ಮಿ, ಜೇಮ್ಸ್ ಕಾಸ್ಮೋ, ಜೋಜು ಜಾರ್ಜ್‌, ಕಲೈ ಅರಸನ್ ಚಿತ್ರದ ಇತರೆ ತಾರಾಬಳಗದಲ್ಲಿದ್ದಾರೆ.

Categories
ಸೌತ್‌ ಸೆನ್ಸೇಷನ್

ತೆಲುಗು ಗನಿ ಚಿತ್ರಕ್ಕೆ ಉಪ್ಪಿ ನ್ಯೂ ಲುಕ್‌!


ವರುಣ್ ತೇಜ್ ನಾಯಕನಾಗಿ ನಟಿಸುತ್ತಿರುವ ‘ಗನಿ’ ತೆಲುಗು ಚಿತ್ರದಲ್ಲಿನ ನಟ ಉಪೇಂದ್ರ ಲುಕ್ ರಿವೀಲ್ ಆಗಿದೆ. ಕಿರಣ್ ಕೊರಪಾಟಿ ಚೊಚ್ಚಲ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ಚಿತ್ರೀಕರಣದ ನಿಮಿತ್ತ ಹೈದರಾಬಾದ್‌ನಲ್ಲಿರುವ ಉಪೇಂದ್ರರ ಲುಕ್‌ ರಿವೀಲ್ ಆಗಿದೆ. ಈ ಅದ್ಧೂರಿ ಸಿನಿಮಾದಲ್ಲಿ ವರುಣ್ ತೇಜ್‌ ಬಾಕ್ಸರ್ ಪಾತ್ರ ನಿರ್ವಹಿಸಲಿದ್ದಾರೆ. ಉಪೇಂದ್ರರಿಗೆ ಬಾಕ್ಸಿಂಗ್ ಕೋಚ್‌ ಪಾತ್ರ ಎಂದು ಮೂಲಗಳು ಹೇಳುತ್ತವೆಯಾದರೂ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ದುಬಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ‘ಗನಿ’ಯಲ್ಲಿ ಜಗಪತಿ ಬಾಬು, ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸುತ್ತಿದ್ದಾರೆ. ಸಾಹಿ ಮಂಜ್ರೇಕರ್ ಚಿತ್ರದ ನಾಯಕಿ. ಆರು ವರ್ಷಗಳ ಹಿಂದೆ ತೆರೆಕಂಡ ಅಲ್ಲು ಅರ್ಜುನ್‌ ನಟನೆಯ ‘ಸನ್‌ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ಉಪೇಂದ್ರ ನಟಿಸಿದ್ದರು. ಇದೀಗ ‘ಗನಿ’ಯೊಂದಿಗೆ ಮತ್ತೆ ತೆಲುಗು ಬೆಳ್ಳಿತೆರೆಗೆ ಹೋಗಿದ್ದಾರೆ.

ತೆಲುಗು ನಾಡಿನಲ್ಲೂ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರರ ಹಲವಾರು ಕನ್ನಡ ಚಿತ್ರಗಳು ತೆಲುಗಿಗೆ ರೀಮೇಕ್ ಆಗಿವೆ. ಇನ್ನು ಅವರ ಪ್ಯಾನ್ ಇಂಡಿಯಾ ‘ಕಬ್ಜ’ ಸಿನಿಮಾದ ಕೆಲಸಗಳೂ ಚಾಲ್ತಿಯಲ್ಲಿವೆ.

Categories
ಸೌತ್‌ ಸೆನ್ಸೇಷನ್

ಓಟಿಟಿಯಲ್ಲಿ ದೃಶ್ಯಂ-2 – ಫೆ.19ರಿಂದ ಮೋಹನ್‌ ಲಾಲ್‌ ಚಿತ್ರ ನೋಡಬಹುದು

ಮೋಹನ್ ಲಾಲ್ ಮತ್ತು ಮೀನಾ ನಟನೆಯ ‘ದ್ಯಶ್ಯಂ’ (2013) ಮಲಯಾಳಂ ಸಿನಿಮಾ ಥ್ರಿಲ್ಲರ್ ಮಾದರಿಗೆ ಹೊಸ ಭಾಷ್ಯ ಬರೆದ ಪ್ರಯೋಗ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ, ಸಿನ್ಹಳ ಭಾಷೆಗಳಲ್ಲಷ್ಟೇ ಅಲ್ಲದೆ ಚೀನಾ ಭಾಷೆಗೂ ರೀಮೇಕ್ ಆಗಿತ್ತು. ಇದೀಗ ‘ದೃಶ್ಯಂ’ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ಸರಣಿ ಸಿನಿಮಾ ‘ದೃಶ್ಯಂ-2’ ಸಿದ್ಧಪಡಿಸಿದ್ದಾರೆ. ವಿಶೇಷವೆಂದರೆ ಈ ಸಿನಿಮಾ ನಾಡಿದ್ದು 19ರಂದು ನೇರವಾಗಿ ಓಟಿಟಿಯಲ್ಲಿ (ಅಮೇಜಾನ್ ಪ್ರೈಂ ವೀಡಿಯೋ) ಪ್ರೀಮಿಯರ್ ಆಗಲಿದೆ.

ಸ್ಟಾರ್ ಹೀರೋ ಮೋಹನ್‌ಲಾಲ್‌ ನಟನೆಯ ಚಿತ್ರವೊಂದು ಓಟಿಟಿಯಲ್ಲಿ ತೆರೆಕಾಣುತ್ತಿದ್ದು, ಇದು ಹೊಸ ಬೆಳವಣಿಗೆಗಳಿಗೆ ನಾಂದಿಯಾಗಲಿದೆ ಎನ್ನುವುದು ಉದ್ಯಮದವರ ಅಂಬೋಣ.
ಇನ್ನು ‘ದೃಶ್ಯಂ-2’ ಚಿತ್ರದ ಬಗ್ಗೆ ಅವರು ಮಾತನಾಡುತ್ತಾ, “ಥ್ರಿಲ್ಲರ್ ಸಿನಿಮಾದೆಡೆ ಪ್ರೇಕ್ಷಕರ ಕಲ್ಪನೆಯನ್ನೇ ಬದಲಿಸಿದ ಸಿನಿಮಾ ದೃಶ್ಯಂ. ಇಲ್ಲಿ ಪ್ರೀತಿ ಮತ್ತು ಬಲವಾದ ಕೌಟುಂಬಿಕ ಬೆಸುಗಿ ಇದೆ. ಇದೇ ಕಾರಣಕ್ಕೇ ಜನರು ಈ ಚಿತ್ರವನ್ನು ಪ್ರೀತಿಯಿಂದ ಒಪ್ಪಿಕೊಂಡರು” ಎನ್ನುತ್ತಾರೆ ಚಿತ್ರದಲ್ಲಿ ಜಾರ್ಜ್‌ ಕುಟ್ಟಿ ಪಾತ್ರದಲ್ಲಿ ನಟಿಸಿರುವ ಮೋಹನ್‌ ಲಾಲ್‌.
ನಾಲ್ಕು ದಶಕಗಳ ಸಿನಿಮಾ ಬದುಕಿನಲ್ಲಿ ಮೋಹನ್‌ಲಾಲ್‌ 340ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

‘ದೃಶ್ಯಂ-2’ ಸಿನಿಮಾ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಅವರು ಸಿನಿಮಾಗಳಲ್ಲಿ ತಮಗೆ ದೊರೆತ ವೈವಿಧ್ಯಮಯ ಪಾತ್ರಗಳನ್ನು ನೆನಪು ಮಾಡಿಕೊಂಡು ಅಚ್ಚರಿ ಪಡುತ್ತಾರೆ. “ನಾನು ನನ್ನ ಚಿತ್ರದ ನಿರ್ದೇಶಕರು, ಚಿತ್ರಕಥೆಗಾರರು, ಸಹಕಲಾವಿದರು ಹಾಗೂ ಅಭಿಮಾನಿಗಳ ಬಗ್ಗೆ ನಂಬಿಕೆ ಇಡುತ್ತೇನೆ. ನಾನು ಆಯ್ಕೆ ಮಾಡಿಕೊಳ್ಳುವ ಚಿತ್ರಕಥೆಗಳು ಹಾಗೂ ನಿರ್ದೇಶಕರೇ ಬಹುಶಃ ನನ್ನ ಇಲ್ಲಿಯವರೆಗಿನ ಯಶಸ್ಸಿಗೆ ಕಾರಣವಿರಬಹುದು” ಎನ್ನುತ್ತಾರೆ ಮೋಹನ್‌ಲಾಲ್‌.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಇಳಯರಾಜಾ ಸ್ಟುಡಿಯೋ ಕಂಡು ಸೂಪರ್‌ ಸ್ಟಾರ್‌ ದಿಲ್‌ ಖುಷ್‌ !

ಭಾರತದ ಜನಪ್ರಿಯ ಸಂಗೀತ ಸಂಯೋಜಕ ಇಳಯರಾಜಾ ಅವರು ದಶಕಗಳ ಕಾಲ ಪ್ರಸಾದ್ ಸ್ಟುಡಿಯೋ ಜೊತೆ ಒಡನಾಟ ಹೊಂದಿದ್ದರು. ಅದು ತಮಗೆ ಅದೃಷ್ಟದ ಸ್ಟುಡಿಯೋ ಎಂದೇ ಅವರು ಭಾವಿಸಿದ್ದರು. ಇತ್ತೀಚೆಗೆ ಪ್ರಸಾದ್ ಸ್ಟುಡಿಯೋದ ಮಾಲೀಕತ್ವ ಬದಲಾಗಿ, ಅಲ್ಲಿ ಇಳಯರಾಜಾ ಅವರಿಗೆ ಕಾನೂನಿನ ತೊಡಕು ಎದುರಾಗಿತ್ತು. ಇದರಿಂದ ಚೆನ್ನೈನ ಕೋಡಂಬಾಕಂನಲ್ಲಿ ಇಳಯರಾಜಾ ತಮ್ಮದೇ ಸ್ವಂತ ಸುಸಜ್ಜಿತ ಸ್ಟುಡಿಯೋ ರೂಪಿಸಿದ್ದಾರೆ.

ಸೂಪರ್‌ಸ್ಟಾರ್ ರಜನೀಕಾಂತ್‌ ಅವರು ಮೊನ್ನೆ ಇಳಯರಾಜಾ ಸ್ಟುಡಿಯೋಗೆ ಭೇಟಿ ಮಾಡಿ ಶುಭ ಹಾರೈಸಿದ್ದಾರೆ. ‘ದಳಪತಿ’, ‘ವೀರಾ’ ಸೇರಿದಂತೆ ರಜನೀಕಾಂತ್‌ರ ಕೆಲವು ಚಿತ್ರಗಳಿಗೆ ಇಳಯರಾಜಾ ಸಂಗೀತ ಸಂಯೋಜನೆಯಿದೆ.

ಹೊಸ ಸ್ಟುಡಿಯೋದಲ್ಲಿ ಕೆಲಸಮಯ ಕಾಲ ಕಳೆದ ರಜನೀಕಾಂತ್‌ ತಮ್ಮ ಹೊಸ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ. 70ರ ದಶಕದಿಂದಲೂ ಇಳಯರಾಜ ಅವರು ಪ್ರಸಾದ್ ಸ್ಟುಡಿಯೋದಲ್ಲಿ ಸಂಗೀತ ಸಂಯೋಜಿಸುತ್ತಿದ್ದರು. ಆಸ್ತಿ ವಾಜ್ಯದಿಂದಾಗಿ ಅವರು ಹೊರಬರಬೇಕಾಯ್ತು. ಅಲ್ಲಿನ ತಮ್ಮ ಸಂಗೀತ ಪರಿಕರಣಗಳಿಗೆ ಹಾನಿ ಮಾಡಿದ್ದಾರೆ ಎಂದು ಇಳಯರಾಜಾ ದೂರು ದಾಖಲಿಸಿದ್ದಾರೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

‘ಬ್ರಹ್ಮಾಸ್ತ್ರ’ ಪೂರ್ಣಗೊಳಿಸಿದ ನಾಗಾರ್ಜುನ !

ಬಹುವರ್ಷಗಳ ನಂತರ ಬಾಲಿವುಡ್‌ಗೆ ಹೋಗಿದ್ದ ನಾಗಾರ್ಜುನ ತಮ್ಮ ‘ಬ್ರಹ್ಮಾಸ್ತ್ರ’ ಹಿಂದಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಚಿತ್ರದ ಪ್ರಮುಖ ತಾರೆಯರಾದ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್‌ ಜೊತೆಗಿನ ಫೋಟೋ ಹಂಚಿಕೊಂಡಿರುವ ಅವರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. “ಚಿತ್ರದ ನನ್ನ ಪೋರ್ಷನ್‌ ಮುಗಿಸಿದೆ. ಉತ್ತಮ ನಟ-ನಟಿಯಾದ ರಣಬೀರ್ ಮತ್ತು ಅಲಿಯಾ ಜೊತೆಗೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ. ಥಿಯೇಟರ್‌ನಲ್ಲಿ ನಿಮ್ಮ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರವರು.

‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಾಗಾರ್ಜುನ ಪುರಾತತ್ವಶಾಸ್ತ್ರಜ್ಞನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವ (ರಣಬೀರ್‌) ಮತ್ತು ಇಶಾ (ಅಲಿಯಾ) ಪುರಾತನ ದೇವಾಲಯವೊಂದನ್ನು ಅಭ್ಯಸಿಸಲು ವಾರಣಾಸಿಗೆ ಬರುತ್ತಾರೆ. ಅಲ್ಲಿ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುವ ಅವರಿಗೆ ಹಲವು ಅಚ್ಚರಿಗಳು ಕಾಣುತ್ತವೆ. ಮುಂದೆ ಸಿನಿಮಾ ಕತೆ ಹಿಮಾಲಯದೆಡೆ ಸಾಗುತ್ತದೆ. ಆಕ್ಷನ್‌-ಥ್ರಿಲ್ಲರ್ ಮಾದರಿ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಮೌನಿ ರಾಯ್‌ ಕೂಡ ನಟಿಸಿದ್ದಾರೆ.

ನಾಗಾರ್ಜುನ ನಟಿಸಿದ್ದ ಕೊನೆಯ ಹಿಂದಿ ಸಿನಿಮಾ ‘ಎಲ್‌ಓಸಿ ಕಾರ್ಗಿಲ್‌’ (2003). ಅದಕ್ಕೂ ಮುನ್ನ ಅವರು ಖುದಾ ಗವಾ, ಅಂಗಾರೆ, ಕ್ರಿಮಿನಲ್, ಝಕ್ಮ್‌ ಚಿತ್ರಗಳಲ್ಲಿ ನಟಿಸಿದ್ದರು. ಕೋವಿಡ್‌ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣಕ್ಕೆ ಇದೀಗ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಮುಗಿಯಲಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ಸಿಗಲಿದೆ. ಈ ವರ್ಷದ ಕೊನೆಗೆ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಈ ನಟಿಗೆ ದೇಗುಲವನ್ನೇ ನಿರ್ಮಿಸಿದ ಅಭಿಮಾನಿಗಳು !

ತೆಲುಗು ಮತ್ತು ತಮಿಳು ಸಿನಿಮಾಗಳ ಯುವನಟಿ ನಿಧಿ ಅಗರ್‌ವಾಲ್‌ ಅವರಿಗೆ ಅಭಿಮಾನಿಗಳು ಚೆನ್ನೈನಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ನಟಿಯ ಪ್ರತಿಮೆ ರೂಪಿಸಿದ್ದು, ಅದಕ್ಕೆ ಅಭಿಷೇಕ – ಆರತಿ ನಡೆಯುತ್ತಿದೆ. “ಪ್ರೇಮಿಗಳ ದಿನಕ್ಕಾಗಿ ಇದು ನಮ್ಮ ಕಡೆಯಿಂದ ನಟಿಗೆ ಉಡುಗೊರೆ” ಎಂದಿದ್ದಾರೆ ಅಭಿಮಾನಿಗಳು. “ಅಭಿಮಾನಿಗಳು ಈ ನಡೆ ನನಗೆ ಶಾಕ್ ತಂದಿದೆ. ಇದೆಲ್ಲವನ್ನೂ ನಾನು ಖಂಡಿತ ನಿರೀಕ್ಷಿಸಿರಲಿಲ್ಲ. ಅವರ ಪ್ರೀತಿಗೆ ನಾನು ಋಣಿ” ಎನ್ನುತ್ತಾರೆ ನಿಧಿ.

ನಟ-ನಟಿಯರಿಗೆ ದೇವಾಲಯ ನಿರ್ಮಿಸುವುದು ತಮಿಳುನಾಡಿನಲ್ಲಿ ಹೊಸದೇನಲ್ಲ. ಈ ಹಿಂದೆ ಎಂಜಿಆರ್‌, ಖುಷ್ಬೂ, ನಮಿತಾ, ಹನ್ಸಿಕಾ ಅವರಿಗೆ ಅಭಿಮಾನಿಗಳು ದೇವಾಲಯಗಳನ್ನು ನಿರ್ಮಿಸಿದ್ದರು. ಬಹುಭಾಷಾ ತಾರೆ ನಯನತಾರಾ ಅವರಿಗೂ ದೇಗುಲ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಇದೀಗ ನಿಧಿಯನ್ನು ಆರಾಧಿಸುತ್ತಿರುವುದು ಸ್ವತಃ ಆ ನಟಿಗೇ ಅಚ್ಚರಿ ತಂದಿದೆ.

“ನಾನಿನ್ನೂ ಹೊಸಬಳು. ಮೂರ್ನಾಲ್ಕು ತೆಲುಗು ಮತ್ತು ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದೇನಷ್ಟೆ. ಅಭಿಮಾನಿಗಳು ನನ್ನ ಬಗ್ಗೆ ಅಪಾರ ಅಭಿಮಾನ ತಳೆದಿದ್ದಾರೆ. ಸಂದರ್ಶನವೊಂದರಲ್ಲಿ ನಾನು ಅನಾಥ ಮಕ್ಕಳಿಗಾಗಿ ಕೆಲಸ ಮಾಡಬೇಕೆನ್ನುವ ಇಚ್ಛೆ ವ್ಯಕ್ತಪಡಿಸಿದ್ದೆ. ನನ್ನ ಮನದಿಂಗಿತ ಅರಿತು ಅಭಿಮಾನಿಗಳು ಅನಾಥರಿಗೆ ಊಟ ನೀಡಿದ್ದಾರೆ” ಎನ್ನುವ ನಿಧಿ ಸದ್ಯ ಪವನ್ ಕಲ್ಯಾಣ್ ಜೋಡಿಯಾಗಿ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದಾದ ನಂತರ ಉದಯನಿಧಿ ಸ್ಟಾಲಿನ್ ಜೊತೆ ತಮಿಳು ಸಿನಿಮಾ ಮಾಡಲಿದ್ದಾರೆ.