ರೇಟಿಂಗ್: 3 /5
ಚಿತ್ರ: ಇಂಟರ್‌ರ್ವೆಲ್
ನಿರ್ದೇಶನ: ಭರತ್
ತಾರಾಗಣ: ಶಶಿ ರಾಜ್, ಪ್ರಜ್ವಲ್‌ಕುಮಾರ್ ಗೌಡ, ಸುಕಿ, ಚರಿತ್ರ ರಾವ್, ಸಹನಾ ಆರಾಧ್ಯ, ಸಮೀಕ್ಷ, ದಾನಂ ಇತರರು.
ಮಲೆನಾಡು ತಪ್ಪಲಿನ ಒಂದು ಊರು. ಆ ಊರಿನ ಮೂರು ಮುತ್ತುಗಳು. ಓದೋ ವಯಸ್ಸಲ್ಲಿ ಸರಿಯಾಗಿ ಓದದೆ ಹರಟೆ, ತರಲೆ ಮಾಡ್ತಾನೇ ಬದುಕಿನ ಅರ್ಥ ಅರಿಯದೆ ಜಾಲಿ ಮಾಡುವ ಪೋಲಿಗಳು. ಲೈಫು ಅಂದುಕೊಂಡಷ್ಟು ಸುಲಭ ಅಲ್ಲ ಅಂತ ಗೊತ್ತಾಗುವಷ್ಟರಲ್ಲಿ ಆ ಮೂವರು ಗೆಳೆಯರ ಬದುಕಲ್ಲಿ ಅಲ್ಲೋಲ ಕಲ್ಲೋಲ. ಮುಂದೆ ಅವರು ಬದುಕು ಕಟ್ಟಿಕೊಳ್ತಾರ ಇಲ್ವಾ ಅನ್ನೋದೇ ಒನ್ ಲೈನ್ ಸ್ಟೋರಿ.
‘ಇಂಟರ್‌ರ್ವೆಲ್’ ಪ್ರತಿಯೊಬ್ಬರ ಬದುಕಲ್ಲಿ ಬಂದೇ ಬರುತ್ತೆ. ಈ ಮೂವರ ಬಾಳಲ್ಲೂ ಬರುವ ಬದುಕಿನ ತಿರುವು ಹೇಗಿರುತ್ತೆ ಎಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಬಹುದು.

ಇಲ್ಲಿ ಮೂವರ ತುಂಟಾಟ, ಪೋಲಿತನ, ತಮಾಷೆ, ಅಸಹಾಯಕತೆ, ಉತ್ಸಾಹ, ನಿರಾಸೆ ಎಲ್ಲವೂ ಮೇಳೈಸಿದೆ.
ಜಾಲಿಯಾಗಿಯೇ ಇರುವ ಮೂವರ ಬದುಕು ಜವಾಬ್ದಾರಿ ಇಲ್ಲದೆ ಒದ್ದಾಡುವಂತ ಸ್ಥಿತಿಗೆ ಬರುತ್ತೆ. ನಗಿಸುವ ಹಾಗು ಭಾವುಕತೆ ಹೆಚ್ಚಿಸುವ ಪಾತ್ರಗಳ ಮೂಲಕ ಒಂದೊಳ್ಳೆಯ ಆಪ್ತ ಕಥೆ ಹೇಳುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ಮೊದಲರ್ಧ ತಮಾಷೆಯಾಗಿ ಸಾಗುವ ಚಿತ್ರದ ದ್ವಿತಿಯಾರ್ಧ ಗಂಭೀರತೆ ಪಡೆಯುತ್ತೆ. ವಿನಾಕಾರಣ ಇಲ್ಲಿ ದೃಶ್ಯಗಳ ವೈಭವೀಕರಣವಿಲ್ಲ. ಅನಗತ್ಯ ಸೀನ್ ಗಳಿಲ್ಲ. ಬೇಸರಿಸುವ ಅಂಶಗಳೂ ಇಲ್ಲ. ಹೊಸ ತಂಡವಾದರೂ ಬೆನ್ನು ತಟ್ಟುವಂತಹ ಕೆಲಸ ಮಾಡಿದೆ ಎಂಬುದೇ ಸಮಾಧಾನ.

ಇಲ್ಲಿ ಶಿಕ್ಷಣ ಎಷ್ಟು ಮುಖ್ಯ ಅನ್ನೋದನ್ನು ನಿರ್ದೇಶಕರು ಒತ್ತಿ ಹೇಳಿದ್ದಾರೆ. ಈಗಿನ ಯುವಕರ ಮನಸ್ಥಿತಿ ಹೇಗಿರುತ್ತೆ ಎನ್ನುವುದನ್ನಿಲ್ಲಿ ಕಾಣಬಹುದು.
ಸಿನಿಮಾದ ವೇಗಕ್ಕೆ ಸಂಕಲನ ಸಾಥ್ ಕೊಟ್ಟಿದೆ. ಒಂದು ಹಾಡು ಗುನುಗಬಹುದು. ಹಿನ್ನೆಲೆ ಸಂಗೀತ ಕಥೆಗೆ ಪೂರಕ.

ಇನ್ನು, ಶಶಿ ರಾಜ್, ಪ್ರಜ್ವಲ್‌ಕುಮಾರ್ ಗೌಡ, ಸುಕಿ ಅಭಿನಯದಲ್ಕಿ ಸಹಜತೆ ಇದೆ. ಸಹನಾ ಆರಾಧ್ಯ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ತೆರೆ ಮೇಲೆ ಬರುವ ಪಾತ್ರಗಳೂ ಗಮನ ಸೆಳೆಯುತ್ತವೆ.